ಬೆಂಗಳೂರು, ಏಪ್ರಿಲ್ ೧೨ : ವಾರ್ತಾ ಇಲಾಖೆಯಿಂದ ಪತ್ರಿಕಾ ಕ್ಷೇತ್ರದಲ್ಲಿ ಅತ್ಯುನ್ನತ ಸಾಧನೆ ಮಾಡಿದ ಪತ್ರಿಕಾ ರಂಗದ ಗಣ್ಯರನ್ನು ಪ್ರತಿವರ್ಷ ಟಿಯೆಸ್ಸಾರ್ ಸ್ಮಾರಕ ಪ್ರಶಸ್ತಿಗೆ ಆಯ್ಕೆ ಮಾಡಿ ಗೌರವಿಸಲಾಗುತ್ತಿದ್ದು, ಸರ್ಕಾರವು ಈಗ ೨೦೦೭, ೨೦೦೮ ಮತ್ತು ೨೦೦೯ ನೇ ಸಾಲಿನ ಪ್ರಶಸ್ತಿಗಳನ್ನು ಪ್ರಕಟಪಡಿಸಿ ಆದೇಶಿಸಿದೆ.
೨೦೦೭ ನೇ ಸಾಲಿಗಾಗಿ ಶ್ರೀ ಶಿವಾನಂದ ಜೋಷಿ, ೨೦೦೮ ನೇ ಸಾಲಿಗೆ ದಿವಂಗತ ಬಿ.ವಿ ವೈಕುಂಠ ರಾಜು ಮತ್ತು ೨೦೦೯ ನೇ ಸಾಲಿಗಾಗಿ ಶ್ರೀ ರಾಜಶೇಖರ ಕೋಟಿ ಅವರಿಗೆ ಪ್ರಶಸ್ತಿ ಸಲ್ಲಲಿದೆ. ನ್ಯಾಯಮೂರ್ತಿ ಶ್ರೀ ಎ.ಬಿ. ಮುರುಗೋಡ ಅವರ ಅಧ್ಯಕ್ಷತೆಯಲ್ಲಿನ ಸಮಿತಿಯು ಈ ಆಯ್ಕೆ ಮಾಡಿದ್ದು ಆಯ್ಕೆ ಸಮಿತಿಯ ಶಿಫಾರಸ್ಸಿನ ಮೇರೆಗೆ ಸರ್ಕಾರವು ಆದೇಶ ಹೊರಡಿಸಿದೆ.
ಪ್ರಶಸ್ತಿ ವಿಜೇತರಿಗೆ ೧.೦೦ ಲಕ್ಷ ರೂ.ಗಳ ನಗದು ಮತ್ತು ಗೌರವ ಸಮರ್ಪಣೆಯನ್ನು ಪ್ರತ್ಯೇಕ ಸಮಾರಂಭದಲ್ಲಿ ನೀಡಲಾಗುವುದು.