ಭಟ್ಕಳ, ಸೆಪ್ಟೆಂಬರ್ 29: ಧರ್ಮವು ಮನುಷ್ಯನ ಜೀವನದಲ್ಲಿ ಶಿಸ್ತನ್ನು ಕಲಿಸುತ್ತದೆಂದು ಉತ್ತರ ಕನ್ನಡ ಜಿಲ್ಲಾಧಿಕಾರಿ ಚೆನ್ನಪ್ಪ ಗೌಡ ಅಭಿಪ್ರಾಯಪಟ್ಟರು. ಅವರು ಇಂದು ನಗರದ ಸಿದ್ದೀಖ್ ಸ್ಟ್ರೀಟ್ ನಲ್ಲಿರುವ ತಂಝೀಮ್ ಸಭಾಂಗಣದಲ್ಲಿ ಮಜ್ಲಿಸೆ ಇಸ್ಲಾಹ್-ವ-ತಂಝೀಮ್ ಆಯೋಜಿಸಿದ್ದ ’ಈದ್ ಮಿಲನ್’ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡುತ್ತಿದ್ದರು. ನಮ್ಮಲ್ಲಿ ಪರಸ್ಪರ ಸಾಮರಸ್ಯವನ್ನು ಬೆಳೆಸುವಲ್ಲಿ ಧರ್ಮವು ಮಹತ್ತರ ಪಾತ್ರವನ್ನು ವಹಿಸುತ್ತದೆ ಎಂದ ಅವರು ಒಂದು ಸಮಾಜವು ಉನ್ನತಿಯನ್ನು ಹೊಂದಬೇಕಾದರೆ ಆ ಸಮಾಜದ ಕುಟುಂಬದ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಸ್ಥಿತಿಗತಿಗಳು ಉತ್ತಮವಾಗಿರಬೇಕಾಗುತ್ತದೆ. ಭಟ್ಕಳದ ಜನರು ಹೊರರಾಷ್ಟ್ರಗಳಲ್ಲಿ ಉದ್ಯೋಗಿಗಳಾಗಿರುವುದರಿಂದ ಸಹಜವಾಗಿ ಇಲ್ಲಿನ ಆರ್ಥಿಕ ಪರಿಸ್ಥಿತಿಯು ಉತ್ತಮವಾಗಿದೆ ಎಂದ ಅವರು ಈ ಪ್ರದೇಶದ ಸಂಪೂರ್ಣ ಆರ್ಥಿಕ ಅಭಿವೃದ್ಧಿಗೆ ಎಲ್ಲರೂ ಶ್ರಮಿಸಬೇಕೆಂದು ಕರೆ ನೀಡಿದರು.

ಮುಖ್ಯ ಭಾಷಣಕಾರ ಮಂಗಳೂರಿನ ಶಾಂತಿಪ್ರಕಾಶನದ ವ್ಯವಸ್ಥಾಪಕ ಮುಹಮ್ಮದ್ ಕುಂಞ ಮಾತನಾಡಿ ನಮ್ಮಲ್ಲಿನ ಬಹು ಸಂಸ್ಕೃತಿಯನ್ನು ಯಾರಿಂದಲೂ ಅಳಿಸಿ ಹಾಕಲು ಸಾಧ್ಯವಿಲ್ಲ. ಕೆಲವರು ಒಂದೇ ಧರ್ಮ,ಒಂದೇ ಸಂಸ್ಕೃತಿಯ ಕನಸು ಕಾಣುತ್ತಿದ್ದು ಇದು ಎಂದಿಗೂ ಸಾಧ್ಯವಿಲ್ಲ ಎಂದ ಅವರು ಈ ಲೋಕದಲ್ಲಿ ಒಂದೇ ಧರ್ಮ, ಒಂದೇ ಸಂಸ್ಕೃತಿಯನ್ನು ಹುಟ್ಟು ಹಾಕಲು ಆ ದೇವರಿಗೆ ಸಾಧ್ಯವಾಗುತ್ತಿತ್ತು ಆದರೆ ಆತನು ಹಾಗೆ ಮಾಡಲಿಲ್ಲ ಎಂದರು. ಧರ್ಮವು ಅತ್ಯಂತ ನಿಗೂಢವಾಗಿರುವುದರಿಂದಲೆ ಇಂದು ನಮ್ಮಲ್ಲಿನ ಅಪನಂಬಿಕೆಗೆ ಕಾರಣವಾಗಿದೆ ಕೇಸರಿ ದ್ವಜ ಕಂಡರೆ ಮುಸ್ಲಿಮರು, ಹಸಿರು ದ್ವಜ ಕಂಡರೆ ಹಿಂದುಗಳು ಒಂದು ರೀತಿಯ ಕೋಮು ಭಾವನೆಯಿಂದ ಕಾಣುತ್ತಿದ್ದಾರೆ. ಭಾರತದ ಹಸಿರು ಬಟ್ಟೆಯಲ್ಲಿ ಇಲ್ಲಿನ ಹಿಂದುಗಳು ಪಾಕಿಸ್ಥಾನದ ದ್ವಜವನ್ನು ಕಾಣುತ್ತಿದ್ದಾರೆ. ಆದ್ದರಿಂದಲೆ ಗಲಭೆಗಳು ಹುಟ್ಟಿಕೊಳ್ಳಲು ಕಾರಣವಾಗಿದೆ ಎಂದು ವಿಷಾಧ ವ್ಯಕ್ತಪಡಿಸಿದರು.ಸಮೋಹ ಸಂವಹನದ ಈ ಯುಗದಲ್ಲಿ ಯಾವುದೆ ವಿಷಯಗಳು ನಿಗೂಢವಾಗಿರಕೂಡದು. ಪರಸ್ಪರ ಧಾರ್ಮಿಕ ಕೆಲಸ ಕಾರ್ಯಗಳಲ್ಲಿ ಭಾಗವಹಿಸುವುದರ ಮೂಲಕ ಈ ನಿಗೂಢತೆಯನ್ನು ಹೋಗಲಾಡಿಸಬೇಕೆಂದು ಕರೆನೀಡಿದರು.
ಶಾಸಕ ಜೆ.ಡಿ.ನಾಯ್ಕ ಮಾತನಾಡಿ ಭಟ್ಕಳಕ್ಕೆ ಅತಿಸೂಕ್ಷ್ಮ ಪ್ರದೇಶವೆಂಬ ಹಣೆಪಟ್ಟಿ ಅಂಟಿಕೊಂಡಿದ್ದು ಇದು ದೂರವಾಗಬೇಕಾದರೆ ಎಲ್ಲ ಧರ್ಮಿಯರ ಒಂದು ವೇದಿಕೆ ರಚನೆಯಾಗಬೇಕು ಎಂದರು.

ಈ ಸಂದರ್ಭದಲ್ಲಿ ಭಟ್ಕಳ ಡಿ.ವೈ.ಎಸ್.ಪಿ. ಡಾ.ಸಿ.ಬಿ. ವೇದಮೂರ್ತಿ, ರಾಬಿತಾ ಸಂಸ್ಥೆಯ ಅಧ್ಯಕ್ಷ ಸೈಯ್ಯದ್ ಅಬ್ದುಲ್ಲಾ ಲಂಕಾ, ಜಾಮಿಯ ಇಸ್ಲಾಮಿಯ ದ ಪ್ರಾದ್ಯಾಪಕ ಮೌಲಾನ ಇಖ್ಬಾಲ್ ನಾಯ್ತೆ ನದ್ವಿ, ಪುರಸಭಾ ಅಧ್ಯಕ್ಷ ಪರ್ವೇಝ್ ಕಾಸಿಮಜಿ, ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಂಝೀಮ್ ಸಂಸ್ಥೆಯ ಅಧ್ಯಕ್ಷ ಡಾ.ಬದ್ರುಲ್ ಹಸನ್ ಮುಅಲ್ಲಿಮ್ ವಹಿಸಿದ್ದರು. ಖಲಿಫಾ ಜಮಾತುಲ್ ಮುಸ್ಲಿಮೀನ್ ಅಧ್ಯಕ್ಷ ಸೈಯ್ಯದ್ ಹಸನ್ ಸಖ್ಖಾಫ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.





ವರದಿ: ರಝಾ ಮಾನ್ವಿ, ಭಟ್ಕಳ