ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಬೆಂಗಳೂರು:ರಾಜ್ಯದ 40 ತಾಲ್ಲೂಕುಗಳಲ್ಲಿ ಅಗ್ನಿ ಶಾಮಕ ಠಾಣೆಗಳನ್ನು ಆರಂಭಿಸಲು ಮಂಜೂರಾತಿ -ಡಾ: ವಿ.ಎಸ್. ಆಚಾರ್ಯ

ಬೆಂಗಳೂರು:ರಾಜ್ಯದ 40 ತಾಲ್ಲೂಕುಗಳಲ್ಲಿ ಅಗ್ನಿ ಶಾಮಕ ಠಾಣೆಗಳನ್ನು ಆರಂಭಿಸಲು ಮಂಜೂರಾತಿ -ಡಾ: ವಿ.ಎಸ್. ಆಚಾರ್ಯ

Wed, 21 Apr 2010 02:24:00  Office Staff   S.O. News Service

ಬೆಂಗಳೂರು,ಏ,೨೦,ಅಗ್ನಿಶಾಮಕ ಠಾಣೆಗಳಿಲ್ಲದ ರಾಜ್ಯದ ೪೦ ತಾಲ್ಲೂಕುಗಳಲ್ಲಿ ಅಗ್ನಿ ಶಾಮಕ ಠಾಣೆಗಳನ್ನು ಆರಂಭಿಸಲು ಮಂಜೂರಾತಿ ನೀಡಲಾಗಿದೆ ಎಂದು ಗೃಹ ಸಚಿವ ಡಾ: ವಿ.ಎಸ್. ಆಚಾರ್ಯ ಇಂದಿಲ್ಲಿ ಪ್ರಕಟಿಸಿದರು.

 

ಇದಲ್ಲದೇ ಬೆಂಗಳೂರು ನಗರದಲ್ಲಿ ಹೆಚ್ಚುವರಿ ಅಗ್ನಿಶಾಮಕ ಠಾಣೆಗಳನ್ನು ಆರಂಭಿಸಲು ಅನುಮತಿ ನೀಡಲಾಗಿದೆ. ರಾಜ್ಯದ ೧೭೬ ತಾಲ್ಲೂಕುಗಳ ಪೈಕಿ ೧೩೬ ತಾಲ್ಲೂಕುಗಳಲ್ಲಿ ಹಾಗೂ ಪ್ರಮುಖ ನಗರಗಳಲ್ಲಿ ಪ್ರಸ್ತುತ ೧೬೦ ಅಗ್ನಿಶಾಮಕ ಠಾಣೆಗಳು ಕಾರ್ಯನಿರ್ವಹಿಸುತ್ತಿವೆ. ಉಳಿದಕಡೆಗಳಲ್ಲೂ ಸದ್ಯದಲ್ಲೇ ಅಗ್ನಿ ಶಾಮಕ ಠಾಣೆಗಳು ತಲೆ‌ಎತ್ತಲಿವೆ ಎಂದರು.

 

ಬನ್ನೇರುಘಟ್ಟ ರಸ್ತೆಯಲ್ಲಿರುವ ಆರ್. ಎ. ಮುಂಡ್ಕುರ್ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಅಕಾಡೆಮಿಯಲ್ಲಿ ಗಣನೀಯ ಸೇವೆ ಸಲ್ಲಿಸಿದ ಗೃಹರಕ್ಷಕ ದಳ ಮತ್ತು ಅಗ್ನಿಶಾಮಕ ಸೇವೆಯ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಮುಖ್ಯಮಂತ್ರಿಗಳ ಚಿನ್ನದ ಪದಕವನ್ನು ಪ್ರದಾನ ಮಾಡಿ ಮಾತನಾಡಿದ ಅವರು, ಅಗ್ನಿಶಾಮಕ ಠಾಣೆಗಳ ಸ್ಥಾಪನೆ, ನಿರ್ವಹಣೆಗಾಗಿ ಪ್ರತಿವರ್ಷ ೩೫ ಕೋಟಿ ರೂ ಹೆಚ್ಚಿನ ಅನುದಾನವನ್ನು ಇಲಾಖೆಗೆ ನೀಡುತ್ತಿದೆ ಎಂದು ಹೇಳಿದರು.

 

 

ಕಳೆದ ೨೦೦೯-೧೦ ನೇ ಸಾಲಿನಲ್ಲಿ ಅಗ್ನಿಶಮನದ ರಕ್ಷಣಾ ಸಾಮಗ್ರಿಗಳ ಖರೀದಿಗೆ ವಿಶೇಷವಾಗಿ ೧೦ ಕೋಟಿ ರೂ. ಅನುದಾನವನ್ನು ಬಿಡುಗಡೆಮಾಡಲಾಗಿದೆ. ಇಲಾಖೆಯ ಸಿಬ್ಬಂದಿಗಳಿಗೆ ಹೆಚ್ಚಿನ ಸೌಲಭ್ಯ ನೀಡುವ ಉದ್ದೇಶದಿಂದ ಕಲ್ಯಾಣ ನಿಧಿಗೆ ೨೫ ಲಕ್ಷ ರೂ ನೀಡುವ ಪ್ರಸ್ತಾವನೆ ಹಾಗೂ ಗೃಹರಕ್ಷಕರಿಗೆ ಗೌರವ ಧನ ಹೆಚ್ಚಿಸುವ ಪ್ರಸ್ತಾವನೆ ಸರ್ಕಾರದ ಮುಂದಿದೆ ಎಂದು ಡಾ: ಆಚಾರ್ಯ ತಿಳಿಸಿದರು.

 

 

ಕಳೆದ ವರ್ಷ ಉತ್ತರ ಕರ್ನಾಟಕ ಭಾಗದಲ್ಲಿ ಉಂಟಾದ ಪ್ರವಾಹ ಹಾಗೂ ಭೂಕುಸಿತ, ಬೆಂಗಳೂರಿನ ಬಹುಮಹಡಿ ಕಟ್ಟಡದಲ್ಲಿ ಸಂಭವಿಸಿದ ಅಗ್ನಿ ಅನಾಹುತ, ಬಳ್ಳಾರಿಯ ಬಹುಮಹಡಿ ಕುಸಿತ ಈ ಸಂದರ್ಭಗಳಲ್ಲಿ ಗೃಹ ರಕ್ಷಕ ಹಾಗೂ ಅಗ್ನಿಶಾಮಕ ದಳಗಳು ಸಲ್ಲಿಸಿದ ಶ್ಲಾಘನೀಯ ಸೇವೆಯನ್ನು ಅವರು ಪ್ರಶಂಶಿಸಿದರು.

 

 

ಇಲಾಖೆ ಏಪ್ರಿಲ್ ೧೪ ರಿಂದ ೨೦ ರವರೆಗೆ ನಡೆಸಿದ ಅಗ್ನಿಶಾಮಕ ಸೇವಾ ಸಪ್ತಾಹದಲ್ಲಿ ನಾಗರಿಕರು, ಶಾಲಾ ಮಕ್ಕಳಿಗೆ ಅಗ್ನಿ ಸುರಕ್ಷತೆ ಬಗ್ಗೆ ಮಾರ್ಗದರ್ಶನ ನೀಡಿರುವ ಬಗ್ಗೆ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

 

ಅಗ್ನಿ ದುರಂತಗಳು ಸಂಭವಿಸುವುದನ್ನು ತಪ್ಪಿಸಲು ಕೆ.ಇ.ಬಿ. ಅಗ್ನಿಶಾಮಕ ದಳ, ಪೌರಾಡಳಿತ, ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳನ್ನೊಳಗಂಡ ತಂಡವೊಂದನ್ನು ರಚಿಸಿ, ಕಾಲ ಕಾಲಕ್ಕೆ ಬಹುಮಹಡಿ ಕಟ್ಟಡಗಳಲ್ಲಿ ಅಗ್ನಿ ದುರಂತಗಳ ಮುನ್ನೆಚ್ಚರಿಕೆ ವ್ಯವಸ್ಥೆ ಇರುವ ಬಗ್ಗೆ ತಪಾಸಣೆ ನಡೆಸಲಾಗುವುದೆಂದರು. ಈ ಸಂದರ್ಭದಲ್ಲಿ ಅಗ್ನಿ ಸುರಕ್ಷತೆಯ ಮಸ್ಕಟ್‌ನ್ನು ಬಿಡುಗಡೆ ಮಾಡಿದರು.  

 


Share: