ಭಟ್ಕಳ, ಅಕ್ಟೋಬರ್ 14: ಭಟ್ಕಳ ಬಂದರ್ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಅರಣ್ಯ ಜಾಗದಲ್ಲಿ ಮಣ್ಣು ತೆಗೆಯಲು ಮುಂದಾದ ವ್ಯಕ್ತಿಯೋರ್ವನನ್ನು ಸ್ಥಳೀಯ ಅರಣ್ಯಾಧಿಕಾರಿಗಳು ಬಂಧಿಸಿದ್ದಾರೆ.

ಬಂಧಿತ ವ್ಯಕ್ತಿಯನ್ನು ಜೆಸಿಬಿ ಆಪರೇಟರ್ ಸಂತೋಷ ಶೇಖರ ಜೈನ್, ವಿಜಾಪುರ ಎಂದು ಗುರುತಿಸಲಾಗಿದೆ. ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು ಜೆಸಿಬಿಯನ್ನು ಜಫ್ತುಪಡಿಸಿಕೊಳ್ಳಲಾಗಿದೆ. ಪ್ರಮುಖ ಆರೋಪಿಯನ್ನಾಗಿ ಫರಾನಾ ಅಹ್ಮದ್ ಆಸ್ಲಾಮ್ ಶಾಬಂದ್ರಿ ಪಟೇಲ್ ಎಂದು ಹೆಸರಿಸಲಾಗಿದ್ದು, ಆತನಿಗಾಗಿ ಶೋಧ ಕಾರ್ಯ ಮುಂದುವರೆದಿದೆ. ಈತನ ವಿರುದ್ಧ ಈ ಹಿಂದೆಯೂ ಅರಣ್ಯಾಧಿಕಾರಿಗಳು ಹಲ್ಲೆಗೆ ಸಂಬಂಧಿಸಿದಂತೆ ಒಂದೆರಡು ಪ್ರಕರಣ ದಾಖಲಿಸಿಕೊಂಡಿರುವುದನ್ನಿಲ್ಲಿ ಸ್ಮರಿಸಿಕೊಳ್ಳಬಹುದು. ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ತಾಂಡೇಲ, ಆರ್‌ಎಫ್‌ಓ ಎಮ್.ಜಿ. ನಾಯ್ಕ ಮಾರ್ಗದರ್ಶನದಲ್ಲಿ ಶಾಖಾ ವನಪಾಲಕ ಪಿ.ಎಸ್.ನಾಯ್ಕ, ಸಿಬ್ಬಂದಿಗಳಾದ ಮಂಜು, ಭಜಂತ್ರಿ ಮುಂತಾದವರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.