ಭಟ್ಕಳ, ನವೆಂಬರ್ 16: ದಟ್ಟವಾದ, ಬಿಡುವಿಲ್ಲದ ಹಾಗೂ ಶ್ರೀಮಂತಿಕೆ ಹೊಂದಿದ ಭಾಷೆಗಳು ಶಾಸ್ತ್ರೀಯ ಸ್ಥಾನಮಾನವನ್ನು ಅಲಂಕರಿಸಲು ಅರ್ಹವಾಗಿದ್ದು, ದಕ್ಷಿಣ ಭಾರತದ ಎಲ್ಲ ಭಾಷೆಗಳಿಗೂ ಆ ಯೋಗ್ಯತೆ ಇದೆ ಎಂದು ಹಿರಿಯ ಸಾಹಿತಿ ವಿಷ್ಣು ನಾಯ್ಕ ಅಭಿಪ್ರಾಯಪಟಿದ್ದಾರೆ.

ಅವರು ಅಂಜುಮನ್ ಪದವಿ ಕಾಲೇಜು ಸಭಾಭವನದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಬೆಂಗಳೂರು, ಕರ್ನಾಟಕ ಸಂಶೋಧಕರ ಒಕ್ಕೂಟ ಬೆಂಗಳೂರು ಹಾಗೂ ಸ್ನಾತಕೋತ್ತರ ಕೇಂದ್ರ ಅಂಜುಮನ್ ಕಾಲೇಜು ಭಟ್ಕಳ ಇವರ ಜಂಟೀ ಆಶ್ರಯದಲ್ಲಿ ನಡೆದ ಒಂದು ದಿನದ ಸಂಶೋಧಕರ ಕಮ್ಮಟವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಜನರಲ್ಲಿ ಇನ್ನೂ ಶಾಸ್ತ್ರೀಯ ಅರ್ಹತೆಯ ಬಗ್ಗೆ ತೆಳುವಾದ ಭಾವನೆ ಇರುವುದನ್ನು ಉಲ್ಲೇಖಿಸಿದ ಅವರು ನಮ್ಮಲ್ಲಿ ಶಾಸ್ತ್ರೀಯ ಅವಕಾಶಗಳ ಭಾವನೆ ಬಹಳ ತಡವಾಗಿ ಬಂದಿದೆ. ತಮಿಳರು ಲೋಕಸಭೆಯಲ್ಲಿ ಅವರ ಭಾಷೆಯಲ್ಲಿ ಮಾತನಾಡುವಾಗ ಸ್ವಲ್ಪ ಅತಿರೇಕ ಇರಬೇಕು ಎಂದು ಎಂದೆಣಿಸಿದ ನಮಗೆ ಮಾಜಿ ಮುಖ್ಯಮಂತ್ರಿ ಜೆ.ಎಚ್.ಪಟೇಲ್ ಅದೇ ಹಿಡಿದ ನಂತರದ ದಿನಗಳಲ್ಲಿ ಜ್ಞಾನೋದಯವಾಯಿತು ಎಂದು ವಿಶ್ಲೇಷಿಸಿದರು. ನಾನು ‘ಒಳಗಿನವನು’ ಎಂದೇ ಮಾತನ್ನು ಆರಂಭಿಸಿದ ಅವರು ಸಂಶೋಧನಾ ವಿಧಾನ ಸ್ಪಷ್ಟಗೊಳ್ಳಬೇಕಾದ ಅಗತ್ಯವನ್ನು ಒತ್ತಿ ಹೇಳಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟೀ ನಿರ್ದೇಶಕ ಡಾ.ಕಾ.ತ.ಚಿಕ್ಕಣ್ಣನವರು ಮಾತನಾಡಿ, ಸಂಶೋಧನೆಯು ಅನ್ಯ ಭಾಷೆಗಳ ಸಂಪರ್ಕದೊಂದಿಗೆ ಬದುಕನ್ನು ಕಟ್ಟಬೇಕು, ಅರಳಿಸಬೇಕು. ಆಧುನಿಕತೆಯ ಹಿನ್ನೆಲೆಯಲ್ಲಿಯೇ ಕನ್ನಡವನ್ನು ಹೇಗೆ ಶ್ರೀಮಂತಗೊಳಿಸಬೇಕು ಎನ್ನುವುದರ ಚಿಂತನೆ ಯುವ ಸಂಶೋಧಕರಲ್ಲಿ ಮೂಡಬರಬೇಕಾಗಿದೆ ಎಂದು ಹೇಳಿದರು. ಪ್ರಜಾಪ್ರಭುತ್ವ ಒಂದು ಮೌಲ್ಯ ಎಂದು ನುಡಿದ ಅವರು ಜಾಗತೀಕರಣ ತೀವೃವಾಗಿ ಕಾಡುತ್ತಿರುವ ಇಂದಿನ ದಿನಗಳಲ್ಲಿ ಏಕತ್ರವಾದ ಸೂತ್ರವನ್ನು ಎದುರಿಸಬೇಕಾಗಿದೆ ಎಂದು ವಿವರಿಸಿದರು. ಡಾ.ಜಮಿರುಲ್ಲಾ ಷರೀಫರ ಕೃತಿ ‘ಕಾಡಲ್ಲಿ-ನಾಡಲ್ಲಿ-ನನ್ನ ಹಾಡಲ್ಲಿ’ ಕವನ ಸಂಕಲವನ್ನು ಪರಿಚಯಿಸಿ ಮಾತನಾಡಿದ ಹಿರಿಯ ಸಂಶೋಧಕ, ವಿಮರ್ಶಕ ಡಾ.ಜಿ.ಎಲ್ ಹೆಗಡೆ, ಒಳ್ಳೆಯ ಮನಸಿರುವವರಲ್ಲಿ ಒಳ್ಳೆಯ ಕನಸಿರುತ್ತದೆ. ಇನ್ನೊಬ್ಬರನ್ನು ಗೌರವಿಸುವ ವ್ಯಕ್ತಿತ್ವ ಬೆಳೆಯುತ್ತದೆ ಎಂದು ಹೇಳಿದರು. ಅಂಜುಮನ್ ಸಂಸ್ಥೆಯ ಉಪಾಧ್ಯಕ್ಷ ಡಿ.ಎಚ್.ಶಬ್ಬರ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಅಂಜುಮನ್ ಪದವಿ ಕಾಲೇಜಿನ ಪ್ರಾಚಾರ್ಯ ಡಾ.ಜಮಿರುಲ್ಲಾ ಷರೀಫ ಎಲ್ಲರನ್ನೂ ಸ್ವಾಗತಿಸಿದರು. ವೇದಿಕೆಯಲ್ಲಿ ಹಿರಿಯ ಕವಿ ಹಾಗೂ ಸಾಹಿತಿ ಪ್ರೋ.ಬಿ.ಎ.ಸನದಿ, ಸಾಹಿತಿ, ಚಲನಚಿತ್ರ ನಿರ್ದೇಶಕ ಬಿ.ಸುರೇಶ, ಕಾಲೇಜು ಕಾರ್ಯದರ್ಶಿ ಮೌಸೀನ್ ಖರೂರಿ ಮುಂತಾದವರು ಉಪಸ್ಥಿತರಿದ್ದರು. ಪ್ರೋ.ರಾಮಾ ನಾಯ್ಕ ಕಾರ್ಯಕ್ರಮ ನಿರ್ವಹಣೆ ಮಾಡಿದರು.