ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಭಟ್ಕಳ: ಶಾಂತಿ ಕಾಪಾಡಲು ಎರಡೂ ಕೋಮಿನ ಮುಖಂಡರ ಒಪ್ಪಿಗೆ

ಭಟ್ಕಳ: ಶಾಂತಿ ಕಾಪಾಡಲು ಎರಡೂ ಕೋಮಿನ ಮುಖಂಡರ ಒಪ್ಪಿಗೆ

Tue, 27 Oct 2009 03:00:00  Office Staff   S.O. News Service
ಭಟ್ಕಳ, ಅಕ್ಟೋಬರ್ ೨೭: ಎರಡು ಪಂಗಡಗಳ ನಡುವೆ ರವಿವಾರ ನಡೆದ ಘರ್ಷಣೆಯ ಕಾರಣ ತಾಲೂಕಿನಲ್ಲಿ ತಲೆದೋರಿದ ಪ್ರಕ್ಷುಬ್ಧತೆಯ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಚೆನ್ನಪ್ಪ ಗೌಡ ಅಧ್ಯಕ್ಷತೆಯಲ್ಲಿ ನಡೆದ ಶಾಂತಿ ಸಭೆಯಲ್ಲಿ ಎರಡೂ ಪಂಗಡಗಳ ಕೋಮಿನ ಮುಖಂಡರು ಶಾಂತಿ ಸ್ಥಾಪಿಸುವ ಪ್ರಯತ್ನಕ್ಕೆ ಕೈ ಜೋಡಿಸುವ ಭರವಸೆ ನೀಡುವುದರೊಂದಿಗೆ ಕಳೆದ ಇಪ್ಪತ್ನಾಲ್ಕು ಗಂಟೆಗಳ ಕಾಲ ಕವಿದಿದ್ದ ಕಾರ್ಮೋಡ ಕಳಚಿ ಕೊಳ್ಳುವ ಸನ್ನಾಹ ನಡೆಸಿದೆ.
26vd11.jpg
26vd12.jpg 
 
ಸಭೆಯಲ್ಲಿ ಮಾತನಾಡಿದ ಶಾಸಕ ಜೆ.ಡಿ.ನಾಯ್ಕ, ಭಟ್ಕಳ ಬಂದರಿನಲ್ಲಿ ಕಳೆದ ಕೆಲ ದಿನಗಳಿಂದ ನಡೆಯುತ್ತಿರುವ ಬೆಳವಣಿಗೆಯನ್ನು ವಿವರಿಸಿ, ಕಾನೂನು ಕೈ ಗೆತ್ತಿಕೊಂಡವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು. ಪರವಾನಿಗೆ ಇದ್ದರೂ ಬಾರ್‌ವೊಂದರ ಲಕ್ಷಾಂತರ ರೂಪಾಯಿ ಸಾರಾಯಿಯನ್ನು ನಾಶಗೊಳಿಸಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಅವರು ವಿವಿಧ ಹಲ್ಲೆ ಪ್ರಕರಣಗಳಲ್ಲಿ ಪೊಲೀಸರು ಕಠಿಣ ಕ್ರಮ ಕೈಗೊಳ್ಳಬೇಕಾದ ಅಗತ್ಯವನ್ನು ಒತ್ತಿ ಹೇಳಿದರು. ಅಬಕಾರಿ ಅಧಿಕಾರಿಗಳ ಅಲಕ್ಷದಿಂದಾಗಿ ಊರ ತುಂಬ ಸಾರಾಯಿ ಮಾರಾಟ ಮಾಡಲಾಗುತ್ತಿದೆ. ಅಧಿಕಾರಿಗಳ ಈ ಧೋರಣೆಯೇ ಸಮಾಜದಲ್ಲಿ ಭಿನ್ನತೆಯನ್ನು ಸೃಷ್ಟಿಸುತ್ತದೆ ಎಂದು ವಿವರಿಸಿದರು. ನಾಮಧಾರಿ ಸಮಾಜದ ಹಿರಿಯ ಮುಖಂಡ ಎಲ್.ಎಸ್.ನಾಯ್ಕ, ಸಾರಾಯಿ ಮಾರಾಟಕ್ಕೆ ಸಂಬಂಧಿಸಿದಂತೆ ಭಟ್ಕಳ ಬಂದರಿನಲ್ಲಿ ನಡೆದ ಮೆರವಣಿಗೆಯನ್ನು ಖಂಡಿಸಿದರು. ವಸಂತ ಖಾರ್ವಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತ, ಸಾರಾಯಿ ಮಾರಾಟದ ವಿರುದ್ಧ ಕಳೆದ ಕೆಲ ವರ್ಷಗಳಿಂದ ಊರಿನವರ ಹೋರಾಟ ಮುಂದುವರೆದುಕೊಂಡಿದ್ದರೂ ಸಾರಾಯಿ ಆಗಮನ ಸಂಶಯವನ್ನು ಹುಟ್ಟು ಹಾಕಿದೆ. ಇದರಲ್ಲಿ ಅಧಿಕಾರಿಗಳ ಬೇಜವಾಬ್ದಾರಿ ಅಡಗಿಕೊಂಡಿದೆ. ವಾಹನ ಸೌಕರ್ಯದ ವಿಷಯದ ಮೇಲೆಯೇ ಹೊಡೆದಾಟ ನಡೆದಿರುವುದರಿಂದ ಊರಿಗೆ ಸೂಕ್ತವಾದ ವಾಹನ ಸೌಕರ್ಯವನ್ನು ಕಲ್ಪಿಸುವಂತೆ ಒತ್ತಾಯಿಸಿದರು. ಆಟೋ ರಿಕ್ಷಾ ಚಾಲಕ ಮಾಲಕರ ಸಂಘದ ಉಪಾಧ್ಯಕ್ಷ ಲಕ್ಷ್ಮಣ ನಾಯ್ಕ ಆಟೋ ಚಾಲಕರ ಬವಣೆಯನ್ನು ತೆರೆದಿಟ್ಟರು. ಮುಖಂಡರಾದ ವೆಂಕಟೇಶ ನಾಯ್ಕ ತಲಗೋಡ, ಕೃಷ್ಣ ನಾಯ್ಕ, ಹಿಂದೂ ಜಾಗರಣಾ ವೇದಿಕೆಯ ಉತ್ತರ ಪ್ರಾಂತ ಸಂಚಾಲಕ ಗೋವಿಂದ ನಾಯ್ಕ, ಶ್ರೀಧರ ನಾಯ್ಕ, ರಮೇಶ ಖಾರ್ವಿ, ಕೊಂಕಣಿ ಖಾರ್ವಿ ಸಮಾಜದ ಅಧ್ಯಕ್ಷ ನಾರಾಯಣ ಖಾರ್ವಿ ಮುಂತಾದವರು ನಡೆದ ಘಟನೆ ಹಾಗೂ ಪರಿಣಾಮಗಳನ್ನು ವಿವರಿಸಿ ಶಾಂತಿ ಸ್ಥಾಪನೆಯ ಬಗೆಗೆ ತಮಗಿರುವ ಬದ್ಧತೆಯನ್ನು ವ್ಯಕ್ತಪಡಿಸಿದರು. ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಮಣ ಗುಪ್ತಾ, ಜಿಲ್ಲಾ ಅಬಕಾರಿ ಅಧಿಕಾರಿ ವಡಕಣ್, ಭಟ್ಕಳ ಉಪವಿಭಾಗಾಧಿಕಾರಿ ತ್ರಿಲೋಕ ಚಂದ್ರ, ಶಿರಸಿ ಡಿವಾಯ್‌ಎಸ್ಪಿ ವರ್ಣೇಕರ, ಭಟ್ಕಳ ಡಿವಾಯ್‌ಎಸ್ಪಿ ಡಾ. ವೇದಮೂರ್ತಿ, ಸಿಪಿ‌ಐ ಗುರುಮತ್ತೂರು ಮುಂತಾದವರು ಉಪಸ್ಥಿತರಿದ್ದರು.


Share: