ನವದೆಹಲಿ, ನ.೫: ಕಡೆಗೂ ಬಿಕ್ಕಟ್ಟು ಬಗೆಹರಿಯಿತು ಎಂದು ಮುಖ್ಯಮಂತ್ರಿ ಶಿಬಿರದಲ್ಲಿ ಮಧ್ಯಾಹ್ನದ ವೇಳೆಗೆ ಅರಳಿದ ಆಸೆಗೆ ಮುಸ್ಸಂಜೆಯ ವೇಳೆಗೆ ಹಠಾತ್ತನೆ ಮೋಡ ಕವಿದು ಮತ್ತೆ ಮಂಕು ಬಡಿಯಿತು.
ಸಂಜೆ ಅಥವಾ ಹೆಚ್ಚೆಂದರೆ ರಾತ್ರಿ ಒಂಬತ್ತರ ಹೊತ್ತಿಗೆ ಬಗೆಹರಿಯುತ್ತದೆ ಎಂಬ ನಿರೀಕ್ಷೆ ಪಟ್ಟು ಬಿಡದ ರೆಡ್ಡಿಗಳ ನಿಲವಿನ ಕಾರಣ ರಾತ್ರಿ ಏಳರ ವೇಳೆಗೆ ಬತ್ತಿ ಹೋಗಿತ್ತು.
ವರಿಷ್ಠರ ಮಧ್ಯಸ್ಥಿಕೆಯಲ್ಲಿ ನಡೆಯಲಿರುವ ಮತ್ತೊಂದು ಸಭೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಜನಾರ್ದನರೆಡ್ಡಿ ಇಬ್ಬರೂ ಭಾಗವಹಿಸಲಿದ್ದಾರೆ.
ಯಡಿಯೂರಪ್ಪ ನಾಯಕತ್ವ ಕುರಿತು ಎತ್ತಿದ್ದ ಪ್ರಶ್ನೆ ಈಗ ಬಗೆಹರಿದಿದ್ದು, ಉಳಿದಿರುವ ಸಣ್ಣಪುಟ್ಟ ವ್ಯತ್ಯಾಸಗಳು, ಭಿನ್ನಾಭಿಪ್ರಾಯಗಳನ್ನು ನಾಳೆ ಸಭೆಯಲ್ಲಿ ಇತ್ಯರ್ಥ ಮಾಡಿಕೊಳ್ಳಲಾಗುವುದೆಂದು ರಾಜ್ಯ ಬಿಜೆಪಿ ಅಧ್ಯಕ್ಷ ಡಿ.ವಿ. ಸದಾನಂದಗೌಡ ಸುದ್ದಿಗಾರರಿಗೆ ತಿಳಿಸಿದರು.
ಸಚಿವೆ ಶೋಭಾ ಕರಂದ್ಲಾಜೆ ಅವರನ್ನು ಕೈಬಿಟ್ಟು ತಮ್ಮ ಪ್ರಿನ್ಸಿಪಲ್ ಸೆಕ್ರೆಟರಿ ವಿ.ಪಿ.ಬಳಿಗಾರ್ ಅವರನ್ನು ದೂರವಿಟ್ಟು, ಸ್ಪೀಕರ್ ಜಗದೀಶ್ ಶೆಟ್ಟರ್ ಅವರನ್ನು ಮಂತ್ರಿ ಮಂಡಲಕ್ಕೆ ಸೇರಿಸಿಕೊಳ್ಳುವುದಾಗಿ ವರಿಷ್ಠರಿಗೆ ಮಾತು ನೀಡಿದ್ದ ಯಡಿಯೂರಪ್ಪ ನಿರಾಳರಾಗಿ ರಾತ್ರಿ ಬೆಂಗಳೂರಿಗೆ ಮರಳಲು ಮುಂದಾಗಿದ್ದರು.
ಸಂಜೆ ಹಠಾತ್ತನೆ ಬಂದ ಕರೆಯ ಮೇರೆಗೆ ‘ಲೋಹಪುರುಷ’ ಎಲ್.ಕೆ.ಆಡ್ವಾಣಿ ಮನೆಗೆ ಧಾವಿಸಿ ಮುಕ್ಕಾಲು ಗಂಟೆಯ ನಂತರ ಕರ್ನಾಟಕ ಭವನಕ್ಕೆ ವಾಪಸಾದ ಮುಖ್ಯಮಂತ್ರಿ ಮುಖದ ಮೇಲಿನ ನಗು ಅಳಿಸಿ ಹೋಗಿತ್ತು. ವ್ಯಗ್ರರಾಗಿದ್ದ ಯಡಿಯೂರಪ್ಪ ರಾಜ್ಯ ಬಿಜೆಪಿ ಅಧ್ಯಕ್ಷ ಡಿ.ವಿ.ಸದಾನಂದಗೌಡ ಮತ್ತು ಸಚಿವ ವಿ.ಎಸ್.ಆಚಾರ್ಯ ಜೊತೆ ಕೋಣೆ ಸೇರಿದವರು ಕದವಿಕ್ಕಿಕೊಂಡು ಬಿಟ್ಟರು.
ಬಹಳ ಕಾಲದ ನಂತರ ಸುದ್ದಿಗಾರರ ಜೊತೆ ತುಸು ಮನಬಿಚ್ಚಿ ಮಾತಾಡ ತೊಡಗಿದ್ದ ಮುಖ್ಯಮಂತ್ರಿ ಮುಖದಲ್ಲಿ ನೆಮ್ಮದಿ ಮೂಡಿತ್ತು. ಏಕಾಏಕಿ ಆಡ್ವಾಣಿ ಮನೆಗೆ ಧಾವಿಸಿ ಭವನಕ್ಕೆ ಮರಳಿದಾಗ ‘ನೀವೇ ಮಾತಾಡಿ’ ಎಂದು ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಲು ಸದಾನಂದಗೌಡರಿಗೆ ಹೇಳಿ ತಾವು ತುಟಿ ಬಿಚ್ಚದೆ ಪಕ್ಕದಲ್ಲಿ ನಿಂತರು.
ಮೂರನೆ ಅಂತಸ್ತಿನ ಮುಖ್ಯಮಂತ್ರಿಯವರ ಕೋಣೆ ಸೇರಿದ ನಂತರ ಅಗುಳಿ ಹಾಕಿ ಮುಚ್ಚಿದ ಮುಂಬಾಗಿಲ ಹಿಂದೆ ಪೊಲೀಸ್ ಕಾವಲು. ಮುಖ್ಯಮಂತ್ರಿ ನಾಳೆ ಮಾತಾಡುತ್ತಾರೆ ಎಂಬುದಾಗಿ ಅವರ ಆಪ್ತ ಸಿಬ್ಬಂದಿಯ ವಿವರಣೆ.
ಮುಗಿಯದ ಬೇಡಿಕೆ: ಮೂರು ಬೇಡಿಕೆಗಳನ್ನು ಒಪ್ಪಿಕೊಂಡಿದ್ದ ಮುಖ್ಯಮಂತ್ರಿಯವರ ಮುಂದೆ ಸಂಜೆ ಆಡ್ವಾಣಿ ಮನೆಯಲ್ಲಿ ಉದ್ಭವಿಸಿದ ಇತರೆ ಬೇಡಿಕೆ ಅಥವಾ ಬೇಡಿಕೆಗಳು ಅವರನ್ನು ರೊಚ್ಚಿಗೆಬ್ಬಿಸಿದ್ದು ನಿಚ್ಚಳವಿತ್ತು. ಈ ಬೇಡಿಕೆ ಖಾತೆಗಳಿಗೆ ಸಂಬಂಧಿಸಿದ್ದೇ ಅಥವಾ ಮುಖ್ಯಮಂತ್ರಿಗೆ ಸಮನ್ವಯ ಸಮಿತಿ ರಚಿಸಿ ಮೂಗುದಾರ ತೊಡಿಸುವುದೇ ಎಂಬುದು ಸ್ಪಷ್ಟವಿಲ್ಲ. ಬೆಂಗಳೂರಿನಿಂದ ಬಂದವರೇ ಗುರುವಾರ ರಾತ್ರಿಯೇ ಅನಂತಕುಮಾರ್, ಅರುಣ್ ಜೇಟ್ಲಿ, ಸುಷ್ಮಾ ಸ್ವರಾಜ್ ಮುಂತಾದ ನಾಯಕರನ್ನು ಭೇಟಿ ಮಾಡಿದ್ದರು ಯಡಿಯೂರಪ್ಪ. ಮುಂಜಾನೆ ಕರ್ನಾಟಕ ಭವನದಲ್ಲಿ ಕನಕದಾಸರ ಪಟಕ್ಕೆ ಮಾಲೆ ತೊಡಿಸಿದ ನಂತರ ಸೀದಾ ನಡೆದದ್ದು ವೆಂಕಯ್ಯನಾಯ್ಡು ಅವರ ನಿವಾಸಕ್ಕೆ. ಅಲ್ಲಿಂದ ಸುಷ್ಮಾ ಸ್ವರಾಜ್ ನಿವಾಸದಲ್ಲಿ ಮತ್ತೊಂದು ತಾಸಿನ ಮಾತುಕತೆ.
ವರಿಷ್ಠರು ಕೆಲವು ಸಲಹೆಗಳನ್ನು ನೀಡಿದ್ದಾರೆ...ಈ ಸಲಹೆಗಳನ್ನು ಮಧ್ಯಾಹ್ನ ಪಕ್ಷದ ಅಧ್ಯಕ್ಷ ರಾಜನಾಥ್‌ಸಿಂಗ್ ಜೊತೆ ಕುಳಿತು ಚರ್ಚಿಸಿ ಅಂತಿಮ ರೂಪ ನೀಡಲಾಗುವುದು ಎಂಬುದಾಗಿ ಸುಷ್ಮಾ ಸ್ವರಾಜ್ ಮನೆಯ ಮುಂದೆ ಕಾದಿದ್ದ ಸುದ್ದಿಗಾರರಿಗೆ ತಿಳಿಸಿದ ಮುಖ್ಯಮಂತ್ರಿ ಕರ್ನಾಟಕ ಭವನಕ್ಕೆ ಮರಳಿದರು.
ಅಪರಾಹ್ಣ ರಾಜನಾಥ್ ಜೊತೆ ಚರ್ಚೆ: ಜಾರ್ಖಂಡ್ ವಿಧಾನಸಭೆ ಚುನಾವಣೆ ಸಂಬಂಧ ಸಂಯುಕ್ತ ಜನತಾದಳ ಮತ್ತು ಬಿಜೆಪಿ ಸೀಟು ಹೊಂದಾಣಿಕೆಯ ಬಿಕ್ಕಟ್ಟು ಬಗೆಹರಿಸಿಕೊಂಡ ಕುರಿತು ರಾಜನಾಥ್ ಪತ್ರಿಕಾಗೋಷ್ಠಿ ಮೂರು ಗಂಟೆಗೆ. ಕರ್ನಾಟಕ ಸರ್ಕಾರದ ನಾಯಕತ್ವ ಬದಲಾಯಿಸುವ ಪ್ರಶ್ನೆ ನಮ್ಮ ಮುಂದೆ ಇಲ್ಲ... ಮುಂದಿನ ಎರಡು ಮೂರು ತಾಸುಗಳಲ್ಲಿ ಕರ್ನಾಟಕದ ಬಿಕ್ಕಟ್ಟು ಬಗೆಹರಿದ ಸುದ್ದಿಯನ್ನು ನೀವು ಕೇಳಲಿದ್ದೀರಿ ಎಂದು ರಾಜನಾಥ್ ಸ್ಪಷ್ಟನೆ.
ಇದೇ ವೇಳೆಗೆ ವೆಂಕಯ್ಯನಾಯ್ಡು ಅವರ ಮನೆಗೆ ಜನಾರ್ದನರೆಡ್ಡಿ ಅವರನ್ನು ಕರೆಯಿಸಿಕೊಂಡು ಸಂಧಾನದ ಮಾತುಕತೆ ನಡೆದಿತ್ತು. ನಾಯಕತ್ವ ಬದಲಾವಣೆ ಇಲ್ಲ ಎಂದು ಸ್ಪಷ್ಟಪಡಿಸಿ ಇನ್ನು ಬಂಡಾಯ ಹಿಂದಕ್ಕೆ ಪಡೆಯಿರಿ ಎಂಬ ಹೈಕಮಾಂಡ್‌ನ ಗಟ್ಟಿ ನಿಲವನ್ನು ವೆಂಕಯ್ಯ ಅವರು ರೆಡ್ಡಿ ಸೋದರರಿಗೆ ಮುಟ್ಟಿಸಿದ್ದರು.
ಆದರೆ ನಾಯ್ಡು ಮನೆಯಿಂದ ಹೊರಬಿದ್ದ ರೆಡ್ಡಿಯವರು ಸುದ್ದಿಗಾರರ ಜೊತೆ ತಮ್ಮ ಹಳೆಯ ನಿಲವನ್ನೇ ಪುನರುಚ್ಚರಿಸಿದರು. ಅಷ್ಟೇ ಅಲ್ಲ, ಯಡಿಯೂರಪ್ಪ ಜೊತೆ ಮಾತುಕತೆಗೆ ತಾವು ಈಗಲೂ ತಯಾರಿಲ್ಲ ಎಂದು ಪ್ರಕಟಿಸಿದರು. ಎರಡು ದಿನಗಳಲ್ಲಿ ಈ ಬಿಕ್ಕಟ್ಟು ಸೌಹಾರ್ದಯುತವಾಗಿ ಬಗೆಹರಿಯಲಿದೆ ಎಂದು ವೆಂಕಯ್ಯ ನಾಯ್ಡು ಸುದ್ದಿಗಾರರಿಗೆ ತಿಳಿಸಿದ್ದರು. ಹೀಗೆ ಎರಡು ತಾಸುಗಳ ಆಶಾವಾದ ಎರಡು ದಿನಗಳಿಗೆ ವಿಸ್ತರಿಸಿತ್ತು. ಈ ವಿಷಯ ಅರಿಯದ ಯಡಿಯೂರಪ್ಪ ಅವರಿಗೆ ಆಡ್ವಾಣಿ ಮನೆಯಿಂದ ಕರೆ ಬಂದಿತ್ತು.
ಮಾತುಕತೆ ಇಲ್ಲ: ರೆಡ್ಡಿ
ಶೋಭಾ ವಜಾ... ಬಳಿಗಾರ್ ಸಜಾ...ಶೆಟ್ಟರ್‌ಗೆ ಸಚಿವ ಪಟ್ಟ ಮುಂತಾದ ರಾಜಿ ಸೂತ್ರಗಳು ಮಾಧ್ಯಮಗಳ ಸೃಷ್ಟಿ ಎಂದು ಕರೆದಿರುವ ಭಿನ್ನಮತೀಯ ಸಚಿವ- ಗಣಿಧಣಿ ಜನಾರ್ದನ ರೆಡ್ಡಿ ಅವರು, ತಾವು ಯಡಿಯೂರಪ್ಪ ಜೊತೆ ಮಾತಾಡಲು ತಯಾರಿಲ್ಲ ಎಂದು ಗುರುವಾರ ಸಂಜೆಯೂ ಸಾರಿದ್ದಾರೆ.
ಅತ್ತ ಶುಕ್ರವಾರ ನಡೆಯುವ ಇನ್ನೊಂದು ಸಭೆಯಲ್ಲಿ ಯಡಿಯೂರಪ್ಪ ಮತ್ತು ಜನಾರ್ದನ ರೆಡ್ಡಿ ಇಬ್ಬರೂ ಭಾಗವಹಿಸಿ ಅಳಿದುಳಿದ ‘ಸಣ್ಣಪುಟ್ಟ ಭಿನ್ನಾಭಿಪ್ರಾಯ’ ಬಗೆಹರಿಸಿಕೊಳ್ಳುತ್ತಾರೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಡಿ.ವಿ.ಸದಾನಂದಗೌಡ ಹೇಳಿದ್ದಾರೆ. ರಾಜಿ ಸೂತ್ರಗಳ ಮಾತು ಸತ್ಯದೂರ. ನಾಯಕತ್ವ ಬದಲಾವಣೆ ಬೇಕೆಂಬ ನಮ್ಮ ನಿಲವಿನಲ್ಲಿ ಯಾವ ಬದಲಾವಣೆಯೂ ಇಲ್ಲ. ಕೆಲ ಮಂದಿ ತಮ್ಮ ಹಿತಾಸಕ್ತಿ ಕಾಪಾಡಿಕೊಳ್ಳಲು ಆಡುತ್ತಿರುವ ಮಾತುಗಳಿವು ಎಂದು ರೆಡ್ಡಿ ವೆಂಕಯ್ಯನಾಯ್ಡು ಮನೆಯ ಮುಂದೆ ಸುದ್ದಿಗಾರರಿಗೆ ತಿಳಿಸಿದರು.
ನೆರೆ ಹಾವಳಿಯಲ್ಲಿ ಬಳಲಿದ ಜನರಿಗೆ ೫೪ ಸಾವಿರ ಮನೆ ಕಟ್ಟಿ ಕೊಡುವ ವಿಚಾರದಲ್ಲಿ ನಮ್ಮ ಕಾಲೆಳೆದಿರುವ ಯಜಮಾನನ ಜೊತೆ ಮಾತಾಡಲು ನಾವು ತಯಾರಿಲ್ಲ. ಬೇರೆ ಯಾರು ಬೇಕಾದರೂ ಮಾತಾಡಬಹುದು. ನಾವು ಮಾತಾಡಲ್ಲ ಎಂದರು.
ಅಡಚಣೆ ಉಂಟಾಗಿಲ್ಲ: ತಮ್ಮ ಭಿನ್ನಮತೀಯ ಚಟುವಟಿಕೆಗಳಿಂದ ರಾಜ್ಯದ ಪ್ರವಾಹ ಪರಿಹಾರ ಕಾರ್ಯಗಳಿಗೆ ಯಾವುದೇ ಅಡಚಣೆ ಉಂಟಾಗಿಲ್ಲ ಎಂದು ರೆಡ್ಡಿ ಪ್ರಶ್ನೆಯೊಂದಕ್ಕೆ ಉತ್ತರ ನೀಡಿದರು. ಸಚಿವ ಕರುಣಾಕರ ರೆಡ್ಡಿ ಅವರು ಜಿಲ್ಲಾಧಿಕಾರಿಗಳ ಜೊತೆ ವಿಡಿಯೋ ಕಾನ್ಫರೆನ್ಸ್ ಮಾಡುವ ಮೂಲಕ ಉತ್ತಮ ಪರಿಹಾರ ಕೆಲಸ ನಡೀತಿದೆ. ಸಂತ್ರಸ್ತರಿಗೆ ಮನೆ ಕಟ್ಟಿಸಿಕೊಟ್ಟು ನಮ್ಮ ಮಾತು ಉಳಿಸಿಕೊಳ್ಳುತ್ತೇವೆ. ಭಿನ್ನಮತೀಯ ಶಾಸಕರು ಕ್ಷೇತ್ರಗಳಿಂದ ದೂರ ಉಳಿದಿದ್ದರೂ ಅವರ ಕ್ಷೇತ್ರದಲ್ಲಿ ಅಭಿವೃದ್ಧಿ- ಪರಿಹಾರ ಕೆಲಸ ನಿರಾತಂಕವಾಗಿ ಸಾಗುತ್ತಿದೆ ಎಂದರು.
ಇದೀಗ ನೀವು ಮಾಡುತ್ತಿರುವುದು ಬ್ಲ್ಯಾಕ್‌ಮೇಲ್ ತಂತ್ರ ಅಲ್ಲವೇ?
-ಈ ಪ್ರಶ್ನೆಯನ್ನು ಆ ಕಡೆಯವರಿಗೆ (ಯಡಿಯೂರಪ್ಪ) ಕೇಳಿ.
ಯಡಿಯೂರಪ್ಪ ಅವರ ನಾಯಕತ್ವದಲ್ಲಿ ಸರ್ಕಾರ ಉತ್ತಮವಾಗಿ ಕೆಲಸ ಮಾಡುತ್ತಿದೆ. ಪ್ರವಾಹಪೀಡಿತ ಪ್ರದೇಶಗಳಲ್ಲಿ ಪರಿಹಾರ ಕಾರ್ಯವನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಮಾಡಬೇಕಿದೆ. ಜನ ಸಂಕಷ್ಟದಲ್ಲಿದ್ದಾರೆ. ಶಾಸಕರು ಇದನ್ನೆಲ್ಲ ಅರ್ಥ ಮಾಡಿಕೊಳ್ಳಬೇಕು.
ಸಿ.ಎಂ. ಉದಾಸಿ
ಇದೊಂದು ಕೌಟುಂಬಿಕ ಕಲಹ. ಸಣ್ಣ ಪುಟ್ಟ ವ್ಯತ್ಯಾಸಗಳಿವೆ. ಯಡಿಯೂರಪ್ಪ ಅವರೇ ಮುಖ್ಯಮಂತ್ರಿಯಾಗಿ ಮುಂದುವರೆಯಲಿದ್ದಾರೆ ಎಂಬುದನ್ನು ರಾಷ್ಟ್ರೀಯ ನಾಯಕರು ಸ್ಪಷ್ಟಪಡಿಸಿದ್ದರಿಂದ ಮುನಿಸಿಕೊಂಡಿರುವ ಶಾಸಕರು ಮಾತುಕತೆ ಮೂಲಕ ಬಿಕ್ಕಟ್ಟು ಬಗೆಹರಿಸಿಕೊಳ್ಳಲು ಮುಂದಾಗಬೇಕು.
ಅರವಿಂದ ಲಿಂಬಾವಳಿ
ಕಳೆದ ವಿಧಾನಸಭಾ ಚುನಾವಣೆಯನ್ನು ಯಡಿಯೂರಪ್ಪ ಅವರ ನಾಯಕತ್ವದಲ್ಲೇ ಎದುರಿಸಿ ಗೆಲುವು ಸಾಧಿಸಲಾಗಿತ್ತು. ಹೀಗಾಗಿ ಜನಾದೇಶದ ಪ್ರಕಾರ ಐದು ವರ್ಷಗಳ ಕಾಲ ಯಡಿಯೂರಪ್ಪ ಅವರೇ ಮುಖ್ಯಮಂತ್ರಿಯಾಗಿ ಮುಂದುವರೆಯಬೇಕು.
ಗೋವಿಂದ ಕಾರಜೋಳ
ನಾನು ಯಾವ ತಪ್ಪನ್ನೂ ಮಾಡಿಲ್ಲ. ಆದರೂ ನನ್ನ ಸಚಿವ ಸ್ಥಾನ ಮುಂದುವರಿಕೆಗೆ ಸಂಬಂಧಿಸಿದಂತೆ ಹೈಕಮಾಂಡ್ ತೆಗೆದುಕೊಳ್ಳುವ ಯಾವುದೇ ನಿರ್ಧಾರಕ್ಕೆ ಬದ್ಧನಾಗಿರುತ್ತೇನೆ.
ಸಚಿವೆ ಶೋಭಾ ಕರಂದ್ಲಾಜೆ
ಹೈಕಮಾಂಡ್ ಭೇಟಿಯಿಂದ ಮೊದಲಿಗಿಂತ ಹೆಚ್ಚು ಉತ್ಸಾಹ ಬಂದಿದೆ. ಎಲ್ಲಾ ಸಮಸ್ಯೆಗಳು ಬಗೆಹರಿಯುವ ಲಕ್ಷಣ ಕಂಡುಬಂದಿದೆ. ಅಭಿವೃದ್ಧಿಗಾಗಿ ಇನ್ನಷ್ಟು ಕೆಲಸ ಮಾಡುವ ಅವಕಾಶ ದೊರೆಯಲಿದೆ ಎಂಬ ವಿಶ್ವಾಸವಿದೆ.
ಯಡಿಯೂರಪ್ಪ
ನಾಯಕತ್ವ ಬದಲಿಲ್ಲ
ಕರ್ನಾಟಕದ ನಾಯಕತ್ವ ಬದಲಾವಣೆ ಪ್ರಶ್ನೆಯೇ ಇಲ್ಲ. ಮೊದಲೂ ಅದನ್ನೇ ಹೇಳಿದ್ದೆ. ಈಗಲೂ ಅದನ್ನೇ ಹೇಳುತ್ತಿದ್ದೇನೆ. ಈವರೆಗೆ ನಾಯಕತ್ವ
ಬದಲಾವಣೆ ಬಗ್ಗೆ ಯಾರೂ ಪ್ರಸ್ತಾಪ ಮಾಡಿಲ್ಲ.
ರಾಜನಾಥ್ ಸಿಂಗ್
ನಿಲುವಿನಲ್ಲೂ ಬದಲಿಲ್ಲ
ರಾಜಿ ಸೂತ್ರಗಳ ಮಾತು ಸತ್ಯಕ್ಕೆ ದೂರ. ನಾಯಕತ್ವ ಬದಲಾವಣೆ ಬೇಕೆಂಬ ನಮ್ಮ ನಿಲವಿನಲ್ಲಿ ಯಾವ ಬದಲಾವಣೆಯೂ ಇಲ್ಲ. ಕೆಲ ಮಂದಿ ತಮ್ಮ ಹಿತಾಸಕ್ತಿ ಕಾಪಾಡಿಕೊಳ್ಳಲು ಆಡುತ್ತಿರುವ ಮಾತುಗಳಿವು
ಜನಾರ್ದನ ರೆಡ್ಡಿ
ಮೈತ್ರಿ ಪ್ರಸ್ತಾಪ ಇಲ್ಲ
ಸದ್ಯ ಬಿಜೆಪಿ ಜತೆ ಮತ್ತೆ ಮೈತ್ರಿಯ ಯಾವ ಪ್ರಸ್ತಾಪ ಇಲ್ಲ. ಪಕ್ಷದ ಕೆಲ ಶಾಸಕರು ಮಾತ್ರ ಬಿಜೆಪಿಗೆ ಬೆಂಬಲ ನೀಡುವಂತೆ ಸಲಹೆ ನೀಡಿದ್ದಾರೆ. ಪಕ್ಷದ ವರಿಷ್ಠರು, ಶಾಸಕರ ಜತೆ ಚರ್ಚಿಸಿ ಮುಂದಿನ ಹೆಜ್ಜೆ ಇಡಲಾಗುವುದು.
ಕುಮಾರಸ್ವಾಮಿ
ಸೌಜನ್ಯ: ಕನ್ನಡಪ್ರಭ