ಬೆಂಗಳೂರು, ಫೆಬ್ರವರಿ 1:ಕಾವೇರಿ-ಕೃಷ್ಣಾ ನದಿ ಪಾತ್ರದ ಯೋಜನೆಗಳನ್ನು ಮುಂದಿನ ಹತ್ತು ವರ್ಷಗಳಲ್ಲಿ ೪೫ ಸಹಸ್ರ ಕೋಟಿ ರೂ ವೆಚ್ಚದಲ್ಲಿ ಪೂರ್ಣಗೊಳಿಸುವ ವಿಶ್ವಾಸ ವ್ಯಕ್ತಪಡಿಸಿರುವ ಜಲಸಂಪನ್ಮೂಲ ಸಚಿವ ಬಸವರಾಜ ಬೊಮ್ಮಾಯಿ,ರಾಜ್ಯದ ಎಲ್ಲ ನೀರಾವರಿ ಯೋಜನೆಗಳಿಗೆ ಚುರುಕು ನೀಡುವ ಸಲುವಾಗಿ ದೃಷ್ಟಿ-2020 ಕಾರ್ಯಸೂಚಿಯನ್ನು ಸರ್ಕಾರ ಸಿದ್ಧಪಡಿಸುತ್ತಿದೆ ಎಂದು ಹೇಳಿದ್ದಾರೆ.
ಇಂದಿಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಈ ವಿಷಯ ತಿಳಿಸಿದರಲ್ಲದೇ,ಮುಂದಿನ ಹತ್ತು ವರ್ಷಗಳಲ್ಲಿ ನೀರಾವರಿಗೆ ಸಂಬಂಧಿಸಿದಂತೆ ನಾವು ಮಾಡಬೇಕಾದ್ದೇನು ಎಂಬುದನ್ನು ಈ ಕಾರ್ಯಸೂಚಿ ಒಳಗೊಳ್ಳಲಿದೆ ಎಂದು ವಿವರ ನೀಡಿದರು.
ರಾಜ್ಯದಲ್ಲಿ ಕೈಗೊಳ್ಳಬೇಕಾದ ನೀರಾವರಿ ಯೋಜನೆಗಳು ಯಾವುವು? ಪೂರ್ಣಗೊಳಿಸಬೇಕಾದ ನೀರಾವರಿ ಯೋಜನೆಗಳು ಯಾವುವು? ಆಧುನೀಕರಣಗೊಳಿಸಬೇಕಾದ ಯೋಜನೆಗಳು ಯಾವುವು?ಎಂಬುದನ್ನೆಲ್ಲ ಈ ಕಾರ್ಯಸೂಚಿ ಒಳಗೊಳ್ಳಲಿದೆ. ಇದೇ ರೀತಿ ಮುಂದಿನ ಮೂರು ವರ್ಷಗಳಲ್ಲಿ ನಾವು ಪೂರ್ಣಗೊಳಿಸುವ ಯೋಜನೆಗಳ್ಯಾವುವು? ಎಂಬುದನ್ನೂ ಈ ಕಾರ್ಯಸೂಚಿ ಒಳಗೊಳ್ಳಲಿದೆ ಎಂದರು.
ರಾಜ್ಯದಲ್ಲಿ ನೀರಾವರಿ ಯೋಜನೆಗಳನ್ನು ತ್ವರಿತವಾಗಿ ಜಾರಿಗೊಳಿಸಲು ಭೂಸ್ವಾಧೀನ ಹಾಗೂ ಪುನರ್ವಸತಿ ಕಾರ್ಯದ ಸಮಸ್ಯೆಯಿದೆ.ಇದನ್ನು ಸರಿಪಡಿಸಲು ಕಂದಾಯ ಇಲಾಖೆಯೊಂದಿಗೆ ಚರ್ಚೆ ನಡೆಸಿ ಯೋಜನೆಗಳಿಗೆ ತ್ವರಿತ ಚಾಲನೆ ನೀಡಬೇಕಿದೆ ಎಂದು ಹೇಳಿದರು.
ಕಾಲಮಿತಿಯಲ್ಲಿ ಯೋಜನೆಗಳನ್ನು ಪೂರ್ಣಗೊಳಿಸಲು ಅನುಕೂಲವಾಗುವಂತೆ ಯೋಜನೆ ಆಧಾರಿತ ತಂತ್ರಾಂಶವನ್ನು ಅಭಿವೃದ್ಧಿಪಡಿಸಲು ತೀರ್ಮಾನ ಮಾಡಲಾಗಿದೆ ಎಂದೂ ಅವರು ಇದೇ ಸಂಧರ್ಭದಲ್ಲ ಸ್ಪಷ್ಟ ಪಡಿಸಿದರು.
ಕಾಮಗಾರಿಗಳ ಗುಣಮಟ್ಟವನ್ನು ಪರಿಶೀಲಿಸಲು ಖಾಸಗಿ ಸಂಸ್ಥೆಗಳ ಐವರು ತಜ್ಷರನ್ನೊಳಗೊಂಡ ಸಮಿತಿಯೊಂದನ್ನು ರಚಿಸಲು ತೀರ್ಮಾನಿಸಲಾಗಿದ್ದು ಈ ಸಮಿತಿ ತಿಂಗಳಲ್ಲಿ ಇಪ್ಪತ್ತು ದಿನಗಳ ಕಾಲ ತಿರುಗಾಡಿ ನೀರಾವರಿ ಯೋಜನೆಗಳ ಕಾಮಗಾರಿಗಳನ್ನು ಪರಿಶೀಲಿಸಲಿದೆ ಎಂದು ಬೊಮ್ಮಾಯಿ ವಿವರ ನೀಡಿದರು.
ಕಾಮಗಾರಿಗಳು ಪೂರ್ಣವಾದ ಮೇಲೆ ಗುಣಮಟ್ಟ ಪರಿಶೀಲಿಸುವುದಕ್ಕಿಂತ ಯೋಜನೆಗಳನ್ನು ಜಾರಿಗೊಳಿಸುವ ಹಂತದಿಂದಲೇ ಅದನ್ನು ಪರಿಶೀಲಿಸುವುದು ಸೂಕ್ತ ಎಂದರು.
ನೀರಿನ ಮಾಪನ ಮಾಡುವ ಯೋಜನೆ ಫಟಪ್ರಭಾ ಅಚ್ಚುಕಟ್ಟು ಪ್ರದೇಶದ ವ್ಯಾಪ್ತಿಯಲ್ಲಿರುವ ನಾಲೆಯೊಂದರಲ್ಲಿ ಯಶಸ್ವಿಯಾಗಿದ್ದು ಈ ಹಿನ್ನೆಲೆಯಲ್ಲಿ ಯೋಜನೆಯನ್ನು ಇಡೀ ಘಟಪ್ರಭ ಪಾತ್ರದಲ್ಲಿ ಜಾರಿಗೊಳಿಸಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.
ಬೆಳಗಾಂ ಮಹಾರಾಷ್ಟ್ರಕ್ಕೆ ಸೇರಿದ್ದು ಎಂದು ಉಪರಾಷ್ಟ್ರಪತಿ ಕಛೇರಿಯ ಪತ್ರದಲ್ಲಿ ನಮೂದಾದ ಬೆಳವಣಿಗೆಯನ್ನು ಖಂಡಿಸಿದ ಅವರು,ಒಕ್ಕೂಟ ವ್ಯವಸ್ಥೆಯಲ್ಲಿ ಇಂತಹ ತಪ್ಪುಗಳಾಗದಂತೆ ನೋಡಿಕೊಳ್ಳಬೇಕು ಎಂದು ಉಪರಾಷ್ಟ್ರಪತಿಗಳನ್ನು ಒತ್ತಾಯ ಪಡಿಸಿದರು.
ಇದಕ್ಕೆ ಕಾರಣರಾದವರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಬೇಕು ಎಂದು ಇದೇ ಸಂಧರ್ಭದಲ್ಲಿ ಬಸವರಾಜ ಬೊಮ್ಮಾಯಿ ಆಗ್ರಹಿಸಿದರಲ್ಲದೇ ಯಾವ ಕಾರಣಕ್ಕೂ ಮುಂದಿನ ದಿನಗಳಲ್ಲಿ ಇಂತಹ ತಪ್ಪುಗಳು ನಡೆಯಬಾರದು ಎಂದರು.
ಮಹದಾಯಿ ಯೋಜನೆಯ ವಿವಾದದ ಬಗ್ಗೆ ಚರ್ಚಿಸಲು ಪ್ರಧಾನಿಗಳು ಕರೆದ ಸಭೆಗೆ ಹೋಗದಿರಲು ಗೋವಾ ವಿಧಾನಸಭೆ ನಿರ್ಣಯಿಸಿದ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು,ಈ ವಿಷಯದಲ್ಲಿ ಮುಂದೇನು ಎಂಬುದನ್ನು ಗಮನಿಸುತ್ತಿದ್ದೇವೆ ಎಂದು ನುಡಿದರು.