ಬೆಂಗಳೂರು, ಏ. 20 : ಕಳೆದ ಶನಿವಾರ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಗೇಟ್ ಬಳಿ ನಡೆದ ಅವಳಿ ಬಾಂಬ್ ಸ್ಫೋಟಕ್ಕೆ ಸಂಬಂಧಿಸಿದಂತೆ ಬೆಂಗಳೂರು ಪೊಲೀಸರು ಮಹತ್ವದ ಸುಳಿವನ್ನ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಕುರಿತು ಮಾಧ್ಯಮಗೋಷ್ಠಿ ನಡೆಸಿದ ರಾಜ್ಯ ಪೊಲೀಸ್ ಮಹಾನಿರ್ದೇಶಕ ಅಜಯ್ ಕುಮಾರ್ ಸಿಂಗ್ ಮತ್ತು ಬೆಂಗಳೂರು ಪೊಲೀಸ್ ಆಯುಕ್ತ ಶಂಕರ ಬಿದರಿ ಅವರು, ಕಳೆದ ಶನಿವಾರ ಬೆಂಗಳೂರು ರಾಯಲ್ ಚಾಲೆಂಜರ್ಸ್ ಮತ್ತು ಮುಂಬೈ ಇಂಡಿಯನ್ಸ್ ತಂಡಗಳ ನಡುವೆ ನಡೆಯಬೇಕಿದ್ದ ಐಪಿಎಲ್ ಪಂದ್ಯದ ಮುನ್ನ ಗೇಟ್ ನಂಬರ್ 12 ಮತ್ತು 8ರಲ್ಲಿ ಬಾಂಬ್ ಸ್ಫೋಟಗೊಂಡಿದ್ದು, ಅದಕ್ಕೆ ಸಂಬಂಧಿಸಿದಂತೆ ಮಹತ್ವದ ಸುಳಿವು ಲಭ್ಯವಾಗಿದೆ. ಮುಂದಿನ 24 ಗಂಟೆಯೊಳಗೆ ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದರು.
2008ರ ಜುಲೈ 25 ರಂದು ಬೆಂಗಳೂರಿನಲ್ಲಿ ನಡೆದ ಸರಣಿ ಬಾಂಬ್ ಸ್ಫೋಟಕ್ಕೂ ಮತ್ತು ಶನಿವಾರ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ನಡೆದ ಬಾಂಬ್ ಸ್ಫೋಟಕ್ಕೂ ಸಾಮ್ಯತೆ ಇದೆ. ಮೊನ್ನೆ ನಡೆದ ಸ್ಫೋಟಕ್ಕೆ ಟೈಮರ್ ಚಿಪ್ ಬಳಸಲಾಗಿದೆ. 2008ರಲ್ಲಿ ಇದೇ ಮಾದರಿಯಲ್ಲಿ ಸ್ಫೋಟಗೊಳಿಸಲಾಗಿತ್ತು. ನಗರದಲ್ಲಿ ನಡೆದ ಕೃತ್ಯಕ್ಕೆ ಸ್ಥಳೀಯರು ಭಾಗಿಯಾಗಿದ್ದಾರೆಯೇ ಅಥವಾ ಇಲ್ಲವೇ ಎನ್ನುವುದರ ಬಗ್ಗೆ ತನಿಖೆ ನಂತರ ಬೆಳಕಿಗೆ ಬರಲಿದೆ. ಒಟ್ಟಿನಲ್ಲಿ ಹೇಳುವುದಾದರೆ, ಸ್ಪೋಟದ ಹಿಂದಿರುವ ಆರೋಪಿಗಳ ಬಗ್ಗೆ ರಾಜ್ಯ ಪೊಲೀಸರಿಗೆ ಸ್ಪಷ್ಟ ಮಾಹಿತಿ ಸಿಕ್ಕಿದೆ ಎಂದು ಅಜಯ್ ಕುಮಾರ್ ಸಿಂಗ್ ವಿವರಿಸಿದರು.
ಕೆಎಸ್ಆರ್ ಪಿ ನೌಕರನ ಕೈವಾಡ?:ಕ್ರೀಡಾಂಗಣದ ಬಳಿ ನಡೆದ ಬಾಂಬ್ ಕೃತ್ಯದಲ್ಲಿ ರಾಜ್ಯ ಮೀಸಲು ಪೊಲೀಸ್ ಪಡೆಯ ನಿವೃತ್ತ ನೌಕರನ ಕೈವಾಡವಿದೆ ಎಂಬ ಮಹತ್ವದ ಅಂಶ ಬೆಳಕಿಗೆ ಬಂದಿದೆ. ಪ್ರಸ್ತುತ ಈ ನೌಕರ ಸೇವೆಯಿಂದ ನಿವೃತ್ತಿ ಹೊಂದಿದ್ದು, ಕರಾವಳಿ ಮೂಲದವನಾಗಿದ್ದಾನೆ. ಅಲ್ಲದೇ, ರಾಜ್ಯ ಮೀಸಲು ಪಡೆ ಬಾಂಬ್ ನಿಷ್ಕ್ರೀಯ ದಳ ವಿಭಾಗದಲ್ಲಿ ಹಲವಾರು ವರ್ಷಗಳ ಕಾಲ ಕಾರ್ಯ ನಿರ್ವಹಿಸಿದ ಅನುಭವ ಹೊಂದಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ನಿವೃತ್ತ ಸರಕಾರಿ ನೌಕರನ ಹೆಸರು "ಎಸ್" ಅಕ್ಷರದಿಂದ ಆರಂಭವಾಗುತ್ತದೆ. ಚಿನ್ನಸ್ವಾಮಿ ಕ್ರೀಡಾಂಗಣದಿಂದ ಐದು ಕಿಮೀ ಸುತ್ತಲಿತೆ ದೂರದಲ್ಲಿ ನೆಲೆಸಿರುವ ಸುಮಾರು 70 ಶಂಕಿತರನ್ನು ಈಗಾಗಲೇ ಪೊಲೀಸರು ತೀವ್ರ ವಿಚಾರಣೆ ನಡೆಸಿದ್ದು, ವಿಚಾರ ವೇಳೆಯಲ್ಲಿ ಮಹತ್ವದ ಸುಳಿವುಗಳು ಸಿಕ್ಕಿವೆ ಎನ್ನಲಾಗಿದೆ. ವಿಚಾರಣೆ ನಡೆಸಿದ ಸಂಶಯಾತೀತ ವ್ಯಕ್ತಿಗಳೆಲ್ಲರೂ 20 ರಿಂದ 30 ವರ್ಷದೊಳಗಿನವರಾಗಿದ್ದಾರೆ.
ಶನಿವಾರ ಸ್ಫೋಟಗೊಂಡ ಬಾಂಬ್ ಗಳು ಕಡಿಮೆ ತೀವ್ರತೆ ಹೊಂದಿದ್ದು, ಬಾಂಬ್ ಭಯ ಹುಟ್ಟಿಸುವ ಮೂಲಕ ಕ್ರೀಡಾಂಗಣದಲ್ಲಿ ಸೇರಿದ್ದ ಅಭಿಮಾನಿಗಳು ಚೆಲ್ಲಾಪಿಲ್ಲಗೊಳಿಸಿ ಕಾಲ್ತುಳಿತ ನಡೆಸುವ ಯೋಜನೆ ದುಷ್ಕರ್ಮಿಗಳದಾಗಿತ್ತು. ಮುಂದಿನ 24 ಗಂಟೆಯೊಳಗೆ ಅವಳಿ ಸ್ಫೋಟದ ರೂವಾರಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸುವ ಎಲ್ಲ ಸಾಧ್ಯತೆಗಳಿವೆ.
ಟಿಕೆಟ್ ಹಣ ವಾಪಸ್ಸು:ಇದೇ 21 ರಂದು ಗುರುವಾರ ಬೆಂಗಳೂರು ರಾಯಲ್ ಚಾಲೆಂಜರ್ಸ್ ಮತ್ತು ಮುಂಬೈ ಇಂಡಿಯನ್ಸ್ ಮಧ್ಯೆ ಸೆಮಿಫೈನಲ್ ಪಂದ್ಯ ನಡೆಯಬೇಕಿತ್ತು. ತವರಿನ ತಂಡ ಸೆಮಿಫೈನಲ್ ಪ್ರವೇಶಿಸಿದ್ದರಿಂದ ಆ ಪಂದ್ಯದ ಟಿಕೆಟ್ ಈಗಾಗಲೇ ಸೋಲ್ಡ್ ಔಟ್ ಆಗಿತ್ತು. ಆದರೆ, ಶನಿವಾರ ನಡೆದ ಭಯೋತ್ಪಾದನೆಯಿಂದ ಬಂದೋಬಸ್ತ್ ಹಿನ್ನೆಲೆಯಲ್ಲಿ ಪಂದ್ಯವನ್ನು ಮುಂಬೈನ ನಾವಿ ಮುಂಬೈಯಲ್ಲಿರುವ ಡಿ ವೈ ಪಾಟೀಲ್ ಕ್ರೀಡಾಂಗಣಕ್ಕೆ ಸ್ಥಳಾಂತರಿಸಲಾಗಿದೆ.
ಪಂದ್ಯ ಸ್ಥಳಾಂತರಗೊಂಡಿದ್ದು ಕ್ರಿಕೆಟ್ ಅಭಿಮಾನಿಗಳಿಗೆ ಬೇಸರ ಸಂಗತಿಯಾದರೆ, ಐಪಿಎಲ್ ವ್ಯವಸ್ಥಾಪಕರಿಗೆ ತಲೆನೋವಾಗಿದೆ ಪರಿಣಮಿಸಿದೆ. ಪಂದ್ಯ ರದ್ದಾಗಿದ್ದರಿಂದ ಟಿಕೆಟ್ ಗಾಗಿ ಪಡೆದ ಹಣವನ್ನು ಹಿಂತಿರುಗಿಸಬೇಕಾಗಿದೆ. ಏ. 24ರ ವರೆಗೆ ಹಣವನ್ನು ಹಿಂತಿರುಗಿಸುವ ಪ್ರಕ್ರಿಯೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ ಕೆಎಸ್ ಸಿಎ ಮೂಲಗಳು ತಿಳಿಸಿವೆ.
ಕೃಪೆ:ದಟ್ಸ್ ಕನ್ನಡ