ಭಟ್ಕಳ, ಅಕ್ಟೋಬರ್ 10: ತಾಲೂಕಿನ ಶಿಲೆಕಲ್ಲು ಕ್ವಾರಿಗಳ ತಾಣ ಶಿರಾಲಿ ಬಂಗಾರಮಕ್ಕಿ ಸುತ್ತಮುತ್ತ ಕರಾವಳಿ ಕಾವಲು ಪಡೆಯ ಪೊಲೀಸರು ಸ್ಪೋಟಕಗಳ ಬೇಟೆಯನ್ನು ಮುಂದುವರೆಸಿದ್ದಾರೆ.
ಶುಕ್ರವಾರ ಬಂಧಿತನಾಗಿರುವ ಉದಯ ಮಂಜುನಾಥ ನಾಯ್ಕನ ವಿಚಾರಣೆ ಮುಂದುವರೆದಿದ್ದು, ಆತ ನೀಡಿದ ಮಾಹಿತಿಯ ಮೇರೆಗೆ ೯೨೫ಕೆಜಿ ಅಮೋನಿಯಮ್ ನೈಟ್ರೇಟ್, ೨೭೫೦ ಇಲೆಕ್ಟ್ರಿಕಲ್ ಡೆಟೋನೇಟರ್ಸ, ೨೦೦ ನಾನ್ ಇಲೆಕ್ಟ್ರಿಕಲ್ ಡೆಟೋನೇಟರ್ಸ, ೩೮೪ ಅಡಿ ಫ್ಯೂಸ್ ಬತ್ತಿ, ೪ ಫಿಕ್ಸೆಡ್ ಡೆಟೋನೇಟರ್ಸ ಫ್ಯೂಸ್ಗಳನ್ನು ವಶಪಡಿಸಿಕೊಳ್ಳಲಾಗಿದೆ. ಇವುಗಳ ಅಂದಾಜು ಮೊತ್ತ ರೂಪಾಯಿ ೧,೩೧,೦೦೦ ಎಂದು ಅಂದಾಜಿಸಲಾಗಿದೆ.
ಕಳೆದ ಅಕ್ಟೋಬರ್ ೪ರಂದು ಸ್ಪೋಟಕಗಳ ಸಾಗಾಟಕ್ಕೆ ಸಂಬಂಧಪಟ್ಟಂತೆ ನಾಗರಾಜ ದೇವಾಡಿಗ ಎಂಬುವವನನ್ನು ಬಂಧಿಸಿ ಆತನಿಂದ ೨೬೦೦೦ರೂಪಾಯಿ ಬೆಲೆಯ ಸ್ಪೋಟಕಗಳನ್ನು ಜಫ್ತುಪಡಿಸಿಕೊಂಡಿರುವುದನ್ನಿಲ್ಲಿ ಸ್ಮರಿಸಿಕೊಳ್ಳಬಹುದು . ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಅಬ್ದುಲ್ ರಹೀಮ್, ಪಶ್ಚಿಮವಲಯ ಐಜಿಪಿ ಗೋಪಾಲ ಹೊಸೂರು, ಕರಾವಳಿ ಕಾವಲು ಪಡೆಯ ಉಡುಪಿ ವಿಭಾಗದ ಎಸ್ಪಿ ಭಗವಾನ್ ದಾಸ, ಡಿಎಸ್ಪಿ ಎಸ್.ವಿ.ನಾಯ್ಕ ಹಾಗೂ ಸಿಪಿಐ ಎನ್.ಟಿ.ಪ್ರಮೋದರಾವ್ ಮಾರ್ಗದರ್ಶನದಲ್ಲಿ ಎಸೈ ಎಚ್.ಎಲ್.ನಂದೀಶ ನೇತೃತ್ವದ ಪೊಲೀಸರ ತಂಡ ತನಿಖೆಯನ್ನು ಮುಂದುವರೆಸಿದೆ. ಈ ಕುರಿತು ಶನಿವಾರ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ತನಿಖೆಯ ನೇತೃತ್ವವನ್ನು ವಹಿಸಿರುವ ಎನ್.ಟಿ.ಪ್ರಮೋದ ರಾವ್, ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲವರು ಪರಾರಿಯಾಗಿದ್ದು ಅವರನ್ನು ಬಂಧಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ವಿವರಿಸಿದರು.