ನವದೆಹಲಿ, ನ. ೮ : ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಬಳ್ಳಾರಿಯ ರೆಡ್ಡಿ ಸೋದರರ ಹದಿನಾಲ್ಕು ದಿನಗಳ ಘನಘೋರ ಕದನ ಕಡೆಗೂ ವಿರಾಮ ಕಂಡಿದೆ.
ಈಗಾಗಲೆ ಹಿರಿಯ ಐ.ಎ.ಎಸ್.ಅಧಿಕಾರಿ ವಿ.ಪಿ.ಬಳಿಗಾರ್ ಅವರ ‘ಬಲಿ’ ತೆಗೆದುಕೊಂಡಿರುವ ಈ ಕಾಳಗ ಒಂದೆರಡು ದಿನಗಳಲ್ಲೇ ಶೋಭಾ ಕರಂದ್ಲಾಜೆ ಅವರ ಸಚಿವ ಸ್ಥಾನವನ್ನೂ ಕಿತ್ತುಕೊಳ್ಳುವುದು ನಿಶ್ಚಿತ.
ಜಗದೀಶ ಶೆಟ್ಟರ್ ಬಯಸಿದರೆ ಅವರನ್ನು ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳಲು ಸದ್ಯದಲ್ಲೇ ಮಂತ್ರಿಮಂಡಲ ವಿಸ್ತರಣೆಯನ್ನು ಮಾಡಲು ಮುಖ್ಯಮಂತ್ರಿ ಸಿದ್ಧ.
ಬೇರೆ ಯಾವ ಸಚಿವರ ತಲೆಗಳೂ ಉರುಳುವುದಿಲ್ಲ ಎಂದು ಯಡಿಯೂರಪ್ಪ ಮತ್ತು ಜನಾರ್ದನರೆಡ್ಡಿ ಇಬ್ಬರೂ ಪ್ರತ್ಯೇಕವಾಗಿ ಸುದ್ದಿಗಾರರಿಗೆ ಖಚಿತಪಡಿಸಿದರು.
ಉಳಿದಂತೆ ಹಲವು ರಾಜೀ ಸೂತ್ರಗಳು ಮುಂಬರುವ ದಿನಗಳಲ್ಲಿ ವರಿಷ್ಠರಾದ ಸುಷ್ಮಾ ಸ್ವರಾಜ್, ಅನಂತಕುಮಾರ್, ಅರುಣ್ ಜೇಟ್ಲಿ ಹಾಗೂ ವೆಂಕಯ್ಯ ನಾಯ್ಡು ಅವರ ಉಸ್ತುವಾರಿಯಲ್ಲಿ ಜಾರಿ ಆಗಲಿವೆ.
ಶೀಘ್ರ ಶಾಸಕಾಂಗ ಸಭೆ: ಒಂದೆರಡು ದಿನಗಳಲ್ಲೇ ಕರೆಯಲಾಗುವ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಈ ಎಲ್ಲ ವರಿಷ್ಠರೂ ಇದ್ದು, ಯಡಿಯೂರಪ್ಪ ಸರ್ಕಾರದ ಮುಂದಿನ ದಾರಿಯ ಕುರಿತು ‘ಮಾರ್ಗದರ್ಶನ’ ಮಾಡಲಿದ್ದಾರೆ.
ಯಡಿಯೂರಪ್ಪ ಮತ್ತು ರೆಡ್ಡಿ ಸೋದರರು ಇನ್ನು ಮುಂದೆ ಬಿಲ್‌ಕುಲ್ ಅಣ್ಣ ತಮ್ಮಂದಿರಂತೆ ಯಾವುದೇ ಮನಸ್ತಾಪ ಇಲ್ಲದೆ ಒಂದಾಗಿ ಕರ್ನಾಟಕದ ಜನತೆಯ ಸೇವೆ ಸಲ್ಲಿಸುವರು ಎಂದು ರೆಡ್ಡಿ ಸೋದರರ ‘ತಾಯಿ’ ಸುಷ್ಮಾ ಸ್ವರಾಜ್ ತಮ್ಮ ಸರ್ಕಾರಿ ಬಂಗಲೆಯ ಅಂಗಳದಲ್ಲಿ ಯಡಿಯೂರಪ್ಪ ಮತ್ತು ರೆಡ್ಡಿ- ಶ್ರೀರಾಮುಲು ಅವರನ್ನು ಎಡಬಲಕ್ಕೆ ಇಟ್ಟುಕೊಂಡು ಸಾರಿ ಹೇಳಿದರು.
ಸಿನಿಮೀಯ ಸುಖಾಂತ್ಯದ ಈ ‘ಫ್ಯಾಮಿಲಿ ಫೋಟೋ’ದಲ್ಲಿ ರಾಜ್ಯ ಬಿಜೆಪಿ ಅಧ್ಯಕ್ಷ ಡಿ.ವಿ.’ಸದಾನಂದ’ಗೌಡ ಅವರೂ ಇದ್ದರು. ರಾಜ್ಯ ಬಿಜೆಪಿ ಸರ್ಕಾರ ಜನ ಮೆಚ್ಚುವ ರೀತಿಯಲ್ಲಿ ಮುಂದಿನ ಐದು ವರ್ಷ ಮಾತ್ರವಲ್ಲ, ಇನ್ನೂ ಐವತ್ತು ವರ್ಷ ಕೆಲಸ ಮಾಡಲಿದೆ ಎಂಬುದು ಜನಾರ್ದನರೆಡ್ಡಿ ಮಾಡಿದ ಘೋಷಣೆ.
ಆನೆ ಬಲ ಬಂದಂತೆ-ಸಿಎಂ:’ಜನಾರ್ದನರೆಡ್ಡಿ ಅವರ ಶಕ್ತಿ ಮತ್ತು ಶ್ರೀರಾಮುಲು ನನ್ನ ಜೊತೆಗೆ ಬಂದರೆ ನನಗೆ ಆನೆಯ ಬಲ ಬಂದಂತೆ’ ಎಂದು ಉದ್ಗರಿಸಿದರು ಮುಖ್ಯಮಂತ್ರಿ ಯಡಿಯೂರಪ್ಪ.
ಸುಷ್ಮಾ ಅವರ ಅಂಗಳದಲ್ಲಿ ಕ್ಯಾಮೆರಾಗಳ ಒತ್ತಾಯದ ಮೇರೆಗೆ ಯಡಿಯೂರಪ್ಪ- ಜನಾರ್ದನರೆಡ್ಡಿ- ಶ್ರೀರಾಮುಲು- ಅನಂತಕುಮಾರ್ ಕೈ ಕುಲುಕಿದಾಗ ಸಂಜೆ ನಾಲ್ಕೂ ಇಪ್ಪತ್ತೈದು ಸಮೀಪಿಸಿತ್ತು.
ಪ್ರತೀಕಾರ- ಹಗೆ- ದುಃಖ- ತಳಮಳದಿಂದ ಸೀದು ಹೋಗಿದ್ದ ಮುಖಗಳು ಅರಳಿಸಿದ ಬಲವಂತದ ಕೃತ್ರಿಮ ನಗೆಯನ್ನು ದೊಡ್ಡ ಸಂಖ್ಯೆಯ ಕ್ಯಾಮೆರಾಗಳು, ಇನ್ನೂ ದೊಡ್ಡ ಸಂಖ್ಯೆಯ ಸುದ್ದಿಗಾರರ ಕಣ್ಣುಗಳು ದಾಖಲಿಸಿಕೊಂಡವು. ಸುಷ್ಮಾ ಮನೆಯಿಂದ ಅನತಿ ದೂರದಲ್ಲೇ ಇರುವ ಅಡ್ವಾಣಿ ಅವರ ಸರ್ಕಾರಿ ಬಂಗಲೆಯಲ್ಲಿ ಮತ್ತೊಮ್ಮೆ ಇದೇ ದೃಶ್ಯದ ಪುನಾರಾವರ್ತನೆ. ಯಡಿಯೂರಪ್ಪ ತಲೆ ದಂಡವಲ್ಲದೆ ಇನ್ನೇನೂ ಬೇಡ ಎಂದಿದ್ದ ಜನಾರ್ದನರೆಡ್ಡಿ- ಶ್ರೀರಾಮುಲು ಕಡೆಗೂ ತಾವು ಏರಿದ್ದ ಕದನದ ಕುದುರೆಯಿಂದ ಕೆಳಗಿಳಿದಿದ್ದರು.
ಆಡ್ವಾಣಿ ಹುಟ್ಟುಹಬ್ಬ ಕೊಡುಗೆ:ರಾಜಕೀಯ ಬದುಕಿನ ಇಳಿಸಂಜೆಗೆ ಅಡಿಯಿಟ್ಟರುವ ಬಿಜೆಪಿ ಮಹಾರಥಿ ಎಲ್.ಕೆ.ಅಡ್ವಾಣಿ ಅವರ ಹುಟ್ಟುಹಬ್ಬದ ಕೊಡುಗೆ ಎಂದು ಭಾನುವಾರದ ಯಡಿಯೂರಪ್ಪ- ರೆಡ್ಡಿ ಸೋದರರ ಮರು ಮೈತ್ರಿಯನ್ನು ಪಕ್ಷದ ನಾಯಕರು ಬಣ್ಣಿಸಿದರು.
ಬಿಕ್ಕಟ್ಟು ಸೌಹಾರ್ದಯುತವಾಗಿ ಪರಿಹಾರವಾಗಿದೆ. ಪರಿಹಾರ ಆಗಿರುವ ರೀತಿ ನೀತಿ ನನಗೆ ಅತ್ಯಂತ ಸಮಾಧಾನ ತಂದಿದೆ. ಅಡ್ವಾಣಿ ಅವರ ಜನ್ಮದಿನ ಇಂದೇ ಆಗಿರುವುದು ಸಂತಸದ ಕಾಕತಾಳೀಯ.
‘ರಾಜಿ ಫಾರ್ಮುಲಾ ಏನೂ ಇಲ್ಲ. ಉಂಟಾಗಿದ್ದ ತಪ್ಪು ತಿಳಿವಳಿಕೆ ದೂರವಾಗಿದೆ’ ಎಂದೂ ಸುಷ್ಮಾ ಪ್ರಶ್ನೆಯೊಂದಕ್ಕೆ ಉತ್ತರ ನೀಡಿದರು.
ಸಮಾಧಾನದ ನಿಟ್ಟುಸಿರುಗರೆದ ಮುಖ್ಯಮಂತ್ರಿ ಮತ್ತು ಅವರ ಸಂಪುಟದ ಸಂಗಾತಿಗಳು ರಾತ್ರಿಯ ಬೆಂಗಳೂರು ವಿಮಾನ ಹತ್ತಿದರು. ಒಂದೆರಡು ದಿನಗಳಲ್ಲಿ ಶೋಭಾ ಕರಂದ್ಲಾಜೆ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವುದು ಇದೀಗ ನಿಶ್ಚಿತ.
ರಾಜೀ ಸೂತ್ರ
-ಸಚಿವೆ ಶೋಭಾ ಕರಂದ್ಲಾಜೆ ಅವರನ್ನು ಸಂಪುಟದಿಂದ ಕೈಬಿಡುವುದು (ಸಿಎಂ ಪ್ರಿನ್ಸಿಪಲ್ ಸೆಕ್ರೆಟರಿ ವಿ.ಪಿ.ಬಳಿಗಾರ್ ಅವರು ಈಗಾಗಲೇ
ವರ್ಗವಾಗಿದ್ದಾರೆ).
-ಮಂತ್ರಿಗಳು ತಮಗೆ ಬೇಕಾದ ಅಧಿಕಾರಿಗಳನ್ನು ತಮ್ಮ ಇಲಾಖೆಯ ಪ್ರಮುಖ ಹುದ್ದೆಗಳಲ್ಲಿ ನೇಮಿಸಿಕೊಳ್ಳಬಹುದು.
-ನಿಗಮ ಮಂಡಳಿಗಳಿಗೆ ೬೦-೪೦ರ ಅನುಪಾತದಲ್ಲಿ ನೇಮಕವಾಗಲಿದೆ. ೪೦ರ ಅನುಪಾತದ ಪಟ್ಟಿಯನ್ನು ರೆಡ್ಡಿ ಸೋದರರು ಕೊಟ್ಟ ತಕ್ಷಣವೇ ನೇಮಕ.
-ಸರ್ಕಾರದ ಪ್ರಮುಖ ನಿರ್ಧಾರಗಳು ಮತ್ತು ನೀತಿ ನಿರ್ಧಾರಕ್ಕೆ ಸಂಬಂಧಪಟ್ಟ ಸಂಗತಿಗಳನ್ನು ಯಡಿಯೂರಪ್ಪ ಸಮನ್ವಯ ಸಮಿತಿ ಜತೆ ಮುಂದಾಗಿಯೇ ಸಮಾಲೋಚಿಸುವುದು.
-ಜಗದೀಶ್ ಶೆಟ್ಟರ್ ಅವರನ್ನು ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳುವುದು.
-ಜಿಲ್ಲಾ ಉಸ್ತುವಾರಿ ಸಚಿವರ ಪುನರ್‌ಸಂಘಟನೆ ಮಾಡಿ ರೆಡ್ಡಿ ಸೋದರರ ಬೆಂಬಲಿಗ ಸಚಿವರಿಗೂ ಉಸ್ತುವಾರಿ ಹೊಣೆ ನೀಡುವುದು.
-ಅಧಿಕಾರಿಗಳ ವರ್ಗಾವಣೆ ಸಂದರ್ಭ ರೆಡ್ಡಿ ಸೋದರರ ಜತೆ ಚರ್ಚಿಸುವುದು. ಇತ್ತೀಚೆಗೆ ಆಗಿರುವ ವರ್ಗಾವಣೆಯನ್ನು ರದ್ದು ಮಾಡುವುದು.
ಪ್ರತಿಕ್ರಿಯೆಗಳು
ನಾಡಿನ ಜನರಿಗೆ ತೊಂದರೆ ಆಗಬಾರದು, ಎಲ್ಲರೂ ಒಂದಾಗಬೇಕು ಅಂತ ಸುಷ್ಮಾ ಸ್ವರಾಜ್ ಹೇಳಿದ್ದಾರೆ. ನಾವೆಲ್ಲ ಒಟ್ಟಾಗಿರುತ್ತೇವೆ, ಸದ್ಯಕ್ಕೆ ಬೇಡಿಕೆಗಳೇನೂ ಇಲ್ಲ, ಎಲ್ಲವನ್ನೂ ಸುಷ್ಮಾ ಸ್ವರಾಜ್ ಅವರಿಗೆ ತಿಳಿಸಿದ್ದೇವೆ
-ಬಿ. ಶ್ರೀರಾಮುಲು
ಬಿಜೆಪಿಗೆ ಎಲ್ಲವನ್ನು ಜೀರ್ಣ ಮಾಡಿಕೊಳ್ಳುವ ಶಕ್ತಿ ಇದೆ. ಬಿಕ್ಕಟ್ಟು ಬಗೆಹರಿದಿದೆ. ಬಿಕ್ಕಟ್ಟಿಗೆ ಆಪರೇಷನ್ ಕಮಲ ಕಾರಣ ಅಲ್ಲ, ಇಂತಹ ಹತ್ತು ಹಲವು ಸಮಸ್ಯೆ ಬಂದಿವೆ, ಹೋಗಿವೆ, ಜನರ ಹಿತಾಸಕ್ತಿ ನಮಗೆ ಮುಖ್ಯ.
- ಡಿ.ವಿ. ಸದಾನಂದಗೌಡ
ನಾವು ಹೈದರಾಬಾದ್‌ಗೆ ಅಧ್ಯಯನ ಮಾಡಲು ಹೋಗಿದ್ದೇವೆ. ನಾಯಕತ್ವ ಬದಲಾವಣೆ ಮಾಡದೇ ಇದ್ದುದರಿಂದ ನೋವಾಗಿಲ್ಲ, ಬೇಸರವಾಗಿಲ್ಲ, ಬಿಕ್ಕಟ್ಟು ಬಗೆಹರಿದಿದ್ದಕ್ಕೆ
ಸಂತೋಷವಾಗಿದೆ.
- ಎಂ.ಪಿ. ರೇಣುಕಾಚಾರ್ಯ
ಬಿಜೆಪಿಯ ದೊಂಬರಾಟ ಅಂತ್ಯಗೊಂಡಿದೆ ಎಂದು ಪಕ್ಷದ ವರಿಷ್ಠರು ಹೇಳಿಕೊಂಡಿದ್ದಾರೆ. ಈ ದೊಂಬರಾಟದಿಂದ ನೆರೆ ಸಂತ್ರಸ್ತರು ಬೀದಿಪಾಲಾಗಿದ್ದಾರೆ. ಎರಡು ಗುಂಪಿನವರು ಯಾವ ಕಾರಣಗಳಿಗಾಗಿ ದೊಂಬರಾಟ ನಡೆಸಿದರೋ ಆ ಪ್ರಶ್ನೆಗಳು ಪ್ರಶ್ನೆಗಳಾಗೇ ಉಳಿದಿವೆ. ಜನತೆಯನ್ನು ಕತ್ತಲಲ್ಲಿ ಇಡದೇ ಸತ್ಯಸಂಗತಿ ಬಹಿರಂಗಪಡಿಸಲಿ. ಇಲ್ಲದಿದ್ದರೆ, ಜನತೆ, ಇವರ ಅಧಿಕಾರದಾಹ ಅರ್ಥ ಮಾಡಿಕೊಳ್ಳುತ್ತಾರೆ.
-ವಿ.ಎಸ್. ಉಗ್ರಪ್ಪ,
ಯಾವ ಬಿಕ್ಕಟ್ಟಿಲ್ಲ, ವರಿಷ್ಠರು ಎಲ್ಲಾ ಬಗೆಹರಿಸಿದ್ದಾರೆ. ರೆಡ್ಡಿ ಬ್ರದರ್ಸ್ ಒಟ್ಟಾಗಿ ಕೆಲಸ ಮಾಡುವ ಪಣ ತೊಟ್ಟಿದ್ದೇವೆ. ರೆಸಾರ್ಟ್‌ನಲ್ಲಿರುವ ಶಾಸಕರಿಗೆ ವಿನಂತಿ ಮಾಡ್ತೇನೆ, ತಕ್ಷಣ ಹೊರಟು ಬನ್ನಿ. ಬೆಂಗಳೂರಲ್ಲಿ ಸೇರೋಣ, ನಿಮ್ಮ ಬಗ್ಗೆ ಬೇಸರ ಇಲ್ಲ, ಎಲ್ಲರೂ ಸೇರಿ ಕೆಲಸ ಮಾಡೋಣ,
- ಬಿ.ಎಸ್. ಯಡಿಯೂರಪ್ಪ
ತಾಯಿ ಸುಷ್ಮಾ ಸ್ವರಾಜ್ ಆದೇಶದಂತೆ ಯಡಿಯೂರಪ್ಪ- ನಾವು ಒಟ್ಟಾಗಿ ಮುಂದುವರೆಯುತ್ತೇವೆ, ಭಿನ್ನಮತ ಮರೆತು ಜತೆಯಾಗಿ ರಾಜ್ಯದ ಜನತೆ ಮೆಚ್ಚುವ ರೀತಿಯಲ್ಲಿ ಕೆಲಸ ಮಾಡುತ್ತೇವೆ, ಬಿಜೆಪಿ ೫ ವರ್ಷ ಅಲ್ಲ, ೫೦ ವರ್ಷ ಸರ್ಕಾರ ಮಾಡಬೇಕು, ಆ ರೀತಿ ಒಟ್ಟಾಗಿ ಕೆಲಸ ಮಾಡ್ತೇವೆ.
- ಜನಾರ್ದನ ರೆಡ್ಡಿ
ಇದು ಆಡ್ವಾಣಿ ಅವರಿಗೆ ನೀಡುತ್ತಿರುವ ಗಿಫ್ಟ್. ಇಂದು ಅಡ್ವಾಣಿ ಹುಟ್ಟುಹಬ್ಬ, ಕಾಕತಾಳೀಯವೆಂಬಂತೆ ಇಂದೇ ಬಿಕ್ಕಟ್ಟು ಬಗೆಹರಿದಿದೆ. ಇದಕ್ಕಿಂತ ಬೇರೆ ಕಾಣಿಕೆ ಏನಿದೆ?
- ಸುಷ್ಮಾ ಸ್ವರಾಜ್
ಬಿಜೆಪಿ ಹೈಕಮಾಂಡ್ ದುರ್ಬಲ, ಕುರ್ಚಿಗಾಗಿ ಯಡಿಯೂರಪ್ಪಏನನ್ನಾ ದರೂ ಮಾಡುವರೆಂಬುದು ಈಗ ಸಾಬೀತಾಗಿದೆ. ರೆಡ್ಡಿ ಸಿಎಂ ಸೇರಿದ್ದು ಬಲವಂತವಾಗಿ ಮದುವೆಯಾದಂತೆ.
- ದೇಶಪಾಂಡೆ, ಕೆಪಿಸಿಸಿ ಅಧ್ಯಕ್ಷ
ಬಿಜೆಪಿ ನಾಯಕರು ಕಚ್ಚಾಟದಲ್ಲಿ ಸಮಯ ಕಳೆದು ಸಂತ್ರಸ್ತರನ್ನು ಸಂಕಷ್ಟಕ್ಕೆ ಸಿಲುಕಿಸಿದ್ದರು. ಇದರಿಂದ ಸಂತ್ರಸ್ತರ ಮನಸ್ಸು ಒಡೆದಿದೆ. ಅವರಿಗೆ ಪರಿಹಾರ ನೀಡಬೇಕು.
- ಎಚ್.ಡಿ. ಕುಮಾರಸ್ವಾಮಿ
ಸೌಜನ್ಯ: ಕನ್ನಡಪ್ರಭ