ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಮಂಗಳೂರು: ಮಾನವ ಕಳ್ಳ ಸಾಗಣೆ ತಡೆ ಘಟಕ ರಚನೆಗೆ ಸರಕಾರಕ್ಕೆ ಪ್ರಸ್ತಾಪ: ಸಿ‌ಐಡಿ ಡಿಜಿಪಿ ಡಾ.ಡಿ.ವಿ. ಗುರುಪ್ರಸಾದ್

ಮಂಗಳೂರು: ಮಾನವ ಕಳ್ಳ ಸಾಗಣೆ ತಡೆ ಘಟಕ ರಚನೆಗೆ ಸರಕಾರಕ್ಕೆ ಪ್ರಸ್ತಾಪ: ಸಿ‌ಐಡಿ ಡಿಜಿಪಿ ಡಾ.ಡಿ.ವಿ. ಗುರುಪ್ರಸಾದ್

Tue, 24 Nov 2009 03:06:00  Office Staff   S.O. News Service
ಮಂಗಳೂರು, ನ.23: ರಾಜ್ಯದಲ್ಲಿ ಸ್ತ್ರೀ ಮತ್ತು ಮಕ್ಕಳ ನಾಪತ್ತೆ ಪ್ರಕರಣ ಹೆಚ್ಚುತ್ತಿದ್ದು, ಅವರು ಏನಾದರು, ಎಲ್ಲಿಗೆ ಹೋದರು? ಇತ್ಯಾದಿ ಬಗ್ಗೆ ತನಿಖೆ ನಡೆಸುವ ನಿಟ್ಟಿನಲ್ಲಿ ಸಿ‌ಐಡಿ ಅಧೀನದಲ್ಲಿ ಮಾನವ ಕಳ್ಳ ಸಾಗಾಣಿಕೆ ತಡೆ ಘಟಕ ರಚಿಸಲು ಸರಕಾರಕ್ಕೆ ಪ್ರಸ್ತಾಪ ಮಾಡಲಾಗಿದೆ ಎಂದು ಸಿ‌ಐಡಿ ಡಿಜಿಪಿ ಡಾ.ಡಿ.ವಿ. ಗುರುಪ್ರಸಾದ್ ಸೋಮವಾರ ಜಿಲ್ಲಾ ಎಸ್‌ಪಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ಯಲ್ಲಿ ತಿಳಿಸಿದ್ದಾರೆ.

ಮಹಿಳೆಯರು ಮತ್ತು ಮಕ್ಕಳನ್ನು ಕಳ್ಳ ಸಾಗಾಣಿಕೆ ಮಾಡಿ ವೇಶ್ಯಾವಾಟಿಕೆಗೆ, ಭಿಕ್ಷಾಟನೆಗೆ ದುರ್ಬಳಕೆ ಮಾಡಲಾಗುತ್ತದೆ. ವರ್ಷದಲ್ಲಿ ಸುಮಾರು ೧ ಸಾವಿರ ಮಂದಿ ನಾಪತ್ತೆಯಾಗು ತ್ತಿದ್ದು, ಆ ಪೈಕಿ ಶೇ.೮೦ರಷ್ಟು ಮಂದಿ ಮತ್ತೆ ಪತ್ತೆಯಾಗುತ್ತಾರೆ. ಉಳಿದ ಶೇ.೨೦ರಷ್ಟು  ಮಂದಿಯ ಬಗ್ಗೆ ತನಿಖೆ ಕೈಗೊಳ್ಳುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಮಾನವ ಕಳ್ಳ ಸಾಗಾಣಿಕೆ ತಡೆ ಘಟಕ ರಚನೆಯ ಅಗತ್ಯವಿದೆ ಎಂದು ಅವರು ಹೇಳಿದರು.

ಮೋಹನ್ ಪ್ರಕರಣ ಬಂದಿಲ್ಲ...

೧೯ ಮಂದಿ ಅಮಾಯಕ ಯುವತಿಯರನ್ನು ಸೈಯನೈಡ್ ನೀಡಿ ಕೊಂದು ಹಾಕಿದ ಮೋಹನ್ ಕುಮಾರ್ ಪ್ರಕರಣ ಇನ್ನೂ ಸಿ‌ಐಡಿಗೆ ಬಂದಿಲ್ಲ. ರಾಜ್ಯ ಸರಕಾರ ಅಥವಾ ಡಿಜಿಪಿ ಸೂಚನೆ ಬಂದರೆ, ಪ್ರಕರಣ ಕೈಗೊಳ್ಳಲಾಗುವುದು ಎಂದು ಪತ್ರಕರ್ತರ ಪ್ರಶ್ನೆಯೊಂದಕ್ಕೆ ಅವರು ಉತ್ತರಿಸಿದರು.

ಕಿನ್ನಿಗೋಳಿಯ ಅಶ್ವಿನಿ ಕುಲಾಲ್ ಆತ್ಮಹತ್ಯೆ ಪ್ರಕರಣದ ಬಗ್ಗೆ ಸಿ‌ಐಡಿ ತನಿಖೆ ನಡೆಸಿದ್ದು, ಇಬ್ಬರ ಮೇಲೆ ಪ್ರಕರಣ ದಾಖಲಿಸಲಾಗಿದ್ದು, ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಸಲಾಗಿದೆ ಮತ್ತು ಉಡುಪಿ ಜಿಲ್ಲೆಯ ಭೋಜ ಶೆಟ್ಟಿ ಕೊಲೆ ಪ್ರಕರಣದ ತನಿಖೆ ಪ್ರಗತಿಯಲ್ಲಿದೆ ಎಂದು ತಿಳಿಸಿದರು.

ಸಿ‌ಐಡಿಯಲ್ಲಿ ದರೋಡೆ, ಖೋಟಾನೋಟು, ವರದಕ್ಷಿಣೆ, ಸೈಬರ್ ಕ್ರೈಂ ಮತ್ತಿತ್ಯಾದಿ ಪ್ರಕರಣದ ತನಿಖೆಗಾಗಿ ಪ್ರತ್ಯೇಕ ವಿಭಾಗವಿದ್ದು, ರಾಜ್ಯದ ಎಲ್ಲ  ವಲಯಗಳಿಗೆ ಭೇಟಿ ನೀಡಿ ಎಲ್ಲ ಎಸ್‌ಪಿಗಳ ಚರ್ಚೆ ನಡೆಸಲಾಗುತ್ತದೆ. ಇಂದು ಪಶ್ಚಿಮ ವಲಯ ಮಟ್ಟದ ಸಭೆಯನ್ನು ಮಂಗಳೂರಿನಲ್ಲಿ ನಡೆಸಲಾಗಿದೆ. ಅಪರಾಧ ಪ್ರಕರಣದ ಪ್ರಮಾಣ, ತನಿಖೆಯ ಪ್ರಗತಿಯ ಬಗ್ಗೆ ಪರಿಶೀಲನೆ ಮಾಡಲಾಗಿದೆ ಎಂದು ಡಾ. ಡಿ.ವಿ.ಗುರುಪ್ರಸಾದ್ ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಐಜಿ ಗೋಪಾಲ್ ಹೊಸೂರು ಉಪಸ್ಥಿತರಿದ್ದರು.

ಲವ್ ಜಿಹಾದ್ ಅಂದರೆ ಏನು?

“ಕರ್ನಾಟಕ ರಾಜ್ಯದಲ್ಲಿ ‘ಲವ್ ಜಿಹಾದ್’ ಪ್ರಕರಣ ಏನಾಯಿತು? ಎಂದು ಪತ್ರಕರ್ತರು ಪ್ರಶ್ನಿಸಿದಾಗ, ಲವ್ ಜಿಹಾದ್ ಅಂದರೆ ಏನು? ಲವ್ ಮತ್ತು ಜಿಹಾದ್ ಎಂಬ ಪದದ ಅರ್ಥವೇ ಬೇರೆ. ನೀವು ಯಾವ ಅರ್ಥದಲ್ಲಿ ನನ್ನಲ್ಲಿ ಪ್ರಶ್ನಿಸುತ್ತಿದ್ದೀರಿ? ನನ್ನ ಜ್ಞಾನ ವಿಸ್ತರಣೆಗಾದರೂ ಸ್ವಲ್ಪ ಹೇಳಿ. ನಾನೂ ಕೂಡ ಮೊದಲು ಪತ್ರಕರ್ತನಾಗಿದ್ದೆ. ವಾರ್ತಾ ಇಲಾಖೆಯಲ್ಲಿ ಅಧಿಕಾರಿಯೂ ಆಗಿದ್ದೆ. ಪೊಲೀಸ್ ಇಲಾಖೆಯೊಂದಿಗೆ ವಾರ್ತಾ ಮಾಧ್ಯಮಗಳ ಬಗ್ಗೆಯೂ ಅರಿವು ಇದೆ”ಎಂದು ಡಾ.ಡಿ.ವಿ. ಗುರುಪ್ರಸಾದ್ ಹೇಳಿದರು.

ಈ ಪ್ರಕರಣದ ಬಗ್ಗೆ  ರಾಜ್ಯ ಹೈಕೋರ್ಟ್ ನಮ್ಮಲ್ಲಿ ವರದಿ ಕೇಳಿದೆ. ಅದಕ್ಕಾಗಿ ಸಮಯವಕಾಶ ಕೇಳಿದ್ದೇವೆ. ಕಳೆದ ೫ ವರ್ಷದಲ್ಲಿ ರಾಜ್ಯದಲ್ಲಿ ನಡೆದ ನಾಪತ್ತೆ ಪ್ರಕರಣಗಳ ಬಗ್ಗೆ ಸಮಗ್ರ ಮಾಹಿತಿ ಸಂಗ್ರಹಿಸಿ, ತನಿಖೆ ನಡೆಸಿ ೨೦೦೯ರ ಜನವರಿ ೧೮ರೊಳಗೆ ವರದಿ ಸಲ್ಲಿಸಲಾಗುವುದು ಎಂದು ಅವರು ನುಡಿದರು.

Share: