ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಬೆಂಗಳೂರು: ಆಡಳಿತದಲ್ಲಿ ನಿರ್ಲಕ್ಷ್ಯ ತೋರಿದವರ ಮೇಲೆ ಕಠಿಣ ಕ್ರಮ - ಎಸ್. ವಿ. ರಂಗನಾಥ್ ಆದೇಶ

ಬೆಂಗಳೂರು: ಆಡಳಿತದಲ್ಲಿ ನಿರ್ಲಕ್ಷ್ಯ ತೋರಿದವರ ಮೇಲೆ ಕಠಿಣ ಕ್ರಮ - ಎಸ್. ವಿ. ರಂಗನಾಥ್ ಆದೇಶ

Sun, 17 Jan 2010 03:18:00  Office Staff   S.O. News Service
ಬೆಂಗಳೂರು,ಜನವರಿ 16:ಆಡಳಿತದಲ್ಲಿ ನಿರ್ಲಕ್ಷ್ಯ ತೋರುವವರ ಮೇಲೆ ಕಠಿಣ ಕಾನೂನು ಕ್ರಮ ಜರುಗಿಸುವಂತೆ ರಾಜ್ಯದ ಮುಖ್ಯಕಾರ್ಯದರ್ಶಿ ಎಸ್.ವಿ. ರಂಗನಾಥ್ ಇಂದಿಲ್ಲಿ ಆದೇಶ ನೀಡಿದ್ದಾರೆ. 
 
ಆಡಳಿತ ಯಾವ ಮಟ್ಟದಲ್ಲಿ ಇರಬೇಕೋ ಆ ಮಟ್ಟದಲ್ಲಿ ಇಲ್ಲ. ಇದರಿಂದ ಅನೇಕ ಸಮಸ್ಯೆಗಳು ಸೃಷ್ಟಿಯಾಗಿವೆ ಎಂದು ರಾಜ್ಯದ ಆಡಳಿತದ ನೇತೃತ್ವವಹಿಸಿಕೊಂಡಿರುವ ಎಸ್.ವಿ. ರಂಗನಾಥ್ ಈ ರೀತಿ ಗಂಭೀರ ಆರೋಪ ಮಾಡುವ ಮೂಲಕ ಆಡಳಿತದಲ್ಲಿ ಎಲ್ಲವೂ ಸರಿಯಿಲ್ಲ ಎಂಬ ಸಂದೇಶವನ್ನು ರವಾನಿಸಿದ್ದಾರೆ. 
 
ಇಂದು ಕರ್ನಾಟಕ ಆಡಳಿತ ಸೇವೆಯ ಅಧಿಕಾರಿಗಳ ಸಂಘ ಹೊರತಂದಿರುವ ದಿನಚರಿ -೨೦೧೦ ಬಿಡುಗಡೆ ಮಾಡಿ ಮಾತನಾಡಿದ ಅವರು, ಆಡಳಿತ ಮಟ್ಟದಲ್ಲಿ ತ್ವರಿತ ಸುಧಾರಣೆಯಾಗುವ ಅವಶ್ಯಕತೆಯಿದೆ.  ಅನಾಮಧೇಯನೊಬ್ಬ ಅರ್ಜಿ ಸಲ್ಲಿಸಿದರೆ ೧೫ ದಿನಗಳ ನಂತರ ಆದೇಶ ತೆಗೆದುಕೊಂಡು ಹೋಗಿ ಎಂಬ ವ್ಯವಸ್ಥೆ ಇದೆಯೇ? ಅಧಿಕಾರಿಗಳು ತಮ್ಮ ಶಕ್ತಿ ಸಾಮ್ಯರ್ಥಕ್ಕೆ ಅನುಗುಣವಾಗಿ ಕಾರ್ಯನಿರ್ವಹಿಸುತ್ತಿದ್ದಾರೆಯೇ ಎಂಬ ಬಗ್ಗೆ ಅವರು ಆತ್ಮ ವಿಮರ್ಶೆಮಾಡಿಕೊಳ್ಳಬೇಕು. ವ್ಯವಸ್ಥೆಯಲ್ಲಿ ಬದಲಾವಣೆಯಾಗಬೇಕೆಂದರು. 
 
ಆಡಳಿತ  ಸುಧಾರಣೆಗೆ ಸಲಹೆ ನೀಡಿ: ಈಗಿರುವ  ನಿಯಮಗಳು ೪೦ ವರ್ಷಗಳ ಹಿಂದಿನವು.  ಜನಸಾಮಾನ್ಯರ ಸಮಸ್ಯೆಗಳಿಗೆ ಶೀಘ್ರವಾಗಿ ಪರಿಹಾರ ದೊರೆಯಲು ನಿರ್ಧಾರ ತೆಗೆದುಕೊಳ್ಳವ ಹಂತ ಕಡಿಮೆಯಾಗಬೇಕು. ನಾಲ್ಕು ಹಂತವಿದ್ದರೆ ಮೂರು ಹಂತಕ್ಕೆ ಇಳಿಸಬೇಕು. ಸರ್ಕಾರ ಆಡಳಿತದಲ್ಲಿ ಸುಧಾರಣೆ ತರಲು ತರಬೇತಿ ಹಾಗೂ ಸೂಕ್ತಕ್ರಮ ತೆಗೆದುಕೊಳ್ಳುವ ಬಗ್ಗೆ ಆಲೋಚಿಸಿ ಸಲಹೆಯನ್ನು ನೀಡುವುದು ನಿಮ್ಮಲ್ಲರ ಕರ್ತವ್ಯ. ನಾವು ಒಟ್ಟಾಗಿ ಕೆಲಸ ಮಾಡಿದರೆ ಮಾತ್ರ ಉತ್ತಮ ಆಡಳಿತ ನೀಡಲು ಸಾಧ್ಯ ಎಂದರು.  
 
ಕಾನೂನಿನ  ಅರಿವಿರಲಿ: ಕಂದಾಯ ಇಲಾಖೆ ರಾಜ್ಯದ ಸಂಪೂರ್ಣ ಭೂ ದಾಖಲೆಗಳ ನಿರ್ವಾಹಕರು. ಜಮೀನಿನ ಹಕ್ಕು ಬದಲಾವಣೆಗೆ ಸಂಬಂಧಿಸಿದಂತೆ ಹಲವಾರು ಪ್ರಕರಣಗಳು ಇವೆ. ಮೇಲ್ಮಟ್ಟದ ಅಧಿಕಾರಿಗಳಿಗೆ ಜಮೀನಿನ ಹಕ್ಕು ಬದಲಾವಣೆಯ ಕಾನೂನಿನ ಸಂಪೂರ್ಣ ಅರಿವಿದ್ದಾಗ ಮಾತ್ರ ಕೆಳಗಿನ ಹಂತದ ಅಧಿಕಾರಿ/ ನೌಕರರಿಗೆ ತಿಳಿಸಲು ಸಾಧ್ಯವಾಗುತ್ತದೆ. ಈ ಬಗ್ಗೆ ಸಮರ್ಪಕವಾಗಿ ಕಾರ್ಯನಿರ್ವಹಿಸಿದರೆ ಶೇ ೯೦ ರಷ್ಟು ಸಮಸ್ಯೆಗಳು ಪರಿಹಾರವಾಗುತ್ತವೆ ಎಂದರು.  
 
ತಪ್ಪು  ಮಾಡಿದವರಿಗೆ ಶೀಘ್ರವಾಗಿ ಶಿಕ್ಷೆಯಾಗಲಿ: ಉದ್ದೇಶ ಪೂರ್ವಕವಾಗಿ ತಪ್ಪು ಮಾಡಿದ ಅಧಿಕಾರಿ ಇಲ್ಲವೆ ನೌಕರರಿಗೆ ಶಿಕ್ಷೆಯಾಗಬೇಕು. ಶಿಸ್ತಿನ ವಿಚಾರಣೆ ಮೂರು ನಾಲ್ಕು ವರ್ಷಗಳಿಂದ ನೆನೆಗುದಿಗೆ ಬಿದ್ದು ಕೊಳೆಯುತ್ತಿದ್ದರೆ ಸಣ್ಣ ತಪ್ಪು ಮಾಡಿದವರು ದೊಡ್ಡ ತಪ್ಪು ಮಾಡಲು ಆಸ್ಪದವಾಗುತ್ತದೆ.  ಪೊಲೀಸ್ ಇಲಾಖೆಯಲ್ಲಿ ಈ  ರೀತಿಯ ಪ್ರಕರಣಗಳು ಹೆಚ್ಚು ಎಂದು ವಿವರಿಸಿದರು. 
ಸಿಬ್ಬಂದಿ ಸಮಸ್ಯೆ ಪರಿಹರಿಸಿ: ಸಹಾಯ ಮನೆಯಿಂದಲೇ  ಪ್ರಾರಂಭವಾಗುತ್ತದೆ  ಎಂಬ ಆಂಗ್ಲ ನಾಣ್ನುಡಿಯಂತೆ  ಸಿಬ್ಬಂದಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸಬೇಕು. ಬಡ್ತಿ, ಕಾಲಮಿತಿ ಬಡ್ತಿ, ರಹಸ್ಯ ವರದಿ ಇಲ್ಲವೆಂದು ಅಥವಾ ಮತ್ತೇನಾದರೂ ನೆಪವೊಡ್ಡಿ ಅನಗತ್ಯವಾಗಿ ಮುಂದೂಡಬಾರದು.  
 
ಅಧೀನ  ಕಚೇರಿಗಳ ತಪಾಸಣೆಯಾಗಲಿ: ಶೇ ೨೦ ರಷ್ಟು ಅಧಿಕಾರಿಗಳು ಮಾತ್ರ ಅಧೀನ ಕಚೇರಿಗಳ ತಪಾಸಣೆ ಮಾಡುತ್ತಿದ್ದಾರೆ. ಕಾಲಕಾಲಕ್ಕೆ ಅಧೀನ ಕಚೇರಿಗಳ ತಪಾಸಣೆ ಮಾಡಿದಾಗ ಅಲ್ಲಿನ ಅಧಿಕಾರಿ ಹಾಗೂ ನೌಕರರ ಕಾನೂನಿನ ಬಗ್ಗೆ ಇರುವ ಅರಿವು ಮತ್ತು ಅವರು ಮಾಡುತ್ತಿರುವ ತಪ್ಪುಗಳ ಬಗ್ಗೆ ತಿಳಿದು ಅವುಗಳನ್ನು ಸರಿಪಡಿಸಲು ಸಾಧ್ಯವಾಗುತ್ತದೆ ಎಂದರು. 
ಸಮಸ್ಯೆಗಳ  ಪರಿಹಾರಕ್ಕೆ ಆಶ್ವಾಸನೆ: ಹೆಚ್ಚಿನ  ಸಂಖ್ಯೆಯ ಕೆ‌ಎ‌ಎಸ್ ಅಧಿಕಾರಿಗಳು ಅತ್ಯತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಪ್ರಶಂಶಿಸಿದ ಮುಖ್ಯ ಕಾರ್ಯದರ್ಶಿಗಳು ಅವರ ಎಲ್ಲ ಸಮಸ್ಯೆಗಳನ್ನು ಪರಿಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಆಶ್ವಾಸನೆ ನೀಡಿದರು.  


Share: