ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಬೆಂಗಳೂರು:ಮುಖ್ಯಮಂತ್ರಿ ಕಾರ್ಯವೈಖರಿಯೇ ಬಿಕ್ಕಟ್ಟಿಗೆ ಕಾರಣ: ಸುಷ್ಮಾ

ಬೆಂಗಳೂರು:ಮುಖ್ಯಮಂತ್ರಿ ಕಾರ್ಯವೈಖರಿಯೇ ಬಿಕ್ಕಟ್ಟಿಗೆ ಕಾರಣ: ಸುಷ್ಮಾ

Fri, 20 Nov 2009 04:25:00  Office Staff   S.O. News Service
ಬೆಂಗಳೂರು, ನ.18: ಶಾಸಕರೊಂದಿಗೆ ಸಂಪರ್ಕದ ಕೊರತೆಯುಂಟಾಗುವಂತೆ ನಡೆದುಕೊಂಡ ಮುಖ್ಯಮಂತ್ರಿಯವರ ಕಾರ್ಯವೈಖರಿಯೇ ಬಿಜೆಪಿ ಬಿಕ್ಕಟ್ಟಿಗೆ ಮೂಲ ಕಾರಣ ಪಕ್ಷದ ರಾಷ್ಟ್ರೀಯ ಮುಖಂಡ ರಾದ ಸುಷ್ಮಾ ಸ್ವರಾಜ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿಂದು ನಡೆದ ಬಿಜೆಪಿ ಶಾಸಕಾಂಗ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇತ್ತೀಚೆಗೆ ಸೃಷ್ಟಿಯಾದ ಬಿಜೆಪಿ ಬಿಕ್ಕಟ್ಟು ನಾಚಿಕೆಗೇಡಿನದು. ಅದನ್ನು ದಿಲ್ಲಿಯಲ್ಲಿ ಮತ್ತು ಇಂದು ಇಲ್ಲಿ ನಡೆದ ಮಾತುಕತೆಯ ಮೂಲಕ ಸೌಹಾರ್ದಯುತವಾಗಿ ಬಗೆಹರಿಸಲಾಗಿದೆ ಎಂದು ಹೇಳಿದರು.

ಬಿಕ್ಕಟ್ಟಿನಿಂದಾಗಿ ಉಂಟಾಗಿರುವ ತೊಂದರೆಗಳಿಗೆ ಜನರ ಕ್ಷಮೆ ಕೇಳುತ್ತೇನೆ. ಎರಡು ವಾರ ತಾಳ್ಮೆಯಿಂದಿದ್ದ ರಾಜ್ಯದ ಜನರ ಅಭಿವೃದ್ಧಿಗೆ ಸರಕಾರದ ಸಚಿವರು ಮತ್ತು ಶಾಸಕರು ಹಗಲಿರುಳು ಹೆಚ್ಚುವರಿ ಕೆಲಸ ಮಾಡಿ ಪರಿಹಾರ ಪಾವತಿಸಬೇಕು. 
ಅಭಿವೃದ್ಧಿಯಲ್ಲಿ ಇನ್ನಷ್ಟು ವೇಗ ಹೆಚ್ಚಾಗಬೇಕು ಎಂದು ಸುಷ್ಮಾ ತಾಕೀತು ಮಾಡಿದರು.

ಮುಂದಿನ ದಿನಗಳಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ, ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ ಸದಸ್ಯ ಆಯ್ಕೆ ಮತ್ತು ಗ್ರಾಮ ಪಂಚಾಯತ್ ಚುನಾವಣೆಗಳು ಪಕ್ಷದ ಮುಂದಿವೆ. ಅಲ್ಲಿ ನಾಯಕರೆಲ್ಲಾ ಒಟ್ಟಾಗಿ ಕೆಲಸ ಮಾಡಿ ಪಕ್ಷಕ್ಕೆ ಗೆಲುವು ತಂದುಕೊಡ ಲಿದ್ದಾರೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಬಿಜೆಪಿ ಬಿಕ್ಕಟ್ಟು ನಮಗೆ ಹೊಸ ಪಾಠ ಕಲಿಸಿದೆ. ಇದರಿಂದ ಪಕ್ಷ ಇನ್ನಷ್ಟು ಬಲಿಷ್ಠಗೊಂಡಿದೆ. ಇಂದು ನಡೆದ ಶಾಸಕಾಂಗ ಸಭೆಯಲ್ಲಿನ ಚರ್ಚೆಗಳು ಶಾಂತಿಯುತವಾಗಿದ್ದವು, ನಮಗೆ ಇದು ಸಂತೋಷ ಉಂಟು ಮಾಡಿದೆ. ಸಭೆಯಲ್ಲಿ ಮಾತನಾಡಿದ ೮ ಮಂದಿ ಸಚಿವರು ಮತ್ತು ಪಕ್ಷದ ಮುಖಂಡರು ಧನಾತ್ಮಕ ಅಂಶಗಳನ್ನು ಪ್ರಸ್ತಾಪಿಸಿದ್ದಾರೆ. ಈವರೆಗೆ ಇದ್ದ ಆತಂಕ ಮತ್ತು ಭಿನ್ನಮತಗಳು ನಿವಾರಣೆಯಾಗಿವೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಶಾಸಕರೊಂದಿಗೆ ನಿರಂತರವಾಗಿ ಸಂಪರ್ಕವಿರಿಸಿ ಕೊಳ್ಳುವ ಭರವಸೆಯನ್ನು ಮುಖ್ಯಮಂತ್ರಿ ನೀಡಿದ್ದಾರೆ. ಅದನ್ನು ಮೀರಿದ ಸಮಸ್ಯೆಗಳು ಸಮನ್ವಯ ಸಮಿತಿ ಸಭೆಯಲ್ಲಿ ಚರ್ಚೆಯಾಗಿ ಇತ್ಯರ್ಥಗೊಳ್ಳಲಿವೆ. ಪ್ರತಿ ತಿಂಗಳಿಗೊಮ್ಮೆ ಸಭೆ ಸೇರಬೇಕೆಂದು ಸೂಚಿಸಲಾಗಿದೆ ಎಂದು ಅವರು ಹೇಳಿದರು.

ಮುಖ್ಯಮಂತ್ರಿ ಕಾರ್ಯವೈಖರಿಯಿಂದಾಗಿ ಬಿಕ್ಕಟ್ಟು ಸೃಷ್ಟಿಯಾಗಿತ್ತು. ಇನ್ನು ಮುಂದೆ ಈಗಾಗಬಾರದು. ಶಾಸಕರೊಂದಿಗೆ ಹೆಚ್ಚು ಹೆಚ್ಚು ಮಾತನಾಡುವ ಮೂಲಕ ನಿರಂತರ ಸಂಪರ್ಕದಲ್ಲಿರಿಸಿಕೊಳ್ಳಬೇಕು ಎಂದು ಅವರು ಹೇಳಿದರು.

ಶಾಸಕರೊಂದಿಗೆ ಸಂಪರ್ಕ: ಸಿ‌ಎಂ ಭರವಸೆ

ಬೆಂಗಳೂರು: ಇನ್ನು ಮುಂದೆ ಅಭಿವೃದ್ಧಿ ಕಾರ್ಯಗಳತ್ತ ಗಮನ ಹರಿಸುತ್ತೇನೆ. ಶಾಸಕರೊಂದಿಗೆ ಉತ್ತಮ ಸಂಪರ್ಕ ಹೊಂದುವ ಮೂಲಕ ಮುಂದೆ ಬಿಜೆಪಿಯಲ್ಲಿ ಬಿಕ್ಕಟ್ಟು ಉಂಟಾಗದಂತೆ ಎಚ್ಚರ ವಹಿಸುತ್ತೇನೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದಾರೆ.

ಸಮನ್ವಯ ಸಮಿತಿ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲ ಸಂದರ್ಭಗಳಲ್ಲೂ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಂಡೆ ಮುಂದಿನ ನಿರ್ಧಾರ ಕೈಗೊಳ್ಳುತ್ತೇನೆ. ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ. ಎಲ್ಲರೂ ಒಟ್ಟಾಗಿದೇವೆ ಎಂದು ಅವರು ಹೇಳಿದರು.

ರಾಜ್ಯದಲ್ಲಿ ನಡೆದಿರುವ ಗಣಿಗಾರಿಕೆಯನ್ನು ಸಿಬಿ‌ಐ ತನಿಖೆಗೆ ಒಳಪಡಿಸುವಂತೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಮಾಡಿರುವ ಒತ್ತಾಯಕ್ಕೆ ಪ್ರತಿಕ್ರಿಯಿಸಿದ ಯಡಿಯೂರಪ್ಪ, ಅವರಿಗೆ ದೇವರು ಒಳ್ಳೆಯದು ಮಾಡಲಿ ಎಂದಷ್ಟೆ ಉತ್ತರಿಸಿದರು.

 ಸಚಿವರ ರಾಜೀನಾಮೆ ಪಡೆದುಕೊಳ್ಳುವಂತೆ ಒತ್ತಾಯಿಸಿರುವ ಕುರಿತು ಅವರಿಗೆ ದೇವರು ಒಳ್ಳೆಯದು ಮಾಡಲಿ ಎಂದು ಹೇಳಿ ನಿರ್ಗಮಿಸಿದರು.

Share: