ಭಟ್ಕಳ, ಅಕ್ಟೋಬರ್ 10: ತಾಲೂಕಿನ ಮದೀನಾ ಕಾಲೋನಿ ಭಾಗದಲ್ಲಿ ಅಸಮರ್ಪಕ ತ್ಯಾಜ್ಯ ವಿಲೇವಾರಿಯಿಂದಾಗಿ ಕೊಳಚೆ ನಿರ್ಮಾಣವಾಗಿದ್ದು, ಸುತ್ತಮುತ್ತಲಿನ ಜನರ ಆಕ್ರೋಶಕ್ಕೆ ಕಾರಣವಾಗಿದೆ. ಕಳೆದ ಒಂದು ತಿಂಗಳಿನಿಂದ ಜನರು ಸ್ಥಳೀಯ ಪುರಸಭಾ ಆಡಳಿತವನ್ನು ಒತ್ತಾಯಿಸುತ್ತಾ ಬಂದರೂ ಸರಿಯಾದ ಸ್ಪಂದನೆ ವ್ಯಕ್ತವಾಗದಿರುವ ಬಗ್ಗೆ ಜನರು ಅಳಲನ್ನು ತೋಡಿಕೊಂಡಿದ್ದಾರೆ.
ಭಟ್ಕಳ ಪುರಸಭೆಯ ವತಿಯಿಂದ ಪ್ರತಿ ಮನೆಯ ಕಸ-ತ್ಯಾಜ್ಯಗಳ ಸಂಗ್ರಹಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಹೇಳಲಾಗುತ್ತಿದ್ದರೂ, ಸಂಪರ್ಕದ ಕೊರತೆಯಿಂದ ಜನರು ಕಸ ಕಡ್ಡಿಗಳನ್ನು ರಸ್ತೆಯ ಬದಿಯಲ್ಲಿಯೇ ತುಂಬಿಸಿಡುವುದು ಅನಿವಾರ್ಯವಾಗುತ್ತಿದೆ. ಕೊಳೆತ ತ್ಯಾಜ್ಯ ಸಂಗ್ರಹಗಳನ್ನು ಬಿಡಾಡಿ ನಾಯಿ ಹಾಗೂ ದನಗಳು ಸೇವಿಸುತ್ತಿದ್ದು, ಸಮಸ್ಯೆಯನ್ನು ಮತ್ತೊಂದು ಮಗ್ಗುಲಿಗೆ ತೆಗೆದುಕೊಂಡು ಹೋಗಿದೆ. ಸೊಳ್ಳೆ ಉತ್ಪತ್ತಿಯೂ ಸೇರಿದಂತೆ ರೋಗಾಣುಗಳ ಭಯ ಇಲ್ಲಿಯ ಜನರನ್ನು ಕಾಡಲಾರಂಭಿಸಿದೆ. ಈ ಸಂಬಂಧ ಮಾಜಿ ಪುರಸಭಾ ಸದಸ್ಯ ಸೈಯದ್ ಹಸನ್ ಬರ್ಮಾವರ್ ನೃತೃತ್ವದಲ್ಲಿ ಸುತ್ತಮುತ್ತಲಿನ ಜನರು ಭಟ್ಕಳ ಉಪವಿಭಾಗಾಧಿಕಾರಿಗಳ ಬಳಿ ದೂರನ್ನು ಕೊಂಡೊಯ್ದಿದ್ದಾರೆ. ತಾಲೂಕಿನ ಇನ್ನೂ ಕೆಲವು ಭಾಗದಲ್ಲಿಯೂ ಈ ಸಮಸ್ಯೆ ಇದೆ. ಭಟ್ಕಳ ಪುರಸಭೆಯ ಹೆಲ್ಫ ಲೈನ್‌ನಲ್ಲಿ ಈ ಕುರಿತು ಅನೇಕ ಬಾರಿ ಸಮಸ್ಯೆ ನೋಂದಾವಣಿ ನಡೆದರೂ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಮನವಿ ಪತ್ರದಲ್ಲಿ ತಿಳಿಸಲಾಗಿದೆ.