ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಕಾರವಾರ: ಸಜ್ಜನಿಕೆಯ ಸಾಹಿತಿಗೆ ಸಂದ ಗೌರವ - ವಿ. ಗ. ನಾಯಕ

ಕಾರವಾರ: ಸಜ್ಜನಿಕೆಯ ಸಾಹಿತಿಗೆ ಸಂದ ಗೌರವ - ವಿ. ಗ. ನಾಯಕ

Thu, 11 Mar 2010 17:40:00  Office Staff   S.O. News Service

ಕಾರವಾರ, ಮಾರ್ಚ್ ೧೧: ಹೊನ್ನಾವರದ ಕರ್ಕಿಕೋಡಿಯಲ್ಲಿ ಜನೇವರಿ ೧, ೧೯೫೦ ರಂದು ಜನಿಸಿದ ವಿ.ಗ.ನಾ. ಹೊನ್ನಾವರ, ಭಟ್ಕಳ ಮತ್ತು ಕುಮಟಾ ತಾಲೂಕಿನಲ್ಲಿ ತಮ್ಮ ಪ್ರಾಥಮಿಕ ಹಾಗು ಪ್ರೌಢ ವಿದ್ಯಾಭ್ಯಾಸವನ್ನು ಮುಗಿಸಿ, ಸಿದ್ಧಾಪುರದ ಸರಕಾರಿ ತೋಟಗಾರಿಕಾ ತರಬೇತಿ ಕೇಂದ್ರದಲ್ಲಿ ಒಂದು ವರ್ಷದ ತರಬೇತಿ ಪಡೆದು ಬಾಳಿನಂಬಲಿ ಅರಸಿ ಹೊರಟು ಸರಸ್ವತಿ ಅನುಗೃಹಕ್ಕೆ ಪಾತ್ರರಾದುದು ರೋಚಕ ಕಥೆಯೇ ಆಗಿದೆ. ತಮ್ಮ ವಿದ್ಯಾರ್ಥಿ ಬದುಕಿನಲ್ಲಿಯೇ ಜಿ.ಆರ್. ಪಾಂಡೇಶ್ವರರಂತಹ ಸಾಹಿತ್ಯಿಕ ಗುರುಗಳನ್ನು ಪಡೆದು ಸಾಹಿತ್ಯದ ಗೀಳನ್ನು ಬೆಳೆಸಿಕೊಂಡು ಇಂದು ಈ ಕ್ಷೇತ್ರದಲ್ಲಿ ನಾಮಾಂಕಿತರಾಗಿದಾರೆ. ಸಾಮಾನ್ಯ ಜನರಿಗೆ ಸಾಹಿತ್ಯದ ರುಚಿಯನ್ನು ಹತ್ತಿಸಿ ಅವರಿಂದಲೇ ತಾನು ಸಾಹಿತಿಯಾಗಿ ಹೊರಹೊಮ್ಮಿದ ತೀರ ಸರಳ ವ್ಯಕ್ತಿತ್ವದ ಇವರು ತೀಕ್ಷ್ಣ ಮಾತುಗಾರರೆಂದೇ ದಕ್ಷಿಣೋತ್ತರ ಕನ್ನಡ ಜಿಲ್ಲೆಯಲ್ಲಿ ಹೆಸರುವಾಸಿಯಾಗಿದ್ದಾರೆ. ಪಕ್ಕದ ದಕ್ಷಿಣ ಕನ್ನಡದ ಅಡ್ಯನಡ್ಕದ ಜನತಾ ಪ್ರೌಢಶಾಲೆಯಲ್ಲಿ ಅಧ್ಯಾಪಕರಾಗಿ ಪೂರ್ಣ ಸೇವೆ ಸಲ್ಲಿಸಿ ವಿಶ್ರಾಂತಿ ಜೀವನವನ್ನು ಮಂಗಳೂರಿನ ಕೊಟ್ಟಾರದಲ್ಲಿ ಸಾಹಿತ್ಯ ಸೇವೆಗಾಗಿ ತೆರೆದಿಟ್ಟಿದ್ದಾರೆ.

 

 

ದಕ್ಷಿಣ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಯಾಗಿ, ದಕ್ಷಿಣ ಕನ್ನಡದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕನ್ನಡ ಜಾಗೃತಿ ಸಮಿತಿಯ ಗೌರವ ಸದಸ್ಯರಾಗಿ, ನೀರ್ಪಾಜೆ ಭೀಮ ಭಟ್ ಪ್ರತಿಷ್ಠಾನ, ಕನ್ಯಾನದ ಸಂಘಟನಾ ಕಾರ್ಯದರ್ಶಿಯಾಗಿ, ಸ್ಮೃತಿ ಪ್ರಕಾಶನದ ವೇದಿಕೆ ಅಡ್ಯನಡ್ಕದ ಸಂಚಾಲಕರಾಗಿ, ಆರಂಭದಲ್ಲಿ ’ನಾಗರಿಕ’ ವಾರಪತ್ರಿಕೆ ಹೊನ್ನಾವರದ ವರದಿಗಾರರಾಗಿ ಅವಿರತವಾಗಿ ಒಂದಿಲ್ಲೊಂದು ಸಾಹಿತ್ಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಬಂದಿರುತ್ತಾರೆ.

 

 

ಬಂಟ್ವಾಳ ತಾಲೂಕಾ ೯ ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ, ಬಂಟ್ವಾಳ ತಾಲೂಕಾ ಚುಟುಕು ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಗಮನ ಸೆಳೆದಿದ್ದಾರೆ. ಕನಾಟಕ ಸರಕಾರದ ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಸಮಿತಿಯಿಂದ ರಾಜ್ಯೋತ್ಸವ ಪ್ರಶಸ್ತಿ, ವರ್ಧಮಾನ ಸಾಹಿತ್ಯ ಪ್ರಶಸ್ತಿಗೂ ಭಾಜನರಾಗಿರುತ್ತಾರೆ. ಕೇಂದ್ರ ಚುಟುಕು ಸಾಹಿತ್ಯ ಪರಿಷತ್ತಿನ ’ಚುಟುಕು ರತ್ನ’ ಪ್ರಶಸ್ತಿ, ಶಿವಮೊಗ್ಗದಲ್ಲಿ ನಡೆದ ಎಪ್ಪತ್ಮ್ನೂರನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ’ಕಾವ್ಯ ಗೋಷ್ಠಿ’ಯ ಅಧ್ಯಕ್ಷತೆಯಿಂದ ಸಂಪನ್ನ ಗೊಂಡಿದ್ದಾರೆ.

 

 

ಉತ್ತರ ಕನ್ನಡ ಜಿಲ್ಲೆಯ ಸಾಂಸ್ಕೃತಿಕ ಜಗಲಿ ’ಹಣತೆ’ ’ಹೊನ್ನೂರ ಜಾಜಿ’ ಎಂಬ ಅಭಿನಂದನಾ ಗ್ರಂಥವನ್ನು ಹಾಗು ಅಡ್ಯನಡ್ಕದ ವಿ.ಗ.ನಾ ಅಭಿನಂದನಾ ಸಮಿತಿ ನಾವಿಕ ಎಂಬ ಅಭಿನಂದನಾ ಗ್ರಂಥವನ್ನು ಸಮರ್ಪಿಸಿ ಗೌರವಿಸಿದೆ.

 

’ಹೊನ್ನೂರ ಜಾಜಿ’ ’ಒಳಗೂಡಿನಲ್ಲಿ’ ’ಗೋಲಗುಮ್ಮಟ’ ’ನೆಲಗುಮ್ಮ’ ಎಂಬ ಕವನ ಸಂಕಲನಗಳನ್ನು, ’ಒರೆಗಲ್ಲು’, ’ಪ್ರತಿಸ್ಪಂದನ’, ’ಕನ್ನಡದಲ್ಲಿ ಹನಿಗವನಗಳು’, ’ತಾರ್ಕಣೆ’ ಗಳೆಂಬ ವಿಮರ್ಶಾ ಸಂಕಲನಗಳನ್ನು, ’ಬಿಡುಗಡೆ’ಯೆಂಬ ಅಂಕಣ ಸಂಗ್ರಹ, ’ಕವಿಯಿಂದ ಕಿವಿಗೆ’ ಎಂಬ ಚಿಂತನ ಬರಹ, ’ಹರಿಕಾಂತರ ಸಂಸ್ಕೃತಿ’ ಮತ್ತು ’ಕಾಸರಗೋಡಿನಲ್ಲಿ ಹಳೆಪೈಕರು’ ಎಂಬ ಜನಾಂಗಿಕ ಅಧ್ಯಯನ ಗ್ರಂಥಗಳನ್ನು ನೀಡಿದ್ದಾರೆ. ’ನಿಮ್ಮ ಸೃಷ್ಟಿ ನಮ್ಮ ದೃಷ್ಟಿ’, ’ಬೀಸೇ ಕುಂಕುಮದ ತೆನೆಗಾಳಿ’, ’ಮದುವೆ ಮನೆ ಚೆಂದ’, ’ಗಂಧದ ಮರವೇ ನೆಳಲಾಗು’, ’ದಿಬ್ಬಣ’, ’ನೆನೆದೆವೀದಿನ ಗೌರೀಯ ಮಗನ ಗಣಪನ’, ’ಸ್ವಾಗತವನೆ ಕೋರಿ ಹರ್ಷ ಚೆಲ್ಲಿ ಕಾದಿದೆ’ ಗಳೆಂಬ ಜಾನಪದ ಸಂಕಲನಗಳನ್ನು ಈ ನಾಡಿಗೆ ಧಾರೆಯೆರೆದಿದ್ದಾರೆ. ’ಚಿನ್ನದ ಪೆಟ್ಟಿಗೆ’ ಯೆಂಬ ಯಕ್ಷಗಾನದ ಮೇಳ ಪರಿಚಯವನ್ನು ಪ್ರಕಟಿಸಿದ್ದಾರೆ. ’ಅಭ್ಯದಯ’, ’ಇಂಚರ’, ’ಹಣತೆ’, ’ತೀರದ ತೆರೆಗಳು’, ’ಸುಮನಸ’ಗಳೆಂಬ ಐದಕ್ಕೂ ಅಧಿಕ ಸಂಪಾದಿತ ಕೃತಿಗಳನ್ನು ಹೊರತಂದಿರುತ್ತಾರೆ.

 

’ಮೃಗಯಾ ಸಾಹಿತಿ ಕೆಂಬಾಡಿ ಜತ್ತಪ್ಪ ರೈ’ ವ್ಯಕ್ತಿ ಚಿತ್ರ ಇವರಿಂದ ಆಕರ್ಷಕವಾಗಿ ಮೂಡಿಬಂದಿದೆ.

 

 

ಇದಲ್ಲದೇ ಪತ್ರ ಸಾಹಿತ್ಯ ಪ್ರಕಾರವನ್ನು ಈ ದಿನದಲ್ಲೂ ಜೀವಂತವಾಗಿಡುವಲ್ಲಿ ಪ್ರಮುಖರಾಗಿದ್ದಾರೆ. ಅವರ ಸುಂದರ ಕೈಬರಹಗಳಿಂದ ವಿನ್ಯಾಸಗೊಂಡ ಅಂಚೆಕಾರ್ಡು ಅವರ ಅಭಿಮಾನೀ ಬಳಗವನ್ನು ಸಮ್ಮೋಹಿಸಿ ಇಟ್ಟಿರುವುದು ಸ್ನೇಹ ಸಾಹಿತ್ಯದ ದ್ಯೋತಕದಂತಿದೆ.

 

 

’ಎದೆ ಎದೆಗೂ ವ್ಯತ್ಯಯ ಹಾಳಾಗಲಿ ಎದೆ ಎದೆ ಗೂಡಲಿ ಹಾಲಾಗಲಿ’ ಎಂಬ ಗೋಲಗುಮ್ಮಟದ ಕವನದಿಂದ ಸ್ತ್ರೀಯ ಎದೆಯನ್ನು ಬಗೆಬಗೆಯಾಗಿ ಉದಾಹರಿಸುತ್ತಲೇ ಮನುಷ್ಯರ ಹೃದಯ ಸಾಮ್ರಾಜ್ಯಕ್ಕೆ ಲಗ್ಗೆಯಿಟ್ಟು ವಿಶ್ವ ಶಾಂತಿಯನ್ನು ಎತ್ತಿ ಹಿಡಿಯುವ ಎದೆಗಾರಿಕೆ ತೋರುತ್ತಿರುವುದು ಇವರ ವಿಶೇಷವಾಗಿದೆ. ಉತ್ತರ-ದಕ್ಷಿಣ ಕನ್ನಡ ಜಿಲ್ಲೆಗಳ ನಡುವೆ ಸಾಹಿತ್ಯದ ಸಂಬಂಧವನ್ನು ಬೆಸೆದ ಈ ಪ್ರೀತಿಯ ಕವಿ ಇಂದು ಉತ್ತರ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ತು ನಡೆಸುವ ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಗೊಂಡಿರುವುದು ಕರಾವಳಿ ಕರ್ನಾಟಕದ ಎಲ್ಲ ವರ್ಗದ ಜನರಿಗೆ, ಬುದ್ಧಿ ಜೀವಿಗಳಿಗೆ ಖುಷಿಯೋ ಖುಷಿ!

 

-ಎನ್.ಆರ್.ಗಜು, ಕುಮಟಾ


Share: