ಬೆಂಗಳೂರು, ಸೆ.28: ದೇಶದಲ್ಲಿನ ಮುಸ್ಲಿಮ್ ಸಮುದಾಯವನ್ನು ಒಗ್ಗೂಡಿಸುವ ನಿಟ್ಟಿನಲ್ಲಿ ಅಖಿಲ ಭಾರತೀಯ ಮಸ್ಜಿದ್ ಇಮಾಮ್‌ಗಳ ಸಂಘಟನೆ ಅಸ್ಥಿತ್ವಕ್ಕೆ ಬರಲಿದೆ.
ಚೆನ್ನೈನ ಫಯಾಝ್ ಮಹಲ್‌ನಲ್ಲಿ ಸೆ.29ರಂದು ಮಧ್ಯಾಹ್ನ 2.30 ಕ್ಕೆ ಜರಗಲಿರುವ ರಾಷ್ಟ್ರೀಯ ಉಲಮಾಗಳ ಸಂಘದ ಕಾರ್ಯಕ್ರಮದಲ್ಲಿ ಈ ಸಂಘಟನೆಯು ಅಸ್ಥಿತ್ವಕ್ಕೆ ಬರಲಿದೆ ಎಂದು ಇಮಾಮ್ ಕೌನ್ಸಿಲ್‌ನ ಮಾಧ್ಯಮ ಸಂಚಾಲಕ ಎನ್.ಮುಹಮ್ಮದ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಮುದಾಯದ ಬೆಳವಣಿಗೆಗೆ ಇಮಾಮ್‌ಗಳು ಹಾಗೂ ಮುಸ್ಲಿಮ್ ಚಿಂತಕರ ಕೊಡುಗೆ ಅಪಾರವಾದದ್ದು. ದೇಶ ಹಾಗೂ ಸಮಾಜಕ್ಕೆ ತಮ್ಮದೇ ಆದ ಕೊಡುಗೆಯನ್ನು ಈ ಮಹನೀಯರು ನೀಡಿದ್ದಾರೆ. ಆದರೆ, ಅಸಂಘಟಿತರಾಗಿದ್ದ ಇವರು ಬದಲಾದ ಪರಿಸ್ಥಿತಿಯಲ್ಲಿ ಸಮಾಜದ ಒಳಿತಿಗಾಗಿ ಒಂದೇ ವೇದಿಕೆಯಲ್ಲಿ ಒಗ್ಗೂಡುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ. ಸಂಘಟನೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ ದೇಶದ ೧೫ ರಾಜ್ಯಗಳ ಇಮಾಮ್ ಹಾಗೂ ಉಲಮಾಗಳು ಪಾಲ್ಗೊಳ್ಳಲಿದ್ದು, ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆಯ ಮುಖ್ಯಸ್ಥ ಇ.ಎಂ.ಅಬ್ದುರ್ರಹ್ಮಾನ್, ಮೌಲಾನಾ ಉಸ್ಮಾನ್ ಬೇಗ್ ರಶಾದಿ, ಬಿಹಾರ ಹಜ್ ಸಮಿತಿ ಅಧ್ಯಕ್ಷ ಮೌಲಾನಾ ಅನೀಸ್ ರಹ್ಮಾನ್ ಅಲ್ ಖಾಸಿಮಿ, ಸೋಷಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾದ ಅಧ್ಯಕ್ಷ ಇ.ಅಬೂಬಕರ್ ಮುಂತಾದವರು ಭಾಗವಹಿಸಲಿದ್ದಾರೆ.