ಬೆಂಗಳೂರು, ಫೆಬ್ರವರಿ 22: ನೂತನ ಬೆಂಗಳೂರು ಕೆಂಪೇಗೌಡ ಬಡಾವಣೆ ನಿರ್ಮಾಣ ಹಿನ್ನೆಲೆಯಲ್ಲಿ ಸರ್ವೇ ಕಾರ್ಯ ನಡೆಸಲು ಬಂದಿದ್ದ ಅಧಿಕಾರಿಗಳ ಮೇಲೆ ಆಕ್ರೋಶಗೊಂಡ ಸ್ಥಳೀಯರು ಹಲ್ಲೆ ನಡೆಸಿ ಅಧಿಕಾರಿಗಳ ಮೂರು ಕಾರುಗಳನ್ನು ಜಖಂ ಗೊಳಿಸಿರುವ ಘಟನೆ ಇಂದು ನಡೆದಿದೆ.
ನಾಡ ಪ್ರಭು ಕೆಂಪೇಗೌಡ ಹೆಸರಿನಲ್ಲಿ ಬಿಡಿಎ ಬೆಂಗಳೂರು ನಗರದ ಹೊರ ವಲಯದ ಸುಮಾರು ಹಳ್ಳಿಗಳ ಜಮೀನುಗಳ ಭೂಸ್ವಾಧೀನಗೊಳಿಸಿ ಒಂದು ಲಕ್ಷಕ್ಕೂ ಹೆಚ್ಚು ನಿವೇಶನಗಳನ್ನು ರೂಪಿಸುವ ಕೆಲಸಕ್ಕೆ ಕೈ ಹಾಕಿದ್ದು, ಅದರಂತೆ ಇಂದು ಬಿಡಿಎ ಅಧಿಕಾರಿಗಳು ಮಾಗಡಿ ರಸ್ತೆಯ ಕೊಡಿಗೆ ಹಳ್ಳಿ ಬಳಿ ಸರ್ವೇ ಕಾರ್ಯಕ್ಕೆ ವಾಹನಗಳಲ್ಲಿ ಬಂದಿಳಿದಾಗ ಆಕ್ರೋಶಗೊಂಡ ಜನತೆ ಅಧಿಕಾರಿಗಳನ್ನು ಹಿಡಿದು ಹಿಗ್ಗಾ ಮುಗ್ಗ ತಳಿಸಿ ಅವರ ಬಟ್ಟೆ ಹರಿದು ಹಾಕಿದ್ದಾರೆ. ಇದರಿಂದ ಭಯಬೀತರಾದ ಅಧಿಕಾರಿಗಳು ಓಡಿ ಹೋಗಲು ಪ್ರಯತ್ನ ನಡೆಸಿದರೂ ಅವರ ಬೆನ್ನಟ್ಟಿದ ಜನತೆ ಮನಬಂದಂತೆ ಥಳಿಸಿದ್ದಾರೆ.
ಇಷ್ಟಕ್ಕೇ ಸುಮ್ಮನಾಗದ ಅಧಿಕಾರಿಗಳ ಕಾರ್ಗಳನ್ನು ಜಖಂ ಗೊಳಿಸಿದ್ದು ೩ ಕಾರುಗಳು ಜನರ ಕಲ್ಲೇಟಿನಿಂದ ಜಖಂ ಆಗಿವೆ. ಸುದ್ದಿತಿಳಿದ ಪೊಲೀಸರು ಸ್ಥಳಕ್ಕೆ ಧಾವಿಸಿ, ಅಧಿಕಾರಿಗಳನ್ನು ರಕ್ಷಿಸಿ ಸ್ಥಳದಲ್ಲಿ ಬಿಗಿ ಬಂದೊಬಸ್ತ್ ನಡೆಸಿದ್ದಾರೆ.
ಸರ್ವೇ ಕಾರ್ಯ ನಡೆಸಲು ಹೋಗಿದ್ದ ಬಿಡಿಎ ಇಂಜಿನಿಯರ್ಗಳು ಇ. ಕೃಷ್ಣಪ್ಪ ಹಾಗೂ ಸಿದ್ಧರಾಜು ಇವರುಗಳೇ ಜನತೆಯಿಂದ ಏಟು ತಿಂದಿರುವ ಅಧಿಕಾರಿಗಳು ಈ ಹಲ್ಲೆ ಪ್ರಕರಣದಲ್ಲಿ ಮಹಿಳೆಯರೂ ಸಹ ಭಾಗವಹಿಸಿ ಅಧಿಕಾರಿಗಳೆಗೆ ಏಟು ನೀಡಿದ್ದಾರೆ.
ತಮ್ಮ ಜಮೀನು ಹಾಗೂ ವಾಸವಿರುವ ಮನೆಗಳನ್ನು ವಶಪಡಿಸಿಕೊಂಡಿರುವ ಬಿಡಿಎ ವಿರುದ್ಧ ಆಕ್ರೋಶ ಗೊಂಡು ಸ್ಥಳಿಯರು ಈ ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ.