ಬೆಂಗಳೂರು,ಮಾ,೫:ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಂಡಿಸಿರುವ ೨೦೧೦ - ೧೧ ನೇ ಸಾಲಿನ ಬಜೆಟ್‌ನಲ್ಲಿ ಮಠ, ಮಂದಿರ, ಯಾತ್ರಾ ಸ್ಧಳಗಳಿಗೆ ಹಣ ನೀಡುವ ಪ್ರಕ್ರಿಯೆಯನ್ನು ಮುಂದುವರೆಸಿದ್ದು, ಈ ಬಾರಿಯೂ ಸಣ್ಣ, ಅತಿ ಸಣ್ಣ ಮಠಗಳನ್ನು ನಿರ್ಲಕ್ಷ್ಯ ಮಾಡಿದ್ದಾರೆ.
ತುಮಕೂರು ಜಿಲ್ಲೆಯ ಎಡೆಯೂರು ಸಿದ್ಧಲಿಂಗೇಶ್ವರ ಕ್ಷೇತ್ರದ ಅಭಿವೃದ್ಧಿಗೆ ಹತ್ತು ಕೋಟಿ ರೂ, ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕಿನ ಆದಿಚುಂಚನ ಗಿರಿ ಕ್ಷೇತ್ರದಲ್ಲಿ ಮೂಲ ಸೌಕರ್ಯ ಕಲ್ಪಿಸಲು ಐದು ಕೋಟಿ ರೂ, ಚಿಕ್ಕಮಗಳೂರು ಜಿಲ್ಲೆಯ ರಂಭಾಪುರಿ ಶ್ರೀ ಸೋಮೇಶ್ವರ ಕ್ಷೇತ್ರದ ಅಭಿವೃದ್ಧಿಗಾಗಿ ೩ ಕೋಟಿ ರೂ ನೀಡಿದ್ದಾರೆ.
ಕಳೆದ ಬಜೆಟ್‌ನಲ್ಲಿ ತಮ್ಮನ್ನು ನಿರ್ಲಕ್ಷಿಸಲಾಗಿದೆ ಎಂದು ಡಾ: ಬಾಲಗಂಗಾಧರ ನಾಥ ಸ್ವಾಮೀಜಿ ಹಾಗೂ ರಂಭಾಪುರಿ ಜಗದ್ಗುರುಗಳು ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು. ಈ ಸಂದರ್ಭದಲ್ಲಿ ಸ್ವತ: ಸ್ವಾಮೀಜಿ ಅವರನ್ನು ಭೇಟಿಯಾಗಿ ಲೋಪ ಸರಿಪಡಿಸುವುದಾಗಿ ವಾಗ್ದಾನ ಕೊಟ್ಟಿದ್ದರು. ಅದರಂತೆ ಈ ಬಾರಿ ಈ ಎರಡೂ ಕ್ಷೇತ್ರಗಳಿಗೆ ನೆರವು ನೀಡಿದ್ದಾರೆ.
ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರದ ಕಾಮಗಾರಿಗಳಿಗಾಗಿ ೧೦ ಕೋಟಿ ರೂ, ಶ್ರವಣ ಬೆಳಗೊಳದ ಬಾಹುಬಲಿ ಕ್ಷೇತ್ರದ ಕೆಲಸಗಳನ್ನು ಮುಗಿಸಲು ೫ ಕೋಟಿ ರೂ, ಕೂಡಲ ಸಂಗಮ ಪ್ರಾಧಿಕಾರ, ಬಸವ ಕಲ್ಯಾಣ ಅಭಿವೃದ್ಧಿ ಪ್ರಾಧಿಕಾರದ ಬಾಕಿ ಕಾಮಗಾರಿಗಳನ್ನು ಮುಗಿಸಲು ತಲಾ ಐದು ಕೋಟಿ ರೂ ನೀಡುವುದಾಗಿ ಪ್ರಕಟಿಸಿದ್ದಾರೆ.
ತಿರುಪತಿಯಲ್ಲಿ ರಾಜ್ಯದ ಯಾತ್ರಾರ್ಥಿಗಳ ಉಪಯೋಗಕ್ಕಾಗಿ ಅಥಿತಿ ಗೃಹ ನಿರ್ಮಿಸಲು ೫ ಕೋಟಿ ರೂ, ಗುಲ್ಬರ್ಗಾದ ದೇವಲಘಾಣಗಾಪುರದಲ್ಲಿ ದತ್ತಾತ್ರೆಯ ಕ್ಷೇತ್ರದ ಅಭ್ಯುದಯಕ್ಕಾಗಿ ೨ ಕೋಟಿ ರೂ, ಸಬರಿ ಮಲೈನಲ್ಲಿ ರಾಜ್ಯದ ಭಕ್ತಾದಿಗಳಿಗೆ ವಸತಿ ಗೃಹ ನಿರ್ಮಾಣಕ್ಕಾಗಿ ಐದು ಕೋಟಿ ರೂ,
ರಾಜ್ಯದ ಹೊರಗಡೆ ಇರುವ ಧಾರ್ಮಿಕ ಕ್ಷೇತ್ರಗಳಾದ ಮಂತ್ರಾಲಯ, ಕಾಶಿ, ಹರಿದ್ವಾರ ಮುಂತಾದ ಕಡೆಗಳಲ್ಲಿ ರಾಜ್ಯ ಸರ್ಕಾರದ ಅಧೀನದಲ್ಲಿರುವ ಅತಿಥಿಗೃಹಗಳ ನಿರ್ವಹಣೆಗಾಗಿ ಪ್ರತಿಯೊಂದಕ್ಕೂ ತಲಾ ೨೫ ಲಕ್ಷ ರೂಪಾಯಿ, ಮಾನಸ ಸರೋವರ ಯಾತ್ರೆ ಕೈಗೊಳ್ಳುವ ಯಾತ್ರಾತ್ರಿಗಳಿಗೆ ನೀಡುತ್ತಿರುವ ಅನುದಾನವನ್ನು ೩ ಕೋಟಿ ರೂಪಾಯಿಗೆ ಹೆಚ್ಚಿಸುವುದಾಗಿ ವಾಗ್ದಾನ ನೀಡಿದ್ದಾರೆ.
ರಾಜ್ಯದಲ್ಲಿರುವ ಒಟ್ಟು ೨೭ ಸಾವಿರ ದೇವಸ್ಧಾನಗಳು ಮತ್ತು ಮುಜರಾಯಿ ಸಂಸ್ಧೆಗಳಿಗೆ ನೀಡಲಾಗುತ್ತಿರುವ ತಸದೀಕ್ ಭತ್ಯೆಯನ್ನು ಮಾಸಿಕ ೬೦೦ ರೂ ನಿಂದ ೧೦೦೦ ಕ್ಕೆ ಹೆಚ್ಚಿಸಿದ್ದಾರೆ.
ಯಡಿಯೂರಪ್ಪ ಅವರು ಈ ಮೊದಲೇ ಘೋಷಿಸಿರುವಂತೆ ಮಾತಾ ಅಮೃತಾನಂದ ಮಯಿ ಅವರ ಪ್ರತಿಷ್ಠಾನದಿಂದ ಉನ್ನತ ದರ್ಜೆಯ ಆಸ್ಪತ್ರೆಯನ್ನು ಬೆಂಗಳೂರು ಸಮೀಪದ ಕೆಂಗೇರಿ ಬಳಿ ಸ್ಧಾಪಿಸಲು ಸರ್ಕಾರದಿಂದ ೧೫ ಎಕರೆ ಭೂಮಿ ಹಾಗೂ ಐದು ಕೋಟಿ ರೂ ನೆರವು ನೀಡುವುದಾಗಿ ತಿಳಿಸಿದ್ದಾರೆ.