ಚಿಕ್ಕಮಗಳೂರು ಮಾರ್ಚ್ ೦೬:- ಗ್ರಾಮೀಣ ಪ್ರದೇಶದ ಜನರ ಸರ್ವತೋಮುಖ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರ ಇಂದು ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಿದೆ ಎಂದು ಉಡುಪಿ-ಚಿಕ್ಕಮಗಳೂರು ಲೋಕಸಭಾ ಸದಸ್ಯ ಡಿ.ವಿ.ಸದಾನಂದಗೌಡ ಅವರು ಹೇಳಿದ್ದಾರೆ.
ಅವರಿಂದು ತಾಲ್ಲೂಕಿನ ಚಿಕ್ಕದೇವನೂರು ಹಾಗೂ ದೇವನೂರು ಗ್ರಾಮಗಳಲ್ಲಿ ಸುವರ್ಣ ಗ್ರಾಮೋದಯ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡುತ್ತಿದ್ದರು. ಕಳೆದ ೫೦ ವರ್ಷಗಳಿಂದ ಗ್ರಾಮಗಳಿಗೆ ಬರಬೇಕಾಗಿದ್ದ ನಿರೀಕ್ಷಿತ ಯೋಜನೆಗಳು ಜಾರಿಯಾಗದ ಹಿನ್ನೆಲೆಯಿಂದಾಗಿ ಗ್ರಾಮಗಳು ಇಂದಿಗೂ ಅಗತ್ಯ ಮೂಲಭೂತ ಸೌಲಭ್ಯಗಳ ಕೊರತೆಗಳನ್ನು ಎದುರಿಸುತ್ತಿದ್ದು ಈ ಕೊರತೆಗಳನ್ನು ದೂರವಿರಿಸಿ ಮಹಾತ್ಮಗಾಂಧಿಜೀಯವರು ಕಂಡಿದ್ದ ಗ್ರಾಮರಾಜ್ಯದ ಕನಸನ್ನು ನನಸು ಮಾಡಿ ಗ್ರಾಮ ರಾಜ್ಯವನ್ನು ಸ್ಥಾಪಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಇಂದು ಸುವರ್ಣಗ್ರಾಮೋದಯಗಳಂತಹ ಅನೇಕ ಯೋಜನೆಗಳನ್ನು ಜಾರಿಗೆ ತರುವುದರ ಮೂಲಕ ಗ್ರಾಮಗಳ ಪ್ರಗತಿಗೆ ಮುಂದಾಗಿರುವುದಾಗಿ ಸದಾನಂದಗೌಡ ಅವರು ತಿಳಿಸಿದರು.
ಸುವರ್ಣಗ್ರಾಮ ಯೋಜನೆ ಒಂದು ಮಹತ್ವದ ಯೋಜನೆಯಾಗಿದ್ದು ಒಂದು ಕೋಟಿ ರೂ.ಗಳ ವೆಚ್ಚದಲ್ಲಿ ಗ್ರಾಮಕ್ಕೆ ಅಗತ್ಯವಾಗಿ ಬೇಕಾಗಿರುವ ರಸ್ತೆ, ಚರಂಡಿ, ನೀರು ಮುಂತಾದ ಅಭಿವೃದ್ಧಿ ಕಾರ್ಯಗಳನ್ನು ಈ ಯೋಜನೆಯಡಿ ಕೈಗೊಳ್ಳಬಹುದಾಗಿದೆ ಎಂದ ಅವರು ಆಡಳಿತ ಬಂದರೆ ಮಾತ್ರ ಸಾಲದು ಅದರ ಯಶಸ್ವಿ ಅನುಷ್ಠಾನಕ್ಕೆ ಇಚ್ಚಾಶಕ್ತಿ ಇದ್ದಾಗ ಮಾತ್ರ ಯಶಸ್ವಿ ಕಾಣಲು ಸಾಧ್ಯ ಎಂದ ಅವರು ಈ ಭಾರಿಯ ಆಯವ್ಯಯದಲ್ಲಿಯೂ ಸಹ ರಾಜ್ಯ ಸರ್ಕಾರ ಗ್ರಾಮೀಣಾಭಿವೃದ್ಧಿಗಾಗಿ ೧೦,೧೭೬ ಕೋಟಿ ರೂ.ಗಳನ್ನು ಮೀಸಲಿರಿಸಿರುವುದರ ಮೂಲಕ ಗ್ರಾಮೀಣಾಬಿವೃದ್ಧಿಗೆ ಹೆಚ್ಚಿನ ಒತ್ತನ್ನು ನೀಡಲಾಗಿದೆ ಎಂದ ಸಂಸದರು ಇದರ ಜೊತೆಗೆ ಮುಂದಿನ ಗ್ರಾಮ ಪಂಚಾಯ್ತಿಗಳ ಚುನಾವಣೆಯಲ್ಲಿ ಶೇಕಡಾ ೫೦ರಷ್ಟು ಸ್ಥಾನಗಳನ್ನು ಮಹಿಳೆಯರಿಗೆ ಮೀಸಲಿಡಲು ಸಹ ರಾಜ್ಯ ಸರ್ಕಾರ ಪ್ರಸ್ತಾಪಿಸಿದೆ ಎಂದರು. ಈ ಬಾರಿಯ ಕೇಂದ್ರ ರೈಲ್ವೆ ಆಯವ್ಯಯದಲ್ಲಿ ಕಡೂರು- ಚಿಕ್ಕಮಗಳೂರು ರೈಲ್ವೆ ಸಂಚಾರಕ್ಕೆ ೪೦ಕೋಟಿ ರೂ.ಗಳನ್ನು ಮೀಸಲಿರಿಸುವುದಾಗಿ ತಿಳಿಸಿದ ಅವರು ಗ್ರಾಮಗಳಲ್ಲಿ ನಡೆಯುವ ಕಾಮಗಾರಿಗಳ ಗುಣಮಟ್ಟದ ಬಗ್ಗೆ ಸ್ಥಳೀಯ ಜನತೆ ನಿಗಾವಹಿಸಬೇಕೆಂದು ತಿಳಿಸಿದ ಸದಾನಂದ ಗೌಡ ಅವರು ಇದೇ ಸಂದರ್ಭದಲ್ಲಿ ಫಲಾನುಭವಿಗಳಿಗೆ ವಿವಿಧ ಯೋಜನೆಗಳ ಮಂಜೂರಾತಿ ಹಕ್ಕು ಪತ್ರಗಳನ್ನು ಸಹ ವಿತರಿಸಿದರು.
ಶಾಸಕ ಸಿ.ಟಿ.ರವಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ ಕ್ಷೇತ್ರದ ಜನತೆ ನೀಡಿರುವ ಶಕ್ತಿಯನ್ನು ಯಾವುದೇ ಕಾರಣಕ್ಕೂ ದುರುಪಯೋಗ ಪಡಿಸಿಕೊಳ್ಳದೆ ಕ್ಷೇತ್ರದಲ್ಲಿ ಉತ್ತಮ ಕೆಲಸವನ್ನು ಮಾಡಿಕೊಂಡು ಬರುತ್ತಿರುವುದಾಗಿ ತಿಳಿಸಿದ ಅವರು ದೇವನೂರು ಕಡೆಗೆ ನೀರು ಹರಿಸುವುದಾಗಿ ಈ ಹಿಂದೆ ತಾವು ಹೇಳಿದ್ದು ಅದರಂತೆ ಯಗಚಿ ನದಿಯಿಂದ ಬೆಳವಾಡಿ ಕೆರೆಗೆ ನೀರು ತರುವ ಕಾಮಗಾರಿ ಪ್ರಗತಿಯಲ್ಲಿದ್ದುಇ ಎರಡನೆ ಹಂತದಲ್ಲಿನ ಕಾಮಗಾರಿಗೆ ಸಮೀಕ್ಷೆ ನಡೆಸುತ್ತಿದ್ದು ಇದು ಪೂರ್ಣಗೊಂಡ ನಂತರ ದೇವನೂರು ಕಡೆಗೆ ನೀರು ತರುವ ಯೋಜನೆ ಪ್ರಾರಂಭಗೊಳ್ಳಲಿದೆ ಎಂದರು. ಚಿಕ್ಕದೇವನೂರು ಗ್ರಾಮದಲ್ಲಿ ೧೨೦ಮನೆಗಳಿಗೆ ಶೌಚಾಲಯದ ಕೊರತೆ ಇದ್ದು ಅದೇ ರೀತಿ ೧೨ ಗುಡಿಸಲು ಮನೆಗಳಿದ್ದು ಮುಂದಿನ ವರ್ಷದಲ್ಲಿ ಸಂಪೂರ್ಣ ನೈರ್ಮಲ್ಯ ಗ್ರಾಮವನ್ನಾಗಿ ಪರಿವರ್ತಿಸುವುದಾಗಿ ತಿಳಿಸಿದ ಶಾಸಕರು ಇದರ ಜೊತೆಗೆ ಸರ್ಕಾರ ಮುಂದಿನ ವರ್ಷದಿಂದ "ನಮ್ಮ ಮನೆ" ಎಂಬ ನೂತನ ಯೋಜನೆಯನ್ನು ಜಾರಿಗೆ ತರಲಿದ್ದು ತಲಾ ೬೦ಸಾವಿರ ರೂ.ಗಳ ವೆಚ್ಚದಲ್ಲಿ ಮನೆಗಳನ್ನು ನಿರ್ಮಿಸಿ ಕೊಡುವುದರ ಮೂಲಕ ಚಿಕ್ಕದೇವನೂರು ಗ್ರಾಮವನ್ನು ಗುಡಿಸಲು ರಹಿತ ಗ್ರಾಮವನ್ನಾಗಿ ಮಾಡುವುದಾಗಿಯೂ ತಿಳಿಸಿದರು. ಇದರ ಜೊತೆಗೆ ಎಲ್ಲಾ ಬಿ.ಪಿ.ಎಲ್ ಕುಟುಂಬದ ಮನೆಗಳಿಗೂ ಮುಂದಿನ ಒಂದು ತಿಂಗಳ ಅವಧಿಯೊಳಗೆ ಉಚಿತ ವಿದ್ಯುತ್ ಸೌಲಭ್ಯವನ್ನು ಸಹ ಕಲ್ಪಿಸಿ ಕೊಡುವುದಾಗಿ ಸಿ.ಟಿ.ರವಿ ಅವರು ತಿಳಿಸಿದರು.
ದೇವನೂರು ಭಾಗದಿಂದ ಅನೇಕ ಯುವಜನತೆ ಉದ್ಯೋಗ ಅರಸಿ ಬೆಂಗಳೂರು ನಗರ ಸೇರಿದ್ದು ಅವರೆಲ್ಲರನ್ನು ಗ್ರಾಮಕ್ಕೆ ವಾಪಾಸ್ಸು ಕರೆತರುವ ಉದ್ದೇಶದಿಂದ ಈ ಭಾಗದಲ್ಲಿ ಕೃಷಿಗೆ ಯೋಗ್ಯವಲ್ಲದ ೧೦ ರಿಂದ ೧೫ ಎಕರೆ ಪ್ರದೇಶವನ್ನು ನೀಡಿದಲ್ಲಿ ಒಂದು ಬೃಹತ್ ಟೆಕ್ಸ್‌ಟೈಲ್ಸ್ ಪಾರ್ಕ್ ನಿರ್ಮಿಸುವುದರ ಮೂಲಕ ಎಲ್ಲ ಯುವಕರಿಗೆ ಉದ್ಯೋಗವನ್ನು ನೀಡುವುದಾಗಿಯೂ ಶಾಸಕರು ಭರವಸೆ ನೀಡಿದರಲ್ಲದೆ ಅಭಿವೃದ್ಧಿಯ ಪ್ರಶ್ನೆ ಬಂದಾಗ ಯಾವುದೇ ರಾಜಿ ಮಾಡಿಕೊಳ್ಳದೆ ಕ್ಷೇತ್ರದ ಅಭಿವೃದ್ಧಿಗೆ ತಮ್ಮ ಶಕ್ತಿ ಮೀರಿ ದುಡಿಯುವುದಾಗಿ ಸಿ.ಟಿ.ರವಿ ಅವರು ತಿಳಿಸಿದರು.
ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಎನ್.ಪಿ.ಉಮೇಶ್, ತಾಲ್ಲೂಕು ಪಂಚಾಯಿತಿ ಸದಸ್ಯೆ ಭಾಗ್ಯ ಅಶೋಕ್, ಗ್ರಾಮ ಪಂಚಾಯ್ತಿ ಅಧ್ಯಕ್ಷರುಗಳಾದ ಎಂ.ಆರ್.ಶಂಕರಪ್ಪ, ಚಂದ್ರಪ್ಪ ಇವರುಗಳು ಮಾತನಾಡಿದರು. ಗ್ರಾಮ ಪಂಚಾಯ್ತಿ ಸದಸ್ಯರುಗಳು ಸೇರಿದಂತೆ ಇತರೆ ಮುಖಂಡರುಗಳು ಸಮಾರಂಭದಲ್ಲಿ ಉಪಸ್ಥಿತರಿದ್ದರು.
ಜನಸ್ಪಂದನ ಸಭೆ
ಚಿಕ್ಕಮಗಳೂರು ಮಾರ್ಚ್ ೦೬:- ತಾಲ್ಲೂಕಿನ ಖಾಂಡ್ಯ ಹೋಬಳಿ ವ್ಯಾಪ್ತಿಯ ದೇವದಾನ, ಬಿದರೆ, ಕಡವಂತಿ, ಹುಯಿಗೆರೆ ಗ್ರಾಮ ಪಂಚಾಯಿತಿಗಳ ಜನಸ್ಪಂದನ ಕಾರ್ಯಕ್ರಮವು ಕಡವಂತಿ ಗ್ರಾಮದಲ್ಲಿಂದು ನಡೆಯಿತು.
ಕಡವಂತಿ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಕಲಾವತಿ ಕಾಶರ್ಯಕ್ರಮ ಉದ್ಘಾಟಿಸಿದರು. ಗ್ರಾಮ ಪಂಚಾಯ್ತಿಗಳ ವ್ಯಾಪ್ತಿಯಲ್ಲಿ ಸರ್ಕಾರಿ ವೈದ್ಯರ ಸೇವೆ ಉತ್ತಮವಾಗಿ ಲಬಿಸುವಂತಾಗಬೇಕಲ್ಲದೆ ರೈತ ಸಂಪರ್ಕ ಕೇಂದ್ರಗಳು ನಿಯಮಿತವಾಗಿ ತೆರೆಯುವ ಮೂಲಕ ಕೃಷಿಕರಿಗೆ ಸದುಪಯೋಗವಾಗುವ ನಿಟ್ಟಿನಲ್ಲಿ ನೋಡಿಕೊಳ್ಳುವಂತಾಗಬೇಕೆಂದು ಗ್ರಾಮ ಪಂಚಾಯಿತಿ ಸದಸ್ಯರುಗಳು ತಿಳಿಸಿದರು.
ಈ ಭಾಗದ ಗ್ರಾಮಗಳಲ್ಲಿ ನಡೆಯುತ್ತಿರುವ ಅಕ್ರಮ ಮದ್ಯ ಮಾರಾಟವನ್ನು ತಪ್ಪಿಸುವಂತೆ ಗ್ರಾಮಸ್ಥರು ಸಭೆಯ ಗಮನ ಸೆಳೆದರಲ್ಲದೆ ಗ್ರಾಮಗಳಲ್ಲಿ ನಡೆಯುತ್ತಿರುವ ಅಕ್ರಮ ಮದ್ಯ ಮಾರಾಟಕ್ಕೆ ಕೂಡಲೇ ಕಡಿವಾಣ ಹಾಕುವಂತೆ ಅಬಕಾರಿ ಅಧಿಕಾರಿಗಳಿಗೆ ಗ್ರಾಮ ಪಂಚಾಯ್ತಿ ಸದಸ್ಯರುಗಳು ತಿಳಿಸಿದರು.
ಸಭೆಯಲ್ಲಿ ಸಾರ್ವಜನಿಕರಿಂದ ಮನವಿಗಳನ್ನು ಸ್ವೀಕರಿಸಲಾಯಿತು. ಇಲಾಖೆಗಳ ಯೋಜನೆಗಳ ಕುರಿತು ವಿವಿಧ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು.ಗ್ರಾಮ ಪಂಚಾಯ್ತಿ ಉಪಾಧ್ಯಕ್ಷೆ ಯಶೋದಮ್ಮ, ಗ್ರಾಮ ಪಂಚಾಯತ್ ಸದಸ್ಯರುಗಳಾದ ಎನ್.ಆರ್.ಧರ್ಮೆಗೌಡ, ಶಿವಶಂಕರ್, ಬಿ.ಡಿ.ಲಕ್ಷ್ಮಣ್, ರಾಧಸ್ವಾಮಿ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿ ಶಿವೇಗೌಡ, ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಜಿ.ನಾಗೇಶ್, ಉಪತಹಶೀಲ್ದಾರ್ ರಫೀಕ್ ಅಹಮದ್ ಮುಂತಾದವರುಗಳು ಉಪಸ್ಥಿತರಿದ್ದರು.
ಕುವೆಂಪು ವಿಶ್ವವಿದ್ಯಾನಿಲಯದ ಘಟಿಕೋತ್ಸವ
ಚಿಕ್ಕಮಗಳೂರು ಮಾರ್ಚ್ ೦೬:- ಕುವೆಂಪು ವಿಶ್ವವಿದ್ಯಾನಿಲಯದ ೨೦ನೇ ವಾರ್ಷಿಕ ಘಟಿಕೋತ್ಸವ ಸಮಾರಂಭವನ್ನು ಮಾರ್ಚ್ ೧೪ರಂದು ಭಾನುವಾರ ಬೆಳಿಗ್ಗೆ ೧೧.೦೦ಗಂಟೆಗೆ ಘಟಿಕೋತ್ಸವ ಸಭಾಂಗಣದಲ್ಲಿ ಪುನರ್ ನಿಗಧಿಪಡಿಸಲಾಗಿದೆ.
ಕೇಂದ್ರದ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವರಾದ ಡಿ.ಪುರಂದರೇಶ್ವರಿ ಅವರು ಘಟಿಕೋತ್ಸವ ಭಾಷಣ ಮಾಡಲಿದ್ದಾರೆಂದು ಎಂದು ವಿಶ್ವ ವಿದ್ಯಾನಿಲಯದ ಪ್ರಕಟಣೆ ತಿಳಿಸಿದೆ.