ಭಟ್ಕಳ,ಮಾರ್ಚ್ ೧: ಶಿರಸಿಯ ಪ್ರಸಿದ್ದ ಮಾರಿಕಾಂಬಾ ಜಾತ್ರೆ ನಿಮಿತ್ತ ಭಟ್ಕಳದಿಂದ ಶಿರಸಿ ವಿಶೇಷ ಬಸ್ಸುಗಳ ವ್ಯವಸ್ಥೆಯನ್ನು ಮಾಡಿದ್ದು ಇದರಲ್ಲಿ ಪ್ರಯಾಣಿಕರಿಂದ ಹೆಚ್ಚಿನ ಹಣವನ್ನು ಆಕರಿಸಲಾಗುತ್ತಿದೆ ಎಂಬ ಆರೋಪವು ಕೇಳಿಬರುತ್ತಿದೆ
ಜಾತ್ರೆಯಲ್ಲಿ ಭಾಗವಹಿಸಲು ಭಕ್ತಾದಿಗಳಿಗೆ ಪ್ರಯೋಜನವಾಗಲೆಂದು ಸಾರಿಗೆ ಸಂಸ್ಥೆಯು ಜಿಲ್ಲೆಯ ವಿವಿಧ ಸ್ಥಳಗಳಿಂದ ವಿಸೇಷ ಬಸ್ಸುಗಳನ್ನು ಬಿಡಲಾಗಿದ್ದು ಅದರಲ್ಲಿ ಹೆಚ್ಚಿನ ಟಿಕೆಟ್ ವಸೂಲಿ ಮಾಡುತ್ತಿರುವ ಕುರಿತು ಪ್ರಯಾಣಿಕರು ಆರೋಪವನ್ನು ಮಾಡಿದ್ದಾರೆ ಜಾತ್ರಾ ಆರಂಭದ ದಿನ ಭಟ್ಕಳದಿಂದ ಶಿರಸಿಗೆ ಪ್ರಯಾಣಿಸುವ ಭಕ್ತಾಧಿಕಗಳ ಬಳಿ ೧೧೫ ರೂ ತೆಗೆದುಕೊಂಡಿದ್ದರಿಂದ ಜನರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ನಂತರ ಅದೇ ದಿನ ಪ್ರಯಾಣ ದರವನ್ನು ೧೦೯ ರೂಗೆ ಇಳಿಸಲಾಯಿತು. ಇದಕ್ಕೂ ಸಹ ಜನರಿಂದ ಆಕ್ಷೇಪ ಕೇಳಿ ಬಂದಿದ್ದರಿಂದ ಇದೀಗ ೧೦೦ ರೂಪಾಯಿಗೆ ಇಳಿಸಲಾಗಿದೆ. ವಿಶೇಷ ಜಾತ್ರಾ ಬಸ್ ಸಂಚಾರ ನೆಪದಲ್ಲಿ ಶೇ. ೩೦,೨೦ ರಷ್ಟು ಪ್ರಯಾಣ ದರ ಹೆಚ್ಚಿಸಿ ಭಕ್ತಾಧಿಗಳಿಂದ ವಸೂಲಿ ಮಾಡಿಸುತ್ತಿರುವುದಕ್ಕೆ ಭಟ್ಕಳ ಸೇರಿದಂತೆ ಎಲ್ಲಡೆ ಜನರಿಂದ ಆಕ್ರೋಶ ವ್ಯಕ್ತವಾಗಿದೆ. ಸಾದಾ ಬಸ್ಸಿಗೆ ಭಟ್ಕಳದಿಂದ ಶಿರಸಿಗೆ ೮೫ ರೂ ಪ್ರಯಾಣ ದರವಿದ್ದು, ಕೆ ಎಸ್ ಆರ್ ಟಿಸಿಯವರು ಜಾತ್ರಾ ಸಂದರ್ಭದಲ್ಲಿ ಮಾತ್ರ ರಿಯಾಯತಿ ದರದಲ್ಲಿ ಬಸ್ ಓಡಿಸುವುದನ್ನು ಬಿಟ್ಟು ಈ ರೀತಿ ಪ್ರಯಾಣಿಕರಿಂದ ಹೆಚ್ಚಿನ ಹಣವನ್ನು ಕಬಳಿಸುತ್ತಿರುವುದು ಸರಿಯಲ್ಲ ಎಂಬ ಮಾತು ಕೇಳಿ ಬರುತ್ತಿದೆ. ಬೈಂದೂರು, ಭಟ್ಕಳ ಸೇರಿದಂತೆ ಕರಾವಳಿ ಭಾಗದಿಂದ ಪ್ರತಿವರ್ಷವೂ ಸಹ ಸಾವಿರಾರು ಮಂದಿ ಶಿರಸಿಗೆ ತೆರಳಿ ಮಾರಿಕಾಂಬೆ ದೇವಿಯ ದರುಶನ ಪಡೆಯುತ್ತಾರೆ. ಈ ಸಲವೂ ಸಹ ಅಸಂಖ್ಯಾತ ಭಕ್ತರು ಶಿರಸಿ ಮಾರಿಯಮ್ಮನ ದರಶನ ಪಡೆದಿದ್ದಾರೆ. ಕೆ ಎಸ್ ಆರ್ ಟಿಸಿಯವರು ದೂರದಿಂದ ತೆರಳುವ ಭಕ್ತಾಧಿಗಳಿಗೆ ಅನುಕೂಲವಾಗಲು ವಿಶೇಷ ಜಾತ್ರಾ ಬಸ್‌ನ್ನು ಬಿಡುವ ನಿರ್ಧಾರ ಕೈಗೊಂಡಿರುವುದು ಉತ್ತಮ ಕಾರ್ಯವಾಗಿದ್ದರೂ ಸಹ ಈ ರೀತಿ ಪ್ರಯಾಣ ದರವನ್ನು ಏರಳಿತ ಮಾಡುವುದು ಎಷ್ಟರ ಮಟ್ಟಿಗೆ ಸರಿ ಎಂಬುದು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಉತ್ತರಿಸಬೇಕಿದೆ.