ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಬೆಂಗಳೂರು :ಬಿಡಿಎ ದೊಂಬರಾಟ - ಜನರ ಜೊತೆನೀಡುವ ಭರವಸೆ ನೀಡಿ ಈಗ ನಾಪತ್ತೆಯಾಗಿರುವ ಶೋಭಾ ಕರಂದ್ಲಾಜೆ

ಬೆಂಗಳೂರು :ಬಿಡಿಎ ದೊಂಬರಾಟ - ಜನರ ಜೊತೆನೀಡುವ ಭರವಸೆ ನೀಡಿ ಈಗ ನಾಪತ್ತೆಯಾಗಿರುವ ಶೋಭಾ ಕರಂದ್ಲಾಜೆ

Sun, 28 Feb 2010 17:21:00  Office Staff   S.O. News Service

ಬೆಂಗಳೂರು ಮಹಾನಗರ ಬೆಳೆಯುತ್ತಿದೆ. ಜನರ ವಸತಿ ನಿವೇಶನದ ಅಗತ್ಯವೂ ಬೆಳೆಯುತ್ತಿದೆ. ಇದೇ ಹೆಸರು ಹೇಳಿಕೊಂಡು ಈ ಹಿಂದೆ ರಾಜ್ಯ ಸರ್ಕಾರ ಬೆಂಗಳೂರಿನ ಕೆಂಗೇರಿ, ಯಶವಂತಪುರ ಹೋಬಳಿಯ ಸುಮಾರು 12 ಗ್ರಾಮಗಳ ಭೂಮಿಯನ್ನು ವಶಕ್ಕೆ ತೆಗೆದುಕೊಂಡು ಅಭಿವೃದ್ಧಿಪಡಿಸಿ ನಾಡ ಪ್ರಭು ಕೆಂಪೇಗೌಡ ಬಡಾವಣೆ ನಿರ್ಮಿಸಿ ಸಾವಿರ ನಿವೇಶನ ಹಂಚುವುದಾಗಿ ಘೋಷಿಸಿತು.

 

ಬೆಂಗಳೂರು ನಗರವೇ ಇರಲಿ. ಯಾವುದೇ ನಗರವೇ ಇರಲಿ ಅಭಿವೃದ್ಧಿ ಪ್ರಾಧಿಕಾರದಂತಹ ಸಂಸ್ಥೆಗಳ ಮೂಲಕ ಬಡಾವಣೆಗಳಾದಲ್ಲಿ ಸಾಕಷ್ಟು ವ್ಯವಸ್ಥಿತವಾಗಿ, ವೈಜ್ಞಾನಿಕವಾಗಿ ಬಡಾವಣೆ ನಿರ್ಮಾಣ ಮಾಡಲು ಸಾಧ್ಯ ಎಂಬುದೂ ಸತ್ಯವೇ.

 

ಇಲ್ಲಿ ನಿವೇಶನಾಕಾಂಕ್ಷಿಗಳಾದ ಬೆಂಗಳೂರಿನ ನಾಗರೀಕರ ಪ್ರಶ್ನೆಯ ಜೊತೆಗೆ ಗಮನಿಸಬೇಕಾದ ಇನ್ನೂ ಹಲವು ಪ್ರಮುಖ ಅಂಶಗಳಿವೆ. ಆಳುವ ಸರ್ಕಾರವು ತನ್ನ ಘೋಷಿತ ಉದ್ದೇಶಕ್ಕೆ ಜನ ಹಿತಕ್ಕೆ ಪ್ರಾಮಾಣಿಕವಾಗಿ ಬದ್ಧವಾಗಿದ್ದರೆ ಏನೇ ಸಮಸ್ಯೆ ಪ್ರಶ್ನೆಗಳಿದ್ದರೂ ನಿವಾರಿಸಿಕೊಂಡು ಮುಂದೆ ಹೋಗಬಹುದು. ಆದರೆ ಪರಿಸ್ಥಿತಿ ಹಾಗಿಲ್ಲ ಎನ್ನುವುದು ವಾಸ್ತವ. ಹೀಗಾಗಿ ಕೆಂಪೇಗೌಡ ಬಡಾವಣೆ ಪ್ರಶ್ನೆ ಹಲವು ವಿವಾದ, ತಿಕ್ಕಾಟಗಳ ಕೇಂದ್ರವಾಗಿ ಹೋಗಿದೆ.

 

 

ರೈತರ ಭೂಮಿ ವಶಕ್ಕೆ ತೆಗೆದುಕೊಳ್ಳುತ್ತೇನೆ ಎನ್ನುವ ಬಿ.ಡಿ.ಎ.ಗೆ ಹಾಗೂ ಸರ್ಕಾರಕ್ಕೆ ಭೂಮಿಯ ಮಾಲೀಕರಾದ ರೈತರೊಂದಿಗೆ ಮಾತುಕತೆ ನಡೆಸಿ ಸೂಕ್ತ ಪರಿಹಾರ, ಪುನರ್ವಸತಿ ಇತ್ಯಾದಿಗಳಲ್ಲಿ ರೈತರಿಗೆ ಇರಬಹುದಾದ ಸಹಜವಾದ ಆತಂಕಗಳನ್ನು ನಿವಾರಿಸಬೇಕಾದ ಕರ್ತವ್ಯ ಇರುತ್ತದೆ. ಇಲ್ಲ . ರಾಜ್ಯದ ಬಿಜೆಪಿ ಸರ್ಕಾರ ಇದಕ್ಕೆ ಸಿದ್ಧವಾಗಿಲ್ಲ. ಇಲ್ಲಿ ಮತ್ತೊಂದು ಗಂಭೀರ ಪ್ರಶ್ನೆಯಿದೆ. ಉದ್ದೇಶಿತವಾದ 4814 ಎಕರೆಗಳಲ್ಲಿ 198 ಎಕರೆಯಷ್ಟು ಜಾಗದಲ್ಲಿ ರೆವಿನ್ಯೂ ಬಡಾವಣೆಗಳು ರೂಪಗೊಂಡು ಅವು ಜನವಾಸ ಪ್ರದೇಶಗಳಾಗಿವೆ. ಸಹಸ್ರಾರು ಜನರು ಹತ್ತಾರು ವರ್ಷಗಳಿಂದ ಇಲ್ಲಿ ವಾಸವಾಗಿದ್ದಾರೆ. ಬಿ.ಡಿ.ಎ. ಯ ಲೆಕ್ಕದಲ್ಲಾಗಲಿ ಸರ್ಕಾರದ ಲೆಕ್ಕದಲ್ಲಾಗಲಿ ಇವೆಲ್ಲಾ ಅನಧಿಕೃತ ಬಡಾವಣೆಗಳು. ಹಾಗಾಗಿ ಈ ಮನೆ ನಿವೇಶನಗಳನ್ನು ಇಲ್ಲಿ ವಾಸಿಸುವ ಜನರ ಬದುಕನ್ನು ಅವರು ಲೆಕ್ಕಕ್ಕೆ ಇಟ್ಟುಕೊಂಡಿಲ್ಲ.

 

ರೈತರು, ನಿವೇಶನದಾರರು ಎಲ್ಲ ಸೇರಿ ಹೋರಾಟ ಸಮಿತಿಯ ನೇತೃತ್ವದಲ್ಲಿ ಈಗಾಗಲೇ ಹಲವು ಹಂತಗಳ ಪ್ರತಿಭಟನೆ ನಡೆದಿದೆ.

 

ಯಡಿಯೂರಪ್ಪನವರು ಮುಖ್ಯಮಂತ್ರಿಗಳಾದ ಹೊಸತರಲ್ಲಿ ಒಂದು ಬೃಹತ್ ಪ್ರತಿಭಟನಾ ರಾಲಿ ನಡೆಯಿತು. ಚಾಲುಕ್ಯ ವೃತ್ತದ ಸಮೀಪ ನಡೆದ ಬಹಿರಂಗ ಸಭೆಗೆ ಸ್ವತ: ಮುಖ್ಯಮಂತ್ರಿ ತಾವೇ ಬಂದು `ಈ ಯಡಿಯೂರಪ್ಪ ಮುಖ್ಯಮಂತ್ರಿಯಾಗಿರುವವರೆಗೆ ಬಡವರ ಹೊಟ್ಟೆಯ ಮೇಲೆ ಹೊಡೆಯಲು ಬಿಡುವುದಿಲ್ಲ... ಹಾಗೆ ರೈತರೊಂದಿಗೆ ಪ್ರತಿಭಟನಾಕಾರರೊಂದಿಗೆ ಮಾತುಕತೆ ನಡೆಸಿ ಅವರ ಆತಂಕ ನಿವಾರಿಸುತ್ತೇನೆ' ಎಂದಿದ್ದರು.ವರುಷವೇ ದಾಟಿ ಹೋದರೂ ಮಾತು ಇಲ್ಲ. ಕತೆಯೂ ಇಲ್ಲ. ಇತ್ತೀಚೆಗೆ ಬಿಡಿಎ ಭೂಮಿ ವಶಪಡಿಸಿಕೊಳ್ಳುವ ಸಂಬಂಧ ಅಂತಿಮ ಅಧಿಸೂಚನೆ ಹೊರಡಿಸಿದೆ. ರೈತರು, ಜನರು ಈಗೇನು ಮಾಡಬೇಕು?

 

ಈ ಮಧ್ಯೆ ಬಿಡಿಎ ತಾನು ಹಿಂದೆ ಅಧಿಸೂಚನೆ ಹೊರಡಿಸಿದ್ದ ಜಮೀನಿನಲ್ಲಿ ಪ್ರಭಾವಿಗಳ ಸುಮಾರು 950 ಪಟ್ಟಿಯಿಂದ ಕೈಬಿಟ್ಟಿದೆಯೆಂಬ ವರದಿಗಳಿವೆ. ಈ ಮೊದಲು ಪಟ್ಟಿಯಲ್ಲಿ ಇಲ್ಲದಿದ್ದ ಇನ್ನಷ್ಟು ಸವೇ ನಂಬರುಗಳನ್ನು ಸೇರಿಸಿಕೊಂಡು ಇದೀಗ ವಶ ಉದ್ದೇಶದ ಜಮೀನಿನ ಪ್ರಮಾಣ 5000 ಎಕರೆ ದಾಟಿದೆ.

 

ಫಲವತ್ತಾದ ತೋಟ, ಹೊಲಗದ್ದೆ ಕಳೆದುಕೊಳ್ಳುವ ಆತಂಕದಲ್ಲಿರುವ ರೈತರು, ಜಮೀನು ನೀಡಲು ಸಿದ್ಧರಿದ್ದರೂ ಸೂಕ್ತ ಬೆಲೆ ಹಾಗೂ ಅಭಿವೃದ್ಧಿಪಡಿಸಿದ ಜಮೀನಿನ ನಿವೇಶನಗಳಲ್ಲಿ ಸೂಕ್ತ ಪಾಲು ಸಿಗುವುದೋ ಇಲ್ಲವೋ ಎಂಬ ಆತಂಕದಲ್ಲಿರುವ ರೈತರು ಬಿಡಿಎ ಹಾಗೂ ಸರ್ಕಾರದ ನೀತಿಯ ವಿರುದ್ಧ ಸಿಟ್ಟಿಗೆದ್ದಿದ್ದಾರೆ.

 

 

ತಮ್ಮ ಜೀವಮಾನದ ದುಡಿಮೆಯನ್ನು ರೆವಿನ್ಯೂ ನಿವೇಶನದ ಮೇಲೆ ತೊಡಗಿಸಿ, ಅಲ್ಲಿ ವಾಸಕ್ಕೆ ಪುಟ್ಟದೊಂದು ಗೂಡು ಕಟ್ಟಿಕೊಂಡಿರುವ ಬಡ ನಿವೇಶನದಾರರು ತಮ್ಮ ಜೀವನಾಧಾರವೇ ಕುಸಿದುಬಿದ್ದಂತೆ ಚಿಂತಿತರಾಗಿದ್ದಾರೆ. ಬಿಡಿಎ ನಿವೇಶನಗಳು ಬಡವರ ಕೈಗೆ ಎಟುಕುವಂತಿದ್ದರೆ ಅವರೇಕೆ ರೆವಿನ್ಯೂ ನಿವೇಶನ ಕೊಳ್ಳುತ್ತಿದ್ದರು.

 

ಇಂತಹ ಸನ್ನಿವೇಶದಲ್ಲಿ ಫೆಬ್ರವರಿ 22 ರಂದು ಬಿಡಿಎ ಅಧಿಕಾರಿಗಳು ಸರ್ವೆಕಾರ್ಯಕ್ಕೆ ಬಂದಿದ್ದಾರೆಂಬ ಮಾಹಿತಿ ಸಿಕ್ಕಾಗ ಮಾಗಡಿ ರಸ್ತೆಯ ಸಮೀಪದ ಕೊಡಗೆ ಹಳ್ಳಿಯಲ್ಲಿ ಸಹಜವಾಗಿ ಅವರ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.

ತಮ್ಮ ಬದುಕೇ ಬೀದಿ ಬೀಳುತ್ತದೆಯೆಂದು ಆತಂಕಿತರಾಗಿದ್ದ ಜನರು ಕೊಡಗೆ ಹಳ್ಳಿಯಲ್ಲಿ ಬಿಡಿಎ ಅಧಿಕಾರಿಗಳ ಕೆಲಸಕ್ಕೆ ಪ್ರತಿರೋಧ ಒಡ್ಡಿದ್ದಾರೆ.

ಇದನ್ನೇ ನೆಪ ಮಾಡಿಕೊಂಡ ಪೊಲೀಸರು ನಡು ರಾತ್ರಿ ಕಾರ್ಯಾಚರಣೆ ನಡೆಸಿ 8 ಜನರನ್ನು ಬಂಧಿಸಿ ಕೊಲೆ ಯತ್ನ ಇತ್ಯಾದಿ ಮೊಕದ್ದಮೆ ಹೂಡಿ ಜೈಲಿಗಟ್ಟಿದ್ದಾರೆ. `ಜನರ ಜೊತೆಗಿದ್ದೇನೆ ಹಾಗೆ ಮಾಡುತ್ತೇನೆ' ಹೀಗೆ ಮಾಡುತ್ತೇನೆ ಎನ್ನುತ್ತಿದ್ದ ಯಶವಂತಪುರ ಕ್ಷೇತ್ರದ ಶಾಸಕಿ ಶೋಭಾ ಕರಂದ್ಲಾಜೆ ಪತ್ತೆ ಇಲ್ಲ.

 

 

ಹೋರಾಟ ಸಮಿತಿ ಮುಖಂಡರು ಕರ್ನಾಟಕ ಪ್ರಾಂತ ರೈತ ಸಂಘ, ಸಿಪಿಐ(ಎಂ) ಪಕ್ಷ, ಜನವಾದಿ ಮಹಿಳಾ ಸಂಘಟನೆಗಳು ಬಂಧಿತರಿಗೆ ಜಾಮೀನು, ಬಿಡುಗಡೆ ಯತ್ನದಲ್ಲಿವೆ. ಮಾಜಿ ಪ್ರಧಾನಿ ದೇವೇಗೌಡರು ಹೋರಾಟಕ್ಕೆ ಬೆಂಬಲ ನೀಡಿ ಸ್ಥಳಕ್ಕೆ ಭೇಟಿ ಮಾಡಿಹೋಗಿದ್ದಾರೆ. ಫೆಬ್ರವರಿ 23 ರಂದು ಕೊಡಿಗೆ ಹಳ್ಳಿಯಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಎಸ್.ಪ್ರಸನ್ನಕುಮಾರ್, ಜಿಲ್ಲಾ ಕಾರ್ಯದರ್ಶಿ ಕೆ.ಪ್ರಕಾಶ್ ವಿರೋಧ ಪಕ್ಷದ ಮುಖಂಡ ಸಿದ್ಧರಾಮಯ್ಯ ಇತ್ಯಾದಿ ಮುಖಂಡರು ಪಾಲ್ಗೊಂಡು ಹೋರಾಟಕ್ಕೆ ಬೆಂಬಲ ಸೂಚಿಸಿದ್ದಾರೆ.

 

ಕೆಂಪೇಗೌಡ ಬಡಾವಣೆ ಸಂಬಂಧಿತವಾದ ಈ ಹೋರಾಟ ಇನ್ನಷ್ಟು ತೀವ್ರಗೊಳ್ಳುವ ಲಕ್ಷಣ ಕಾಣುತ್ತಿದೆ. ಪ್ರಾಂತ ರೈತ ಸಂಘದ ಮುಖಂಡರುಗಳಾದ ವೆಂಕಟಾಚಲಯ್ಯ, ಮೋಹನ್ ರಾಜ್ ಮುಂತಾದವರು ಹೋರಾಟಕ್ಕೆ ನೇತೃತ್ವ ನೀಡುತ್ತಿದ್ದಾರೆ. ನೈಸ್ ವಿರೋಧಿ ಹೋರಾಟ ಸಮಿತಿಯ ಪಂಚಲಿಂಗಯ್ಯ, ಜನವಾದಿಯ ಯಶೋಧ ಮುಂತಾದವರು ಚಳುವಳಿನಿರತ ಜನರನ್ನು ಭೇಟಿ ಮಾಡಿ ಧೈರ್ಯ ತುಂಬಿದ್ದಾರೆ.

 

 

ಸೌಜನ್ಯ: ಜನಶಕ್ತಿ


Share: