ದುಬೈ / ನವದೆಹಲಿ (ಎಪಿ, ಪಿಟಿಐ): ಮಧ್ಯಪ್ರಾಚ್ಯದ ಅತಿ ದೊಡ್ಡ ರಿಯಾಲ್ಟಿ ಸಂಸ್ಥೆಯಾಗಿರುವ ಸರ್ಕಾರಿ ಸ್ವಾಮ್ಯದ ‘ದುಬೈ ವರ್ಲ್ಡ್’, 60 ಶತಕೋಟಿ ಡಾಲರ್ನ (ಅಂದಾಜು ರೂ 27.60 ಲಕ್ಷ ಕೋಟಿ) ಸಾಲದ ಬಲೆಯಲ್ಲಿ ಸಿಲುಕಿಕೊಂಡಿದೆ. ಸಾಲ ಮರುಪಾವತಿ ಮಾಡಲು ತನಗೆ ಮುಂದಿನ ವರ್ಷದ ಮೇ ತಿಂಗಳವರೆಗೆ ಕಾಲಾವಕಾಶ ನೀಡಲು ಕೇಳಿಕೊಂಡಿದೆ.
ರಿಯಲ್ ಎಸ್ಟೇಟ್ ವಹಿವಾಟು ಉತ್ಕರ್ಷದಲ್ಲಿ ಇದ್ದಾಗ, ಭಾರಿ ಪ್ರಮಾಣದಲ್ಲಿ ಸಾಲ ಸಂಗ್ರಹಿಸಿದ್ದ ಆರ್ಥಿಕ ಒಕ್ಕೂಟ ‘ದುಬೈ ವರ್ಲ್ಡ್’, ಜಾಗತಿಕ ಹಣಕಾಸಿನ ಬಿಕ್ಕಟ್ಟಿನ ಫಲವಾಗಿ ಈಗ ಸಾಲ ಮರು ಪಾವತಿಸದ ಸುಳಿಗೆ ಸಿಲುಕಿದೆ.
ದುಬೈನ ಆರ್ಥಿಕ ಬೆಳವಣಿಗೆಯ ಮುಖ್ಯ ಚಾಲನಾ ಶಕ್ತಿಯಾಗಿರುವ ‘ದುಬೈ ವರ್ಲ್ಡ್’, ಸಾಲ ಮರುಪಾವತಿಸಲು ಕಾಲಾವಕಾಶ ಕೋರಿರುವುದು ಬಿಕ್ಕಟ್ಟಿನ ಮೂಲ.
ಮಾರುಕಟ್ಟೆಯಲ್ಲಿ ತಲ್ಲಣ: ಈ ಸಾಲದ ಬಿಕ್ಕಟ್ಟು ಮುಂಬೈ ಸೇರಿದಂತೆ ವಿಶ್ವದಾದ್ಯಂತ ಷೇರುಪೇಟೆಯಲ್ಲಿ ತಲ್ಲಣ ಮೂಡಿಸಿದೆ. ಒಂದೆಡೆ ಷೇರುಬೆಲೆಗಳು ಕುಸಿದರೆ, ನಾಗಾ ಲೋಟದಲ್ಲಿ ಓಡುತ್ತಿದ್ದ ಚಿನ್ನದ ಬೆಲೆಗೂ ಈ ಬೆಳವಣಿಗೆ ಕಡಿವಾಣ ವಿಧಿಸಿದೆ.
ದೇಶದಲ್ಲಿನ ಸಾವಿರಾರು ಕುಟುಂಬಗಳಲ್ಲೂ ಆತಂಕ ಮೂಡಿಸಿದೆ. ಕೊಲ್ಲಿ ದೇಶಗಳಲ್ಲಿ 50 ಲಕ್ಷ ಭಾರತೀಯರು ಉದ್ಯೋಗ ನಿರತರಾಗಿದ್ದಾರೆ. ಅವರಲ್ಲಿ ಬಹುಸಂಖ್ಯಾತರು ಕೇರಳದವರೇ ಆಗಿದ್ದಾರೆ. ನಂತರದ ಸ್ಥಾನದಲ್ಲಿ ಆಂಧ್ರಪ್ರದೇಶದವರು ಇದ್ದಾರೆ. ಅಲ್ಲಿಂದ ಕೇರಳಕ್ಕೆ ಬರುವ ಹಣದ ಪ್ರಮಾಣ ಕಳೆದ ವರ್ಷ ರೂ 43,300 ಕೋಟಿಗಳಿಗೆ ತಲುಪಿತ್ತು.
ಕರಗುತ್ತಿರುವ ಅರ್ಥ ವ್ಯವಸ್ಥೆಯ ಕಾರಣಕ್ಕೆ ಕಳೆದ ಒಂದು ವರ್ಷದಿಂದ ಅನೇಕರು ಸ್ವದೇಶಕ್ಕೆ ಮರಳುತ್ತಿದ್ದಾರೆ. ಹೊಸ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಸಾವಿರಾರು ಉದ್ಯೋಗಿ ಗಳು ತಮ್ಮ ಭವಿಷ್ಯದ ಬಗ್ಗೆ ಆತಂಕಗೊಂಡಿದ್ದಾರೆ.
ಪರಿಣಾಮ ಇಲ್ಲ; ಭರವಸೆ: ಭಾರತದ ಅರ್ಥ ವ್ಯವಸ್ಥೆ ಮೇಲೆ ಇದು ಯಾವುದೇ ವ್ಯತಿರಿಕ್ತ ಪರಿಣಾಮ ಬೀರುವುದಿಲ್ಲ ಎಂದು ಆರ್ಬಿಐ, ಹಣಕಾಸು ಮತ್ತು ವಾಣಿಜ್ಯ ಸಚಿವಾಲಯ ಗಳು ಭರವಸೆ ನೀಡಿವೆ.
ದುಬೈ ಜತೆ ಗಮನಾರ್ಹ ಪ್ರಮಾಣದ ವಹಿವಾಟು ಇಲ್ಲದಿರುವುದರಿಂದ ಈ ಸಾಲದ ಬಿಕ್ಕಟ್ಟು, ಪ್ರತಿಕೂಲ ಪರಿಣಾಮ ಬೀರದು ಎಂದು ಭಾರತದ ಪ್ರಮುಖ ರಾಷ್ಟ್ರೀಕೃತ ಮತ್ತು ಖಾಸಗಿ ಬ್ಯಾಂಕ್ಗಳು, ರಿಯಲ್ ಎಸ್ಟೇಟ್ ವಹಿವಾಟು ಸಂಸ್ಥೆಗಳೂ ಸ್ಪಷ್ಟಪಡಿಸಿವೆ.
ಪರಿಣಾಮ ಬೀರದು: ರಿಯಲ್ ಎಸ್ಟೇಟ್ ವಹಿವಾಟು ಹಠಾತ್ತನೆ ಪ್ರಪಾತಕ್ಕೆ ಕುಸಿದು ದುಬೈನಲ್ಲಿ ಕಂಡು ಬಂದಿರುವ ಹಣಕಾಸು ಬಿಕ್ಕಟ್ಟು, ಕೊಲ್ಲಿ ರಾಷ್ಟ್ರಗಳಲ್ಲಿ ನೆಲೆಸಿರುವ ಭಾರತೀಯರ ಹಣ ರವಾನೆ ಮೇಲೆ ಯಾವುದೇ ಪರಿಣಾಮ ಬೀರಲಾರದು ಎಂದು ಹಣಕಾಸು ಸಚಿವಾಲಯ ಭರವಸೆ ನೀಡಿದೆ.
ಇಂತಹ ದೊಡ್ಡ ಪ್ರಮಾಣದ ಹಣಕಾಸು ಬಿಕ್ಕಟ್ಟು ಸಂಭವಿಸಿದಾಗ ವಿದೇಶಿಗಳಲ್ಲಿ ನೆಲೆಸಿರುವವರು ತಮ್ಮ ದೇಶಕ್ಕೆ ಕಳಿಸುವ ಹಣದ ಮೇಲೆ ಯಾವುದೇ ಪರಿಣಾಮ ಆಗಲಾರದು ಎಂದು ಹಣಕಾಸು ಕಾರ್ಯದರ್ಶಿ ಅಶೋಕ್ ಚಾವ್ಲಾ ಅಭಿಪ್ರಾಯಪಟ್ಟಿದ್ದಾರೆ.
ಅರಬ್ ಅಮೀರರ ಒಕ್ಕೂಟದಲ್ಲಿ ನೆಲೆಸಿರುವ ವಿದೇಶಿಯರಿಂದ ಅವರ ತಾಯ್ನಾಡಿಗೆ ಹೊರ ಹೋಗುವ ಒಟ್ಟು ಹಣದ ಹರಿವಿನಲ್ಲಿ ಭಾರತಕ್ಕೆ ಶೇ 25ರಷ್ಟು ಸಂದಾಯವಾಗು ತ್ತದೆ.
ಒಟ್ಟಾರೆ ದೇಶದೊಳಗೆ ಹರಿದು ಬರುವ 25 ಶತಕೋಟಿ ಡಾಲರ್ನಲ್ಲಿ (ರೂ 11.75 ಲಕ್ಷ ಕೋಟಿ) ಅರ್ಧದಷ್ಟು ಹಣ ಕೊಲ್ಲಿ ದೇಶಗಳಿಂದಲೇ ಬರುತ್ತದೆ.
ಈ ಹಿಂದಿನ ಅನುಭವಗಳ ಆಧಾರದ ಮೇಲೆ ಹೇಳುವುದಾದರೆ, ಮಧ್ಯಪ್ರಾಚ್ಯದಲ್ಲಿನ ಇತ್ತೀಚಿನ ಬೆಳವಣಿಗೆಗಳು ದೇಶದೊಳಗೆ ಹರಿದು ಬರುವ ಹಣದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಆರ್ಬಿಐನ ಮಾಜಿ ಗವರ್ನರ್ ವೈ. ವಿ. ರೆಡ್ಡಿ ಹೇಳಿದ್ದಾರೆ.
‘ದುಬೈ ವರ್ಲ್ಡ್’ನ ಸಾಲ ಮರುಪಾವತಿ ರದ್ದುಗೊಳಿಸಿರುವ ದುಬೈ ಸರ್ಕಾರದ ನಿರ್ಧಾರದ ಒಟ್ಟಾರೆ ಪರಿಣಾಮಗಳ ಬಗ್ಗೆ ಪರಿಶೀಲಿಸಲಾಗುತ್ತಿದೆ ಎಂದು ಆರ್ಬಿಐನ ಗವರ್ನರ್ ದುವ್ವೆರಿ ಸುಬ್ಬರಾವ್ ಹೇಳಿದ್ದಾರೆ.
ಐಸಿಐಸಿಐ ಬ್ಯಾಂಕ್: ದುಬೈ ಕಾರ್ಪೊರೇಟ್ಗಳ ಜತೆ ಗಮನಾರ್ಹ ಪ್ರಮಾಣದ ವಹಿವಾಟು ನಡೆಯುತ್ತಿಲ್ಲ. ಹೀಗಾಗಿ ದುಬೈ ಬಿಕ್ಕಟ್ಟಿನಿಂದ ಬ್ಯಾಂಕ್ಗೆ ಯಾವುದೇ ನಷ್ಟ ಉಂಟಾಗುವ ಸಾಧ್ಯತೆಗಳಿಲ್ಲ ಎಂದು ಐಸಿಐಸಿಐ ಬ್ಯಾಂಕ್ ತಿಳಿಸಿದೆ.
ಅಲ್ಲಿನ ಹಣಕಾಸು ಬಿಕ್ಕಟ್ಟು, ಭಾರತದ ರಿಯಲ್ ಎಸ್ಟೇಟ್ ಮತ್ತು ಅರ್ಥ ವ್ಯವಸ್ಥೆ ಮತ್ತು ರಫ್ತು ವಹಿವಾಟಿನ ಮೇಲೆಯೂ ಯಾವುದೇ ಪ್ರತಿಕೂಲ ಪರಿಣಾಮ ಬೀರಲಾರದು ಎಂದು ವಾಣಿಜ್ಯ ಸಚಿವ ಆನಂದ್ ಶರ್ಮಾ ಅಭಿಪ್ರಾಯಪಟ್ಟಿದ್ದಾರೆ.
‘ಯುಎಇ’ಯಲ್ಲಿ ಭಾರತೀಯರು ಗಮನಾರ್ಹ ಸಂಖ್ಯೆಯಲ್ಲಿ ನೆಲೆಸಿದ್ದಾರೆ. ಆ ದೇಶದ ಜತೆ ಭಾರತದ ರಫ್ತು ಪ್ರಮಾಣವೂ ಗಣನೀಯವಾಗಿದೆ. 2008 -09ರಲ್ಲಿ 24 ಶತಕೋಟಿ ಡಾಲರ್ಗಳಷ್ಟು ರಫ್ತು ವಹಿವಾಟು ನಡೆಸಲಾಗಿದೆ.
ಮುಂಬೈ ಷೇರುಪೇಟೆಯಲ್ಲಿ ರಿಯಾಲ್ಟಿ ಷೇರುಗಳ ಬೆಲೆಗಳೂ ತೀವ್ರ ಕುಸಿತ ಕಂಡವು. ದೇಶದ ಅತಿ ದೊಡ್ಡ ರಿಯಾಲ್ಟಿ ಸಂಸ್ಥೆ ಡಿಎಲ್ಎಫ್ ಲಿಮಿಟೆಡ್ ಶೇ 5.43 (ರೂ 335), ಯೂನಿಟೆಕ್ ಶೇ 4.98 (ರೂ 73.45) ಮತ್ತು ಇಂಡಿಯಾಬುಲ್ಸ್ ರಿಯಲ್ಸ್ಟೇಟ್ ಶೇ7.78 (ರೂ 186) ಕುಸಿಯಿತು.