ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಮೂಡಿಗೆರೆ ಪ.ಪಂ. ನೂತನ ಅಧ್ಯಕ್ಷೆ ಫಾತಿಮ ಕುಂಞಿ ಅವಿರೋಧ ಆಯ್ಕೆ

ಮೂಡಿಗೆರೆ ಪ.ಪಂ. ನೂತನ ಅಧ್ಯಕ್ಷೆ ಫಾತಿಮ ಕುಂಞಿ ಅವಿರೋಧ ಆಯ್ಕೆ

Mon, 30 Nov 2009 18:02:00  Office Staff   S.O. News Service
ಚಿಕ್ಕಮಗಳೂರು, ನ.೩೦- ಮೂಡಿಗೆರೆ ಪಟ್ಟಣ ಪಂಚಾಯಿತಿ ನೂತನ ಅಧ್ಯಕ್ಷೆಯಾಗಿ ಜೆಡಿ‌ಎಸ್‌ನ ಫಾತಿಮ ಕುಂಞಿ ಅಹಮದ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಶಿವೇಗೌಡ ಘೋಷಿಸಿದ್ದಾರೆ. 
 
ಹಳೆಯ ಒಪ್ಪಂದದ ಪ್ರಕಾರ ನಹೀಮಾ ಪರ್ವೀನ್ ಇತ್ತೀಚೆಗೆ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರಿಂದ ತೆರವಾಗಿದ್ದ ಸ್ಥಾನ ತುಂಬಲು ಸೋಮವಾರ ಚುನಾವಣಾ ಪ್ರಕ್ರಿಯೆ ನಡೆದಿತ್ತು. ಈ ಸಮಯದಲ್ಲಿ ಬಿಜೆಪಿ ಹೊರತುಪಡಿಸಿ ಕಾಂಗ್ರೆಸ್ ಮತ್ತು ಜೆಡಿ‌ಎಸ್‌ನ ಎಲ್ಲಾ ಸದಸ್ಯರೂ ಹಾಜರಿದ್ದರು.
ಬಳಿಕ ಶಿಷ್ಟಾಚಾರದಂತೆ ಅಭಿನಂದನಾ ಸಮಾರಂಭ ನಡೆಯಿತು. ಈ ಸಂದರ್ಭದಲ್ಲಿ ನೂತನ ಅಧ್ಯಕ್ಷೆ ಫಾತಿಮ ಕುಂಞಿ ಅಹಮದ್ ಮಾತನಾಡಿ ಪಟ್ಟಣ ಪಂಚಾಯಿತಿಯಲ್ಲಿ ಅಭಿವೃದ್ಧಿ ಪರ ಚಟುವಟಿಕೆಗಳಿಗೆ ಮೊದಲ ಆದ್ಯತೆ ನೀಡಿ ಎಲ್ಲಾ ಸದಸ್ಯರ ವಿಶ್ವಾಸ ಗಳಿಸಿ ಶ್ರಮವಹಿಸಿ ದುಡಿಯುವುದಾಗಿ ಭರವಸೆ ನೀಡಿದ ಅವರು ಇಲ್ಲಿ ಯಾವುದೇ ರೀತಿಯ ತಾರತಮ್ಯ ನಡೆಯಲು ಅಥವಾ ಭ್ರಷ್ಟಾಚಾರಗಳಿಗೆ ಅವಕಾಶವಾಗದಂತೆ ಎಚ್ಚರವಹಿಸುವುದಾಗಿ ತಿಳಿಸಿದರು.
ಇದೇ ವೇಳೆ ತಾಲ್ಲೂಕು ಬ್ಯಾರಿಗಳ ಒಕ್ಕೂಟ ಅಲ್ಲದೆ ವಿವಿಧ ಪಕ್ಷ, ಸಂಘಟನೆಗಳ ಮುಖಂಡರು ನೂತನ ಅಧ್ಯಕ್ಷರಿಗೆ ಅಭಿನಂದನೆ ಸಲ್ಲಿಸಿದರು.
 
ಸಮಾರಂಭದ ಸಭೆಯಲ್ಲಿ ಪ.ಪಂ. ಮಾಜಿ ಅಧ್ಯಕ್ಷ ಕೆ. ವೆಂಕಟೇಶ್, ನಹೀಮಾ ಪರ್ವೀನ್, ಆರ್. ಪಾರ್ವತಮ್ಮ, ಉಪಾಧ್ಯಕ್ಷ ಜಿ.ಬಿ. ಧರ್ಮಪಾಲ್, ಇಲಿಯಾಜ್ ಅಹಮದ್, ಸುಲೋಚನ, ಜೆಡಿ‌ಎಸ್‌ನ ರಾಜ್ಯ ಕಾರ್ಯಕಾರಿಣಿ ಸದಸ್ಯ ಎಂ.ಪಿ. ಜಗನ್ನಾಥ್, ತಾಲ್ಲೂಕು ಜೆಡಿ‌ಎಸ್ ಅಧ್ಯಕ್ಷ ಡಿ.ಆರ್. ಉಮಾಪತಿ, ಬ್ಯಾರಿ ಒಕ್ಕೂಟದ ಅಧ್ಯಕ್ಷ ಸಿ.ಕೆ.ಇಬ್ರಾಹಿಂ, ಬಾಲಕೃಷ್ಣೇಗೌಡ, ಕೆ.ಎ. ಅಬ್ಬಾಸ್, ಖಾದರ್ ನೂತನ ಅಧ್ಯಕ್ಷರಿಗೆ ಶುಭ ಕೋರಿದರು.



’ಮೂಡಿಗೆರೆ ಬಂದ್’ ಮುಂದೂಡಿಕೆ
 
ಚಿಕ್ಕಮಗಳೂರು, ನ.೩೦- ದತ್ತಜಯಂತಿ ಅಂಗವಾಗಿ ಮೂಡಿಗೆರೆಯಲ್ಲಿ ಇತ್ತೀಚೆಗೆ ಸಂಘಪರಿವಾರದ ಕಾರ್ಯಕರ್ತರ ಜೊತೆ ವಿದ್ಯುತ್ ಕಂಬಗಳಿಗೆ ಬ್ಯಾನರ್ ಕಟ್ಟುತ್ತಿದ್ದ ದಲಿತ ಯುವಕ ಬಾಬುವಿನ ಕುಟುಂಬಕ್ಕೆ ತಾಲ್ಲೂಕು ಆಡಳಿತವು ನಾಲ್ಕು ಲಕ್ಷ ರೂ.ಗಳ ಪರಿಹಾರ ರೂಪದಲ್ಲಿ ಹಣಕಾಸಿನ ನೆರವು ಅಲ್ಲದೆ ಪ.ಪಂ. ವ್ಯಾಪ್ತಿಯಲ್ಲಿ ನಿವೇಶನ ನೀಡಿ ಮನೆ ಕಟ್ಟಿಕೊಡುವ ಭರವಸೆ ನೀಡಿದ ಹಿನ್ನೆಲೆಯಲ್ಲಿ ಇಲ್ಲಿನ ಜಾತ್ಯತೀತ ಪಕ್ಷಗಳು ಹಾಗೂ ಪ್ರಗತಿಪರ ಸಂಘಟನೆಗಳು ಡಿ.೧ರಂದು ಮೂಡಿಗೆರೆ ಬಂದ್ ನಡೆಸಲು ಕರೆ ನೀಡಿದ್ದನ್ನು ಮುಂದೂಡಿರುವುದಾಗಿ ಸಂಘಟಕರು ತಿಳಿಸಿದ್ದಾರೆ.
 
ಭಾನುವಾರ ಪ್ರವಾಸಿ ಮಂದಿರದಲ್ಲಿ ನಡೆದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ತಾಲ್ಲೂಕು ಆಡಳಿತದಿಂದ ಶಾಸಕ ಎಂ.ಪಿ.ಕುಮಾರಸ್ವಾಮಿ, ತಾಲ್ಲೂಕು ದಂಡಾಧಿಕಾರಿ ಶಿವೇಗೌಡ, ವೃತ್ತ ನಿರೀಕ್ಷಕ ಜಿ.ಟಿ. ಸ್ವಾಮಿಯವರಿಂದ ಬೇಡಿಕೆ ಈಡೇರಿಸುವ ಪೂರಕ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಮುಂದಿನ ೨೦ ದಿನಗಳಲ್ಲಿ ಪರಿಹಾರದ ಮೊತ್ತವನ್ನು ಮೃತನ ಕುಟುಂಬಕ್ಕೆ ತಲುಪಿಸುವುದಾಗಿ ಅದು ಭರವಸೆ ನೀಡಿದೆ.
 
ತಪ್ಪಿದರೆ ಮತ್ತೆ ಪ್ರತಿಭಟನೆ ಅನಿವಾರ್ಯ ಎಂದು ಸಂಘಟಕರು ಎಚ್ಚರಿಕೆ ನೀಡಿದ್ದಾರೆ. ಸಭೆಯಲ್ಲಿ ಬಿಜೆಪಿಯ ಎಂ.ಕೆ. ಪ್ರಾಣೇಶ್, ಪ್ರಗತಿಪರ ಸಂಘಟನೆಗಳ ಪರವಾಗಿ ಸಿಪಿ‌ಐ ಕಾರ್ಯದರ್ಶಿ ಲಕ್ಷ್ಮಣ್‌ಕುಮಾರ್, ಜಿ.ಪಂ. ಸದಸ್ಯ ಕಾಂ. ಸಾತಿ ಸುಂದರೇಶ್, ತಾ.ಪಂ. ಸದಸ್ಯ ಯು.ಆರ್ ರುದ್ರಯ್ಯ, ಎಸ್ಸಿ ಎಸ್ಟಿ ಹಿತರಕ್ಷಣಾ ವೇದಿಕೆ ಅಧ್ಯಕ್ಷ ದೇಜಪ್ಪ, ಕಾರ್ಯದರ್ಶಿ ಕಿರುಗುಂದ ರಾಮಯ್ಯ, ಬೆಟ್ಟಗೆರೆ ಶಂಕರ್, ಡಿ‌ಎಸ್‌ಎಸ್ ಮುಖಂಡ ಲೋಕವಳ್ಳಿ ರಮೇಶ್ ಮೊದಲಾದವರು ಉಪಸ್ಥಿತರಿದ್ದರು.  


ದಲಿತರ ಮೇಲಿನ ದೌರ್ಜನ್ಯ: ಡಿ‌ಎಸ್‌ಎಸ್‌ನಿಂದ ಖಂಡನೆ
 
ಚಿಕ್ಕಮಗಳೂರು, ನ.೩೦- ಖಾಂಡ್ಯ ಹೋಬಳಿ ಸಮೀಪದ ದೇವದಾನ ಗ್ರಾ.ಪಂ. ವ್ಯಾಪ್ತಿಯಲ್ಲಿ ದಲಿತರ ಮೇಲಿನ ದೌರ್ಜನ್ಯ ನಿರಂತರವಾಗಿ ನಡೆಯುತ್ತಿದ್ದು ಇದನ್ನು ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಕೆ.ಪಿ. ರಾಜರತ್ನಂ ತೀವ್ರವಾಗಿ ಖಂಡಿಸಿದ್ದಾರೆ. 
 
ಇತ್ತೀಚೆಗೆ ಇದೇ ಗ್ರಾಮದ ಹ್ಯಾರಂಬಿಪುರ ಎಂಬಲ್ಲಿ ದಲಿತರ ಮೇಲೆ ಸವರ್ಣೀಯರು ಜಾತಿ ನಿಂದನೆ ಅಲ್ಲದೆ ಹಲ್ಲೆ ಮಾಡಿ ದೌರ್ಜನ್ಯ ನಡೆಸಿದ್ದಾರೆ ಎಂದಿರುವ ಅವರು ತಪ್ಪಿತಸ್ಥರ ಮೇಲೆ ಕೂಡಲೇ ನಿರ್ಧಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು ಹಾಗೂ ಯಾವುದೇ ಒತ್ತಡಕ್ಕೂ ಮಣಿಯದೆ ದಲಿತ ದೌರ್ಜನ್ಯ ಕಾಯ್ದೆಯಡಿ ಪ್ರಕರಣ ದಾಖಲಿಸಿ ದೌರ್ಜನ್ಯಕ್ಕೊಳಗಾದ ದಲಿತ ಕುಟುಂಬಗಳಿಗೆ ಸೂಕ್ತ ರಕ್ಷಣೆ ಒದಗಿಸಿಕೊಡಬೇಕು ಎಂದು ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.
ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನೇರ ಸ್ಪರ್ಧೆ
ಚಿಕ್ಕಮಗಳೂರು, ನ.೩೦- ವಿಧಾನಪರಿಷತ್ ಚುನಾವಣೆಗೆ ಸ್ಥಳೀಯ ಸಂಸ್ಥೆಗಳಿಂದ ಆಯ್ಕೆ ಬಯಸಿದ್ದ ಕಾಂಗ್ರೆಸ್‌ನ ಹಾಲಿ ಜಿ.ಪಂ. ಅಧ್ಯಕ್ಷೆ ಗಾಯಿತ್ರಿ ಶಾಂತೇಗೌಡರಿಗೆ ಬಿ ಫಾರಂ ನೀಡಿ ಕ್ಷೇತ್ರದಿಂದ ಸ್ಪರ್ಧಿಸಲು ಅವಕಾಶ ಕಲ್ಪಿಸಲಾಗಿದೆ. 
 
ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಜೆಡಿ‌ಎಸ್ ವರಿಷ್ಠರು ಮಾಡಿಕೊಂಡಿರುವ ಒಡಂಬಡಿಕೆಯ ನಿಯಮದಂತೆ ಈ ಕ್ರಮವನ್ನು ಅನುಸರಿಸಲಾಗಿದೆ. ಆದ್ದರಿಂದ ಜೆಡಿ‌ಎಸ್‌ನಿಂದ ಸ್ಪರ್ಧಿಸುವ ಆಕಾಂಕ್ಷೆ ಹೊಂದಿದ್ದ  ಎಸ್.ಎಲ್.ಧರ್ಮೇಗೌಡ ತಮ್ಮ ನಿಲುವನ್ನು ಬದಲಿಸಿದ್ದು ವರಿಷ್ಠರ ತೀರ್ಮಾನಕ್ಕೆ ಬದ್ಧರಾಗಿರುವುದಾಗಿ ತಿಳಿಸಿದ್ದಾರೆ.
 
ಹೀಗಾಗಿ ಬಿಜೆಪಿ ಪಕ್ಷದ ಪರವಾಗಿ ಕಣಕ್ಕಿಳಿದಿರುವ ಎಂ.ಎಸ್. ಬೋಜೇಗೌಡರಿಗೆ ಪ್ರಬಲ ಪೈಪೋಟಿ ನೀಡಿ ಸಡ್ಡು ಹೊಡೆಯಲು ಎರಡೂ ಜಾತ್ಯತೀತ ಬಲಾಢ್ಯ ರಾಜಕೀಯ ಪಕ್ಷಗಳು ಸಜ್ಜಾಗಿರುವುದು ಕ್ಷೇತ್ರದಲ್ಲಿ ಬಿಜೆಪಿಗೆ ತೀವ್ರ ಹಿನ್ನಡೆಯಾಗಲಿದೆ ಎಂಬುದು ರಾಜಕೀಯ ವಿಶ್ಲೇಷಕರ ಅಭಿಪ್ರಾಯವಾಗಿದೆ.


Share: