ನೂತನ ಮೇಯರ್ ಮೊದಲ ಸಭೆಯಲ್ಲೇ ಗದ್ದಲ: ಸಭೆ ಮುಂದೂಡಿಕೆ
ಮೈಸೂರು. ಎ. 30: ಮೈಸೂರು ಮಹಾನಗರ ಪಾಲಿಕೆಯ ನೂತನ ಮೇಯರ್ ಸಂದೇಶ್ ಸ್ವಾಮಿಯವರ ಅಧ್ಯಕ್ಷತೆಯಲ್ಲಿ ನಡೆದ ಮೊದಲ ಸಭೆಯಲ್ಲಿ ಇಂದು ಗದ್ದಲ, ಗೊಂದಲ ಏರ್ಪಟ್ಟು ಅರ್ಧ ಗಂಟೆ ಕಾಲ ಸಭೆಯನ್ನು ಮುಂದೂಡಲಾಯಿತು.ಬೆಳಗ್ಗೆ 10 ಗಂಟೆಗೆ ಸಭೆ ಆರಂಭವಾಗುತ್ತಿದ್ದಂತೆ ಕುಡಿಯುವ ನೀರಿನ ವಿಷಯಕ್ಕೆ ಸಂಬಂಧಿಸಿದಂತೆ ಚರ್ಚೆ ನಡೆಸಬೇಕೆಂದು ಬಿಜೆಪಿ ಸದಸ್ಯರು ಪಟ್ಟು ಹಿಡಿದಾಗ ಅದಕ್ಕೆ ಅವಕಾಶ ನೀಡಲು ಮೇಯರ್ ನಿರಾಕರಿಸಿದರು. ಇದರಿಂದಾಗಿ ಬಿಜೆಪಿ ಸದಸ್ಯರು ಬಾವಿಗೆ ಇಳಿದು ಪ್ರತಿಭಟನೆ ನಡೆಸಿದಾಗ, ಮನವೊಲಿಕೆಗೆ ಪ್ರಯತ್ನಿಸಿದರೂ ಲಾಭ ದೊರೆಯಲಿಲ್ಲ. ಆಗ ಮೇಯರ್ ಅರ್ಧ ಗಂಟೆ ಸಭೆಯನ್ನು ಮುಂದೂಡಿದರು. ಸಭೆಯ ಆರಂಭದಲ್ಲಿ ಕಾರ್ಯಸೂಚಿಯ ವಿಷಯಗಳ ಬಗ್ಗೆ ಚರ್ಚೆ ನಡೆಸಲು ಅನುವು ಮಾಡಿಕೊಟ್ಟಾಗ ಬಿಜೆಪಿ ಸದಸ್ಯರು ಮೊದಲು ಕುಡಿಯುವ ನೀರಿನ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಿ ಅನಂತರ ಕಾರ್ಯ ಸೂಚಿ ವಿಷಯ ಪ್ರಸ್ತಾಪಿಸಬೇಕೆಂದು ಒತ್ತಾಯಿಸಿದರು. ಇದಕ್ಕೆ ಕಾಂಗ್ರಸ್, ಜೆಡಿಎಸ್ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿ ಮೊದಲು ಕಾರ್ಯ ಸೂಚಿಯಂತೆ ಸಭೆ ಆರಂಭವಾಗಲಿ ಎಂದು ಪಟ್ಟು ಹಿಡಿದಾಗ ಇಬ್ಬರ ನಡುವೆಯೂ ಮಾತಿನ ಚಕಮಕಿ ನಡೆದು ಗೊಂದಲಕ್ಕೆ ಕಾರಣವಾಯಿತು.ಮೊದಲಿಗೆ ಬಿಜೆಪಿ ಸದಸ್ಯ ನಾಗೇಂದ್ರ ಮಾತನಾಡಿ, ಮೇಯರ್ ನಗರದ ಜನತೆಗೆ 2 ದಿನಕ್ಕೊಮ್ಮೆ 4 ಗಂಟೆ ನೀರು ಸರಬರಾಜು ಮಾಡಲಾಗುವುದು ಎಂದು ಹೇಳಿಕೆ ನೀಡಿರುವುದಕ್ಕೆ ಸ್ಪಷ್ಟನೆ ನೀಡಬೇಕೆಂದು ಪಟ್ಟು ಹಿಡಿದರು.ನೀರು ಸರಬರಾಜು ಮಾಡಲು ಜಸ್ಕೋದವರಿಗೆ ವಹಿಸಲಾಗಿದ್ದು, ಅದಕ್ಕಾಗಿ ಅವರಿಗೆ ಲಕ್ಷಾಂತರ ರೂಪಾಯಿ ನೀಡಲಾಗುತ್ತದೆ. ಅದರಂತೆ ಅವರು, 24x7 ನೀರು ಸರಬರಾಜು ಮಾಡಲು ಒಪ್ಪಿಕೊಂಡಿದ್ದಾರೆ. ಆದರೆ ನೀವು ಈ ರೀತಿ ಹೇಳಿಕೆ ನೀಡುವುದಾದರೂ ಏಕೆ ? ಅವರ ಜೊತೆಗೆ ನೀವು ಶಾಮೀಲಾಗಿದ್ದೀರಿ ಎಂದು ಆರೋಪಿಸಿದರು.ಆ ನಂತರ ಪ್ರತಿಭಟನಕಾರರ ಮನವೊಲಿಸಿ ಕಾರ್ಯ ಸೂಚಿಯಂತೆ ಸಭೆ ನಡೆಯಲು ಅನುವು ಮಾಡಿಕೊಟ್ಟರು.
ಸಭೆಯಲ್ಲಿ ಕುಡಿಯುವ ನೀರು ಸಮಸ್ಯೆ ಬಗೆಹರಿಸುವ ಸಲುವಾಗಿ ಒಂದು ಸಮಿತಿಯನ್ನು ರಚಿಸಿ ಅದರ ಮುಖಾಂತರ ನೀರಿನ ವಿಷಯಕ್ಕೆ ಸಂಬಂಧಿಸಿದಂತೆ ಚರ್ಚೆ ನಡೆಸಿ ಕ್ರಮ ಕೈಗೊಳ್ಳಬೇಕೆಂದು ಅವರು ಒತ್ತಾಯಿಸಿದರು