ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಕಾಸರಗೋಡು: ರಿಯಾನಾಳ ಪತ್ತೆಗೆ ನಾಲ್ಕನೆಯ ಗಡುವು

ಕಾಸರಗೋಡು: ರಿಯಾನಾಳ ಪತ್ತೆಗೆ ನಾಲ್ಕನೆಯ ಗಡುವು

Fri, 09 Oct 2009 04:43:00  Office Staff   S.O. News Service
ಕಾಸರಗೋಡು, ಅ.೮: ಸುಮಾರು ನಾಲ್ಕು ತಿಂಗಳ ಹಿಂದೆ ನಿಗೂಢವಾಗಿ ನಾಪತ್ತೆಯಾಗಿರುವ ರಿಯಾನಾಳ ಪತ್ತೆಗೆ ಹೈಕೋರ್ಟ್ ನೀಡಿರುವ ನಾಲ್ಕನೆ ಬಾರಿಯ ಗಡುವು ಕೂಡಾ ಗುರುವಾರ ಅಂತ್ಯಗೊಂಡಿದೆ. ಆದರೆ ಪತ್ತೆಹಚ್ಚುವಲ್ಲಿ ಪೊಲೀಸರು ವಿಫಲರಾಗಿದ್ದಾರೆ. 

ಈ ಕುರಿತು ಇಂದು ವರದಿ ಸಲ್ಲಿಸಿರುವ ತನಿಖಾತಂಡವು ಪತೆಗೆ ಕಾಲಾವಧಿ ಕೋರಿ ಮನವಿ ಮಾಡಿತ್ತು. ಅದರಂತೆ ವರದಿಯನ್ನು ಪರಿಶೀಲಿಸಿದ ಹೈಕೋರ್ಟ್ ರಿಯಾನಾಳ ಪತ್ತೆಗೆ ಇನ್ನೂ ಹತ್ತು ದಿನಗಳ ಹೆಚ್ಚುವರಿ ಕಾಲಾವಕಾಶ ನೀಡಿದೆ. ಈ ಕಾಲಾವಧಿಯೊಳಗೆ ರಿಯಾನಾಳ ಪತ್ತೆಹಚ್ಚುವಲ್ಲಿ ಪೊಲೀಸರು ವಿಫಲರಾದಲ್ಲಿ ಉನ್ನತಮಟ್ಟದ ತನಿಖೆಗೆ ಒತ್ತಾಯಿಸಿ ಸಂಬಂಧಪಟ್ಟವರು ಹೈಕೋರ್ಟ್ ಮೆಟ್ಟಿಲೇರಬಹುದು ಎಂದು ನ್ಯಾಯಾಲಯ ಆದೇಶಿಸಿದೆ.

ಅ.೧೯ರ ವರೆಗೆ ಬಾಲಕಿಯ ಪತ್ತೆಗೆ ಗಡುವು ವಿಧಿಸಿರುವ ನ್ಯಾಯಾಲಯವು, ಅಂದು ಡಿಜಿಪಿ ಹೈಕೋರ್ಟ್‌ಗೆ ಹಾಜರಾಗುವಂತೆ ಆದೇಶಿಸಿದೆ. 

ವಿಶೇಷ ತಂಡದ ಮುಖ್ಯಸ್ಥರಾಗಿ  ಮತ್ತೆ ಅಬ್ದುಲ್ ಗಫೂರ್

ರಿಯಾನಾಳ ನಾಪತ್ತೆ ಪ್ರಕರಣದ ತನಿಖೆಗಾಗಿ ರಚಿಸಲಾಗಿರುವ ವಿಶೇಷ ತಂಡದ ಮುಖ್ಯಸ್ಥ, ಡಿವೈ‌ಎಸ್ಪಿ ಪಿ.ಕೆ.ಪ್ರಕಾಶ್‌ರನ್ನು ದಿಢೀರ್ ವರ್ಗಾವಣೆಗೊಳಿಸಲಾಗಿದ್ದು, ಆ ಸ್ಥಾನಕ್ಕೆ ಡಿವೈ‌ಎಸ್ಪಿ ಅಬ್ದುಲ್ ಗಫೂರ್‌ರನ್ನು ನೇಮಿಸಲಾಗಿದೆ.

ಈದುಲ್ ಫಿತ್ರ್ ಹಬ್ಬದ ಮುನ್ನ ದಿನ ನಗರದಲ್ಲಿ ನಡೆದ ಹಿಂಸಾಚಾರದ ಹಿನ್ನೆಲೆಯಲ್ಲಿ ಕಾಸರಗೋಡು ಡಿವೈ‌ಎಸ್ಪಿಯಾಗಿದ್ದ ಗಫೂರ್‌ರನ್ನು ವರ್ಗಾಯಿಸಲಾಗಿತ್ತು. ಈ ಹಿಂದೆ ರಿಯಾನಾ ನಾಪತ್ತೆ ಪ್ರಕರಣದ ತನಿಖೆಯನ್ನು ಗಫೂರ್ ನೇತೃತ್ವದಲ್ಲಿ ನಡೆಸಲಾಗಿತ್ತು. 

ಇತನ್ಮಧ್ಯೆ ಮೇ ೧೮ರಿಂದ ನಾಪತ್ತೆಯಾಗಿರುವ ರಿಯಾನಾಳ ಶೀಘ್ರ ಪತ್ತೆಗೆ ಆಗ್ರಹಿಸಿ ರಿಯಾನಾಳ ತಾಯಿ ಫೌಝಿಯಾ ನಡೆಸುತ್ತಿರುವ ಅನಿದಿರ್ಷ್ಟಾವಧಿ ಉಪವಾಸ ಮುಷ್ಕರ ೧೫ನೆ ದಿನಕ್ಕೆ ಕಾಲಿಟ್ಟಿದೆ

Share: