ಬೆಂಗಳೂರು, ನವೆಂಬರ್ ೧೬: ರಾಜ್ಯ ಬಿಜೆಪಿಯಲ್ಲಿ ನಡೆಯುತ್ತಿರುವ ಆಂತರಿಕ ಸಂಘರ್ಷದ ಮಧ್ಯೆಯೇ ರಾಷ್ಟ್ರೀಯ ಬಿಜೆಪಿ ವಿರುದ್ಧ ಸತತವಾಗಿ ಹರಿಹಾಯುತ್ತಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರೆ ಸ್ಸೆಸ್) ಮುಖ್ಯಸ್ಥ ಮೋಹನ್ ಭಾಗವತ್ ರಾಜ್ಯಕ್ಕೆ ಭೇಟಿ ನೀಡುತ್ತಿರುವುದು ಮಹತ್ವ ಪಡೆದುಕೊಂಡಿದೆ.
ಸಂಘದ ಮುಖ್ಯಸ್ಥರಾಗಿ ಜವಾಬ್ದಾರಿ ವಹಿಸಿಕೊಂಡ ನಂತರ ಇದೇ ಮೊದಲ ಬಾರಿಗೆ ರಾಜ್ಯಕ್ಕೆ ಭೇಟಿ ನೀಡುತ್ತಿದ್ದು, ನಾಲ್ಕು ದಿನಗಳ ಕಾಲ ಸತತವಾಗಿ ಬಿಜೆಪಿಯೂ ಸೇರಿದಂತೆ ಸಂಘ ಪರಿವಾರದ ಎಲ್ಲ ಅಂಗ ಸಂಸ್ಥೆಗಳ ಸಂಘಟನೆ ಬಗ್ಗೆ ವಿಸ್ತೃತ ಸಮಾಲೋಚನೆ ನಡೆಸಲಿದ್ದಾರೆ.
ಈ ಭೇಟಿ ಸಂದರ್ಭ ಒಡೆದ ಮನೆಯಂತಾಗಿರುವ ಬಿಜೆಪಿಯ ವರ್ಚಸ್ಸನ್ನು ವೃದ್ಧಿಸುವ ದೃಷ್ಟಿಯಿಂದ ಭಾಗವತ್ ಅವರು ಹಲವಾರು ಸಲಹೆ-ಸೂಚನೆಗಳನ್ನು ನೀಡುವ ಸಂಭವವಿದೆ. ಮುಂದಿನ ವಾರ, ಅಂದರೆ ಇದೇ ತಿಂಗಳ ೨೦ರ ಸಂಜೆ ಬೆಂಗಳೂರಿಗೆ ಆಗಮಿಸಲಿರುವ ಭಾಗವತ್ ೨೩ರಂದು ವಾಪಸಾಗುವ ನಿರೀಕ್ಷೆಯಿದೆ. ವಾಸ್ತವವಾಗಿ ಭಾಗವತ್ ಭೇಟಿ ಕಾರ್ಯಕ್ರಮ ೩ ತಿಂಗಳ ಹಿಂದೆಯೇ ನಿಗದಿಯಾಗಿತ್ತು.
ಆದರೆ, ಆ ಸಂದರ್ಭ ರಾಜ್ಯ ಬಿಜೆಪಿಯಲ್ಲಿನ ಯಾವುದೇ ಗೊಂದಲಗಳು ಬೀದಿಗೆ ಬಂದಿರಲಿಲ್ಲ. ಹೀಗಾಗಿ ಬಿಜೆಪಿಯಲ್ಲೂ ಭಾಗವತ್ ಅವರನ್ನು ಸ್ವಾಗತಿಸುವ ಉತ್ಸಾಹವಿತ್ತು. ಆದರೆ, ಈಗ ಅಂಥ ಯಾವುದೇ ಉತ್ಸಾಹ ಅಥವಾ ನೈತಿಕ ಧೈರ್ಯ ಬಿಜೆಪಿ ನಾಯಕರಲ್ಲಿ ಉಳಿದಿಲ್ಲ.
ಮೊದಲ ಬಾರಿಗೆ ಆಗಮಿಸುತ್ತಿರುವುದರಿಂದ ಭಾಗವತ್ ಅವರ ಪತ್ರಿಕಾಗೋಷ್ಠಿ ಆಯೋಜಿಸುವ ಉದ್ದೇಶ ಹೊಂದಲಾಗಿತ್ತು. ಆದರೆ, ಕಚ್ಚಾಡುತ್ತಿರುವ ರಾಷ್ಟ್ರೀಯ ಬಿಜೆಪಿಯ ನಾಯಕರನ್ನು ಝಾಡಿಸುತ್ತಿರುವ ಭಾಗವತ್ ರಾಜ್ಯ ಬಿಜೆಪಿಯಲ್ಲಿನ ಬೆಳವಣಿಗೆಗಳ ಬಗ್ಗೆ ಖಾರವಾಗಿ ಪ್ರತಿಕ್ರಿಯಿಸುವ ಆತಂಕದಿಂದ ಪತ್ರಿಕಾಗೋಷ್ಠಿಯನ್ನೇ ರದ್ದುಪಡಿಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.
ಇದೆಲ್ಲದರ ನಡುವೆಯೂ ಭಾಗವತ್ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗಳಿಗೆ ಎದುರಾಗುವ ಸನ್ನಿವೇಶ ಸಿಕ್ಕಲ್ಲಿ ಅಥವಾ ಸಾರ್ವಜನಿಕ ಸಮಾರಂಭದಲ್ಲಿ ರಾಜ್ಯ ಬಿಜೆಪಿ ಬಗ್ಗೆ ಪ್ರಸ್ತಾಪಿಸಬಹುದು ಎಂಬ ಕುತೂಹಲವಂತೂ ಇದ್ದೇ ಇದೆ.
ಭಾಗವತ್ ಭೇಟಿಯ ಬಗ್ಗೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿರುವವರಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅಗ್ರಗಣ್ಯರು. ಕಾರಣ- ಇತ್ತೀಚಿನ ಬಂಡಾಯ ಬೆಳವಣಿಗೆ ಸಂದರ್ಭದಲ್ಲಿ ಯಡಿಯೂರಪ್ಪ ಅವರಿಗೆ ಬಂದಿದ್ದ ಕಂಟಕವನ್ನು ನಿವಾರಿಸುವಲ್ಲಿ ಈ ಭಾಗವತ್ ಪ್ರಮುಖ ಪಾತ್ರ ವಹಿಸಿದ್ದು. ಯಾವುದೇ ಕಾರಣಕ್ಕೂ ಸಂಘ ಪರಿವಾರದ ಮೂಲದಿಂದ ಬಂದಿರುವ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಕುರ್ಚಿಯಿಂದ ಇಳಿಸಬಾರದು ಎಂದು ಭಾಗವತ್ ಬಿಜೆಪಿ ವರಿಷ್ಠರಿಗೆ ಶಿಫಾರಸು ಮಾಡಿದ್ದರು. ಈ ಕಾರಣಕ್ಕಾಗಿಯೇ ಬಳ್ಳಾರಿ ಗಣಿ ಧಣಿಗಳು ಉಡದ ಪಟ್ಟು ಹಿಡಿದರೂ ಬಿಜೆಪಿ ಹೈಕಮಾಂಡ್ ಯಡಿಯೂರಪ್ಪ ನಾಯಕತ್ವ ಬದಲಾವಣೆಗೆ ಒಪ್ಪಲಿಲ್ಲ ಎನ್ನಲಾಗಿದೆ.
-ಸಾಮರಸ್ಯ ಗೋಷ್ಠಿ, ಸಾರ್ವಜನಿಕ ಸಭೆ...: ಮೋಹನ್ ಭಾಗವತ್ ಅವರು ನಾಲ್ಕು ದಿನಗಳ ಭೇಟಿಗಾಗಿ ರಾಜ್ಯಕ್ಕೆ ಆಗಮಿಸುತ್ತಿದ್ದರೂ ಎರಡು ದಿನಗಳಿಗೆ ಮಾತ್ರ ಅಧಿಕೃತ ಕಾರ್ಯಕ್ರಮ ನಿಗದಿಯಾಗಿವೆ.
-೨೧ರಂದು ಬೆಳಗ್ಗೆಯಿಂದ ಸಂಜೆವರೆಗೆ ಸಂಘ ಪರಿವಾರದ ಮುಖಂಡರು ಹಾಗೂ ಕಾರ್ಯಕರ್ತರೊಂದಿಗೆ ನಗರದ ಚಾಮರಾಜಪೇಟೆಯಲ್ಲಿರುವ ಆರೆಸ್ಸೆಸ್ ಕೇಂದ್ರ ಕಚೇರಿ ‘ಕೇಶವಕೃಪ’ದಲ್ಲಿ ಸಮಾಲೋಚನೆ ನಡೆಸಲಿದ್ದಾರೆ. ಈ ಸಂದರ್ಭದಲ್ಲಿ ಸಹಜವಾಗಿಯೇ ಬಿಜೆಪಿಯ ಬಗ್ಗೆಯೂ ಚರ್ಚೆ ನಡೆಯಲಿದೆ.
-ಮರುದಿನ ೨೨ರಂದು ಬೆಳಗ್ಗೆ ೯ಗಂಟೆಯಿಂದ ಜೆ.ಸಿ.ರಸ್ತೆಯಲ್ಲಿನ ಮಹಾವೀರ್ ಜೈನ್ ಕಾಲೇಜಿನಲ್ಲಿ ‘ಸಾಮರಸ್ಯ ಗೋಷ್ಠಿ’ ನಡೆಯಲಿದೆ. ಇದರಲ್ಲಿ ರಾಜ್ಯದ ವಿವಿಧ ಭಾಗಗಳ ವಿವಿಧ ಜಾತಿ-ಜನಾಂಗಗಳ ಮುಖಂಡರು ಹಾಗೂ ಬುದ್ಧಿಜೀವಿಗಳೂ ಸೇರಿದಂತೆ ಸುಮಾರು ೨೦೦ ಮಂದಿ ಗಣ್ಯರು ಪಾಲ್ಗೊಳ್ಳಲಿದ್ದಾರೆ.
ನಂತರ ಅದೇ ದಿನ ಸಂಜೆ ೫ ಗಂಟೆಗೆ ಅರಮನೆ ಮೈದಾನದಲ್ಲಿ ನಡೆಯುವ ಬೃಹತ್ ಸಾರ್ವಜನಿಕ ಸಮಾರಂಭವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಇದರಲ್ಲಿ ೧೫,೦೦೦ ಸ್ವಯಂಸೇವಕರು ಗಣವೇಷಧಾರಿಗಳಾಗಿ ಭಾಗವಹಿಸಲಿದ್ದು, ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಸಾರ್ವಜನಿಕರು ಪಾಲ್ಗೊಳ್ಳುವ ನಿರೀಕ್ಷೆಯಿದೆ.
-ಸಂಘದ ಕಾರ್ಯಕರ್ತರ ಅವಿರತ ಶ್ರಮ: ಭಾಗವತ್ ಅವರು ನಾಲ್ಕು ದಿನಗಳ ಕಾಲವೂ ಸದಾಶಿವನಗರದಲ್ಲಿರುವ ಸಂಘ ಪರಿವಾರದ ಹಿತೈಷಿಗಳೊಬ್ಬರ ನಿವಾಸದಲ್ಲಿ ವಾಸ್ತವ್ಯ ಹೂಡಲಿದ್ದಾರೆ.
ಅವರ ಭೇಟಿ ಹಿನ್ನೆಲೆಯಲ್ಲಿ ಸಂಘ ಪರಿವಾರದ ಪ್ರಾಂತೀಯ ಘಟಕಗಳ ಕಾರ್ಯಕರ್ತರು ಕಳೆದ ಹಲವಾರು ದಿನಗಳಿಂದ ಅವಿರತವಾಗಿ ಶ್ರಮಿಸುತ್ತಿದ್ದಾರೆ. ಬೆಂಗಳೂರಿನ ಹತ್ತು ಸಾವಿರ ಕಾರ್ಯಕರ್ತರು ಕಳೆದೊಂದು ತಿಂಗಳಲ್ಲಿ ಸುಮಾರು ಆರೇಳು ಲಕ್ಷ ಮನೆಗಳಿಗೆ ತೆರಳಿ ಭಾಗವತ್ ಆಗಮನದ ವಿಷಯ ತಿಳಿಸಿದ್ದಾರೆ. ಸಾರ್ವಜನಿಕ ಸಮಾರಂಭದಲ್ಲಿ ಪಾಲ್ಗೊಳ್ಳುವಂತೆ ಕರೆ ನೀಡಿದ್ದಾರೆ.
ಭಾಗವತ್ ಅಧಿಕೃತ ಕಾರ್ಯಕ್ರಮ:
ನ.೨೦ರ ಸಂಜೆ ಭಾಗವತ್ ಆಗಮನ
೨೧ರಂದು ಆರೆಸ್ಸೆಸ್ ಮುಖಂಡರೊಂದಿಗೆ ಕೇಶವಕೃಪದಲ್ಲಿ ದಿನವಿಡೀ ಸಭೆ
೨೨ರಂದು ಬೆಳಗ್ಗೆ ೯ರಿಂದ ಮಧ್ಯಾಹ್ನದವರೆಗೆ ವಿವಿಧ ಜನಾಂಗಗಳ ಮುಖ್ಯಸ್ಥರು, ಬುದ್ಧಿಜೀವಿಗಳೊಂದಿಗೆ ‘ಸಾಮರಸ್ಯ ಗೋಷ್ಠಿ’
ಸಂಜೆ ೫ಗಂಟೆಗೆ ಅರಮನೆ ಮೈದಾನದಲ್ಲಿ ಸಾರ್ವಜನಿಕ ಸಮಾರಂಭ
೨೩ರಂದು ಬೆಂಗಳೂರಿನಿಂದ ವಾಪಸ್
ಲವ್ ಜಿಹಾದ್ ಮತ್ತಿತರ ವಿಷಯ ಚರ್ಚೆ
ಮೋಹನ್ ಭಾಗವತ್ ಸಂಘ ಪರಿವಾರದ ಮುಖಂಡರೊಂದಿಗೆ ನಡೆಸುವ ಸಭೆಯಲ್ಲಿ ಇತ್ತೀಚೆಗೆ ಸಾಕಷ್ಟು ಸುದ್ದಿ ಮಾಡಿರುವ ‘ಲವ್ ಜಿಹಾದ್’ ಸೇರಿದಂತೆ ಪ್ರಮುಖ ವಿಷಯಗಳು ಚರ್ಚೆಗೆ ಬರಲಿವೆ.
ವಂದೇಮಾತರಂ ಗೀತೆಯ ಬಗ್ಗೆ ಜಮಾತೆ-ಎ-ಉಲೇಮಾ ಎ ಹಿಂದ್ ಸಂಘಟನೆ ಕೈಗೊಂಡ ನಿರ್ಣಯ, ಗೋಹತ್ಯೆ ನಿಷೇಧ, ಭಯೋತ್ಪಾದನೆ, ಮಾವೋವಾದಿಗಳ ಅಟ್ಟಹಾಸ ಮತ್ತಿತರ ವಿಷಯಗಳ ಬಗ್ಗೆ ಗಂಭೀರ ಚರ್ಚೆ ನಡೆಯುವ ನಿರೀಕ್ಷೆಯಿದೆ ಎಂದು ಮೂಲಗಳು ತಿಳಿಸಿವೆ.
ಸೌಜನ್ಯ: ಕನ್ನಡಪ್ರಭ