ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಜಾಗತಿಕ ಸುದ್ದಿ / ದುಬೈ: ಅಲ್ಲಾಡುತ್ತಿರುವ ಆರ್ಥಿಕ ಸ್ಥಂಬಗಳು - ನೆರವಿಗೆ ಬರುವುದೇ ಅಬುಧಾಬಿ?

ದುಬೈ: ಅಲ್ಲಾಡುತ್ತಿರುವ ಆರ್ಥಿಕ ಸ್ಥಂಬಗಳು - ನೆರವಿಗೆ ಬರುವುದೇ ಅಬುಧಾಬಿ?

Sun, 29 Nov 2009 03:07:00  Office Staff   S.O. News Service
ದುಬೈ, ನವೆಂಬರ್ 28: ದುಬೈ ಎಂದಾಕ್ಷಣ ನಮಗೆ ಕಣ್ಣಿಗೆ ಕಟ್ಟುವುದು ಈಗಾಗಲೇ ತಲೆ ಎತ್ತಿ ನಿಂತಿರುವ ‘ಬುರ್ಜ್ ದುಬೈ’ನಂತಹ ಗಗನಚುಂಬಿ ಕಟ್ಟಡಗಳು. ಭವಿಷ್ಯದಲ್ಲಿ ನಿರ್ಮಾಣಗೊಳ್ಳಲಿರುವ ತಿರುಗುವ ಕಟ್ಟಡ, ಪಿರಮಿಡ್, ಕೋನಾಕೃತಿ ಹೀಗೆ ಊಹಿಸಲೂ ಅಸಾಧ್ಯವಾದ ಬಗೆ ಬಗೆಯ ವಾಸ್ತುಶಿಲ್ಪವುಳ್ಳ ಕಟ್ಟಡಗಳ ನೀಲ ನಕಾಶೆಗಳು. ಪೈಪೋಟಿಗೆ ಬಿದ್ದಂತೆ ಒಂದರ ಹಿಂದೊಂದು ವಿಶ್ವದಾಖಲೆ ಬರೆಯುವ ದೈತ್ಯ ಕಟ್ಟಡಗಳನ್ನು ನಿರ್ಮಿಸಲು ಪಣತೊಟ್ಟು ನಿಂತ ದುಬೈ ಶೇಖ್‌ಗಳು ಈಗ ಅಕ್ಷರಶಃ ‘ಶೇಕ್’ ಆಗಿದ್ದಾರೆ. ‘ಸೂರ್ಯ ಮುಳುಗದ ಸಾಮ್ರಾಜ್ಯ’ ಕಟ್ಟ ಹೊರಟ ದುಬೈನ ಪ್ರಮುಖ ಹಣಕಾಸು ಸಂಸ್ಥೆ ‘ದುಬೈ ವರ್ಲ್ಡ್’ ಸಾಲದ ಸುಳಿಗೆ ಸಿಲುಕಿದೆ. ಅಷ್ಟೇ ಅಲ್ಲ, ಆರ್ಥಿಕ ಹಿಂಜರಿತದಿಂದ ನಲುಗುತ್ತಿದ್ದ ಇಡೀ ಜಗತ್ತನ್ನೇ ಮತ್ತೆ ಕಂಗೆಡಿಸಿದೆ. ರಿಯಲ್ ಎಸ್ಟೇಟ್ ಹುಚ್ಚಿನಲ್ಲಿ ಅಕ್ಷರಶಃ ದೊರೆಯಂತೆ ಮೆರೆಯುತ್ತಿದ್ದ ದುಬೈ ಏಕಾ‌ಏಕಿ ಹೀಗೆ ಕಂಗಾಲಾಗಲು 
ಕಾರಣವೇನು? ದುಬೈ ಆರ್ಥಿಕ ವಿಪತ್ತಿನ ಕುರಿತು ಒಂದು ನೋಟ ಇಲ್ಲಿದೆ. 

ಏನಿದು ದುಬೈ ವರ್ಲ್ಡ್? 
ಇದು ಸಂಯುಕ್ತ ಅರಬ್ ಗಣರಾಜ್ಯ (ಯು‌ಎ‌ಇ) ದ ಒಡೆತನಕ್ಕೆ ಸೇರಿದ ಹಣಕಾಸು ಸಂಸ್ಥೆ. ಸರ್ಕಾರದಿಂದಲೇ ಕಾನೂನು ಬದ್ಧವಾಗಿ ಸ್ಥಾಪನೆಯಾದ ಈ ಹಣಕಾಸು ಸಂಸ್ಥೆ ೨೦೦೬ರ ಮಾ.೨ರಂದು ಅಸ್ತಿತ್ವಕ್ಕೆ ಬಂತು. ಉಪಾಧ್ಯಕ್ಷ ಮತ್ತು ಪ್ರಧಾನಿ ಶೇಕ್ ಮೊಹಮ್ಮದ್ ಬಿನ್ ರಶೀದ್ ಅಲ್ ಮಕ್ತೂಮ್ ದುಬೈ ವರ್ಲ್ಡ್ ಸ್ಥಾಪನೆಗೆ ಒಪ್ಪಿಗೆ ನೀಡಿದರು. ಇದು ಸಾರಿಗೆ ಮತ್ತು ಹಡಗು ನಿರ್ಮಾಣ, ನಗರಾಭಿವೃದ್ಧಿ, ಹಣಕಾಸು ಕ್ಷೇತ್ರದಲ್ಲಿ ವಿಚಾರದಲ್ಲಿ ನೆರವು ನೀಡುವ ಸಂಸ್ಥೆ. ಸದ್ಯ ಇದರ ಅಧ್ಯಕ್ಷ ಸುಲ್ತಾನ್ ಅಹ್ಮದ್ ಬಿನ್ ಸುಲಾಯೀಮ್. ತನ್ನ ವ್ಯವಹಾರದಿಂದ ದುಬೈ ಮತ್ತು ಸ್ಥಾಪನೆಯಾದ ಕೆಲವೇ ವರ್ಷಗಳಲ್ಲಿ ಅಂತಾರಾಷ್ಟ್ರೀಯವಾಗಿ ಬೇಗನೆ ಜನಪ್ರಿಯವಾಯಿತು. ಈ ಸಂಸ್ಧೆ ‘ದುಬೈ ವಲ್ಡ್‌ನಲ್ಲಿ ಸೂರ್ಯ ಮುಳುಗುವುಲ್ಲ’ಎಂಬ ಆಕರ್ಷಕ ಘೋಷ ವಾಕ್ಯವನ್ನೂ ಹೊಂದಿದೆ! ಯು‌ಎ‌ಇ ಮಾತ್ರವಲ್ಲ ವಿಶ್ವದ ೧೦೦ಕ್ಕೂ ಅಧಿಕ ಪ್ರಮುಖ ನಗರಗಳಲ್ಲಿ ಈ ಸಂಸ್ಥೆ ವಹಿವಾಟು ಹೊಂದಿದೆ ಎಂದರೆ ಅಚ್ಚರಿಯಾಗದಿರದು...! ವಿಶ್ವದ ಜನಪ್ರಿಯ ಕಂಪನಿಗಳು ಈ ಸರ್ಕಾರಿ ಸಂಸ್ಥೆಯೊಡನೆ ವ್ಯವಹರಿಸುತ್ತಿವೆ. 

ಏನಾಯ್ತು? 
ಕೆಲವೇ ದಿನಗಳ ಹಿಂದೆ, ಅಂದರೆ ನ.೨೫ರಂದು ದುಬೈ ಸರ್ಕಾರದಿಂದ ಜಗತ್ತಿಗೆ ಚಳಿ ಹುಟ್ಟಿಸುವಂಥ ಹೇಳಿಕೆ ಹೊರಬಿತ್ತು. ತಾನು ಮಾಡಿರುವ ೩.೭ ಲಕ್ಷ ಕೋಟಿ ರು. ಸಾಲದ ಮರುಪಾವತಿ ಮಾಡಲು ಸದ್ಯಕ್ಕೆ ಸಾಧ್ಯವಾಗದೇ ಹೋಗಬಹುದು ಎಂದು ದುಬೈ ತಿಳಿಸಿತು. ದುಬೈ ಸರ್ಕಾರಿ ಸ್ವಾಮ್ಯದ ದುಬೈ ವರ್ಲ್ಡ್ ಎಂಬ ಬೃಹತ್ ಉದ್ಯಮ ಕೂಟಕ್ಕೆ ಇರುವ ಸಾಲವೇ ೨.೮ ಲಕ್ಷ ಕೋಟಿ ರು. ಅದೂ ಕೂಡ ತಾನು ೬ ತಿಂಗಳವರೆಗೆ ಯಾವುದೇ ಸಾಲದ ಮರುಪಾವತಿ ಮಾಡದೇ ಹೋಗಬಹುದು ಎಂದು ಹಳಹಳಿಸಿತು. ದುಬೈ ವರ್ಲ್ಡ್‌ನ ಅಂಗ ಸಂಸ್ಥೆಯಾದ ನಖೀಲ್ ಎಂಬ ಕಟ್ಟಡ ನಿರ್ಮಾಣ ಸಂಸ್ಥೆಯದ್ದೂ ಇದೇ ಹಣೆಬರಹವಾಗಿತ್ತು. ದುಬೈನ ಆರ್ಥಿಕ ಕಂಬಗಳು ಅಲ್ಲಾಡುತ್ತಿರುವುದರ ಸೂಚನೆ ಇದಾಗಿತ್ತು. ಆರ್ಥಿಕ ಹಿಂಜರಿತದಿಂದ ಮೊದಲೇ ಕಂಗೆಟ್ಟಿದ್ದ ವಿಶ್ವಸಮುದಾಯ ಈಗ ದುಬೈ ಗೋಳು ನೋಡಿ ತತ್ತರಿಸಿತು. ದುಬೈನ ಸಿರಿವಂತಿಕೆಗೆ ತನ್ನ ಸಿರಿ ಸೇರಿಸಿದ್ದ ಅನೇಕರಿಗೆ ಭಯ ಆವರಿಸಿತು. ಸಾಲ ಕೊಟ್ಟವರು ಕೈಕೈ ಹಿಸುಕಿಕೊಳ್ಳುವಂತಾಯಿತು. ವಿಶ್ವದ ಷೇರುಪೇಟೆಗಳು ಒಂದೊಂದಾಗಿ ಕುಸಿಯತೊಡಗಿದವು. 

ಏಕೆ ಹೀಗಾಯ್ತು? 
ಯು‌ಎ‌ಇನ ೭ ಎಮಿರೇಟ್‌ಗಳಲ್ಲಿ ದುಬೈ ಕೂಡ ಒಂದು. ದುಬೈಗೆ ತನ್ನದೇ ಆದ ಸರ್ಕಾರವಿದೆ. ಇತರ ಅರಬ್ ಪಟ್ಟಣಗಳಂತೆ ದುಬೈ ತೈಲ ಸಂಪದ್ಭರಿತ ನಾಡಲ್ಲ. ಕೇವಲ ಪ್ರವಾಸೋದ್ಯಮ, ವ್ಯವಹಾರಗಳನ್ನು ನಂಬಿಕೊಂಡಂಥ ಪಕ್ಕಾ ವಾಣಿಜ್ಯ ನಗರಿ. ದುಬೈ ಸರ್ಕಾರದ ಆರ್ಥಿಕ ಬೆನ್ನೆಲುಬಾದ ದುಬೈ ವರ್ಲ್ಡ್ ವೈಭವೋಪೇತ ಕಟ್ಟಡ, ರಸ್ತೆ ಮೊದಲಾದ ಐಷಾರಾಮಿ ಸೌಲಭ್ಯಗಳನ್ನು ಒದಗಿಸಲು ಮತ್ತು ವಿಶ್ವದ ಜನರನ್ನು ದುಬೈನತ್ತ ಸೆಳೆಯಲು ಎಲ್ಲಿಲ್ಲದ ಕಸರತ್ತು ನಡೆಸಿತು. ನಾಲ್ಕು ವರ್ಷಗಳಿಂದಂತೂ ದುಬೈಗೆ ಎಗ್ಗಿಲ್ಲದೆ ಬಂಡವಾಳಗಳು ಬಂದು ಬಿದ್ದವು. ದುಬೈ ನೆಲದತ್ತ ಜಗತ್ತಿನ ಸಿರಿವಂತರ ಆಗಮನವಾಯಿತು. ರಿಯಲ್ ಎಸ್ಟೇಟ್ ವ್ಯವಹಾರಕ್ಕೆ ಬಂಪರ್ ಮಾರುಕಟ್ಟೆಯಾಯಿತು. ಆದರೆ, ಆರ್ಥಿಕ ಹಿಂಜರಿತದಿಂದಲೋ ಏನೋ ಇದ್ದಕ್ಕಿದ್ದಂತೆ ಜನರು ದುಬೈ ನೆಲಕ್ಕೆ ಬಂಡವಾಳ ಹಾಕಲು ಹಿಂಜರಿದರು. ರಿಯಲ್ ಎಸ್ಟೇಟ್ ಬಲೂನಿನಂತೆ ಠುಸ್ ಆಯಿತು. 
ಬಚಾವಾಗುವ ಸಾಧ್ಯತೆ ಇದೆ 
ದುಬೈ ಇಂಥ ಸ್ಥಿತಿ ತಲುಪಿದ್ದು ಇದೇ ಮೊದಲಲ್ಲ. ೧೯೯೯ರಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ದುಬೈನ ನೆರವಿಗೆ ಬಂದದ್ದು ಅಬುಧಾಬಿ. ದುಬೈನಂತೆ ಯು‌ಎ‌ಇಯ ಒಂದು ಎಮಿರೇಟ್ ಆಗಿರುವ ಅಬುಧಾಬಿ ಆಗ ೪.೬ ಸಾವಿರ ಕೋಟಿ ರು. ನೆರವು ಒದಗಿಸಿತ್ತು. ತೈಲ ಸಂಪನ್ಮೂಲಗಳಿಂದ ಸಂಪದ್ಭರಿತವಾಗಿರುವ ಅಬುಧಾಬಿ ಆರ್ಥಿಕವಾಗಿ ಬಹಳ ಸದೃಢವಾಗಿದೆ. ಈ ಬಾರಿಯೂ ಅದು ದುಬೈನ ಸಹಾಯಕ್ಕೆ ಬರುವ ಸಾಧ್ಯತೆ ಕಾಣುತ್ತಿದೆ. ಭಾನುವಾರ ಈ ಸಂಬಂಧ ಘೋಷಣೆ ನಡೆಯುವ ನಿರೀಕ್ಷೆಯಿದೆ. 

ಇದೊಂದು ಅಚ್ಚರಿ! 
ಕೆಲವೇ ವಾರಗಳ ಮೊದಲು ದುಬೈ ಸರ್ಕಾರ ಅಂತಾರಾಷ್ಟ್ರೀಯ ಬಂಡವಾಳ ಹೂಡಿಕೆದಾರರಿಗೆ ೧.೯ ಶತ ಕೋಟಿ ಡಾಲರ್ ಮೊತ್ತದಷ್ಟು ಬಾಂಡ್‌ಗಳನ್ನು ನೀಡಿತ್ತು. ದುಬೈನ ಆರ್ಥಿಕ ಸ್ಥಿತಿ ಪ್ರಬಲವಾಗಿದೆಯೆಂದೇ ಆಗ ಬಿಂಬಿಸಲಾಗಿತ್ತು. ಈಗ ಇದ್ದಕ್ಕಿದ್ದಂತೆ ಅದರ ಗೋಳಿನ ಮುಖ ಬಹಿರಂಗಗೊಂಡಿದ್ದು ಅಚ್ಚರಿಯಲ್ಲದೆ ಮತ್ತೇನು? 

ಉದ್ಯೋಗ ಖೋತಾ? 
ನಮ್ಮ ದೇಶಕ್ಕೆ ವಿಶೇಷವಾಗಿ ಹೇಳುವುದಾದರೆ ಯು‌ಎ‌ಇನಲ್ಲಿ ಉದ್ಯೋಗ ಕ್ಷೇತ್ರಕ್ಕೆ ಹೆಚ್ಚು ಧಕ್ಕೆಯಾಗುವ ಸಾಧ್ಯತೆ ಹೆಚ್ಚು. ಕೇರಳ, ತಮಿಳುನಾಡು ಮತ್ತು ಆಂಧ್ರಪ್ರದೇಶಗಳಿಂದ ಹೆಚ್ಚು ಮಂದಿ ಉದ್ಯೋಗಾಕಾಂಕ್ಷಿಗಳಾಗಿ ಯು‌ಎ‌ಇಗೆ ತೆರಳುವವರ ಸಂಖ್ಯೆ ಹೆಚ್ಚು. ಯು‌ಎ‌ಇನಲ್ಲಿ ಒಟ್ಟು ೬೦ ಲಕ್ಷ ಮಂದಿ ಇದ್ದಾರೆ. ಈ ಪೈಕಿ ೪೦ ಲಕ್ಷ ಮಂದಿ ವಲಸಿಗರು. ಇದರಲ್ಲೇ ೨೦ ಲಕ್ಷ ಮಂದಿ ಭಾರತೀಯರು, ಅದರಲ್ಲೂ ಶೇ.೬೦ ಮಂದಿ ಕೇರಳಿಗರು. ಪಾಕಿಸ್ತಾನದ ೧೦ ಲಕ್ಷ ಮಂದಿ ಇಲ್ಲಿ ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. ಕಳೆದ ವರ್ಷದ ಆರ್ಥಿಕ ಕುಸಿತದ ಪ್ರಭಾವದಿಂದ ಉನ್ನತ ಮಟ್ಟದ ಹುದ್ದೆಗಳ ಕ್ಷೇತ್ರಗಳು ಈಗಾಗಲೇ ನಲುಗಿವೆ. ಹೀಗಾಗಿ, ದುಬೈ ವರ್ಲ್ಡ್ ಕುಸಿತ ಮತ್ತಷ್ಟು ಪ್ರಭಾವ ಬೀರಲಿದೆ ಎನ್ನುತ್ತಾರೆ ವಿಶ್ಲೇಷಕರು. 

ಭಾರತಕ್ಕೆ ಏಕೆ ಆತಂಕ? 
೧೦ ಲಕ್ಷ ಭಾರತೀಯರು ದುಬೈ ಮತ್ತು ಯು‌ಎ‌ಇನಲ್ಲಿ ಉದ್ಯೋಗ. 
೮ ಶೇಕಡಾ ಭಾರತದ ತೈಲೇತರ ಉತ್ಪನ್ನಗಳ ರಫ್ತು ದುಬೈಗೆ. 
೧೨ ಶೇಕಡಾ ಯು‌ಎ‌ಇ, ದುಬೈನಿಂದ ಹಣ ವರ್ಗಾವಣೆ ಸೇವಾ ಶುಲ್ಕದಿಂದ ಆದಾಯ. 
೩.೫ ಶೇಕಡಾ ದುಬೈನಿಂದ ಭಾರತಕ್ಕೆ ಮಾಡುವ ತೈಲೇತರ ವಸ್ತುಗಳ ಆಮದು. 

ದುಬೈ ವರ್ಲ್ಡ್ ಬೆಂಗಳೂರು ಸಂಸ್ಥೆಗಳು ಸೇರಿದಂತೆ ಪ್ರಮುಖ ಕಂಪನಿಗಳೊಂದಿಗೆ ಒಪ್ಪಂದ ಮಾಡಿಕೊಂಡು ವ್ಯಾಪಾರ ವಹಿವಾಟು ನಡೆಸುತ್ತಿದೆ. ದುಬೈ ವರ್ಲ್ಡ್ ದಿವಾಳಿಯಾದರೆ ಈ ಎಲ್ಲಾ ವಹಿವಾಟು ಬಂದ್ ಆಗುವುದಂತೂ ಗ್ಯಾರಂಟಿ. 
ಬಿಡದಿ ಸಮೀಪ ೧೦,೦೦೦ ಎಕರೆ ಪ್ರದೇಶದಲ್ಲಿ ಟೌನ್‌ಶಿಪ್ ನಿರ್ಮಾಣಕ್ಕೆ ಟಾಟಾ ಇನ್ಫ್ರಾಸ್ಟ್ರಕ್ಚರ್ ಹಾಗೂ ರಿಯಲ್ ಎಸ್ಟೇಟ್ ಸಂಸ್ಥೆ ಡಿ‌ಎಲ್‌ಎಫ್ ಜೊತೆ ಒಪ್ಪಂದ. 
ಯು‌ಇ‌ಇನ ಅಲ್ ಫರ್ಜಾನ್‌ನಲ್ಲಿ ಭಾರತ್ ಹೊಟೇಲ್ಸ್ ಕಂಪನಿಯೊಂದಿಗೆ ಚೆನ್ನೈ ಕಂಟೈನರ್ ಟರ್ಮಿನಲ್ ಪ್ರೈ.ಲಿ ಎಂಬ ಸಂಸ್ಥೆಯನ್ನು ಜಂಟಿ ಸಹಭಾಗಿತ್ವದಲ್ಲಿ ನಡೆಸುತ್ತಿದೆ. 
ಟಾಟಾ ರಿಯಾಲಿಟಿ ಎಂಡ್ ಇನ್ಫ್ರಾಸ್ಟ್ರಕ್ಚರ್ ಜೊತೆಗೂಡಿ ಸಾಗಣೆ ಸಂಬಂಧಿ ಪಾರ್ಕ್ ಸ್ಥಾಪನೆ. 
ಕೊಚ್ಚಿಯಲ್ಲಿ ಅಂತಾರಾಷ್ಟ್ರೀಯ ಲಾಜಿಸ್ಟಿಕ್ಸ್ ಪಾರ್ಕ್. 
ದುಬೈ ವರ್ಲ್ಡ್‌ನ ಸಹಸಂಸ್ಥೆ ಡಿ.ಪಿ.ವರ್ಲ್ಡ್‌ನಿಂದ ಕೊಚ್ಚಿ ಸಮೀಪದ ವಲ್ಲಾರಪದಂನಲ್ಲಿ ಅಂತಾರಾಷ್ಟ್ರೀಯ ಸಾಗಣೆ ಟರ್ಮಿನಲ್ ನಿರ್ಮಾಣಕ್ಕಾಗಿ ೨,೧೧೮ ಕೋಟಿ ರು. ಹೂಡಿಕೆ. ಈ ಪೈಕಿ ಮೊದಲ ಹಂತದ ಯೋಜನೆ ಪೂರ್ಣ. 
ಮುಂಬೈನ ನಹವಾ ಶೇವಾ ಕಂಟೈನರ್ ಟರ್ಮಿನಲ್, ಕಾಂಡ್ಲಾ ಮತ್ತು ವಿಶಾಖಪಟ್ಟಣಂನಲ್ಲಿರುವ ಮುಂದ್ರಾ ಇಂಟರ್‌ನ್ಯಾಷನಲ್ ಟರ್ಮಿನಲ್‌ನಲ್ಲಿ ಹೂಡಿಕೆ. 
ಎಲ್ ಎಂಡ್ ಟಿ ಈ ಸಂಸ್ಥೆಯೊಂದಿಗೆ ದುಬೈನಲ್ಲಿ ೨ ಜಂಟಿ ಸಹಭಾಗಿತ್ವದ ಯೋಜನೆಗೆ ಚಾಲನೆ. 
ವಿಪ್ರೋ ಮತ್ತು ಇನ್ಫೋಸಿಸ್ ಕಂಪನಿಗಳಿಂದ ಅಲ್ಪ ಪ್ರಮಾಣದ ಹೂಡಿಕೆ. 
ಸುಮಾರು ೭೦೦೦ ಕೋಟಿ ರು.ಗಳಿಗೂ ಅಧಿಕ ಭಾರತೀಯ ಕಂಪನಿಗಳು ಯು‌ಎ‌ಇ ಮತ್ತು ದುಬೈನಲ್ಲಿ ವಿವಿಧ ಕ್ಷೇತ್ರಗಳಲ್ಲಿ ಹಣ ಹೂಡಿವೆ. 
ನಾಗಾರ್ಜುನ ಕನ್ಟ್ರ್ಸಕ್ಷನ್ಸ್, ಎಮ್ಮಾರ್ ಎಂಜಿ‌ಎಫ್, ಎಸ್ ಎಂಡ್ ಪಿ ಮತ್ತು ಮೂಡೀಸ್ ಕಟ್ ಕ್ರೆಡಿಟ್ ರೇಟಿಂಗ್ ಏಜೆನ್ಸಿ ಸೇರಿದಂತೆ ಪ್ರಮುಖ ಕಂಪನಿಗಳ ವಹಿವಾಟು. 
ಬ್ಯಾಂಕ್ ಆಫ್ ಬರೋಡಾ ಮತ್ತು ಭಾರತೀಯ ಸ್ಟೇಟ್ ಬ್ಯಾಂಕ್‌ಗಳಿಂದಲೂ ವಹಿವಾಟು. ಬ್ಯಾಂಕ್ ಆಫ್ ಬರೋಡಾ ಯು‌ಎ‌ಇನಲ್ಲಿ ೧೦, ೦೦೦ ಕೋಟಿ ರು.ಗಳಿಗಿಂತಲೂ ಹೆಚ್ಚು ವಹಿವಾಟು ಹೊಂದಿದೆ. 

ಇತ್ತೀಚಿನ ಕೆಲ ಬಿಕ್ಕಟ್ಟುಗಳು..... 
ಅರ್ಜೆಂಟೀನಾ ೨೦೦೧......೬.೮ ಲಕ್ಷ ಕೋಟಿ ರು. 
ಅರ್ಜೆಂಟೀನಾ ಬಿಕ್ಕಟ್ಟು ಇತ್ತೀಚಿನ ವರ್ಷಗಳಲ್ಲೇ ಅತಿ ದೈತ್ಯ ಪ್ರಮಾಣದ್ದಾಗಿದೆ. ೨೦೦೦ನೇ ಇಸವಿಯಲ್ಲಿ ಅರ್ಜೆಂಟೀನಾ ಹೂಡಿಕೆದಾರರ ವಿಶ್ವಾಸ ಕಳೆದುಕೊಂಡು ಜನ ಬ್ಯಾಂಕ್ ಖಾತೆಗಳಲ್ಲಿದ್ದ ದೊಡ್ಡ ದೊಡ್ಡ ಮೊತ್ತವನ್ನು ವಾಪಸ್ ಪಡೆಯತೊಡಗಿದರು. ೨೦೦೧ರ ಡಿಸೆಂಬರ್ ವೇಳೆಗೆ ಅರ್ಜೆಂಟೀನಾ ೬.೮ ಲಕ್ಷ ಕೋಟಿ ರು. ಸಾಲಕ್ಕೆ ಸಿಲುಕಿತು. ಕೊನೆಗೆ ಆರ್ಥಿಕ ಸುಧಾರಣೆ ಕಂಡಿತು. 

ರಷ್ಯಾ ೧೯೯೮.....................೩.೪ ಲಕ್ಷ ಕೋಟಿ ರು. 
೧೯೯೭ರಲ್ಲಿ ಆರಂಭಗೊಂಡ ಏಷ್ಯಾ ಹಣಕಾಸು ವಿಪತ್ತಿನ ಪರಿಣಾವಾಗಿ ೧೯೯೮ರಲ್ಲಿ ರಷ್ಯಾ ವಿಪತ್ತು ಶುರುವಾಯಿತು. ವಿಶ್ವ ಸರಕು ದರದಲ್ಲಿ ಕುಸಿತ ಕಾಣಿಸಿಕೊಂಡ ಪರಿಣಾಮ ಕಚ್ಚಾ ವಸ್ತುಗಳ ರಫ್ತನ್ನೇ ನಂಬಿದ ದೇಶಗಳಿಗೆ ಭಾರಿ ಹೊಡೆತ ಬಿತ್ತು. ೧೯೯೮ರ ಆಗಸ್ಟ್‌ನಲ್ಲಿ ರಷ್ಯಾ ಷೇರುಪೇಟೆ, ಬಾಂಡ್, ಕರೆನ್ಸಿ ಮಾರುಕಟ್ಟೆ ಪತನಗೊಂಡವು. 

ಭಾರತಕ್ಕೂ ಇತ್ತು ಭೀತಿ 
೧೯೯೧ರಲ್ಲಿ ಭಾರತವೂ ಬಾಕಿ ಪಾವತಿಸದ ಪಟ್ಟಿ ಸೇರುವ ಸನಿಹಕ್ಕೆ ಬಂದಿತ್ತು. ೧೯೯೧ ಜನವರಿಯಲ್ಲಿ ೫.೬ ಸಾವಿರ ಕೋಟಿ ರು.ನಷ್ಟಿದ್ದ ಭಾರತದ ವಿದೇಶಿ ವಿನಿಮಯ ಮೀಸಲು ಅದೇ ಜೂನ್ ವೇಳೆಗೆ ಅರ್ಧದಷ್ಟು ಇಳಿದಿತ್ತು. ಆದರೆ ತಕ್ಷಣ ಭಾರತ ಸರ್ಕಾರ ಐ‌ಎಂಎಫ್‌ನಲ್ಲಿ ೬೭ ಟನ್‌ನಷ್ಟು ಚಿನ್ನ ಅಡ ಇಟ್ಟು ೧ ಲಕ್ಷ ಕೋಟಿ ರು. ಸಾಲ ಎತ್ತಿತು. 

ವಿಶ್ವ ಮಾರುಕಟ್ಟೆಗೇಕೆ ಈಗ ಆತಂಕ? 
ಕಳೆದ ವರ್ಷದ ಮಹಾಕುಸಿತ ಅಲ್ಲಲ್ಲಿ ಕೊಂಚ ಚೇತರಿಕೆ ಕಾಣುತ್ತಿರುವಂತೆಯೇ ದುಬೈ ವರ್ಲ್ಡ್ ಕುಸಿತದಿಂದ ಆತಂಕದ ಕಾರ್ಮೋಡ. 
೩,೭೪,೦೦೦ ರು. ಮೌಲ್ಯದ ಸಾಲ ಮರು ಪಾವತಿಯಾಗದೆಂಬ ಭೀತಿ. 
ದುಬೈ ಸಂಕಟ ಪರಿಹಾರವಾಗದಿದ್ದರೆ ಆರ್ಜೆಂಟೀನಾದಲ್ಲಿ ೨೦೦೧ರಲ್ಲಿ ಸಂಭವಿಸಿದ ಮಹಾ ಆರ್ಥಿಕ ಸಂಕಷ್ಟದ ಬಳಿಕದ ಅತಿದೊಡ್ಡ ಪ್ರಕರಣ ಇದಾಗಲಿದೆ. 
ದುಬೈ ವರ್ಲ್ಡ್‌ಗೆ ಸಾಲ ನೀಡಿದ ೭೦ ಹಣಕಾಸು ಸಂಸ್ಥೆಗಳಿಗೂ ಆತಂಕ. 

ಪಾಕಿಸ್ತಾನ ೧೯೯೮............೭.೫ ಸಾವಿರ ಕೋಟಿ ರು. 
೧೯೯೮ರಲ್ಲಿ ಪಾಕಿಸ್ತಾನ ಸರ್ಕಾರ ಬಡ್ಡಿ ಪಾವತಿ ಬಾಕಿಯಿರಿಸಿಕೊಂಡಿತು. ಆದರೆ ೪ ದಿನಗಳ ಹೆಚ್ಚುವರಿ ಅವಧಿಯಲ್ಲಿ ಹಣ ಪಾವತಿ ಮಾಡುವ ಮೂಲಕ ಸಾಲ ಬಾಕಿಯಿರಿಸಿಕೊಂಡ ರಾಷ್ಟ್ರವೆಂಬ ಕುಖ್ಯಾತಿಯಿಂದ ತಪ್ಪಿಸಿಕೊಂಡಿತು. ಆದರೆ ಕೆಲವೇ ಸಮಯದಲ್ಲಿ ಮತ್ತೆ ಸಾಲ ಬಾಕಿಯಿರಿಸಿಕೊಂಡಿತು. ಆದಗ್ಯೂ ೧೯೯೯ರ ವೇಳೆಗೆ ವಿನಿಮಯ ಮೂಲಕ ಬಾಕಿ ಪಾವತಿಸಿದ ಕಾರಣ ಪರಿಸ್ಥಿತಿ ಸುಧಾರಿಸಿತ್ತು. 

ಮಾಹಿತಿ: ವಿಜಯಸಾರಥಿ, ಸದಾಶಿವ.ಕೆ 

ಸೌಜನ್ಯ: ಕನ್ನಡಪ್ರಭ

Share: