ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / 'ಪರ್ದಾ ಹೈ ಪರ್ದಾ' ಲೇಖನದ ವಿರುದ್ಧ ಪ್ರತಿಭಟನೆ: ಶಿವಮೊಗ್ಗ, ಹಾಸನ ಉದ್ರಿಕ್ತ; ಗೋಲಿಬಾರ್‌ಗೆ 2 ಬಲಿ

'ಪರ್ದಾ ಹೈ ಪರ್ದಾ' ಲೇಖನದ ವಿರುದ್ಧ ಪ್ರತಿಭಟನೆ: ಶಿವಮೊಗ್ಗ, ಹಾಸನ ಉದ್ರಿಕ್ತ; ಗೋಲಿಬಾರ್‌ಗೆ 2 ಬಲಿ

Tue, 02 Mar 2010 03:18:00  Office Staff   S.O. News Service

 

ಬೆಂಗಳೂರು, ಮಾ. 1 : ಪ್ರವಾದಿ ಮೊಹಮ್ಮದ್ ಪೈಗಂಬರರ ಬಗ್ಗೆ ಕನ್ನಡ ದಿನಪತ್ರಿಕೆಯೊಂದು ಪ್ರಕಟಿಸಿರುವ ಲೇಖನ ಅವಹೇಳನಕಾರಿಯಾಗಿದೆ ಎಂದು ಆಕ್ರೋಶಗೊಂಡಿರುವ ಮುಸ್ಲಿಂ ಕೋಮಿನವರು ರಾಜ್ಯದ ಹಾಸನ, ಶಿವಮೂಗ್ಗ, ದಾವಣಗೆರೆ, ಗೋಕಾಕ್ ನಗರಗಳಲ್ಲಿ ತೀವ್ರ ಪ್ರತಿಭಟನೆಗಿಳಿದಿದ್ದಾರೆ. ಶಿವಮೊಗ್ಗ ಮತ್ತು ಹಾಸನಗಳೆರಡೂ ಅಕ್ಷರಶಃ ಹೊತ್ತಿ ಉರಿಯುತ್ತಿವೆ.

 

 

 

ಶಿವಮೊಗ್ಗ ಮತ್ತು ಹಾಸನಗಳಲ್ಲಿ ಕಂಡಕಂಡಲ್ಲೆಲ್ಲ ಅಂಗಡಿ ಮುಂಗಟ್ಟುಗಳಿಗೆ, ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ. ಕಲ್ಲು ತೂರಾಟವಾಗುತ್ತಿದೆ. ಪ್ರತಿಭಟನೆ ಹಿಂಸಾತ್ಮಕ ರೂಪ ತಾಳಿದ್ದರಿಂದ ಪೊಲೀಸರು ಲಾಠಿ ಚಾರ್ಜ್ ಮಾಡಿದ್ದಾರೆ. ಕಲ್ಲುತೂರಾಟದಿಂದ ಪೊಲೀಸರಿಗೆ ಮತ್ತು ಸಾರ್ವಜನಿಕರಿಗೆ ಗಾಯಗಳಾಗಿವೆ. ಪ್ರತಿಭಟನಾಕಾರರು ಪೊಲೀಸರ ಮೇಲೆಯೂ ಪೆಟ್ರೋಲ್ ಬಾಂಬ್ ದಾಳಿ ನಡೆಸಿದ್ದಾರೆ. ಅಪರಾಧಿ ಪ್ರಕ್ರಿಯಾ ಸಂಹಿತೆಯ 144ನೇ ಸೆಕ್ಷನ್ ಅಡಿ ಕರ್ಫ್ಯೂ ಜಾರಿ ಮಾಡಲಾಗಿದ್ದರೂ ದೊಂಬಿ ಹತೋಟಿಗೆ ಬರುತ್ತಿಲ್ಲ. ಪ್ರತಿಭಟನಾಕಾರರು ಯಾರು, ಸಾರ್ವಜನಿಕರಾರು ಎಂಬುದನ್ನು ಲೆಕ್ಕಿಸದೆ ಲಾಠಿ ರುಚಿ ತೋರಿದ್ದರಿಂದ ಕೆಲ ಸಾರ್ವಜನಿಕರೂ ಗಾಯಗೊಂಡಿದ್ದಾರೆ.

 

 

 


1_shimoga_2.jpg

1_shimoga_3.jpg

1_shimoga_4.jpg

1_shimoga_5.jpg

 

 

ಗೋಲಿಬಾರ್: ಇತ್ತೀಚಿನ ವರದಿಗಳ ಪ್ರಕಾರ ಶಿವಮೊಗ್ಗದ ಎಂಸಿಕೆ ರಸ್ತೆಯಲ್ಲಿ ನಡೆಸಿದ ಗೋಲಿಬಾರ್ ನಲ್ಲಿ ಇಬ್ಬರು ಮೃತಪಟ್ಟಿದು, ನಾಲ್ವರು ಗಾಯಗೊಂಡಿದ್ದಾರೆ.

 

ಹಾಸನದಲ್ಲಿ ಬೈಕುಗಳು, ಅಟೋಗಳು, ಟ್ಯಾಕ್ಸಿಗಳಿಗೆ ಬೆಂಕಿ ಹಚ್ಚಲಾಗಿದೆ. ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಹಾಸನ ಮತ್ತು ಶಿವಮೂಗ್ಗದಲ್ಲಿ ಮೂರು ದಿನಗಳ ಕಾಲ ನಿಷೇದಾಜ್ಞೆ ಜಾರಿಗೊಳಿಸಲಾಗಿದೆ.

 

ಕನ್ನಡಪ್ರಭ ದಿನಪತ್ರಿಕೆಯ ಭಾನುವಾರ ಸಂಚಿಕೆಯ ಸಾಪ್ತಾಹಿಕ ಪ್ರಭದಲ್ಲಿ ತಸ್ಲೀಮಾ ನಸ್ರೀನ್ ಅವರ ಲೇಖನವನ್ನು 'ಪರ್ದಾ ಹೈ ಪರ್ದಾ' ಎಂಬ ಶೀರ್ಷಕೆಯಡಿಯಲ್ಲಿ ಲೇಖನವನ್ನು ಪ್ರಕಟಿಸಲಾಗಿತ್ತು. ಬುರ್ಖಾಗೆ ಸಂಬಂಧಿಸಿದ ಲೇಖನ ಇದಾಗಿದ್ದು, ಬುರ್ಖಾ ಧರಿಸುವ ಮುಸ್ಲಿಂ ಮಹಿಳೆಯರು ಅನುಭವಿಸುತ್ತಿರುವ ಯಾತನೆಗೆ ಕನ್ನಡಿ ಹಿಡಿಯುವಂತಿರುವ ಲೇಖನ ಇದಾಗಿದೆ. ಇದನ್ನು ಪ್ರಕಟಿಸಿದ್ದಕ್ಕೆ ಆಕ್ರೋಶಗೊಂಡಿರುವ ಮುಸ್ಲಿಮರು ಪ್ರತಿಭಟನೆಗಿಳಿದಿದ್ದಾರೆ.

 

 

 

 

ಹಾಸನದ ಆಜಾದ್ ನಗರ, ಸುಭಾಶ್ ನಗರ ಮತ್ತು ಹಮೀದ್ ಮೊಹಲ್ಲಾ ಸೇರಿದಂತೆ ಒಂದು ಕೋಮಿಗೆ ಸೇರಿದ ಜನರು ವಾಸಿಸುವ ಬಡಾವಣೆಯಲ್ಲಿ ಹೆಚ್ಚಿನ ಪ್ರತಿಭಟನೆ ನಡೆದಿದೆ. ಈ ಪ್ರದೇಶದಲ್ಲಿ ಹೆಚ್ಚಿನ ಬಂದೋಬಸ್ತ್ ನಿಯೋಜಿಸಲಾಗಿದೆ. ಪ್ರತಿಭಟನೆ ವಿಕೋಪಕ್ಕೆ ತಿರುಗಿ ಬಸ್ಸುಗಳ ಮೇಲೆ ಕಲ್ಲು ಆರಂಭವಾಯಿತು. ಮುಂಜಾಗ್ರತಾ ಕ್ರಮವಾಗಿ ಬಸ್ ಸಂಚಾರ ಸ್ಥಗಿತಗೊಳಿಸಲಾಗಿದೆ. ಅಂಗಡಿ ಮುಂಗಟ್ಟುಗಳನ್ನು ಮುಚ್ಚಲಾಗಿದೆ. ಹಾಸನ ಜಿಲ್ಲಾ ವರಿಷ್ಠಾಧಿಕಾರಿ ಶರತ್ ಚಂದ್ರ ಅವರು ಮೇಲುಸ್ತುವಾರಿ ವಹಿಸಿದ್ದು, ಸೂಕ್ಷ್ಮಸ್ಥಳದಲ್ಲಿ ಮೊಕ್ಕಾಂ ಹೂಡಿದ್ದಾರೆ. ಒಂಬತ್ತು ಜನರು ಗಾಯಗೊಂಡಿದ್ದಾರೆ.

 

 

 

 

ಶಿವಮೊಗ್ಗದಲ್ಲೂ ನಿಷೇಧಾಜ್ಞೆ ಜಾರಿ

 

 

ಶಿವಮೊಗ್ಗದಲ್ಲಿಯೂ ಸುಮಾರು 16 ಬೈಕುಗಳಿಗೆ ಬೆಂಕಿ ಇಡಲಾಗಿದೆ. ಅಲ್ಲಿನ ಪರಿಸ್ಥಿತಿಯೂ ಕೈಮೀರತೊಡಗಿದ್ದು, ಮೂರು ದಿನಗಳ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಒಂದು ಕೋಮಿನ ಉದ್ರಿಕ್ತರ ಗುಂಪೊಂದು ಸಾರ್ವಜನಿಕರ ಮೇಲೆ ಹಲ್ಲೆ ನಡೆಸುತ್ತಿದೆ. ಹಳ್ಳಿಗಳಿಂದ ಬಂದಿರುವ ಜನರಿಗೆ ಏನು ನಡೆಯುತ್ತಿದೆ ಎನ್ನುವುದೇ ತಿಳಿಯುತ್ತಿಲ್ಲ. ಒಟ್ಟಿನಲ್ಲಿ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ.

 

 

 

ಅಂಗಡಿ ಮುಂಗಟ್ಟುಗಳನ್ನು ಮುಚ್ಚಲಾಗಿದೆ. ಭಾರಿ ಬಿಗಿ ಬಂದೋಬಸ್ತ್ ನಿಯೋಜಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ನಗರದ ಸೀಗೇಹಳ್ಳಿಯಲ್ಲಿ ದುಷ್ಕರ್ಮಿಗಳು ವಾಹನಗಳಿಗೆ ಬೆಂಕಿ ಹಚ್ಚಿದ್ದು, ಪೆಟ್ರೋಲ್ ಬಾಂಬ್ ಎಸೆದಿದ್ದಾರೆ. ನೆಹರೂ ರಸ್ತೆಯ ಬಟ್ಟೆ ಅಂಗಡಿಗೆ ಬೆಂಕಿ ಹಚ್ಚಲಾಗಿದೆ. ಗುಂಪು ಚೆದುರಿಸಲು ಪೊಲೀಸರು ಲಾಠಿ ಚಾರ್ಜ್ ನಡೆಸಿದ್ದು, ಈವರೆಗೆ 15 ಮಂದಿ ಗಾಯಗೊಂಡಿದ್ದಾರೆ. ವರದಿ ಮಾಡಲು ಬಂದ ಮಾಧ್ಯಮ ಪ್ರತಿನಿಧಿಗಳ ಮೇಲೂ ಹಲ್ಲೆಗಳಾಗಿವೆ.

 

 

 

 

ಗೋಕಾಕ್ ನಲ್ಲಿ ಪ್ರಾರ್ಥನಾ ಮಂದಿರದ ಮೇಲೆ ಕಲ್ಲು

 

 

ಪ್ರಾರ್ಥನಾ ಮಂದಿರದ ಮೇಲೆ ಕಿಡಗೇಡಿಗಳು ಕಲ್ಲು ತೂರಾಟ ನಡೆಸಿದ್ದಾರೆಂದು ಒಂದು ಕೋಮಿನ ಗುಂಪೊಂದು ಪ್ರತಿಭಟನೆ ಆರಂಭಿಸಿ, ಬಸ್ಸುಗಳ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ ಮತ್ತು ಬೈಕುಗಳಿಗೆ ಬೆಂಕಿ ಹಚ್ಚಿದ್ದಾರೆ. ಜನಜೀವನ ಮತ್ತು ಸಂಚಾರ ವ್ಯವಸ್ತೆ ಅಸ್ತವ್ಯಸ್ತಗೊಂಡಿದೆ. ಮುಂಜಾಗ್ರತಾ ಕ್ರಮವಾಗಿ ಮೂರು ದಿನಗಳ ಕಾಲ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಆದರೆ, ಪರಿಸ್ಥಿತಿ ಹತೋಟಿಗೆ ಬಂದಿದೆ. 25 ಮಂದಿಯನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

 

 

 

 

 

ಹಾಸನದಲ್ಲಿ ಅಂಗಡಿಗೆ ಬೆಂಕಿ:

 

ಲೇಖನದ ವಿರುದ್ಧ ಹಾಸನದಲ್ಲಿಯೂ ಮುಸ್ಲಿಂ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿದ್ದು, ನಗರದ ಕಟ್ಟಿನಕೆರೆಯ ಮಾರ್ಕೆಟ್ ಸಮೀಪದ ಚಪ್ಪಲಿ ಅಂಗಡಿಯೊಂದಕ್ಕೆ ಬೆಂಕಿ ಹಚ್ಚಿದ ಘಟನೆ ಸೋಮವಾರ ನಡೆದಿದೆ. ಲೇಖನದ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಮುಸ್ಲಿಂ ಸಂಘಟನೆಗಳು ಈ ಸಂದರ್ಭದಲ್ಲಿ ಆಗ್ರಹಿಸಿವೆ.

 

 

ಹೋಳಿ ಹಬ್ಬದಂದು ಶಿವಮೊಗ್ಗದಲ್ಲಿ ರಕ್ತದೋಕುಳಿ

 

 

ಶಿವಮೊಗ್ಗ, ಫೆ. 1 : ಶಿವಮೊಗ್ಗ ದಲ್ಲಿ ಭುಗಿಲೆದ್ದಿರುವ ಕೋಮುಗಲಭೆಗೆ ನಗರದ ಹೊರಗಡೆಯಿಂದ ಸಾವಿರಾರು ಸಂಖ್ಯೆಯಲ್ಲಿ ಬಂದ ಕಿಡಿಗೇಡಿಗಳು ಕಿಡಿ ಹಚ್ಚಿದ್ದಾರೆನ್ನಲಾಗಿದೆ.

 

ಕೋಮುಸೌಹಾರ್ದತೆಯ ಸಂಕೇತವಾಗಿದ್ದ ಸಂಭ್ರಮದ ಹೋಳಿ ಹಬ್ಬದ ಬಣ್ಣದೋಕುಳಿ ಬದಲಾಗಿ ನಡೆದ ರಕ್ತದೋಕುಳಿ ನಗರದಾದ್ಯಂತ ಕರಾಳ ಛಾಯೆ ಮೂಡಿಸಿದೆ.

 

ಮಾರ್ಚ್ 7ರಂದು ನಗರದಲ್ಲಿ ಬೃಹತ್ ಹಿಂದೂ ಸಮಾವೇಶ ನಡೆಯುತ್ತಿದೆ. ಅದರಲ್ಲಿ ಭಾಗವಹಿಸಲು ಪ್ರವೀಣ್ ತೋಗಾಡಿಯಾ ಬರುತ್ತಿದ್ದಾರೆ. ಆ ಸಮಾವೇಶಕ್ಕೆ ಕಲ್ಲು ಹಾಕಲು ಹೊರಗಿನಿಂದ ಬಂದಿರುವ ಜನ, ಕನ್ನಡಪ್ರಭದಲ್ಲಿ ಪೈಗಂಬರ್ ವಿರುದ್ಧವಾಗಿ ಬಂದಿರುವ ಲೇಖನವನ್ನೇ ನೆಪವಾಗಿಟ್ಟುಕೊಂಡು ಕೋಮುಗಲಭೆ ಎಬ್ಬಿಸಿದೆ. ಇದರ ಹಿಂದೆ ರಾಜಕೀಯ ದುರುದ್ದೇಶವಿದೆ ಎಂದು ಹಿಂದೂ ಸಂಘಟನೆ ಆರೋಪಿಸಿದೆ.

 

 

ಪರಿಸ್ಥಿತಿ ಒಂದು ಪ್ರದೇಶದಲ್ಲಿ ನಿಯಂತ್ರಣಕ್ಕೆ ಬರುತ್ತಿದ್ದಂತೆ ಮತ್ತೊಂದು ಪ್ರದೇಶದಲ್ಲಿ ಗಲಭೆಗಳಾಗುತ್ತಿವೆ. ಕಂಡಕಂಡಲ್ಲೆಲ್ಲ ಹಿಂಸಾಚಾರಕ್ಕಿಳಿದಿರುವ ಸಾವಿರಾರು ಸಂಖ್ಯೆಯಲ್ಲಿನ ಜನರನ್ನು ಹತ್ತಿಕ್ಕುವಲ್ಲಿ ನೂರಾರು ಸಂಖ್ಯೆಯಲ್ಲಿದ್ದ ಪೊಲೀಸರು ಹೆಣಗಾಡುತ್ತಿದ್ದಾರೆ. ಶಾಂತಿಯನ್ನು ಕದಡಲೆಂದು ಬೇಕಂತಲೇ ಒಂದು ಕೋಮಿನವರು ಸಾವಿರಾರು ಸಂಖ್ಯೆಯಲ್ಲಿ ಕಿಡಿಗೇಡಿಗಳನ್ನು ಕರೆತಂದಿದ್ದಾರೆ ಎನ್ನಲಾಗಿದೆ.

 

 

ಇಬ್ಬರು ಬಲಿ : ಪರಿಸ್ಥಿತಿ ಕೈಮೀರಿದ್ದರಿಂದ ಪೊಲೀಸರು ನಡೆಸಿದ ಗೋಲಿಬಾರಿನಲ್ಲಿ ಇಬ್ಬರು ಬಲಿಯಾಗಿದ್ದಾರೆ, ನಾಲ್ವರು ಗಾಯಗೊಂಡಿದ್ದಾರೆ. ಗಲಭೆಯಲ್ಲಿ ಇಪ್ಪತ್ತಕ್ಕೂ ಹೆಚ್ಚಿನ ವಾಹನಗಳು ಭಸ್ಮವಾಗಿವೆ. ಹಿಂದೂ ಮತ್ತು ಮುಸ್ಲಿಂ ಕೋಮಿಗೆ ಸೇರಿದ ಅನೇಕ ಅಂಗಡಿಗಳಿಗೆ, ಮನೆಗಳಿಗೆ ಬೆಂಕಿ ಹಚ್ಚಲಾಗಿದೆ. ಎಂಪಿಕೆ ರಸ್ತೆ, ಗಾಂಧಿ ಬಜಾರ್, ಲಷ್ಕರ್ ಮೊಹಲ್ಲಾ, ನೆಹರೂ ಪಾರ್ಕ್ ಪ್ರದೇಶಗಳಲ್ಲಿ ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ.

 

 

ಪತ್ರಕರ್ತರ ಮೇಲೆ ಹಲ್ಲೆ : ಗಲಭೆಯ ವರದಿ ಮಾಡುತ್ತಿದ್ದ ವಿವಿಧ ಪತ್ರಿಕೆಗಳ ವರದಿಗಾರ ಮೇಲೆ ಮತ್ತು ಛಾಯಾಪತ್ರಕರ್ತರ ಮೇಲೆ ಕೂಡ ಹಲ್ಲೆ ಮಾಡಲಾಗಿದೆ. ಸುವರ್ಣ ಚಾನಲ್ಲಿನ ರಾಜೇಶ್ ಕಾಮತ್, ವಿಜಯ ಕರ್ನಾಟಕದ ಲಿಂಗನಗೌಡ ಮತ್ತು ಸಂಜೆವಾಣಿಯ ರೇಣುಕೇಶ್ ಅವರ ಮೇಲೆ ಪ್ರತಿಭಟನಾಕಾರರು ದೊಣ್ಣೆಗಳಿಂದ ದಾಳಿ ನಡೆಸಿದ್ದರಿಂದ ಅವರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ರಾಜೇಶ್ ಕಾಮತ್ ಅವರ ತಲೆಗೆ ತೀವ್ರವಾಗಿ ಪೆಟ್ಟುಬಿದ್ದಿದೆ.

 

 

ಗಾಳಿ ಸುದ್ದಿ : ಗಲಭೆಯ ಸುದ್ದಿ ಊರಲ್ಲೆಲ್ಲ ಹಬ್ಬತ್ತಿದ್ದಂತೆ ಮಕ್ಕಳನ್ನು ಶಾಲೆಗೆ ಕಳುಹಿಸಿದ ಪಾಲಕರು ಕೂಡ ಚಿಂತಾಕ್ರಾಂತರಾಗಿದ್ದರು. ಕೆಲ ಹಿಂದೂ ಶಾಲಾ ಬಾಲಕಿಯರನ್ನು ಅಪಹರಿಸಲಾಗಿದೆ ಎಂಬ ಗಾಳಿ ಸುದ್ದಿಯೂ ಹಬ್ಬಿದೆ. ಆದರೆ, ಈ ಗಾಳಿ ಸುದ್ದಿಗಳಿಗೆ ಕಿವಿಗೊಡಬಾರದು, ಪಾಲಕರು ಮಕ್ಕಳ ಬಗ್ಗೆ ಅನಗತ್ಯವಾಗಿ ಚಿಂತಿಸಬಾರದೆಂದು ಜಿಲ್ಲಾ ಪೊಲೀಸ್ ಆಡಳಿತ ಮನವಿ ಮಾಡಿದೆ.

 

 

ಶಾಲಾ-ಕಾಲೇಜಿ ರಜಾ : ನಗರದಾದ್ಯಂತ ಮೂರು ದಿನಗಳ ಕಾಲ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಎಲ್ಲೆಡೆ ಅಂಗಡಿಗಳನ್ನು ಮುಚ್ಚಲಾಗಿದೆ. ಬಸ್ ಸಂಚಾರ ಸಂಪೂರ್ಣವಾಗಿ ಸ್ಥಗಿತವಾಗಿದೆ. ತೀವ್ರ ಆತಂಕಕ್ಕೊಳಗಾಗಿರುವ ಜನತೆ ಮನೆಯಿಂದ ಹೊರಬರಲು ಹೆದರುತ್ತಿದ್ದಾರೆ. ಮಂಗಳವಾರ, ಮಾ.2ರಂದು ಎಲ್ಲ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಪಂಕಜ್ ಕುಮಾರ್ ಪಾಂಡೆ ಆದೇಶ ಹೊರಡಿಸಿದ್ದಾರೆ.

 

 

ಹಾಸನ ಧಗಧಗ : ಅವಹೇಳನಕಾರಿ ಎಂಬು ಬಿಂಬಿಸಲಾಗಿರುವ ವರದಿ ಹಾಸನ ಮತ್ತು ದಾವಣಗೆರೆಯಲ್ಲಿಯೂ ಪ್ರತಿಭಟನೆಗೆ ಮತ್ತು ಹಿಂಸಾಚಾರಕ್ಕೆ ಕಾರಣವಾಗಿದೆ. ನಗರದಲ್ಲಿ ಅನೇಕ ವಾಹನಗಳಿಗೆ ಬೆಂಕಿ ಇಡಲಾಗಿದೆ. ಅಂಗಡಿ ಮುಂಗಟ್ಟುಗಳು ಕೂಡ ಕೋಮು ಕೆನ್ನಾಲಗೆಯಲ್ಲಿ ಬೂದಿಯಾಗಿವೆ. ಎರಡು ನಗರಗಳಲ್ಲಿಯೂ ಜನಜೀವನ ಸಂಪೂರ್ಣವಾಗಿ ಅಸ್ತವ್ಯಸ್ತವಾಗಿದೆ. ಮೂರು ದಿನಗಳ ಕಾಲ ನಿಷೇಧಾಜ್ಞೆ ಜಾರಿಮಾಡಲಾಗಿದೆ.

 

 

ಯಡಿಯೂರಪ್ಪ ಮನವಿ : ಯಾವುದೇ ಕೋಮಿನ ಭಾವನೆಗಳಿಗೆ ಧಕ್ಕೆ ತರುವಂಥ ಲೇಖನಗಳು ಬಂದರೆ ಅವರು ಸಿಡಿದೇಳುವುದು ಸಹಜ. ಆದರೆ, ಜನ ಸಂಯಮದಿಂದ ವರ್ತಿಸಬೇಕು. ಯಾವುದೇ ಆಸ್ತಿಪಾಸ್ತಿಗೆ ಹಾನಿ ಮಾಡಬಾರದು ಎಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಜನತೆಯಲ್ಲಿ ಮನವಿ ಮಾಡಿದ್ದಾರೆ.

 

 

ಇಂಥದೇ ಮತ್ತೊಂದು ಘಟನೆ : 1986ನೇ ಇಸ್ವಿಯಲ್ಲಿ ಕರ್ನಾಟಕದಲ್ಲಿ ಇದೇ ಬಗೆಯ ಒಂದು ಘಟನೆ ಸಂಭವಿಸಿತ್ತು. ಡೆಕ್ಕನ್ ಹೆರಾಲ್ಡ್ ಪತ್ರಿಕೆಯ ಸಾಪ್ತಾಹಿಕ ವಿಭಾಗದಲ್ಲಿ ಪ್ರಕಟವಾದ ಒಂದು ಕಥೆಗೆ ಪತ್ರಿಕೆ ಕೊಟ್ಟಿದ್ದ ಶೀರ್ಷಿಕೆ ಕೋಲಾಹಲಕ್ಕೆ ಕಾರಣವಾಗಿತ್ತು. ಪತ್ರಿಕೆಯ ಶೀರ್ಷಿಕೆಯನ್ನು ತಪ್ಪಾಗಿ ಭಾವಿಸಿದ ಮುಸ್ಲಿಂ ಜನತೆ ರೊಚ್ಚಿಗೆದ್ದು ಗಲಭೆ ಉಂಟುಮಾಡಿದ್ದರು. ಪತ್ರಿಕೆಯ ನ್ಯೂಸ್ ಪ್ರಿಂಟ್ ಗೋದಾಮಿಗೆ ನುಗ್ಗಿ ಬೆಂಕಿ ಹಚ್ಚಲು ಪ್ರಯತ್ನಿಸಿದ ಗಲಭೆಕೋರರನ್ನು ಚದುರಿಸಲು ಪೊಲೀಸರು ಗುಂಡು ಹಾರಿಸಿದ್ದರು. ಈ ಗುಂಡಿಗೆ ನಾಲ್ಕು ಜನ ಬಲಿಯಾಗಿದ್ದರು. ಕೆಲಕಾಲ ಪತ್ರಿಕೆ ಪ್ರಕಟಣೆಯನ್ನು ನಿಲ್ಲಿಸಿತ್ತು.

 

 


Share: