ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಕಾರವಾರ: ಮನೆಯ ಸುತ್ತಮುತ್ತ ಡೆಂಗ್ಯೂ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳಿ : ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ

ಕಾರವಾರ: ಮನೆಯ ಸುತ್ತಮುತ್ತ ಡೆಂಗ್ಯೂ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳಿ : ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ

Fri, 12 Jul 2024 01:05:55  Office Staff   S O News

ಕಾರವಾರ: ಡೆಂಗ್ಯೂ ರೋಗ ನಿಯಂತ್ರಣ ಕುರಿತಂತೆ ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸುವ ಎಲ್ಲಾ ನಿಯಂತ್ರಣ ಕ್ರಮಗಳನ್ನು ಸಾರ್ವಜನಿಕರು ತಮ್ಮ ಮನೆಯ ಒಳಗೆ ಮತ್ತು ಮನೆಯ ಸುತಮುತ್ತಲಿನ ಅವರಣದಲ್ಲಿ ತಪ್ಪದೇ ಅಳವಡಿಸಿಕೊಳ್ಳ್ಳುವ ಮೂಲಕ ಜಿಲ್ಲೆಯಲ್ಲಿ ಡೆಂಗ್ಯೂ ಉಲ್ಬಣಗೊಳ್ಳದಂತೆ ತಡೆಯುವ ಆರೋಗ್ಯ ಇಲಾಖೆಯ ಕಾರ್ಯಕ್ರಮಗಳಿಗೆ ಹೆಚ್ಚಿನ ಸಹಕಾರ ನೀಡುವಂತೆ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ತಿಳಿಸಿದರು.

ಅವರು ಶುಕ್ರವಾರ, ಈಡಿಸ್ ಲಾರ್ವಾ ಉತ್ಪತ್ತಿ ತಾಣಗಳನ್ನು ನಾಶಪಡಿಸುವ ಚಟುವಟಿಕೆಯ ಅಂಗವಾಗಿ, ಕಾರವಾರದ ಅರ್ಜುನ್ ಟಾಕೀಸ್ ಬಳಿಯಲ್ಲಿನ ಮನೆಗಳಿಗೆ ಭೇಟಿ ನೀಡಿ, ಸಾರ್ವಜನಿಕರಿಗೆ ಡೆಂಗ್ಯೂ ನಿಯಂತ್ರಣ ಕ್ರಮಗಳ ಬಗ್ಗೆ ಜಾಗೃತಿ ಮೂಡಿಸಿದರು. 

ಸಾರ್ವಜನಿಕರು ತಮ್ಮ ಮನೆಯ ಸುತ್ತಮುತ್ತ ನೀರು ನಿಲ್ಲದಂತೆ ಎಚ್ಚರಿಕೆ ವಹಿಸಿ, ಸ್ವಚ್ಚತೆಯನ್ನು ಕಾಪಾಡಿಕೊಳ್ಳಬೇಕು. ಮನೆಯಲ್ಲಿನ ಅಲಂಕಾರಿಕ ಕುಂಡಗಳಲ್ಲಿ ನೀರು ನಿಲ್ಲದಂತೆ ಮತ್ತು ಮನೆಯ ಒಳಗೆ ಫ್ರಿಡ್ಜ್ಗಳ ಕೆಳಗೆ ಸಹ ನೀರು ಶೇಖರವಾಗದಂತೆ ಎಚ್ಚರವಹಿಸಬೇಕು. ಡ್ರಮ್, ಬ್ಯಾರಲ್‌ಗಳಲ್ಲಿ ತುಂಬಿರುವ ನೀರನ್ನು ಆಗಾಗ್ಗೆ ಬದಲಾಯಿಸುವ ಮೂಲಕ ಸೊಳ್ಳೆಗಳು ಮೊಟ್ಟಗಳನ್ನು ಇಡದಂತೆ ಮತ್ತು ಈಗಾಗಲೇ ಇಟ್ಟಿರುವ ಮೊಟ್ಟೆಗಳನ್ನು ನಾಶ ಮಾಡುವ ಮೂಲಕ ಡೆಂಗ್ಯೂ ಉಲ್ಬಣಗೊಳ್ಳುವುದನ್ನು ತಡೆಯಲು ಸಾಧ್ಯವಿದೆ. ಜಿಲ್ಲೆಯ ಸಾರ್ವಜನಿಕರು ಅರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸುವ ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸುವ ಮೂಲಕ ಜಿಲ್ಲೆಯಲ್ಲಿ ಡೆಂಗ್ಯೂ ನಿಯಂತ್ರಣ ಕಾರ್ಯಕ್ಕೆ ಸಹಕರಿಸುವಂತೆ ತಿಳಿಸಿದರು. 

ನಗರ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ಮತ್ತು ಆರೋಗ್ಯ ಇಲಾಖೆಯ ಅಧಿಕಾರಿಗಳು ಡೆಂಗ್ಯೂ ನಿಯಂತ್ರಣ ಕ್ರಮಗಳ ಬಗ್ಗೆ ಜಿಲ್ಲೆಯಾದ್ಯಂತ ಸಾರ್ವಜನಿಕರಿಗೆ ಹೆಚ್ಚಿನ ಅರಿವು ಮೂಡಿಸುವಂತೆ ತಿಳಿಸಿದ ಜಿಲ್ಲಾಧಿಕಾರಿಗಳು, ಈ ಎಲ್ಲಾ ಕ್ರಮಗಳು ಜಿಲ್ಲೆಯಲ್ಲಿ ಕಟ್ಟುನಿಟ್ಟಾಗಿ ಅನುಷ್ಠಾನಗೊಳ್ಳುವಂತೆ ನೋಡಿಕೊಳ್ಳಬೇಕು ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಈಶ್ವರ ಕುಮಾರ್ ಕಾಂದೂ, ಕಾರವಾರ ಉಪ ವಿಭಾಗಾಧಿಕಾರಿ ಕನಿಷ್ಕ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ (ಪ್ರ) ಡಾ. ನಟರಾಜ್, ತಹಸೀಲ್ದಾರ್ ನಿಶ್ಚಲ್ ನರೋನ್ಹ, ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ. ರಮೇಶ ರಾವ್ ಹಾಗೂ ನಗರಸಭೆಯ ಅಧಿಕಾರಿಗಳು ಇದ್ದರು.


Share: