ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ನೆಲ್ಯಾಡಿ: ಸೌದಿ ಅರೇಬಿಯಾದಲ್ಲಿ ಬಂಧನಕ್ಕೊಳಗಾಗಿರುವ ಸುಲೈಮಾನ್ ಕುಟುಂಬಕ್ಕೆ ನೆರವು - ಮೆರೆದ ಮಾನವೀಯತೆ

ನೆಲ್ಯಾಡಿ: ಸೌದಿ ಅರೇಬಿಯಾದಲ್ಲಿ ಬಂಧನಕ್ಕೊಳಗಾಗಿರುವ ಸುಲೈಮಾನ್ ಕುಟುಂಬಕ್ಕೆ ನೆರವು - ಮೆರೆದ ಮಾನವೀಯತೆ

Wed, 30 Sep 2009 02:50:00  Office Staff   S.O. News Service
ನೆಲ್ಯಾಡಿ :ಸೆ -೨೮: ಸೌದಿ ಅರೇಬಿಯಾ ದೇಶದಲ್ಲಿ ಟ್ರಕ್ ಚಾಲಕನಾಗಿ ದುಡಿಯುತ್ತಿರುವಾಗ ತನ್ನ ಟ್ರಕ್ಕ್‌ಗೆ ಕಾರೊಂದು ಡಿಕ್ಕಿ ಹೊಡೆದು ಆರು ಜನ ಮೃತಪಟ್ಟ ಅಪಘಾತ ಪ್ರಕರಣದಲ್ಲಿ ಸೌದಿ ಜೈಲು ಸೇರಿದ ನೆಲ್ಯಾಡಿಯ ಸುಲೈಮಾನ್ ಕುಟುಂಬಕ್ಕೆ ಬೆಂಗಳೂರಿನ "ಭಾರತ ವಾಹನ ಚಾಲಕ ಟ್ರೇಡ್ ಯೂನಿಯನ್ ರಿ" ಎಂಬ ಸಂಸ್ಥೆಯ ಪದಾಧಿಕಾರಿಗಳು ಸುಲೈಮಾನ್ ಮನೆಗೆ ಇಂದು ಭೇಟಿ ನೀಡಿ ತಲಾ ೩೦೦೦ ರೂಪಾಯಿಯ ೧೨ ಚೆಕ್ಕುಗಳನ್ನು ವಾರ್ಷಿಕ ಮನೆ ಖರ್ಚಿಗೆಂದು ನೀಡಿದರಲ್ಲದೆ ಮಾಸಿಕ ೧೦೦೦ ರೂಪಾಯಿಯ ಆಹಾರ ಸಾಮಗ್ರಿಗಳನ್ನು ನೆಲ್ಯಾಡಿಯ "ಸೀಗಲ್ ಟ್ರೇಡರ್‍ಸ್ " ಅಂಗಡಿಯಲ್ಲಿ ಖರೀದಿಸಿಕೊಳ್ಳಲು ವ್ಯವಸ್ಥೆ ಕಲ್ಪಿಸಿದ್ದಾರೆ.ಅಲ್ಲದೆ ಸುಲೈಮಾನ್ ರವರ ವಿಮೋಚನಾ ಪ್ರಕ್ರಿಯೆ ಮತ್ತು ಆರೋಗ್ಯ ಸ್ಥಿತಿ ವಿಚಾರಿಸಲು ಕುಟುಂಬ ಸದಸ್ಯರ ಪೈಕಿ ಒಬ್ಬರಿಗೆ ಸೌದಿ ಜೈಲಿನಲ್ಲಿರುವ ಸುಲೈಮಾನ್ ರನ್ನು ಸಂದರ್ಶಿಸಲು ಪಾಸ್‌ಪೋರ್ಟ್, ವಿಸಾ ಹಾಗೂ ಪ್ರಯಾಣ ಖರ್ಚುಗಳನ್ನು ತಾವು ಭರಿಸುವುದಾಗಿಯೂ ಈ ಸಂಸ್ಥೆ ತಿಳಿಸಿದೆ.
 nelyadi_suleman.jpg
ಜೈಲಲ್ಲಿರುವ ಸುಲೈಮಾನ್ ರವರ ವಿಮೋಚನೆಗಾಗಿ ಅಗತ್ಯವಿರುವ ಕಾನೂನು ತಜ್ಞರ ಸಲಹೆ ಪಡಕೊಂಡು ಈಗಾಗಲೇ ಸುಲೈಮಾನ್ ಪತ್ನಿ ಜಮೀಲಾರವರು ಪತಿಯ ವಿಮೋಚನೆಗಾಗಿ ರಾಷ್ಟ್ರಪತಿ,ಪಧಾನ ಮಂತ್ರಿ ,ವಿದೇಶಾಂಗ ವ್ಯವಹಾರ ಸಚಿವ ಶ್ರೀ ಎಸ.ಎಂ.ಕೃಷ್ಣ ಹಾಗೂ ಸಾಗರೋತ್ತರ ವ್ಯವಹಾರಗಳ ಸಚಿವ ವಯಲಾರ್ ರವಿ ಮುಂತಾದವರಿಗೆ ನೀಡಿದ ಮನವಿ ಪತ್ರಗಳ ನಕಲುಗಳ ಪರಿಶೀಲಿಸಿದ ಈ ತಂಡವು ಎಸ್.ಎಂ.ಕೃಷ್ಣರ ಆಪ್ತರಿಗೆ ಇಲ್ಲಿಂದಲೇ ಸಂಪರ್ಕಿಸಿದ್ದಾರೆ.ವಿಮೋಚನಾ ಪ್ರಕ್ರಿಯೆ ವಿಫಲವಾಗದಂತೆ ಈ ಸಂಸ್ಥೆ ನೋಡಿಕೊಳ್ಳುವುದಾಗಿ ತಿಳಿಸಿದರು.ಬೆಂಗಳೂರಿನಲ್ಲಿರುವ ಐಟಿ/ಬಿಟಿ ಕಂಪನಿಗಳ ಹಾಗೂ ತಮ್ಮ ಸಂಸ್ಥೆಯೊಂದಿಗೆ ಈಗಾಗಲೇ ಸಂಯೋಜನೆ ಹೊಂದಿರುವ ಸುಮಾರು 125 ಕ್ಕಿಂತಲೂ ಅಧಿಕ ಟ್ರಾವೆಲ್ ಏಜನ್ಸಿಯವರ ಪೂರ್ಣ ಸಹಕಾರವನ್ನು ಪಡಕೊಂಡು ಸೌದಿ ನ್ಯಾಯಾಲಯ ವಧಿಸಿದ ದಂಡದ ಮೊತ್ತವನ್ನು ಪೂರ್ತಿ ಭರಿಸಿಯಾದರೂ ಸುಲೈಮಾನ್ ರವರನ್ನು ಒಂದು ವರ್ಷದೊಳಗೆ ವಿಮೋಚಿಸುವುದಾಗಿ ಭರವಸೆ ನೀಡಿದ್ದಾರೆ.
 
ಜೈಲಿಂದ ವಿಮೋಚನೆ ಪಡಕೊಂಡು ಊರಿಗೆ ಬಂದು ಈ ಘಟನೆಯಿಂದ ಸಂಪೂರ್ಣ ಚೇತರಿಸಿಕೊಳ್ಳುವವರೆಗೆ ತಮ್ಮ ಯೂನಿಯನ್ ವತಿಯಿಂದಲೇ ಸುಲೈಮಾನ್ ಕುಟುಂಬಕ್ಕೆ ಇಂದು ನೀಡಿದ ಮಾದರಿಯಲ್ಲೇ ನೆರವು ನೀಡುವುದಾಗಿ ಹೇಳಿರುತ್ತಾರೆ.ಪತ್ರಿಕೆ ಹಾಗೂ ಟಿವಿ ಮಾಧ್ಯಮಗಳಲ್ಲಿ ಬಂದ ವರದಿಯನ್ನು ಗಮನಿಸಿ ಬೆಂಗಳೂರಿನಿಂದ ಬಂದ ಈ ತಂಡವು ವಾರ್ತಾಭಾರತಿ ಪತ್ರಿಕೆ ಹಾಗೂ ಈ ವಿಚಾರವನ್ನು ವರದಿಮಾಡಿದ ಎಲ್ಲಾಮಾಧ್ಯಮಗಳನ್ನೂ ಶ್ಲಾಘಿಸಿದರು.ತಂಡದಲ್ಲಿ "ಭಾರತ ವಾಹನ ಚಾಲಕ ಟ್ರೇಡ್ ಯೂಣಿಯನ್ ರಿ" ನ ರಾಜ್ಯಾಧ್ಯಕ್ಷರಾದ ಜಿ.ಎನ್.ಸದಾನಂದ ಸ್ವಾಮಿ,ಪ್ರಧಾನ ಕಾರ್ಯದರ್ಶಿ ಹಾಗೂ ಕಾಲ್ ಸೆಂಟರ್ ಅಧ್ಯಕ್ಷರಾದ ಪ್ರದೀಪ್ ಕುಮಾರ್ ಹಾಗೂ ಸದಸ್ಯರುಗಳಾದ ದಿಲೀಪ್, ಸಪ್ತಗಿರಿ ಮುಂತಾದವರು ಸಂಸ್ಥೆಯ ಪ್ರತಿನಿಧಿಗಳಾಗಿ ಆಗಮಿಸಿದ್ದರು.

ಅಬ್ದುಲ್ ಹಮೀದ್ ವಿ. ನೆಲ್ಯಾಡಿ
ಚಿತ್ರ : ಪ್ರಕಾಶ್ ನೆಲ್ಯಾಡಿ


Share: