ಕಾರವಾರ: ಬಾಲಮಂದಿರ ಶಾಲೆಯಲ್ಲಿ ಯು.ಕೆ.ಜಿ. ವಿದ್ಯಾರ್ಥಿಗಳಿಗೆ “ಪದವಿ ದಿನ” (ಗ್ರ್ಯಾಜ್ಯುವೇಶನ್ ಡೇ) ಆಚರಿಸಲಾಯಿತು.
ಆರಂಭದಲ್ಲಿ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದ ಕಾರವಾರ ಎಜ್ಯುಕೇಶನ್ ಸೊಸೈಟಿಯ ಆಡಳಿತಾಧಿಕಾರಿ ಶ್ರೀ ಜಿ. ಪಿ. ಕಾಮತ್ ಮಾತನಾಡಿ, “ದೇವರಂತಹ ಮಕ್ಕಳು ಈ ದೇಶದ ಅಮೂಲ್ಯ ಆಸ್ಥಿಯಾಗಿ ಶಿಕ್ಷಣ ಲೋಕದ ಮೊದಲ ಪಾಠವನ್ನು ಇಲ್ಲಿಂದಲೇ ಆರಂಭಿಸಿದ್ದಾರೆ. ಅವರ ಮುಂದಿನ ಭವಿಷ್ಯ ಉಜ್ವಲವಾಗಲಿ“ ಎಂದು ಹಾರೈಸಿದರು.
ಬಾಲಮಂದಿರ ಪ್ರೌಢಶಾಲೆಯ ಮುಖ್ಯಾಧ್ಯಾಪಕಿ ಶ್ರೀಮತಿ ಅಂಜಲಿ ಮಾನೆ ಸ್ವಾಗತ ಕೋರಿ, ಇದೇ ಮೊದಲ ಬಾರಿಗೆ ಹಮ್ಮಿಕೊಳ್ಳಲಾದ ಗ್ರ್ಯಾಜ್ಯುವೇಶನ್ ಡೇ ಕಾರ್ಯಕ್ರಮದ ರೂಪರೇಷೆಗಳ ಕುರಿತು ಪಾಲಕರಿಗೆ ಮನವರಿಕೆ ಮಾಡಿಕೊಟ್ಟರು.
ವೇದಿಕೆಯಲ್ಲಿ ಹಿಂದೂ ಪ್ರೌಢಶಾಲೆಯ ಮುಖ್ಯಾಧ್ಯಾಪಕ ಶ್ರೀ ಅರುಣ ರಾಣೆ, ಸುಮತಿ ದಾಮ್ಲೆ ಬಾಲಕಿಯರ ಪ್ರೌಢಶಾಲೆಯ ಮುಖ್ಯಾಧ್ಯಾಪಕಿ ಶ್ರೀಮತಿ ಗಿರಿಜಾ ಎನ್. ಭಂಟ, ಬಾಲಮಂದಿರ ಪ್ರೌಢಶಾಲೆಯ ವಿಭಾಗ ಮುಖ್ಯಸ್ಥರಾದ ಶ್ರೀಮತಿ ಭಾರತಿ ಐಸಾಕ್ ಹಾಗೂ ಶ್ರೀ ನಜಿರುದ್ಧೀನ್ ಸೈಯದ್ ಉಪಸ್ಥಿತರಿದ್ದರು. ವಿದ್ಯಾರ್ಥಿಗಳು, ಪಾಲಕರು, ಶಿಕ್ಷಕರು ಮತ್ತು ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಶಿಕ್ಷಕಿ ನಿಫಾ ಡಿ’ಕೋಸ್ಟಾ ವಂದನಾರ್ಪಣೆ ಸಲ್ಲಿಸಿದರು.
ಈ ಸಮಾರಂಭದಲ್ಲಿ ಎಲ್ಲಾ ಯು.ಕೆ.ಜಿ. ಪುಟಾಣಿ ಮಕ್ಕಳಿಗೆ ಪದವೀಧರ ವೇಷಭೂಷಣ ತೊಡಿಸಿ, ಪ್ರಮಾಣ ಪತ್ರ ನೀಡಿ ವೇದಿಕೆ ಮೇಲೆ ಸತ್ಕರಿಸಲಾಯಿತು.