ಬಾಗೇಪಲ್ಲಿ, ಡಿ-೪, ನಗರದ ಬಾಲಕೀಯರ ಪ್ರೌಢಶಾಲೆಗೆ ರಕ್ಷಣಾ ಗೋಡೆ ನಿರ್ಮಿಸಬೇಕು, ಬಿಲ್ ಮಾಡಿಕೊಳ್ಳುವ ಸಲುವಾಗಿ ಸುಸಜ್ಜಿತವಾದ ಕಟ್ಟಡವನ್ನು ಕೆಡವಿ, ಅದೇ ಜಾಗದಲ್ಲಿ ಕಟ್ಟಡವನ್ನು ಕಟ್ಟುತ್ತಿರುವ ಬಗ್ಗೆ ಹಾಗೂ ಪಟ್ಟಣದ ಹೊರವಲಯದ ಶ್ರೀ ಸತ್ಯಸಾಯಿ ವಿದ್ಯಾನಿಕೇತನ್ ಶಾಲೆಯಲ್ಲಿ ಅಕ್ರಮವಾಗಿ ವಸತಿ ಶಾಲೆ ನಡೆಸಲಾಗುತ್ತಿದೆ ಎಂದು ರಕ್ಷಣಾ ವೇದಿಕೆ ಕಾರ್ಯಕರ್ತರು ಇಂದು ಕೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಮುಂದೆ ಧರಣಿ ಸತ್ಯಾಗ್ರಹವನ್ನು ನಡೆಸಿದರು.
ನಗರದ ಬಾಲಕೀಯರ ಶಾಲಾ ಸಂಕೀರ್ಣಕ್ಕೆ ರಕ್ಷಣಾ ಗೋಡೆ ನಿರ್ಮಿಸಬೇಕೆಂದು ಹಲವಾರು ಬಾರಿ ಹೋರಾಟ ಮಾಡಿದ್ದು, ಈ ನಿಟ್ಟಿನಲ್ಲಿ ಹೋರಾಟಕ್ಕೆ ಸ್ಪಂದಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ೪೦ ದಿನಗಳಲ್ಲಿ ಕಾಂಪೌಂಡು ನಿರ್ಮಿಸಲಾಗುವುದೆಂದು ಲಿಖಿತವಾಗಿ ನೀಡಿದ್ದರು, ಆದರೆ ೯೬ ದಿನಗಳು ಕಳೆದರು ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಸಲ್ಲಿಸಿದ್ದರೂ, ಪ್ರಯೋಜನವಾಗಲಿಲ್ಲ, ಆಗಾಗಿ ಕ.ರ.ವೇ ಕಾರ್ಯಕರ್ತರು ಮುತ್ತಿಗೆ ಹಾಕಲಾಯಿತು ಎಂದು ತಾಲ್ಲೂಕು ಕರವೇ ಪ್ರಧಾನ ಕಾರ್ಯದರ್ಶಿ ಹರೀಶ್ ತಿಳಿಸಿದರು.
ಶ್ರೀ ಸತ್ಯಸಾಯಿ ಶಾಲೆಯಲ್ಲಿ ಹತ್ತನೆಯ ತರಗತಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಕಾನೂನಿನ ಎಲ್ಲಾ ರೀತಿ ನೀತಿಗಳನ್ನು ಗಾಳಿಗೆ ತೂರಿ ಅಕ್ರಮವಾಗಿ ವಸತಿ ಶಾಲೆಯನ್ನು ನಡೆಸಲಾಗುತ್ತಿದೆ, ತಿಂಗಳಿಗೆ ೪೦೦೦/- ರೂ.ಗಳನ್ನು ವಸೂಲು ಮಾಡಲಾಗುತ್ತಿದೆ. ಆದರೆ ಇಲ್ಲಿ ವಿದ್ಯಾರ್ಥಿಗಳಿಗೆ ಸರಿಯಾದ ಊಟ ವಸತಿ ನೀಡುತ್ತಿಲ್ಲ, ಸ್ನಾನ ಮಾಡಲು ಬಿಸಿನೀರು ಇಲ್ಲ, ಬೆಳಗ್ಗೆ ಎದ್ದು ಚಳಿಯಲ್ಲಿ ತಣ್ಣೀರಿನಲ್ಲಿ ಮಕ್ಕಳು ಸ್ನಾನ ಮಾಡಿ ನೆಗಡಿಯಿಂದ ಉಸಿರಾಟದ ತೊಂದರೆಯನ್ನು ಅನುಭವಿಸುತ್ತಿದ್ದಾರೆ, ಪ್ರತಿ ಸಂಜೆ ೧೮ ರೂ. ವೆಚ್ಚದಲ್ಲಿ ಮಕ್ಕಳಿಗೆ ಸ್ಯ್ನಾಕ್ಸ್ ನೀಡಲಾಗುವುದು ಎಂದು ೨ ಬಿಸ್ಕೆಟ್ ಒಂದು ಕಪ್ ಹಾಲು ನೀಡಿ ಮಕ್ಕಳ ಹೊಟ್ಟೆ ಒಣಗಿಸುತ್ತಿದ್ದಾರೆ. ದೇವರ ಮತ್ತು ಸೇವೆಯ ಹೆಸರಿನಲ್ಲಿ ಪೋಷಕರನ್ನು ಶೋಷಿಸಲಾಗುತ್ತಿದೆ, ಶಿಸ್ತಿನ ಹೆಸರಿನಲ್ಲಿ ಪೋಷಕರ ಮೂಲಭೂತ ಹಕ್ಕುಗಳ ದಮನ ಮಾಡಲಾಗುತ್ತಿದೆ, ಸ್ವಾಮಿಜಿ ಹೆಸರಿನಲ್ಲಿ ನಡೆಯುತ್ತಿರುವ ಈ ಶಾಲೆ ಹಣ ಗಳಿಸುವ ಶಾಲೆ ಎಂದು ಹೆಸರಾಗಿದೆ, ಈ ರೀತಿ ಅವ್ಯವಹಾರಗಳ ತಾಣವಾಗಿರುವ ಈ ಶಾಲೆಗೆ ವಸತಿ ಶಾಲೆ ನಡೆಸಲು ಅನುಮತಿ ಕೊಟ್ಟವರು ಯಾರು ಎಂದು ಹರೀಶ್ ಪ್ರಶ್ನಿಸಿದರು
ಶಾಲೆ ಪ್ರಾರಂಭವಾಗುವಾಗ ಪುಸ್ತಕ ಹಾಗೂ ಬಸ್ ಶುಲ್ಕ ಎಂದು ವಿದ್ಯಾರ್ಥಿಗಳಿಂದ ರೂ. ೧೦ ಸಾವಿರ ವಸೂಲಿ ಮಾಡಲಾಗುತ್ತಿದೆ, ಹತ್ತನೆಯ ತರಗತಿ ವಿದ್ಯಾರ್ಥಿಗಳಿಂದ ವಿಶೇಷ ತರಗತಿಗಳ ನೆಪದಲ್ಲಿ ತಿಂಗಳಿಗೆ ೪ ಸಾವಿರ ವಸೂಲಿ ಮಾಡಲಾಗಿದ್ದು, ಗ್ಯಾಸ್ ಸಿಲಿಂಡರ್ ಕಡ್ಡಾಯವಾಗಿ ತರಬೇಕು ಎಂದು ಅಪ್ಪಣೆ ಹೊರಡಿಸಲಾಗಿದೆ. ಇಲ್ಲಿ ಕೊಟ್ಟ ಹಣಕ್ಕೆ ಯಾವುದೇ ರಶೀದಿಯಿಲ್ಲ, ಎಲ್ಲವೂ ಉಚಿತ ಎನ್ನುವ ರೀತಿಯಲ್ಲಿ ಬಿಂಬಿಸಲಾಗುತ್ತಿದೆ, ಎಲ್ಲವೂ ಮೌಖಿಕವಾಗಿ ಅಲಿಖಿತವಾಗಿ ಶಾಲೆಯ ಆಡಳಿತ ನಡೆಸಲಾಗುತ್ತಿದೆ ಎಂದು ಕಿಡಿ ಕಾರಿದರು. ಸಂಭಂದಿಸಿದ ಅಧಿಕಾರಿಗಳು ತಕ್ಷಣ ಪರಿಶೀಲನೆ ನಡೆಸಿ ಈ ಶಾಲೆ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಕ್ಷೇತ್ರ ಶಿಕ್ಷಣಾಧಿಕಾರಿಗಳನ್ನು ಅವರು ಒತ್ತಾಯಿಸಿದರು
ಪ್ರತಿಭಟನಾ ಕಾರ್ಯಕ್ರಮದ ಮುಖಂಡತ್ವವನ್ನು ಪ್ರಧಾನ ಕಾರ್ಯದರ್ಶಿ ಹರೀಶ್, ಮಹಿಳಾ ತಾಲ್ಲೂಕು ಅಧ್ಯಕ್ಷೆ ಸುಜಾತಮ್ಮ, ಮುಖಂಡರಾದ ಮಾರುತಿ ಪ್ರಸಾದ್, ವಿಜಯಕುಮಾರ್ಶೆಟ್ಟಿ, ಕ್ರಿಕೇಟ್ ಮೂರ್ತಿ, ತನವೀರ್, ಹರೀಶ್, ರಾಮಾಂಜಿ, ನಾಸಿರ್, ಬಾಬಾ ಅತಾವುಲ್ಲಾ, ರಮಣಮ್ಮ, ಅಂಜಿನಮ್ಮ, ಜಯಮ್ಮ, ನಂದೀಶ ಮತ್ತಿತರರು
ವಹಿಸಿದ್ದರು.