ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಹೊಸದಿಲ್ಲಿ:ವಿಧಾನಸಭೆ ವಿಸರ್ಜನೆ: ಯಡಿಯೂರಪ್ಪ ಬೆದರಿಕೆ; ಭಿನ್ನರಿಂದ ಸಾಮೂಹಿಕ ರಾಜೀನಾಮೆಯ ಎಚ್ಚರಿಕೆ; ರೆಡ್ಡಿಗಳ ಬಳಿ ಶಾಸಕರ ರಾಜೀನಾಮೆ ರೆಡಿ

ಹೊಸದಿಲ್ಲಿ:ವಿಧಾನಸಭೆ ವಿಸರ್ಜನೆ: ಯಡಿಯೂರಪ್ಪ ಬೆದರಿಕೆ; ಭಿನ್ನರಿಂದ ಸಾಮೂಹಿಕ ರಾಜೀನಾಮೆಯ ಎಚ್ಚರಿಕೆ; ರೆಡ್ಡಿಗಳ ಬಳಿ ಶಾಸಕರ ರಾಜೀನಾಮೆ ರೆಡಿ

Fri, 06 Nov 2009 04:20:00  Office Staff   S.O. News Service

ಬೆಂಗಳೂರು, ನ.೫. ಪಕ್ಷದ ಹೈಕಮಾಂಡ್ ಮಾತಿಗೂ ಕಿಮ್ಮತ್ತು ನೀಡದೆ ಪಟ್ಟು ಹಿಡಿದಿರುವ ಬಂಡಾಯ ಶಾಸಕರು ಇದೀಗ ಅಂತಿಮವಾಗಿ ರಾಜೀನಾಮೆ ಎಂಬ ಬ್ರಹ್ಮಾಸ್ತ್ರ ಪ್ರಯೋಗಿಸುವ ಬಗ್ಗೆ ಗಂಭೀರ ಚಿಂತನೆ ನಡೆಸಿದ್ದಾರೆ.

ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸುವ ಏಕೈಕ ಬೇಡಿಕೆಯನ್ನು ಹೈಕಮಾಂಡ್ ಒಪ್ಪದೇ ಇರುವುದರಿಂದ ಇನ್ನೂ ಎರಡು ದಿನ ಕಾದು ನೋಡಲು ಉದ್ದೇಶಿಸಿದ್ದಾರೆ. ಕೊನೆಗೂ ನಾಯಕತ್ವ ಬದಲಾವಣೆಯ ನಿರ್ಧಾರ ಹೊರಬೀಳದಿದ್ದರೆ ಆಗ ರಾಜೀನಾಮೆ ನೀಡಲೇಬೇಕಾಗಿ ಬರಬಹುದು ಎಂದು ಗಣಿ ಧಣಿಗಳ ಪಾಳೆಯದ ಮೂಲಗಳು ತಿಳಿಸಿವೆ. ತಮ್ಮ ಬೆಂಬಲಕ್ಕಿರುವ ಸುಮಾರು ೪೦ಕ್ಕೂ ಹೆಚ್ಚು ಶಾಸಕರು ಈಗಾಗಲೇ ರಾಜೀನಾಮೆ ಪತ್ರಕ್ಕೆ ಸಹಿ ಮಾಡಿ ಎರಡು ಪ್ರತಿಗಳನ್ನು ಬಂಡಾಯದ ಸಾರಥ್ಯ ವಹಿಸಿರುವ ಗಾಲಿ ಜನಾರ್ದನರೆಡ್ಡಿ ಅವರ ಕೈಗೆ ಹಸ್ತಾಂತರಿಸಿ ದ್ದಾರೆ. ವಿಧಾನಸಭೆಯ ಸ್ಪೀಕರ್ ಹಾಗೂ ರಾಜ್ಯಪಾಲರನ್ನು ಉದ್ದೇಶಿಸಿ ರಾಜೀನಾಮೆ ಪತ್ರ ಸಿದ್ಧಪಡಿಸಲಾಗಿದೆ ಎಂದು ತಿಳಿದು ಬಂದಿದೆ.

ಹೀಗೆ 40 ಕ್ಕೂ ಹೆಚ್ಚು ಶಾಸಕರು ರಾಜೀನಾಮೆ ನೀಡುವುದರಿಂದ ಅಲ್ಪಮತಕ್ಕಿಳಿಯುವ ಬಿಜೆಪಿ ಸರ್ಕಾರ, ಮುಂದೆ ಜೆಡಿ‌ಎಸ್ ಜತೆ ಸೇರಿ ಸರ್ಕಾರ ರಚಿಸಲೂ ಸಾಧ್ಯವಾಗದಂಥ ತಂತ್ರವನ್ನು ಗಣಿ ಧಣಿಗಳು ಹೆಣೆಯುತ್ತಿದ್ದಾರೆ.

ಮೊದಲ ಹಂತದಲ್ಲಿ ಶುಕ್ರವಾರ ಜನಾರ್ದನರೆಡ್ಡಿ ಅವರು ಹೈಕಮಾಂಡ್ ಮುಂದೆ ಈ ಪತ್ರಗಳನ್ನು ಪ್ರದರ್ಶಿಸಿ ತಮಗಿರುವ ಶಾಸಕರ ಬೆಂಬಲವನ್ನು ಸಾಬೀತುಪಡಿಸಲು ಪ್ರಯತ್ನಿಸುವ ಸಾಧ್ಯತೆಯಿದೆ. ಸದ್ಯದ ಪರಿಸ್ಥಿತಿಯಲ್ಲಿ ಬಂಡಾಯ ಶಾಸಕರು ನಾಯಕತ್ವ ಬದಲಾವಣೆಯ ಬೇಡಿಕೆ ಕೈಬಿಟ್ಟು ಬೇರೆ ಯಾವುದೇ ಸಂಧಾನ ಸೂತ್ರವನ್ನು ಒಪ್ಪುವುದು ದುಸ್ತರ ಎನ್ನಲಾಗಿದೆ. ಹೀಗಾಗಿ ಇನ್ನೆರಡು ದಿನಗಳಲ್ಲಿ ದೆಹಲಿಯಲ್ಲಿನ ಎಲ್ಲ ಬೆಳವಣಿಗೆ ಗಳನ್ನೂ ಗಮನಿಸಿ ಜನಾರ್ದನರೆಡ್ಡಿ ಅವರು ವಾಪಸಾಗಲಿದ್ದು, ಹೈದ್ರಾಬಾದ್‌ಗೆ ತೆರಳಿ ಶಾಸಕರೊಂದಿಗೆ ಮಾತುಕತೆ ನಡೆಸಲಿದ್ದಾರೆ. ನಂತರ ಮುಂದಿನ ದಾರಿ ನಿರ್ಧರಿಸಲಿ ದ್ದಾರೆ.

ರಚ್ಚೆ ಹಿಡಿಯಬೇಡಿ- ಹೈಕಮಾಂಡ್:  ಜಾರ್ಖಂಡ್ ವಿಧಾನಸಭೆ ಚುನಾವಣೆ ಮುಗಿಯುವವರೆಗೆ ಕರ್ನಾಟಕ ಬಿಜೆಪಿಯಲ್ಲಿನ ಬಿಕ್ಕಟ್ಟಿನ ಚರ್ಚೆಯನ್ನು ಮುಂದೂಡುವಂತೆ ಪಕ್ಷದ ವರಿಷ್ಠರು ಉಭಯ ಬಣಗಳಿಗೂ ತಾಕೀತು ಮಾಡಿದ್ದಾರೆ ಎನ್ನಲಾಗಿದೆ.

‘ಬರುವ ಡಿಸೆಂಬರ್ ೨೩ರವರೆಗೆ ಜಾರ್ಖಂಡ್ ಚುನಾವಣೆ ನಡೆಯಲಿದೆ. ಅಲ್ಲಿವರಗೆ ರಚ್ಚೆ ಮಾಡದೆ ಸುಮ್ಮನಿರಿ. ನಿಮ್ಮ ಬೇಡಿಕೆಗಳನ್ನು ಗಂಭೀರವಾಗಿ ಪರಿಶೀಲಿಸಿ ತೀರ್ಮಾನ ಕೈಗೊಳ್ಳುತ್ತೇವೆ’ ಎಂಬ ಸಂದೇಶವನ್ನು ಹೈಕಮಾಂಡ್ ನೀಡಿದೆ. ಈ ಸಂದೇಶದ ಸೂತ್ರಧಾರ ಹಿರಿಯ ನಾಯಕ ವೆಂಕಯ್ಯನಾಯ್ಡು.

5 ಸಚಿವರಿಗೆ ಸ್ಥಾನ ಚ್ಯುತಿ  

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಸ್ಥಾನ ಭದ್ರ. ಆದರೆ, ಗ್ರಾಮೀಣಾಭಿವೃದ್ಧಿ ಸಚಿವೆ ಶೋಭಾ ಕರಂದ್ಲಾಜೆ ಸೇರಿದಂತೆ ಐವರು ಸಚಿವರ ‘ತಲೆದಂಡ’ಕ್ಕಾಗಿ ಬಿಜೆಪಿ ಮುಖಂಡರು ಮುಖ್ಯಮಂತ್ರಿಗೆ ಸೂಚಿಸಿದ್ದಾರೆ. ಈ ಬೇಡಿಕೆಯನ್ನು ಯಡಿಯೂರಪ್ಪ ತಿರಸ್ಕರಿಸಿರುವುದರಿಂದ ಬಿಜೆಪಿಯಲ್ಲಿನ ಬಿಕ್ಕಟ್ಟು ಗುರುವಾರವೂ ಸುಖಾಂತ್ಯ ಕಾಣಲಿಲ್ಲ.  
ನವದೆಹಲಿ: ಬಿಜೆಪಿ ಶಾಸಕಾಂಗ ಪಕ್ಷದ ನಾಯಕರಾಗಿ ಯಡಿಯೂರಪ್ಪ ಅವರನ್ನೇ ಮುಂದುವರಿಸಲು ಬಿಜೆಪಿ ವರಿಷ್ಠರು ತೀರ್ಮಾನಿಸಿದ್ದಾರೆ. ಶೋಭಾ, ಜಲ ಸಂಪನ್ಮೂಲ ಸಚಿವ ಬಸವರಾಜ ಬೊಮ್ಮಾಯಿ, ಲೋಕೋಪಯೋಗಿ ಸಚಿವ ಸಿ.ಎಂ.ಉದಾಸಿ, ಕೈಗಾರಿಕೆ ಸಚಿವ ಮುರುಗೇಶ ನಿರಾಣಿ ಸೇರಿದಂತೆ ಐವರನ್ನು ಸಂಪುಟದಿಂದ ಕೈ ಬಿಡಲು ಸೂಚಿಸಿದ್ದಾರೆ.

ಸಂಜೆ ತಮ್ಮ ಮನೆಗೆ ಯಡಿಯೂರಪ್ಪ ಅವರನ್ನು ಕರೆಸಿಕೊಂಡ ಲೋಕಸಭೆ ವಿರೋಧ ಪಕ್ಷದ ನಾಯಕ ಎಲ್.ಕೆ.ಅಡ್ವಾಣಿ ಐವರು ಸಚಿವರನ್ನು ತೆಗೆಯಲು ಸೂಚಿಸಿದ್ದಾರೆ. ಈ ಬೇಡಿಕೆಗೆ ಯಡಿಯೂರಪ್ಪ ಅಸಮ್ಮತಿ ವ್ಯಕ್ತಪಡಿಸಿದ್ದಾರೆ. ಶೋಭಾ ಮತ್ತು ತಮ್ಮ ಪ್ರಧಾನ ಕಾರ್ಯದರ್ಶಿ ವಿ.ಪಿ.ಬಳಿಗಾರ್ ಅವರನ್ನು ಮಾತ್ರ ಬದಲಾವಣೆ ಮಾಡಲು ಸಿದ್ಧ ಎಂದು ಸ್ಪಷ್ಟಪಡಿಸಿದ್ದಾರೆ.

‘ಉತ್ತಮ ಕೆಲಸ ಮಾಡುತ್ತಿರುವ ಸಚಿವರನ್ನು ಕೈಬಿಟ್ಟರೆ ಜನರಿಗೆ ‘ತಪ್ಪು ಸಂದೇಶ ಕಳುಹಿಸಿದಂತಾಗುತ್ತದೆ. ಈ ವಿಷಯದಲ್ಲಿ ಆಲೋಚನೆ ಮಾಡಲು ಒಂದು ತಿಂಗಳ ಕಾಲಾವಕಾಶ ಕೊಡಿ’ ಎಂದು ಮುಖ್ಯಮಂತ್ರಿ ಮನವಿ ಮಾಡಿದ್ದಾರೆ.

‘ಅಷ್ಟೊಂದು ಕಾಲಾವಕಾಶ ಯಾಕೆ ಬೇಕು ತಕ್ಷಣ ತೀರ್ಮಾನ ಮಾಡಿ’ ಎಂದು ಅಡ್ವಾಣಿ ತಾಕೀತು ಮಾಡಿದ್ದಾರೆ. ‘ಬಳ್ಳಾರಿ ರೆಡ್ಡಿ ಸಹೋದರರ ಹಿತ ಕಾಯಲು ನನ್ನನ್ನು ಬಲಿ ಕೊಡಲಾಗುತ್ತಿದೆ. ನಮ್ಮ ಐವರು ಸಚಿವರನ್ನು ಕೈ ಬಿಡುವುದಾದರೆ ಅವರ ಕಡೆಯ ಐವರು ಮಂತ್ರಿಗಳನ್ನು ತೆಗೆಯೋಣ’ ಎಂದು ಯಡಿಯೂರಪ್ಪನವರು ಪಟ್ಟು ಹಿಡಿದಿದ್ದಾರೆ. ಇದಕ್ಕೆ ಅಡ್ವಾಣಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇದರಿಂದ ಮುಖ್ಯಮಂತ್ರಿ ಹತಾಶರಾಗಿ ಕರ್ನಾಟಕ ಭವನಕ್ಕೆ ಹಿಂತಿರುಗಿದ್ದಾರೆ’ ಎಂದು ಬಿಜೆಪಿ ಮೂಲಗಳು ತಿಳಿಸಿವೆ. 
 
ಮುಖ್ಯಮಂತ್ರಿ ಗುರುವಾರ ಸಂಜೆ ಬೆಂಗಳೂರಿಗೆ ಹಿಂತಿರುಗಬೇಕಿತ್ತು. ಶುಕ್ರವಾರ ಸಚಿವ ಸಂಪುಟ ಸಭೆಯಲ್ಲಿ ಪಾಲ್ಗೊಳ್ಳಬೇಕಿತ್ತು. ಬಿಜೆಪಿ ಬಿಕ್ಕಟ್ಟು ಬಗೆಹರಿಯದಿರುವುದರಿಂದ ರಾಜಧಾನಿಯಲ್ಲೇ ಉಳಿದಿದ್ದಾರೆ. ನಾಳೆಯೂ ಚರ್ಚೆ ಮುಂದುವರಿಯಲಿದೆ. ವರಿಷ್ಠರ ಸಮ್ಮುಖದಲ್ಲಿ ನಡೆಯುವ ಸಭೆಯಲ್ಲಿ ಮುಖ್ಯಮಂತ್ರಿ, ಭಿನ್ನಮತೀಯ ಮುಖಂಡ ಜನಾರ್ದನರೆಡ್ಡಿ ಭಾಗವಹಿಸಲಿದ್ದಾರೆ.

ನಾಯಕತ್ವ ವಿವಾದ ಅಂತ್ಯ:ಸತತ ಐದು ದಿನಗಳ ಸುದೀರ್ಘ ‘ರಾಜಕೀಯ ನಾಟಕ’ದ ಬಳಿಕವೂ ಬಿಜೆಪಿ ಬಿಕ್ಕಟ್ಟು ಮುಂದುವರಿದಿದ್ದರೂ ‘ನಾಯಕತ್ವ ಬದಲಾವಣೆ ವಿವಾದ’ ಅಂತ್ಯಗೊಂಡಿದೆ. ಯಡಿಯೂರಪ್ಪ ಅವರ ನಾಯಕತ್ವದಲ್ಲೇ ಸರ್ಕಾರವನ್ನು ಮುನ್ನಡೆಸುವ ಅಚಲ ನಿರ್ಧಾರವನ್ನು ಬಿಜೆಪಿ ಮುಖಂಡರು ಪ್ರಕಟಿಸಿದ್ದಾರೆ. ಪಕ್ಷದ ನಿಲುವನ್ನು ರಾಜ್ಯಸಭೆ ಸದಸ್ಯ ವೆಂಕಯ್ಯ ನಾಯ್ಡು ಅವರ ಮೂಲಕ ಜನಾರ್ದನ ರೆಡ್ಡಿ ಅವರಿಗೆ ರವಾನಿಸಲಾಗಿದೆ.

‘ನಾಯಕತ್ವ ಬದಲಾವಣೆ ಇಲ್ಲ’ ಎಂಬ ಪಕ್ಷದ ನಿಲುವು ಕುರಿತು ತಮ್ಮ ಬೆಂಬಲಿಗ ಶಾಸಕರ ಜತೆ ಚರ್ಚಿಸಿ ತಮ್ಮ ನಿರ್ಧಾರ ಪ್ರಕಟಿಸುವುದಾಗಿ ಅವರು ತಿಳಿಸಿದ್ದಾರೆ. ಬೆಂಬಲಿಗರೊಂದಿಗೆ ಸಮಾಲೋಚಿಸಲು ಅವರು ಸಂಜೆ ಬೆಂಗಳೂರಿಗೆ ತೆರಳಿದ್ದು ಶುಕ್ರವಾರ ಹಿಂತಿರುಗಿ ಬರಲಿದ್ದಾರೆ.

ವೆಂಕಯ್ಯನಾಯ್ಡು ಅವರ ಮನೆಯಿಂದ ಹೊರ ಬಂದ ಜನಾರ್ದನರೆಡ್ಡಿ, ‘ಯಡಿಯೂರಪ್ಪ ಬದಲಾವಣೆ ಬೇಡಿಕೆ’ಗೆ ಬದ್ಧ. ಇದರಿಂದ ಹಿಂದೆ ಸರಿಯುವುದಿಲ್ಲ’ ಎಂದರು. ಇದರ ಹಿಂದೆಯೇ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ವೆಂಕಯ್ಯ ನಾಯ್ಡು ಎರಡು ದಿನಗಳಲ್ಲಿ ಬಿಕ್ಕಟ್ಟು ಬಗೆಹರಿಯಲಿದೆ ಎಂದು ನುಡಿದರು.

‘ಯಡಿಯೂರಪ್ಪ ಅವರ ಬದಲಾವಣೆ ಪ್ರಶ್ನೆ ಪಕ್ಷದ ಮುಂದಿಲ್ಲ. ಎಲ್ಲ ಬಿಕ್ಕಟ್ಟು ಶೀಘ್ರವಾಗಿ ಸುಖಾಂತ್ಯ ಕಾಣಲಿದೆ. ಜಾರ್ಖಂಡ್ ಸಮಸ್ಯೆಯನ್ನೇ ಬಗೆಹರಿಸಿರುವ ಪಕ್ಷಕ್ಕೆ ಕರ್ನಾಟಕದ ಬಿಕ್ಕಟ್ಟು ದೊಡ್ಡ ವಿಷಯವಲ್ಲ’ ಎಂದು ರಾಜ್ನಾಥ್‌ಸಿಂಗ್ ಇದಕ್ಕೂ ಮುನ್ನ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

 ಮುಖ್ಯಮಂತ್ರಿ ಬುಧವಾರ ರಾತ್ರಿ ದೆಹಲಿಗೆ ಆಗಮಿಸುತ್ತಿದ್ದಂತೆಯೇ ರಾಜಕೀಯ ಚಟುವಟಿಕೆ ಬಿರುಸುಗೊಂಡಿತು. ಬುಧವಾರ ಮಧ್ಯರಾತ್ರಿವರೆಗೂ ಮುಂದುವರಿದಿದ್ದ ಸಮಾಲೋಚನೆ ಗುರುವಾರ ಬೆಳಗಿನ ಉಪಾಹಾರದೊಂದಿಗೆ ಮತ್ತೆ  ಆರಂಭಗೊಂಡಿತು.

ಯಡಿಯೂರಪ್ಪ, ಸದಾನಂದಗೌಡ, ಅನಂತ ಕುಮಾರ್, ಜಗದೀಶ್‌ಶೆಟ್ಟರ್ ಅವರನ್ನು ವೆಂಕಯ್ಯ ನಾಯ್ಡು ಉಪಾಹಾರಕ್ಕೆ ಆಹ್ವಾನಿಸಿ ಚರ್ಚಿಸಿದರು.

ಮಧ್ಯಾಹ್ನ ಬಿಜೆಪಿ ಅಧ್ಯಕ್ಷ ರಾಜ್‌ನಾಥ್ಸಿಂಗ್ ಅವರ ಮನೆಯಲ್ಲಿ ಸಭೆ ಸೇರಲಾಯಿತು. ಅರುಣ್ ಜೇಟ್ಲಿ, ವೆಂಕಯ್ಯ ನಾಯ್ಡು, ಸುಷ್ಮಾ ಸ್ವರಾಜ್, ಅನಂತ್ ಕುಮಾರ್ ಬಂದರು. ಯಡಿಯೂರಪ್ಪ ಅವರಿಗೂ ಕರೆಬಂತು. ಕೆಲ ಹೊತ್ತಿನ ಬಳಿಕ ಯಡಿಯೂರಪ್ಪ ‘ಸಮಸ್ಯೆ ಬಗೆಹರಿಯಲಿದೆ’ ಎಂಬ ಆಶಯದೊಂದಿಗೆ ಕಾರು ಹತ್ತಿದರು. ‘ಬಿಕ್ಕಟ್ಟು ಸುಸೂತ್ರವಾಗಿ ಬಗೆಹರಿಯಿತು’ ಎಂಬ ಉತ್ಸಾಹದಲ್ಲಿ ಯಡಿಯೂರಪ್ಪ ಪತ್ರಕರ್ತರ ಜತೆ ಅನೌಪಚಾರಿಕ ವಾಗಿ ಮಾತನಾಡುತ್ತಿದ್ದಾಗಲೇ ಆಪ್ತ ಅಧಿಕಾರಿಯೊಬ್ಬರು ಚೀಟಿಯೊಂದನ್ನು ತಂದು ಅವರ ಕೈಯಲ್ಲಿಟ್ಟರು. ಅಲ್ಲಿಗೆ ಮಾತು ನಿಲ್ಲಿಸಿದ ಮುಖ್ಯಮಂತ್ರಿ ಅನಂತರ ಭೇಟಿ ಮಾಡುವುದಾಗಿ ಹೇಳಿ ರಾಜ್ಯ ಬಿಜೆಪಿ ಅಧ್ಯಕ್ಷ ಸದಾನಂದಗೌಡರ ಜತೆ ಅಡ್ವಾಣಿ ಮನೆ ಹಾದಿ ಹಿಡಿದರು.

ಒಂದು ತಾಸಿನ ಬಳಿಕ ಹಿಂತಿರುಗಿದ ಮುಖ್ಯಮಂತ್ರಿ ಮುಖ ಇಳಿದಿತ್ತು. ಯಾರೊಂದಿಗೂ ಮಾತನಾಡದೆ ತಮ್ಮ ಕೊಠಡಿ ಸೇರಿಕೊಂಡರು. ತಕ್ಷಣ ಬಾಗಿಲು ಬಂದ್ ಆಯಿತು. ಅವರ ಜತೆಗಿದ್ದ ಸದಾನಂದಗೌಡರು, ‘ಬಿಕ್ಕಟ್ಟು ಬಗೆಹರಿದಿದೆ. ಸಣ್ಣಪುಟ್ಟ ಸಮಸ್ಯೆಗಳಿವೆ. ನಾಳೆಯೂ ಸಭೆ ಮುಂದುವರಿಯಲಿದ್ದು ಮುಖ್ಯಮಂತ್ರಿ ದೆಹಲಿಯಲ್ಲೇ ತಂಗಲಿದ್ದಾರೆ’ ಎಂದು ತಿಳಿಸಿದರು.

ವಿಧಾನಸಭೆ ವಿಸರ್ಜನೆ: ಯಡಿಯೂರಪ್ಪ ಬೆದರಿಕೆ; ಭಿನ್ನರಿಂದ ಸಾಮೂಹಿಕ ರಾಜೀನಾಮೆಯ ಎಚ್ಚರಿಕೆ

ಬೆಂಗಳೂರು, ನ.೫: ನಾಯಕತ್ವ ಬದಲಾವಣೆಯ ಪಟ್ಟನ್ನು ಗಣಿಧಣಿಗಳು ಸಡಿಲಿಸದೆ ಇರುವುದರಿಂದ ದಿಲ್ಲಿಯಲ್ಲಿ ಹೈಕಮಾಂಡ್ ನಡೆಸುತ್ತಿರುವ ಸಂಧಾನ ಪ್ರಕ್ರಿಯೆಗಳಿಗೆ ತೀವ್ರ ಹಿನ್ನೆಡೆಯಾಗಿದೆ. ಇದರಿಂದ ಅಸಮಾಧಾನಗೊಂಡಿರುವ ಮುಖ್ಯಮಂತ್ರಿ ಯಡಿಯೂರಪ್ಪ ರಾಜ್ಯ ವಿಧಾನಸಭೆಯನ್ನು ವಿಸರ್ಜಿಸಿ ಚುನಾವಣೆಗೆ ತೆರಳುವ ಬೆದರಿಕೆಯನ್ನು ಒಡ್ಡಿದ್ದಾರೆ.

ನಿನ್ನೆ ರಾತ್ರಿ ದಿಲ್ಲಿಗೆ ತೆರಳಿದ್ದ ಯಡಿಯೂರಪ್ಪ ಇಂದು ಬೆಳಗ್ಗೆ ಪಕ್ಷದ ಹಿರಿಯ ಮುಖಂಡರಾದ ವೆಂಕಯ್ಯನಾಯ್ಡು, ಸುಷ್ಮಾ ಸ್ವರಾಜ್, ರಾಷ್ಟ್ರೀಯ ಅಧ್ಯಕ್ಷ ರಾಜನಾಥ್ ಸಿಂಗ್ ಮತ್ತು ವರಿಷ್ಠ ಎಲ್.ಕೆ.ಅಡ್ವಾಣಿಯವನ್ನು ಪ್ರತ್ಯೇಕವಾಗಿ ಭೇಟಿ ಮಾಡಿ ಚರ್ಚೆ ನಡೆಸಿದರು. ಅರುಣ್ ಜೈಟ್ಲಿ, ಸಂಸದ ಅನಂತಕುಮಾರ್, ಬಿಜೆಪಿ ರಾಜ್ಯಾದ್ಯಕ್ಷ ಸದಾನಂದಗೌಡ ಹಾಜರಿದ್ದರು. ಸಂಜೆಯ ವೇಳೆಗೆ ಅಡ್ವಾಣಿಯವರ ಮನೆಯಲ್ಲಿ ಎಲ್ಲ ಮುಖಂಡರು ಸಭೆ ಸೇರಿ ಬಿಕ್ಕಟ್ಟು ಪರಿಹಾರದ ಸಂಧಾನ ಸೂತ್ರಗಳ ಕುರಿತು ಚರ್ಚಿಸಿದರು. ಆದರೆ, ಗಣಿಧಣಿಗಳು ಚರ್ಚೆಗೆ ಸಿದ್ಧರಿಲ್ಲದಿದ್ದರಿಂದ ಸಂಧಾನ ಮಾತುಕತೆಗಳು ಫಲಪ್ರದವಾಗಲಿಲ್ಲ.

ಬಿಕ್ಕಟ್ಟಿನ ಕೇಂದ್ರ ಬಿಂಧುಗಳಾದ ಗಣಿಧಣಿಗಳು ಮತ್ತು ಮುಖ್ಯಮಂತ್ರಿಯವರ ನಡುವೆ ನಿಗದಿಯಾಗಿದ್ದ ಮುಖಾಮುಖಿ ಚರ್ಚೆ ಇಂದು ನಡೆಯಲಿಲ್ಲ. ಈಗಾಗಲೇ ತಮ್ಮ ಬೇಡಿಕೆಗಳನ್ನು ವರಿಷ್ಠರಿಗೆ ಮನವರಿಕೆ ಮಾಡಿಕೊಟ್ಟಿರುವುದರಿಂದ ಯಡಿಯೂರಪ್ಪ ನವರೊಂದಿಗೆ ಮಾತುಕತೆ ನಡೆಸುವ ಅಗತ್ಯವಿಲ್ಲ ಎಂದು ಸಚಿವ ಜನಾರ್ದನ ರೆಡ್ಡಿ ಸ್ಪಷ್ಟವಾಗಿ ಹೇಳಿದ್ದಾರೆ.

ರಾಜ್ಯದ ಜನರ ಹಿತದೃಷ್ಠಿಯಿಂದ ನಾಯಕತ್ವ ಬದಲಾಗಲೇಬೇಕು. ನೆರೆಯಂತಹ ಸಂದರ್ಭಗಳಲ್ಲಿ ಕೆಲಸ ಮಾಡಲು ಬಿಡದೆ ನೋವುಂಟು ಮಾಡಿರುವ ಮನೆಯ ಯಜಮಾನ ಅಧಿಕಾರದಲ್ಲಿ ಮುಂದುವರಿಯಬಾರದು ಎಂದು ಹೇಳಿದರು.

ಇದಕ್ಕೆ ಪ್ರತಿಯಾಗಿ ಮುಖ್ಯಮಂತ್ರಿ ಯಡಿಯೂರಪ್ಪನವರು ನಾಯಕತ್ವ ಬದಲಾವಣೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಯಾವ ತಪ್ಪು ಮಾಡದ ತಮ್ಮನ್ನು ಅಧಿಕಾರದಿಂದ ಕೆಳಗಿಳಿಸುವುದನ್ನು ಸಹಿಸಲು ಸಾಧ್ಯವಿಲ್ಲ. ನಾಯಕತ್ವ ಬದಲಾವಣೆಗೆ ಒತ್ತಾಯಿಸಿರುವ ಗಣಿಧಣಿಗಳೊಂದಿಗೆ ಚರ್ಚೆ ನಡೆಸಲು ತಾವು ಸಿದ್ಧರಿದ್ದು, ಅವರ ಉಳಿದ ಬೇಡಿಕೆಗಳ ಬಗ್ಗೆ ಹೈಕಮಾಂಡ್ ಸೂಕ್ತ ನಿರ್ಧಾರ ಕೈಗೊಳ್ಳಲಿದೆ ಎಂದು ದಿಲ್ಲಿಯಲ್ಲಿ ಹೇಳಿದರು.

ವೆಂಕಯ್ಯ ನಾಯ್ಡುರ ಮನೆಯಲ್ಲಿ ಉಪಹಾರ ಸೇವಿಸಿದರು. ನಂತರ ಸುಷ್ಮಾ ಸ್ವರಾಜ್‌ರನ್ನು ಭೇಟಿ ಮಾಡಿದ ಯಡಿಯೂರಪ್ಪ, ಬಿಕ್ಕಟ್ಟನ್ನು ಶೀಘ್ರವಾಗಿ ಇತ್ಯರ್ಥ ಪಡಿಸುವಂತೆ ಮನವಿ ಮಾಡಿದರು. ಮಧ್ಯಾಹ್ನ ರಾಜನಾಥ್ ಸಿಂಗ್‌ರೊಂದಿಗೆ ಬೋಜನ ಕೂಟದಲ್ಲಿ ಭಾಗವಹಿಸಿದ್ದರು. ಈ ಎಲ್ಲ ಸಂದರ್ಭಗಳಲ್ಲೂ ಬಿಜೆಪಿ ಮುಖಂಡರು ಜನಾರ್ದನ ರೆಡ್ಡಿಯವರಿಗೆ ಆಹ್ವಾನ ನೀಡಿದ್ದರು ಎಂದು ಹೇಳಲಾಗಿದೆ.

ಯಡಿಯೂರಪ್ಪನವನ್ನು ಮುಖಾಮುಖಿಯಾಗಿ ಭೇಟಿಯಾಗುವ ಸಂದರ್ಭದಿಂದ ತಪ್ಪಿಸಿಕೊಳ್ಳುವ ಸಲುವಾಗಿ ಜನಾರ್ದನ ರೆಡ್ಡಿ ಇಂದು ಬಿಜೆಪಿ ಹಿರಿಯ ಮುಖಂಡರನ್ನು ಭೇಟಿ ಮಾಡಲಿಲ್ಲ ಎಂದು ಮೂಲಗಳು ತಿಳಿಸಿವೆ. ನಾಯಕತ್ವ ಬದಲಾವಣೆಯನ್ನು ಹೊರತು ಪಡಿಸಿ ಉಳಿದೆಲ್ಲಾ ಬೇಡಿಕೆಗಳ ಈಡೇರಿಕೆಗೆ ಯಡಿಯೂರಪ್ಪ ಸಿದ್ಧರಿದ್ದರೂ ಗಣಿಧಣಿಗಳು ಪಟ್ಟು ಸಡಿಲಿಸಿಲ್ಲ ಎಂದು ಹೇಳಲಾಗಿದೆ. ಇದರಿಂದ ಅಸಮಾಧಾನಗೊಂಡ ಯಡಿಯೂರಪ್ಪ ಶುಕ್ರವಾರ ಸಚಿವ ಸಂಪುಟ ಸಭೆ ನಡೆಸಿ ವಿಧಾನಸಭೆಯನ್ನು ವಿಸರ್ಜಿಸುವ ನಿರ್ಣಯ ಕೈಗೊಳ್ಳುವುದಾಗಿ ಹೈಕಮಾಂಡ್ ವರಿಷ್ಠರಿಗೆ ತಿಳಿಸಿದ್ದಾರೆ ಎಂದು ಹೇಳಲಾಗಿದೆ. ಇದಕ್ಕೆ ಯಡಿಯೂರಪ್ಪ ಬಣದಲ್ಲಿ ಗುರುತಿಸಿಕೊಂಡಿರುವ ಸಚಿವರ ಸಹಮತವೂ ಇದೆ ಎಂದು ಹೇಳಲಾಗಿದೆ.

ಇನ್ನೊಂದೆಡೆ ಗಣಿಧಣಿಗಳ ಪಾಳೇಯದಲ್ಲಿ ಗುರುತಿಸಿಕೊಂಡಿರುವ ಶಾಸಕರು ಕೂಡ ತಮ್ಮ ಪಟ್ಟು ಸಡಿಸಿಲಿಲ್ಲ. ಯಡಿಯೂರಪ್ಪನವರ ನಾಯಕತ್ವ ಬದಲಾಗದಿದ್ದರೆ ತಾವು ಸಾಮೂಹಿಕ ರಾಜೀಮೆ ಸಲ್ಲಿಸುವುದಾಗಿ ಬೆದರಿಕೆಯಾಕಿದ್ದಾರೆ. ಇದರಿಂದ ರಾಜ್ಯದಲ್ಲಿ ಪ್ರಜಾತಂತ್ರ ವ್ಯವಸ್ಥೆ ಮತ್ತೆ ಅತಂತ್ರಕ್ಕೆ ಸಿಲುಕುವ ಆತಂಕ ನಿರ್ಮಾಣವಾಗಿದೆ. ಕಳೆದ ೧೭ ತಿಂಗಳ ಹಿಂದಷ್ಟೆ ಅಧಿಕಾರಕ್ಕೆ ಬಂದ ಬಿಜೆಪಿ ಸರಕಾರ ತನ್ನ ಆಂತರಿಕ ಬೇಗುದಿಯಿಂದ ಇಕ್ಕಟ್ಟಿಗೆ ಸಿಲುಕಿದ್ದು, ಸರಕಾರ ಪತನವಾಗುವ ಪರಿಸ್ಥಿತಿ ನಿರ್ಮಾಣ ವಾಗಿರುವು ವಿಷಾದನಿಯ ಎಂದು ತಟಸ್ಥ ಬಣದ ಶಾಸಕರು ವಿಷಾದಿಸಿದ್ದಾರೆ.

ಸಾಮೂಹಿಕ ರಾಜೀನಾಮೆ ಬೆದರಿಕೆ

ಬೆಂಗಳೂರು: ಮುಖ್ಯಮಂತ್ರಿಯವರ ನಾಯಕತ್ವ ಬದಲಾಗದಿದ್ದರೆ ಶಾಸಕರ ಸ್ಥಾನಕ್ಕೆ ಸುಮಾರು ೬೫ ಮಂದಿ ಶಾಸಕರು ಸಾಮೂಹಿಕ ರಾಜೀನಾಮೆ ನೀಡುವುದಾಗಿ ಗಣಿಧಣಿಗಳ ಬಣದಲ್ಲಿ ಗುರುತಿಸಿಕೊಂಡಿರುವ ಶಾಸಕರು ಜಂಟಿ ಹೇಳಿಕೆ ನೀಡಿದ್ದಾರೆ.

ಹೈದರಾಬಾದ್‌ನಲ್ಲಿ ಬಿಡು ಬಿಟ್ಟಿರುವ ಶಾಸಕರ ಪೈಕಿ ರೇಣುಕಾಚಾರ್ಯ ಮಾತನಾಡಿ, ಶೋಭಾ ಕರಂದ್ಲಾಜೆಯಿಂದ ಸರಕಾರ ಪತನವಾಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಹೈಕಮಾಂಡ್ ಸೂಕ್ತ ನಿರ್ಣಯ ಕೈಗೊಳ್ಳದಿದ್ದರೆ ಬಂಡಾಯವೆದ್ದಿರುವ ಶಾಸಕರೆಲ್ಲರೂ ವಿಧಾನಸಭಾಧ್ಯಕ್ಷರಿಗೆ ಸಾಮೂಹಿಕ ರಾಜೀನಾಮೆ ಸಲ್ಲಿಸಲಿದ್ದಾರೆ ಎಂದು ಹೇಳಿದರು.
.
ನಾಯಕತ್ವದ ಬದಲಾವಣೆಯಿಲ್ಲ: ರಾಜನಾಥ್ ಸಿಂಗ್ ಸ್ಪಷ್ಟನೆ

ಬೆಂಗಳೂರು: ಮುಖ್ಯಮಂತ್ರಿ ಯಡಿಯೂರಪ್ಪನವರ ನಾಯಕತ್ವ ಬದಲಾವಣೆಯಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ರಾಜನಾಥ್ ಸಿಂಗ್ ಇದೇ ಮೊದಲ ಬಾರಿಗೆ ಸ್ಪಷ್ಟವಾಗಿ ಹೇಳಿದ್ದಾರೆ.

ಯಡಿಯೂರಪ್ಪನವರೊಂದಿಗೆ ಮಾತಕತೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸದ್ಯದ ಪರಿಸ್ಥಿತಿಯಲ್ಲಿ ನಾಯಕತ್ವ ಬದಲಾವಣೆಯ ಪ್ರಸ್ತಾಪ ಬಂದಿಲ್ಲ. ಅಂತಹ ಬೇಡಿಕೆಯನ್ನೇ ಯಾರು ಮಂಡಿಸಿಲ್ಲ ಎಂದು ಹೇಳಿದರು.

ಉಂಟಾಗಿರುವ ಬಿಕ್ಕಟ್ಟಿನ ಪರಿಹಾರಕ್ಕೆ ಚರ್ಚೆ ನಡೆಯುತ್ತಿದೆ. ಒಂದೆರಡು ದಿನಗಳಲ್ಲಿ ಎಲ್ಲವೂ ಸೂಸುತ್ರವಾಗಿ ಬಗೆ ಹರಿಯಲಿದೆ ಎಂದು ಹೇಳಿದರು.

ಇಂದು ಮುಖಾಮುಖಿ

ಬೆಂಗಳೂರು: ಯಡಿಯೂರಪ್ಪ ಮತ್ತು ಜನಾರ್ದನ ರೆಡ್ಡಿಯವರ ನಡುವೆ ಇಂದು ನಡೆಯಬೇಕಿದ್ದ ಮುಖಾಮುಖಿ ಮಾತುಕತೆಯನ್ನು ವರಿಷ್ಠರು ನಾಳೆಗೆ ಮುಂದುವರಿಸಿದ್ದಾರೆ.

ಜನಾರ್ದನ ರೆಡ್ಡಿಯವರ ಬಿಗಿಪಟ್ಟಿನಿಂದಾಗಿ ಇಂದು ನಡೆಯಬೇಕಿದ್ದ ಮಾತುಕತೆ ರದ್ದುಗೊಂಡಿತ್ತು. ಇದರಿಂದ ಬೆಂಗಳೂರಿಗೆ ವಾಪಾಸಾಗಲು ಸಿದ್ಧರಾಗಿದ್ದ ಯಡಿಯೂರಪ್ಪ ನವರನ್ನು ಹೈಕಮಾಂಡ್ ವರಿಷ್ಠರು ತಡೆದಿದ್ದು, ನಾಳೆ ಇನ್ನೊಂದು ಸುತ್ತಿನ ಪ್ರಯತ್ನ ನಡೆಸುವ ಭರವಸೆ ನೀಡಿದ್ದಾರೆ. ನಾಯಕತ್ವ ಬದಲಾವಣೆಯಾಗದ ಹೊರತು ಇನ್ಯಾವ ಪರಿಹಾರಗಳು ಇಲ್ಲ ಎಂದು ಜನಾರ್ದನ ರೆಡ್ಡಿ ಖಡಾಖಂಡಿತವಾಗಿ ಹೇಳಿದ್ದಾರೆ.
ನಾಳೆ ತಮ್ಮ ಆಪ್ತರೊಂದಿಗೆ ಚರ್ಚಿಸಿದ ನಂತರ ಜನಾರ್ದನ ರೆಡ್ಡಿ ದಿಲ್ಲಿಗೆ ತೆರಳುವ ಸಾಧ್ಯಗಳಿವೆ ಎಂದು ಮೂಲಗಳು ತಿಳಿಸಿವೆ.

ಯಡಿಯೂರಪ್ಪ ಮುಂದುವರಿಕೆ: ಸಚಿವರ ವಿಶ್ವಾಸ

ಬೆಂಗಳೂರು: ಬಿಜೆಪಿಯಲ್ಲಿ ಉಂಟಾಗಿರುವ ಬಿಕ್ಕಟ್ಟು ಒಂದೆರಡು ದಿನಗಳಲ್ಲಿ ಬಗೆಹರಿದು ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದಾರೆ ಎಂದು ನಾಲ್ಕು ಮಂದಿ ಸಚಿವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರಾದ ಅರವಿಂದ ಲಿಂಬಾವಳಿ, ಗೋವಿಂದ ಕಾರಜೋಳ, ಸಿ.ಎಂ.ಉದಾಸಿ ರಾಜ್ಯದಲ್ಲಿ ನಾಯಕತ್ವ ಬದಲಾವಣೆಯಿಲ್ಲ ಎಂದು ಹೇಳುವ ಮೂಲಕ ಯಡಿಯೂರಪ್ಪ ನವರಲ್ಲಿ ನಿಷ್ಠೆ ಪ್ರದರ್ಶಿಸಿದರು.

೨೦೦೮ರಲ್ಲಿ ಯಡಿಯೂರಪ್ಪನವರ ನಾಯಕತ್ವದಲ್ಲಿ ಬಿಜೆಪಿ ವಿಧಾನಸಭೆ ಚುನಾವಣೆ ಎದುರಿಸಿದೆ. ಜನತೆ ಮುಂದಿನ ಐದು ವರ್ಷಗಳ ಅವಧಿಗೆ ಅಧಿಕಾರ ನಡೆಸಲು ಆಶೀರ್ವಾದಿಸಿದ್ದಾರೆ. ಅದರಂತೆ ತಮ್ಮ ಸರಕಾರ ಅವಧಿ ಪೂರೈಸಲಿದೆ ಎಂದು ಸಚಿವರು ಹೇಳಿದರು.

ಶತಮಾನಗಳ ನಂತರ ಸಂಭವಿಸಿರುವ ನೆರೆ ಹಾವಳಿಗೆ ಪುನರ್ವಸತಿ ಕಾರ್ಯಗಳನ್ನು ಕೈಗೊಳ್ಳಬೇಕಿದೆ. ಸಾರ್ವಜನಿಕರು ಇದಕ್ಕಾಗಿ ಉದಾರ ದೇಣಿಗೆ ನೀಡಿದ್ದಾರೆ.

ಬಿಜೆಪಿಯಲ್ಲಿ ಉಂಟಾಗಿರುವ ಕೌಟುಂಬಿಕ ಸಮಸ್ಯೆಗಳನ್ನು ಶೀಘ್ರವೇ ಪರಿಹರಿಸಿಕೊಂಡು ಹಿಂದಿಗಿಂತಲೂ ಹೆಚ್ಚಿನ ಅಭಿವೃದ್ಧಿ ಮಾಡುತ್ತೇವೆ. ದಿಲ್ಲಿ ನಡೆಯುತ್ತಿರುವ ತ್ರೀಪಕ್ಷೀಯ ಮಾತುಕತೆ ಯಶಸ್ವಿಯಾಗಲಿದೆ ಎಂದು ಅರವಿಂದ ಲಿಂಬಾವಳಿ ವಿಶ್ವಾಸ ವ್ಯಕ್ತಪಡಿಸಿದರು.

ಸಚಿವರಾದ ರೇವುನಾಯಕ್, ಶಾಸಕರಾದ ರಘುಪತಿಭಟ್, ಸಿದ್ದು ಸವದಿ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.

ಶೋಭಾ ತಲೆದಂಡದ  ರಾಜಿ ಸೂತ್ರ?

ಹೊಸದಿಲ್ಲಿ: ಗ್ರಾಮೀಣಾಭಿವೃದ್ಧಿ ಸಚಿವೆ ಶೋಭಾ ಕರಂದ್ಲಾಜೆಯವರ ತಲೆದಂಡ ಹಾಗೂ ಮುಖ್ಯಮಂತ್ರಿಯ ಪ್ರಧಾನ ಕಾರ್ಯದರ್ಶಿ ಪಿ.ವಿ. ಬಳಿಗಾರರ ವರ್ಗಾವಣೆ- ಇದು ಬಂಡಾಯದಿಂದ ಬಳಲಿರುವ ರಾಜ್ಯ ಬಿಜೆಪಿಯಲ್ಲಿ ಶಾಂತಿಯನ್ನು ಮರಳಿಸಲು ಬಿಜೆಪಿ ಹೈಕಮಾಂಡ್ ಭಿನ್ನ ಮತೀಯರ ಮುಂದಿರಿಸಿರುವ ರಾಜಿ ಸೂತ್ರವೆನ್ನಲಾಗಿದೆ.
ಆದಾಗ್ಯೂ, ಬಂಡುಕೋರರು ನಾಯಕತ್ವ ಬದಲಾವಣೆಯ ತಮ್ಮ ಪಟ್ಟನ್ನು ಇನ್ನೂ ಸಡಿಲಿಸಿಲ್ಲವೆಂದು ಹೇಳಲಾಗಿದೆ.

ಆದರೆ, ರಾಜ್ಯದ ನಾಯಕತ್ವ ಬದಲಾವಣೆಯ ಯಾವುದೇ ಸಾಧ್ಯತೆಯನ್ನು ಪಕ್ಷಾಧ್ಯಕ್ಷ ರಾಜನಾಥ ಸಿಂಗ್ ತಳ್ಳಿ ಹಾಕಿದ್ದು, ಪಕ್ಷದ ವರಿಷ್ಠ ನಾಯಕರು ಭಿನ್ನರ ಕೆಲವು ಬೇಡಿಕೆಗಳನ್ನು ಈಡೇರಿಸುವುದಾಗಿ ಭಿನ್ನಮತೀಯ ನಾಯಕ, ಸಾರಿಗೆ ಸಚಿವ ಜನಾರ್ದನ ರೆಡ್ಡಿಯವರಿಗೆ ಸಂದೇಶ ಕಳುಹಿಸಿದ್ದು, ಮುಖ್ಯಮಂತ್ರಿಯ ಬದಲಾವಣೆ ಸಾಧ್ಯವೇ ಇಲ್ಲವೆಂದು ತಿಳಿಸಿದ್ದಾರೆಂದು ಸ್ಪಷ್ಟಪಡಿಸಿದ್ದಾರೆ.

ಈ ರಾಜಿ ಸೂತ್ರದನ್ವಯ ಶೋಭಾ ಕರಂದ್ಲಾಜೆಯವರ ಪದಚ್ಯುತಿ ಸೇರಿದ್ದು, ಇದು ರೆಡ್ಡಿ ಸಹೋದರರ ಪ್ರಮುಖ ಬೇಡಿಕೆಗಳಲ್ಲೊಂದಾಗಿದೆಯೆಂದು ಮೂಲಗಳು ತಿಳಿಸಿವೆ.
ವಿಧಾನಸಭಾಧ್ಯಕ್ಷ ಜಗದೀಶ ಶೆಟ್ಟರ್‌ಗೆ ಸಂಪುಟದಲ್ಲಿ ಸೂಕ್ತ ಸ್ಥಾನ ನೀಡುವುದು ಹಾಗೂ ಬಳಿಗಾರರನ್ನು ವರ್ಗಾಯಿಸುವುದು ಉನ್ನತ ನಾಯಕರು ಮುಂದಿಟ್ಟಿರುವ ಇತರ ಕೊಡುಗೆಗಳೆನ್ನಲಾಗಿದೆ.

ಆದರೆ, ಈ ರಾಜಿ ಸೂತ್ರವನ್ನು ಭಿನ್ನಮತೀಯರು ಒಪ್ಪಿದ್ದಾರೆಯೇ ಎಂಬುದು ತಕ್ಷಣಕ್ಕೆ ತಿಳಿದು ಬಂದಿಲ್ಲ.

ದಕ್ಷಿಣ ಭಾರತದ ಪ್ರಪ್ರಥಮ ಬಿಜೆಪಿ ಸರಕಾರವನ್ನು ಸುತ್ತುವರಿದಿರುವ ಬಿಕ್ಕಟ್ಟನ್ನು ನಿವಾರಿಸುವ ಪ್ರಯತ್ನವಾಗಿ ಇಂದು ಬಿಜೆಪಿಯ ಹಿರಿಯ ನಾಯಕರಾದ ರಾಜನಾಥ ಸಿಂಗ್, ವೆಂಕಯ್ಯ ನಾಯ್ಡು, ಸುಶ್ಮಾ ಸ್ವರಾಜ್, ಅರುನ್ ಜೇಟ್ಲಿ ಹಾಗೂ ಅನಂತಕುಮಾರ್ ತಮ್ಮೊಳಗೆ ಹಾಗೂ ಜನಾರ್ದನ ರೆಡ್ಡಿಯವರೊಂದಿಗೆ ಅನೇಕ ಸಭೆಗಳನ್ನು ನಡೆಸಿದ್ದಾರೆ.

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸಹ ನಿನ್ನೆ ದಿಲ್ಲಿಗೆ ಹೋಗಿದ್ದು, ಇಂದು ಹಿರಿಯ ನಾಯಕರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಆದಾಗ್ಯೂ, ರೆಡ್ಡಿ ಸಹೋದರು ಮುಖಾಮುಖಿ ಭೇಟಿಯ ಅವರ ಆಸೆಗೆ ತಣ್ಣೀರೆರಚಿದ್ದಾರೆ.

 

ಸೌಜನ್ಯ: ಕನ್ನಡಪ್ರಭ 


Share: