ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನಡೆಸಿದ ಸಭೆ ಫಲಪ್ರದವಾಗಿರುವ ಹಿನ್ನೆಲೆಯಲ್ಲಿ ರಾಜ್ಯದ ಸರ್ಕಾರಿ ಆಸ್ಪತ್ರೆಗಳ ವೈದ್ಯರು ತಮ್ಮ ಉದ್ದೇಶಿತ ಸಾಮೂಹಿಕ ರಾಜೀನಾಮೆ ನಿರ್ಧಾರ ಕೈಬಿಟ್ಟಿದ್ದಾರೆ.
ಪ್ರಸ್ತುತ ರಾಜಕೀಯ ಸನ್ನಿವೇಶ, ಉತ್ತರ ಕರ್ನಾಟಕದಲ್ಲಿ ಪ್ರವಾಹದಿಂದ ತಲೆದೋರಿರುವ ಸಮಸ್ಯೆ, ಆರ್ಥಿಕ ಮುಗ್ಗಟ್ಟು ಸೇರಿದಂತೆ ಮತ್ತಿತರೆ ಕಾರಣಗಳನ್ನು ಗಮನದಲ್ಲಿಟ್ಟುಕೊಂಡು ಸರ್ಕಾರದ ಭರವಸೆಗಳಿಗೆ ಒಪ್ಪಲಾಗಿದೆ ಎಂದು ವೈದ್ಯಾಧಿಕಾರಿಗಳ ಸಂಘ ತಿಳಿಸಿದೆ. ಬುಧವಾರ ಸಂಜೆ ವಿಧಾನಸೌಧದಲ್ಲಿ ಯಡಿಯೂರಪ್ಪ ಸರ್ಕಾರಿ ವೈದ್ಯಾಧಿಕಾರಿಗಳ ಸಂಘದ ಅಧ್ಯಕ್ಷ ಡಾ|ರವೀಂದ್ರ ನೇತೃತ್ವದ ನಿಯೋಗದೊಂದಿಗೆ ಮಾತುಕತೆ ನಡೆಸಿದರು. ಹಲವು ವರ್ಷಗಳಿಂದ ಬಾಕಿ ಉಳಿದಿದ್ದ ಬೇಡಿಕೆಗಳನ್ನು ಈಡೇರಿಸುವುದಾಗಿ ಅವರು ಭರವಸೆ ನೀಡಿದರು.
ಸರ್ವಸಮ್ಮತ ನಿರ್ಧಾರ: ನಂತರ ಮಾತನಾಡಿದ ಯಡಿಯೂರಪ್ಪ, ವೈದ್ಯಾಧಿಕಾರಿಗಳ ಸಂಘದ ಮುಖ್ಯಸ್ಥರೊಂದಿಗೆ ನಡೆಸಿದ ಮಾತುಕತೆ ಸಂಪೂರ್ಣ ಫಲಪ್ರದವಾಗಿದೆ. ಸರ್ಕಾರ ನೀಡಿದ ಭರವಸೆಗೆ ವೈದ್ಯರು ಸಮ್ಮತಿ ಸೂಚಿಸಿರುವುದು ಅಮೃತ ಗಳಿಗೆ ಎಂದು ಬಣ್ಣಿಸಿದರು. ಆರ್ಥಿಕ ಸಮಸ್ಯೆ ಇದ್ದರೂ ವೈದ್ಯಕೀಯ, ವಸತಿ ಮತ್ತು ಶಿಕ್ಷಣ ಕ್ಷೇತ್ರಕ್ಕೆ ಸರ್ಕಾರ ಸಾಕಷ್ಟು ಆದ್ಯತೆ ನೀಡುತ್ತಿದೆ ಎಂದರು.
ಅಲ್ಪ ತೃಪ್ತಿ- ವೈದ್ಯರ ಸಂಘ: ಸಭೆಯ ಬಗ್ಗೆ ಪ್ರತಿಕ್ರಿಯೆ ನೀಡಿದ ವೈದ್ಯಾಧಿಕಾರಿಗಳ ಸಂಘದ ಅಧ್ಯಕ್ಷ ಡಾ|ರವೀಂದ್ರ, ಸರ್ಕಾರದ ಭರವಸೆಯಿಂದ ಸಮಾಧಾನವಾಗಿದೆ. ಆದರೆ ಸಂಪೂರ್ಣ ಸಮಾಧಾನವಾಗಿಲ್ಲ.
ಈಗಿನ ರಾಜಕೀಯ ಪರಿಸ್ಥಿತಿ, ಆರ್ಥಿಕ ಸ್ಥಿತಿಗತಿ ಹಿನ್ನೆಲೆಯಲ್ಲಿ ಸರ್ಕಾರ ಕೆಲವೇ ಬೇಡಿಕೆಗಳನ್ನು ಈಡೇರಿಸಿರುವುದಕ್ಕೆ ಸಮ್ಮತಿ ಸೂಚಿಸಿದ್ದೇವೆ. ಈ ಹಿನ್ನೆಲೆಯಲ್ಲಿ ಸಾಮೂಹಿಕ ರಾಜೀನಾಮೆ ನಿರ್ಧಾರ ಕೈಬಿಟ್ಟಿದ್ದೇವೆ ಎಂದು ತಿಳಿಸಿದರು.
ಒಂದು ವೇಳೆ ಸರ್ಕಾರ ಈ ನಿರ್ಧಾರಗಳನ್ನು ಕಾರ್ಯರೂಪಕ್ಕೆ ತರದೇ ಇದ್ದರೆ ಸಾಮೂಹಿಕ ರಾಜೀನಾಮೆ ವಿಚಾರವನ್ನು ಮತ್ತೆ ಪರಿಶೀಲಿಸಬೇಕಾಗುತ್ತದೆ ಎಂದೂ ಪರೋಕ್ಷ ಎಚ್ಚರಿಕೆ ನೀಡಿದರು.ಸಂಘದ ಖಜಾಂಚಿ ಶೈಲಕುಮಾರ್ ಮಾತನಾಡಿ, ೬-೭ ವರ್ಷಗಳಿಂದ ಬಾಕಿ ಇದ್ದ ಬೇಡಿಕೆಯನ್ನು ಮುಖ್ಯಮಂತ್ರಿಗಳು ಕೇವಲ ೧೦ ನಿಮಿಷಗಳಲ್ಲಿ ಈಡೇರಿಸಿದ್ದಾರೆ ಎಂದು ಅವರು ಹರ್ಷ ವ್ಯಕ್ತಪಡಿಸಿದರು.
ಈಡೇರಿದ ಬೇಡಿಕೆಗಳು
೧ ಗ್ರಾಮಾಂತರ ಪ್ರದೇಶದಲ್ಲಿ ಸೇವೆ ಸಲ್ಲಿಸುತ್ತಿರುವ ವೈದ್ಯರಿಗೆ ಇನ್ನು ಮುಂದೆ ತಿಂಗಳಿಗೆ ೭೦೦೦ ರು. ಗ್ರಾಮೀಣ ಭತ್ಯೆ ನೀಡುವುದು.
೨ ಎಲ್ಲಾ ವೈದ್ಯರಿಗೆ ತುರ್ತು ಸೇವಾ ಭತ್ಯೆಯಾಗಿ ೩೦೦೦ ರು. ನೀಡುವುದು.
೩ ಸ್ನಾತಕೋತ್ತರ ಪದವಿ ಮುಗಿಸಿದ ವೈದ್ಯರಿಗೆ ೮೦೦೦ ಮತ್ತು ಡಿಪ್ಲೊಮಾ ಹೊಂದಿದವರಿಗೆ ೬೦೦೦ ರು. ವಿಶೇಷ ಭತ್ಯೆ ನೀಡುವುದು.
೪ ಗ್ರಾಮಾಂತರ ಪ್ರದೇಶದಲ್ಲಿ ಸೇವೆ ಸಲ್ಲಿಸಿ ನಗರದಲ್ಲಿ ಸೇವೆ ಮುಂದುವರೆಸುತ್ತಿರುವ ವೈದ್ಯರಿಗೆ ೫೦೦೦ ರು. ನೀಡುವುದು
೫ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳಲ್ಲಿ ಸೇವೆ ಸಲ್ಲಿಸುವ ಎಲ್ಲಾ ವೈದ್ಯರಿಗೆ ೧೦೦೦೦ ರು. ಭತ್ಯೆ ನೀಡುವುದು
ವೈದ್ಯರಿಂದ ೧೫ ಕೋಟಿ ರುಪಾಯಿ ಪರಿಹಾರ
ಅಕ್ಟೋಬರ್ ೧ರಿಂದ ಡಿಸೆಂಬರ್ ಅಂತ್ಯದವರೆಗೆ ತಮಗೆ ಬರಬೇಕಾದ ವಿಶೇಷ ಭತ್ಯೆಗಳ ಮೊತ್ತವಾದ ೧೫ ಕೋಟಿ ರು.ಗಳನ್ನು ಪ್ರಕೃತಿ ವಿಕೋಪ ನಿಧಿಗೆ ನೀಡಲಾಗುವುದು ಎಂದು ರವೀಂದ್ರ ತಿಳಿಸಿದರು. ಈ ಸಂಬಂಧ ಮುಖ್ಯಮಂತ್ರಿಗಳಿಗೆ ಒಪ್ಪಿಗೆ ಪತ್ರವನ್ನು ನೀಡಿದ ಅವರು, ಈ ಹಣದಲ್ಲಿ ಉತ್ತರ ಕರ್ನಾಟಕ ಭಾಗದ ಪ್ರವಾಹಪೀಡಿತ ಪ್ರದೇಶಗಳಲ್ಲಿ ಮನೆ ಕಳೆದುಕೊಂಡಿರುವ ೧೫೦೦ ಕುಟುಂಬಗಳಿಗೆ ಮನೆ ಕಟ್ಟಿಕೊಡುವ ಉದ್ದೇಶವಿದೆ ಎಂದರು.
ಸೌಜನ್ಯ: ಕನ್ನಡಪ್ರಭ