ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಕಾರವಾರ: ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮಹಿಳೆಯರಿಗೆ ತಿಂಗಳಿಗೆ ಹತ್ತೂವರೆ ಸಾವಿರ: ಸೈಲ್

ಕಾರವಾರ: ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮಹಿಳೆಯರಿಗೆ ತಿಂಗಳಿಗೆ ಹತ್ತೂವರೆ ಸಾವಿರ: ಸೈಲ್

Thu, 02 May 2024 00:19:27  Office Staff   S O News

ಕಾರವಾರ: ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರವನ್ನ ಗೆಲ್ಲಿಸಿದರೆ ತಿಂಗಳಿಗೆ ಹತ್ತೂವರೆ ಸಾವಿರ ಬಡ ಮಹಿಳೆಯರ ಖಾತೆಗೆ ಬರಲಿದೆ. ಈ ಅವಕಾಶವನ್ನ ಯಾರೂ ಬಿಡಬಾರದು ಎಂದು ಶಾಸಕ ಸತೀಶ್ ಸೈಲ್ ಕರೆನೀಡಿದರು.

ಕಡವಾಡದ ಅಂಗಡಿವಾಡ ಹಾಗೂ ಕಿನ್ನರದ ಬೋರಿಬಾಗದಲ್ಲಿ ಕಾಂಗ್ರೆಸ್ ಚುನಾವಣಾ ಪ್ರಚಾರದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಪಂಚ ಗ್ಯಾರಂಟಿ ನೀಡಿ ಬಡಜನರ ಪರವಾಗಿದೆ. ೧೯೦೦ ಕೋಟಿ ರೂ. ಸಿದ್ದರಾಮಯ್ಯನವರ ಆಡಳಿತದಲ್ಲಿ ಕಾರವಾರ- ಅಂಕೋಲಾ ಕ್ಷೇತ್ರಕ್ಕೆ ಬಂದಿತ್ತು. ಅದರಿಂದ ಅಭಿವೃದ್ಧಿ ಕಾಮಗಾರಿಗಳನ್ನ ಮಾಡಿದ್ದೇವೆ. ಆದರೆ ಒಂದೇ ಒಂದು ಸೇತುವೆ ಬಿಜೆಪಿಯವರು ಅವರ ಅವಧಿಯಲ್ಲಿ ಮಾಡಿಲ್ಲ. ನನ್ನ ಅವಧಿಯ ಕೆಲ ಕಾಮಗಾರಿಗಳು ಅರ್ಧಂಬರ್ಧವಾಗಿದ್ದರೂ ಅದನ್ನ

ಮಹಿಳಾ ಘಟಕದ ಅಧ್ಯಕ್ಷರ ನೇಮಕ
ಕಾರವಾರ ತಾಲೂಕು ಮಹಿಳಾ ಘಟಕದ ಅಧ್ಯಕ್ಷೆಯನ್ನಾಗಿ ಸೀಮಾ ಪಾಟೀಲ್ ಅವರನ್ನು ನೇಮಕ ಮಾಡಲಾಗಿದೆ. ಅವರಿಗೆ ನೇಮಕಾತಿ ಪ್ರಮಾಣಪತ್ರವನ್ನ ಡಾ.ಅಂಜಲಿ ನಿಂಬಾಳ್ಕರ್ ವಿತರಿಸಿದರು.

ಪೂರ್ಣಗೊಳಿಸಿದರೆ ನನಗೆ ಕ್ರೆಡಿಟ್ ಬರುತ್ತದೆಂದು ಪೂರ್ಣಗೊಳಿಸುತ್ತಿಲ್ಲ. ಕಾರವಾರದಲ್ಲಿ ಕ್ರಿಕೆಟ್ ಗ್ರೌಂಡ್ ಮಾಡೇ ತೀರುತ್ತೇನೆ ಎಂದೂ ಹೇಳಿದರು.

ಕಾಂಗ್ರೆಸ್ ಅಭ್ಯರ್ಥಿ ಡಾ.ಅಂಜಲಿ ನಿಂಬಾಳ್ಕರ್ ಮಾತನಾಡಿ, ಸುಳ್ಳು ಹೇಳಲು ನಮಗೆ ಬರಲ್ಲ, ಸುಳ್ಳು ಆಶ್ವಾಸನೆಯನ್ನ ಕಾಂಗ್ರೆಸ್ ನೀಡಲ್ಲ. ಸುಳ್ಳು ರಾಜಕಾರಣ ಬಿಜೆಪಿ ನಾಯಕರಿಗೆ ಬರುತ್ತದೆ. ಎಸಿ ರೂಮಲ್ಲಿ ಕೂತು ಮನ್ ಕೀ ಬಾತ್ ಮಾಡಿಲ್ಲ, ಜನರ ಮಧ್ಯೆ ತೆರಳಿ ಜನ್ ಕೀ ಬಾತ್ ಕೇಳಿ ಪ್ರಣಾಳಿಕೆ ತಯಾರಿಸಿದ್ದೇವೆ. ಅದಾನಿ- ಅಂಬಾನಿಯ ಸಾಲ ಮನ್ನಾವಲ್ಲ, ರೈತರ ಸಾಲಮನ್ನಾವನ್ನ ಕಾಂಗ್ರೆಸ್ ಘೋಷಿಸಿದೆ. ನಮ್ಮ ತೆರಿಗೆ ಹಣದಿಂದ ಸಾಲ ಪಡೆದ ಶ್ರೀಮಂತ ಉದ್ಯಮಿಗಳ ಸಾಲ ಮನ್ನಾ ಮಾಡುವ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಜನರಿಗೆ ಮೂಲಸೌಕರ್ಯ ನೀಡಲು ಆಗಲ್ಲ. ೩೦ ವರ್ಷಗಳ ಜಿಲ್ಲೆಯ ವನವಾಸ, ೧೦ ವರ್ಷಗಳ ಕೇಂದ್ರದ ಬಿಜೆಪಿ ಸರ್ಕಾರದಿಂದ ಯಾವುದೇ ಯೋಜನೆಗಳು ಬಾರದಕ್ಕೆ ಅವರಿಗೆ ನಾವು ಮನೆ ದಾರಿ ತೋರಿಸಬೇಕು. ನಾನೂ ಹಿಂದೂ, ನಾವೂ ಧರ್ಮ ಪಾಲಿಸುತ್ತೇವೆ. ನಾವೂ ದೇವರಿಗೆ ಕೈಮುಗಿದು ಪ್ರಾರ್ಥಿಸುತ್ತೇವೆ. ನಮ್ಮ ಧರ್ಮಕ್ಕೆ ಇವರಿಂದ ರಕ್ಷಣೆ ಬೇಕಾಗಿದೆ. ಧರ್ಮ, ಇತಿಹಾಸವನ್ನ ಇವರು ತಿರುಚುತ್ತಿದ್ದಾರೆ. ಜನಸೇವೆ ಮಾಡುವವರಿಗೆ ಅಧಿಕಾರ ನೀಡಬೇಕು ಎಂದರು.

ಚುನಾವಣೆ ಬರುತ್ತಿದ್ದಂತೆ ಜಾತಿ- ಧರ್ಮಗಳ ನಡುವೆ ಬೆಂಕಿ ಹಾಕುವವರು ಬಿಜೆಪಿಗರು. ನಾವು ಮಾಡಿದ ಕೆಲಸಗಳ ಮೇಲೆ ಕತ ಕೇಳುತ್ತೇವೆ.
* ಡಾ.ಅಂಜಲಿ ನಿಂಬಾಳ್ಕರ್, ಕಾಂಗ್ರೆಸ್ ಅಭ್ಯರ್ಥಿ

ಮಾಜಿ ಸಚಿವ ರಮಾನಾಥ ರೈ, ಕಾಂಗ್ರೆಸ್ ಗ್ಯಾರಂಟಿಗಳನ್ನ ಟೀಕಿಸಿದ್ದ ಬಿಜೆಪಿ, ಈಗ ಅದೇ ಗ್ಯಾರಂಟಿಯನ್ನ ಪ್ರಚಾರಕ್ಕೆ ಬಳಸುತ್ತಿದೆ. ರಾಜ್ಯ ಸರ್ಕಾರದ ಗ್ಯಾರಂಟಿಯನ್ನ ದುರ್ಬಲಗೊಳಿಸಲು ಅನ್ನಭಾಗ್ಯಕ್ಕೆ ಅಕ್ಕಿ ಕೊಡಲು ಪ್ರಧಾನಿ ನಿರಾಕರಿಸಿದರು. ಆದರೂ ನಮ್ಮ ಸರ್ಕಾರ ಬೆದರದೆ ನುಡಿದಂತೆ ನಡೆದೊಂಡಿದ್ದೇವೆ. ಲೋಕಸಭಾ ಚುನಾವಣೆಯಲ್ಲೂ ಪಂಚ ನ್ಯಾಯ ಗ್ಯಾರಂಟಿ ಘೋಷಿಸಿದ್ದೇವೆ, ಅದನ್ನೂ ಅಧಿಕಾರಕ್ಕೆ ಬಂದರೆ ಈಡೇರಿಸುತ್ತೇವೆ ಎಂದರು.

ಈ ವೇಳೆ ಸ್ಥಳೀಯ ಮಹಿಳೆಯರಿಂದ ಉಡಿ ತುಂಬಿ ಗೌರವಿಸಲಾಯಿತು.ಈ ಸಂದರ್ಭದಲ್ಲಿ ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಸುಜಾತಾ ಗಾಂವ್ಕರ್, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಪ್ರಭಾಕರ್ ಮಾಳ್ಸೇಕರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಮೀರ್ ನಾಯ್ಕ, ಮಹಿಳಾ ಕಾಂಗ್ರೆಸ್ ತಾಲೂಕು ಅಧ್ಯಕ್ಷೆ ಸೀಮಾ ಪಾಟೀಲ್, ಕಾಂಗ್ರೆಸ್ ಮುಖಂಡರಾದ ರಘು ನಾಯ್ಕ, ಕಡವಾಡ ಗ್ರಾಪಂ ಅಧ್ಯಕ್ಷೆ ಪ್ರಿಯಾ ಗೌಡ, ಪ್ರಮುಖರಾದ ಸತೀಶ ನಾಯ್ಕ, ದೇವರಾಜ ನಾರ್ವೇಕರ್, ಪ್ರಮುಖರಾದ ರಾಜೇಂದ್ರ ರಾಣೆ, ಕಿನ್ನರ ಗ್ರಾ‌ಪಂ ಅಧ್ಯಕ್ಷೆ ಪ್ರಿಯಾ ಗುನಗಿ, ದಿಲೀಪ್ ಕೋಟಾರ್ಕರ್, ಪ್ರಶಾಂತ್ ಗೋವೇಕರ್ ಮುಂತಾದವರು ಉಪಸ್ಥಿತರಿದ್ದರು.


Share: