ಭಟ್ಕಳ. ಫೆಬ್ರವರಿ 28: ಪ್ರಾರ್ಥನೆಯನ್ನು ಮಾಡಲು ಮಸೀದಿಗೆ ತೆರಳಿದ ಸಂದರ್ಭದಲ್ಲಿ ತಾಲೂಕಿನ ಹೆಬಳೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಹನೀಪಾಬಾದ್‌ನ ಮನೆಯೊಂದರ ಮುಂದಿನ ಕಂಪೌಂಡ್ ಗೋಡೆಯನ್ನು ಅರಣ್ಯ ಇಲಾಖೆಯ ಅಧಿಕಾರಿ ಖುಲ್ಲಾಪಡಿಸಿದ್ದು, ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಶುಕ್ರವಾದಂದು ಮಧ್ಯಾಹ್ನ ಹನೀಪಾಬಾದ್‌ನ ಜಿ ಎಂ ನಾಸೀರ ಎಂಬುವವರ ಮನೆಯವರು ಹಾಗೂ ಸುತ್ತಮುತ್ತಲಿನವರು ಮಸೀದಿಗೆ ಪ್ರಾರ್ಥನೆ ಸಲ್ಲಿಸಲು ತೆರಳಿದ್ದ ಸಂದರ್ಭದಲ್ಲಿ ದೀಢೀರ್ ಸ್ಥಳಕ್ಕೆ ಬಂದ ಅರಣ್ಯಾಧಿಕಾರಿಗಳು ಹಾಗೂ ಸಿಬ್ಬಂದಿಗಳು ಮನೆಯ ಮುಂದಿನ ಕಂಪೌಂಡ್‌ನ್ನು ದೂಡಿ ಹಾಕಿ ಜಾಗ ಖಾಲಿ ಮಾಡಿದ್ದಾರೆನ್ನಲಾಗಿದೆ. ಮನೆಯಲ್ಲಿದ್ದ ಹೆಂಗಸರು ಕಂಪೌಂಡ್ ಖುಲ್ಲಾಪಡಿಸಬೇಡಿ ಎಂದು ತಿಳಿಸಿದ್ದರೂ ಸಹ ಕೇಳದ ಅಧಿಕಾರಿಗಳು ಖುಲ್ಲಾಪಡಿಸಿ ತೆರಳಿದ್ದಾರೆ ಎಂಬುದು ಮನೆಯ ಮಾಲಿಕ ಆರೋಪವಾಗಿದೆ. ಕಳೆದ ೨೫-೩೦ ವರ್ಷಗಳ ಹಿಂದೆಯೇ ತಾವು ಅರಣ್ಯ ಭೂಮಿಯಲ್ಲಿ ಮನೆ ಕಟ್ಟಿಕೊಂಡಿದ್ದು, ಇದಕ್ಕೆ ಸಂಬಂಧಿಸಿದಂತೆ ಪಂಚಾಯತ್‌ಗೆ ತೆರಿಗೆ ಪಾವತಿಸಿದ ಚೀಟಿ, ವಿದ್ಯುತ್ ಬಿಲ್ ಹಾಗೂ ಮಂಜೂರಿಗೆ ನೀಡಿದ ಅರ್ಜಿ ಮುಂತಾದ ದಾಖಲೆ ಪತ್ರಗಳು ನಮ್ಮಲ್ಲಿವೆ. ಅರಣ್ಯಾಧಿಕಾರಿಗಳು ಖುಲ್ಲಾಪಡಿಸುವುದಿದ್ದರೆ ಭಟ್ಕಳದ ಅರಣ್ಯ ಭೂಮಿಯಲ್ಲಿ ನಿರ್ಮಿಸಲಾದ ಎಲ್ಲಾ ಅತಿಕ್ರಮಣ ಮನೆಗಳನ್ನೂ, ಕಂಪೌಂಡಗಳನ್ನೂ ಖುಲ್ಲಾಪಡಿಸಲು ಮುಂದಾಗಬೇಕು. ಅದನ್ನು ಬಿಟ್ಟು ಯಾರದೋ ಮಾತನ್ನು ಕೇಳಿ ಗಂಡಸರು ನಮಾಜಿಗೆ ತೆರಳಿದ ಸಂದರ್ಭದಲ್ಲಿ ದಿಢೀರ್ ಬಂದು ಕಂಪೌಂಡ್ ಖುಲ್ಲಾಪಡಿಸುವುದು ಸರಿಯಲ್ಲ ಎಂದ ನಾಸೀರ್ ಈ ಬಗ್ಗೆ ಮೇಲಾಧಿಕಾರಿಗಳಿಗೆ ಹಾಗೂ ಜನಪ್ರತಿನಿಧಿಗಳಿಗೂ ತಿಳಿಸುವುದಾಗಿ ಹೇಳಿದ್ದಾರೆ. ಕಂಪೌಂಡ್ ಖುಲ್ಲಾಪಡಿಸಿದ ನಂತರದಲ್ಲಿ ಸ್ಥಳದಲ್ಲಿ ಜನರು ಜಮಾಯಿಸಿ ಅರಣ್ಯ ಇಲಾಖೆಯ ಕಾರ್ಯವೈಖರಿಯ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.