ಕರ್ನಾಟಕ ವಿಧಾನಸಭೆಯ ಬಜೆಟ್ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದ ರಾಜ್ಯಪಾಲರ ಭಾಷಣವು ರಾಜ್ಯದ ಬಿಜೆಪಿ ಸರ್ಕಾರ ಸತ್ಯದ ಕಣ್ಣುಗಳಿಗೆ ಮಣ್ಣೆರೆಚಿದ ಪ್ರತೀಕವಾಗಿದೆ. ರಾಜ್ಯ ಸರ್ಕಾರದ ವಕ್ತಾರರಾಗಿ ಸಂವಿಧಾನದತ್ತ `ಕರ್ತವ್ಯ' ನಿರ್ವಹಿಸಿರುವ ರಾಜ್ಯಪಾಲರ ಮೂಲಕ ಸರ್ಕಾರವು ತನ್ನ ಜನದ್ರೋಹಿ ಸ್ವರೂಪ, ಹೊಣೆಗೇಡಿತನ ಗಳನ್ನು ಅನಾವರಣ ಮಾಡಿಕೊಂಡಿದೆ. ರಾಜ್ಯಪಾಲರೇನೋ ಸರ್ಕಾರದ ವಕ್ತಾರರಾಗಿ ನಿಲುವು ವ್ಯಕ್ತಪಡಿಸಿದ್ದಾರೆ. ಆದರೆ ಈ ಹಿಂದೆ ಅನೇಕ ಸಂದರ್ಭಗಳಲ್ಲಿ ರಾಜ್ಯಪಾಲರೇ, ಇಲ್ಲಿನ ಅಕ್ರಮ ಗಣಿಗಾರಿಕೆ, ಸಂಪನ್ಮೂಲಗಳ ಅವ್ಯಾಹತ ಲೂಟಿ, ಚರ್ಚೆಗಳು ಹಾಗೂ ಅಲ್ಪಸಂಖ್ಯಾತರ ಮೇಲೆ ನಡೆಯುತ್ತಿರುವ ಕೋಮುವಾದಿಗಳ ಅವ್ಯಾಹತ ದಾಳಿಗಳು, ಕಾನೂನು-ವ್ಯವಸ್ಥೆ ಕುಸಿಯುತ್ತಿರುವ ಬಗ್ಗೆ ಅತ್ಯಂತ ಗಟ್ಟಿ ದನಿಯಲ್ಲಿ ಸರ್ಕಾರಕ್ಕೆ ಎಚ್ಚರಿಕೆ ನೀಡಿ ಜನತೆಯ ಭಾವನೆಗಳಿಗೆ ಸ್ಪಂದಿಸಿದ್ದರು. ಆದರೆ ಇವುಗಳ ಲವಲೇಶವೂ ಇಲ್ಲಿ ಪ್ರಸ್ತಾಪಿತವಾಗದೇ ಹೋಗಿರುವುದೇ, ರಾಜ್ಯಪಾಲರ ನಿಜ ಅಭಿಪ್ರಾಯಕ್ಕೂ ಸರ್ಕಾರ ಬರೆದುಕೊಟ್ಟ ಭಾಷಣಕ್ಕೆ ಇರುವ ವಿರುದ್ಧ ದಿಕ್ಕುಗಳನ್ನೇ ತೋರಿಸುತ್ತದೆ.
ರಾಜ್ಯದ ಜನತೆಯ ಜ್ವಲಂತ ಪ್ರಶ್ನೆಗಳಾವುವನ್ನು ಸರ್ಕಾರ ಪರಿಗಣಿಸಿಯೇ ಇಲ್ಲ. ಅಗತ್ಯವಸ್ತುಗಳ ಅನಿಯಂತ್ರಿತ ಬೆಲೆ ಏರಿಕೆಯ ಸಂದರ್ಭದಲ್ಲಿ ಆ ಪಡಿತರ ವ್ಯವಸ್ಥೆಯ ಮೂಲಕ ಕಡಿಮೆ ದರಗಳಲ್ಲಿ ಸುಲಭವಾಗಿ ಸಿಗುವಂತೆ ಕೈಗೊಳ್ಳಲಾಗುವ ಕ್ರಮಗಳನ್ನು ಪ್ರಕಟಿಸಬೇಕಿತ್ತು. ಇದು ಬಿಟ್ಟು ವಿತರಣೆ ದೋಷ ಸರಿಪಡಿಸಲೆಂದು ಬಯೋ ಮೆಟ್ರಿಕ್ ಸಾಧನ ಅಳವಡಿಸುವುದೇ ಆದ್ಯತೆ ಪರಿಹಾರ ಎಂದು ಭಾವಿಸಿದೆ ಸರ್ಕಾರ! ಹೀಗೆ ಹಾದಿ ತಪ್ಪಸುವಲ್ಲಿನ ಅದರ ಕೌಶಲ್ಯದಲ್ಲಿ ನಿಷ್ಕಾಳಜಿಯೇ ಕಾಣುತ್ತದೆ. ಎಲ್ಲೆಡೆ ಕಾರ್ಷಿಕ ಬಿಕ್ಕಟ್ಟು ಆಳವಾಗುತ್ತಿದೆ. ರೈತರ ಆತ್ಮಹತ್ಯೆಗಳಿಗೆ ಕೊನೆಯಿಲ್ಲ. ಕೈಗಾರಿಕೆ, ಬಂಡವಾಳ ಹೂಡಿಕೆ ಹೆಸರಿನಲ್ಲಿ ಭೂ ದಂಧೆಗಾಗಿ ಅಪಾರ ಭೂ ಸ್ವಾಧೀನಕ್ಕೆ ಸರ್ಕಾರ ಮುಂದಾಗಿದ್ದು ರೈತರು ಅದರ ವಿರುದ್ಧ ಬೀದಿಗಿಳಿದಿದ್ದಾರೆ. ರಾಜ್ಯವು ವಿಪರೀತ ವಿದ್ಯುತ್ ಕೊರತೆ ಎದುರಿಸುತ್ತಿದೆ. ಕೈಗಾರಿಕೆಗಳು ಮುಗ್ಗರಿಸುತ್ತಿವೆ. ಈ ಕೊರತೆ ನೀಗಿಸಲು ಈ ಮೊದಲೇ ಕೈಗೊಳ್ಳಬಹುದಾದ ಕ್ರಮಗಳನ್ನು ಕೈಗೊಳ್ಳದೇ, ಮುಂದಿನ ಯೋಜನೆಯ-ಅಡಿಗಲ್ಲು ತೋರಿಸುವುದು ಪರಿಹಾರ ಒದಗಿಸಬಲ್ಲದೇ? ಇನ್ನು ಬರ-ನೆರೆ ಸಂತ್ರಸ್ತರ ಬವಣೆಗಳು ನಿತ್ಯವೂ ಹೊರಬರುತ್ತಿವೆ. ಆದರೆ ಪರಿಹರಿಸುವ ನಿಟ್ಟಿನಲ್ಲಿ ಕೈಗೊಳ್ಳಲಾದ ಕ್ರಮಗಳು, ಮುಂದಿನ ಯೋಜನೆಗಳಿಲ್ಲ. ಅಕ್ರಮ ಗಣಿಗಾರಿಕೆಗೆ ಕಡಿವಾಣ ಇಲ್ಲದಿರುವುದು ಮತ್ತು ಮುಕ್ತ ಅವಕಾಶ ತೆರೆದಿಟ್ಟಿರುವುದು ಇಂದಿನ ವಾಸ್ತವ. ಈ ಬಗ್ಗೆ ಬಂದ ಟೀಕೆಗಳಿಗಾದರೂ ಏನು ಉತ್ತರ ಎಂದು ಹೇಳಿಲ್ಲ. ಇನ್ನೂ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಅನುಷ್ಠಾನದಲ್ಲಿನ ವೈಫಲ್ಯ, ಭ್ರಷ್ಟಾಚಾರದ ಬಗ್ಗೆ ಚಕಾರವಿಲ್ಲ. ಕೇಂದ್ರದ ತನಿಖಾ ಸಂಸ್ಥೆಯೇ ಇದಕ್ಕಾಗಿ ಬಂದು ಹೋಗಿದೆ. ಇನ್ನೂ ಗ್ರಾಮೀಣ-ನಗರದಲ್ಲಿ ಹೆಚ್ಚುತ್ತಿರುವ ನಿರುದ್ಯೋಗ, ಜಾಗತಿಕ ಆರ್ಥಿಕ ಕುಸಿತದ ದುಷ್ಪರಿಣಾಮದ ಅವಲೋಕನವೂ ಇಲ್ಲ.
ವಿಶೇಷವಾಗಿ ಅಸಂಘಟಿತ ಕಾರ್ಮಿಕರು ತಮ್ಮ ಸಮಸ್ಯೆಗಳ ಪರಿಹಾರಕ್ಕಾಗಿ ವಿವಿಧ ಹಂತಗಳಲ್ಲಿ ಹೋರಾಟವನ್ನು ನಡೆಸುತ್ತಲೇ ಬರುತ್ತಿದ್ದಾರೆ. ಕನಿಷ್ಠ ಪರಿಹಾರ ನೀಡಲು ಸರ್ಕಾರ ಸಿದ್ಧವಿಲ್ಲದೇ, ಅಂತಹ ಕನಿಷ್ಠ ಕಾಳಜಿಯೂ ವ್ಯಕ್ತಪಡಿಸಿದೇ ಇರುವುದು ಖಂಡನೀಯ. ಇನ್ನೂ ಬಡಾವಣೆ ನಿರ್ಮಾಣ, ವಸತಿ ಸಮುಚ್ಛಯ ನಿರ್ಮಾಣದ ಕಾಮನಬಿಲ್ಲು ತೋರಿಸುವುದು ಸೂರಿಲ್ಲದವರ ಆಸೆಗೆ ಮಣ್ಣೆರಚುವಂತಿದೆ.
ರಾಜ್ಯದಲ್ಲಿ ಇತ್ತೀಚಿನ ಒಂದು ವರ್ಷದಲ್ಲಿ ಬಂದೂ ಗೋಲಿಬಾರ್ ಆಗಿಲ್ಲ ಎಂದು ಸರ್ಕಾರ ಬೊಗಳೆ ಕೊಚ್ಚಿಕೊಂಡಿದೆ. ಆದರೆ ರೈತರು, ಕಾರ್ಮಿಕರು, ನೌಕರರು, ದಲಿತರು, ಮಹಿಳೆಯರು ಇತ್ಯಾದಿ ಜನಸಮೂಹಗಳು ಹೋರಾಟ ನಡೆಸದ ದಿನವೇ ಇಲ್ಲ. ಪೊಲೀಸರ ದಬ್ಬಾಳಿಕೆ, ಜೈಲುಗಟ್ಟುವುದು. ರೈತರಿಗೆ ಕೈಕೊಳ ತೊಡಿಸಿ ಅವಮಾನಿಸಿ ರುವುದು ನಡದೇ ಇದೆ. ಇನ್ನೂ ಸಂಘ ಪರಿವಾರ ಹಾವಳಿ ಬೇರೆ. ಹೀಗಿರುವಾಗ ಕಾನೂನು ವ್ಯವಸ್ಥೆ ಸರಿ ಇದೆ ಎನ್ನುವ ರಾಜ್ಯಪಾಲರ ಭಾಷಣ ಹಾಸ್ಯಾಸ್ಪದವೇ ಸರಿ. ಇಷ್ಟಿರುವಾಗ ಸರ್ಕಾರ ಬಹಳ ಸಾಧನೆ ಮಾಡಿದೆ ಎಂದು ಹೇಳಿಕೊಂಡಿದೆ.
ಒಟ್ಟಾರೆ ರಾಜ್ಯದ ಬಿಜೆಪಿ ಸರ್ಕಾರವು ಜನಸಾಮಾನ್ಯರ ಅಜೆಂಡಾಗಳನ್ನು ಮೂಲೆಗೊತ್ತಿ ತನ್ನ ಗುಪ್ತ ಅಜೆಂಡಾಗಳನ್ನು ನಾಜೂಕಿನಿಂದ ಜಾರಿ ಇಟ್ಟು ಮತ್ತೊಮ್ಮೆ ತನ್ನ ಜನದ್ರೋಹಿ ವಂಚಕತನವನ್ನು ತೋರಿಸಿದೆ. ಇದು ಸದನದಲ್ಲಿನ ಚಕರ್ಚೆಗಳಲ್ಲಾದರೂ ಬೆಳಕು ಕಾಣಬಹುದೇ?
ಸೌಜನ್ಯ: ಜನಶಕ್ತಿ