ಹುಬ್ಬಳ್ಳಿ:೪, ವಿಜ್ಞಾನ ಕೇತ್ರದಲ್ಲಿನ ಅಗಾಧ ಪ್ರಗತಿಯನ್ನು ಬಿಂಬಿಸುವ ವಿಜ್ಞಾನ ಎಕ್ಸ್ಪ್ರೆಸ್ ರೈಲು ಗೋವಾದಿಂದಿ ಶುಕ್ರವಾರದಂದು ಬೆಳಿಗ್ಗೆ ಹುಬ್ಬಳ್ಳಿಯ ರಲ್ವೆ ನಿಲ್ದಾಣಕ್ಕೆ ಬಂದು ತಲುಪಿತು. ಶುಕ್ರವಾರ ಮತ್ತು ಶನಿವಾರ ಎರಡು ದಿನಗಳ ವರೆಗೆ ಹುಬ್ಬಳ್ಳಿಯಲ್ಲಿದ್ದು ಇಲ್ಲಿಂದ ಬಳ್ಳಾರಿ ಮಾರ್ಗವಾಗಿ ಬೆಂಗಳೂರು, ಮೈಸೂರು, ಹಾಗೂ ಉಡುಪಿಯಲ್ಲಿ ವಿಜ್ಞಾನಾಸಕ್ತರಿಗೆ ಮಾಹಿತಿಯನ್ನು ನೀಡಲಿದೆ.

ಬೆಳಗಾವಿ ಮೂಲಕ ರಾಜ್ಯವನ್ನು ಪ್ರವೇಶಿಸಿರುವ ಇದು ಡಿ.೬ರಿಂದ೯ ವರೆಗೆ ಬಳ್ಳಾರಿ, ೧೦ರಿಂದ೧೪ ರವರೆಗೆ ಬೆಂಗಳೂರು ೧೫ರಿಂದ ೧೮ ಮೈಸೂರು ಹಾಗೂ ೨೦ರಿಂದ ೨೨ ರ ವರೆಗೆ ಉಡುಪಿಯಲ್ಲಿ ವಿಜ್ಞಾನದ ಕುರಿತಾಗಿ ವಿದ್ಯಾರ್ಥಿ ಹಾಗೂ ವಿಜ್ಞಾನಾಸಕ್ತರಿಗೆ ಇದು ಮಾಹಿತಿಯನ್ನು ಒದಗಿಸಲಿದೆ ಎಂದು ತಿಳಿದುಬಂದಿದೆ.
ಅಕ್ಟೋಬರ್ ೩೧,೨೦೦೭ ರಂದು ರಾಜಧಾನಿ ದೆಹಲಿಯಿಂದ ಚಾಲನೆ ದೊರೆತ ವಿಜ್ಞಾನ ಎಕ್ಸ್ಪ್ರೆಸ್ ರೈಲು ನಾಲ್ಕು ನೂರು ಮೀಟರ್ ಉದ್ದ ವಿದ್ದು ಹವನಿಯಂತ್ರಿತ ಸುಮಾರು ೧೭ ಬೋಗಿಗಳಲ್ಲಿ ವಿಜ್ಞಾನ ವಿಷಯಕ್ಕೆ ಸಂಬಂಧಿಸಿದಂತೆ ಮಹತ್ತರವಾದ ಮಾಹಿತಿಯನ್ನು ವಿಜ್ಞಾನಾಸಕ್ತಿಗಳಿಗೆ ಒದಗಿಸಲಿದೆ. ಇದು ದೇಶಾದ್ಯಂತ ಪ್ರಮುಖ ನಗರಗಳಲ್ಲಿ ಸಂಚರಿಸಿ ಇದೀಗ ನೆವೆಂಬರ್ ೨೬ ರಂದು ಕರ್ನಾಟಕದ ಬೆಳಗಾವಿ ನಗರವನ್ನು ಪ್ರವೇಶಿಸಿ ಗೋವಾ ಮೂಲಕ ರಾಜ್ಯದ ಉತ್ತರಕರ್ನಾಟಕದ ಪ್ರಮುಖ ನಗರ ಹುಬ್ಬಳ್ಳಿಯನ್ನು ಇಂದು ಬೆಳಗಿನ ಜಾವ ೫ ಗಂಟೆಗೆ ತಲುಪಿದೆ. ಇಲ್ಲಿ ಇದಕ್ಕೆ ಆದ್ದೂರಿಯಾದ ಸ್ವಾಗತವನ್ನು ನೀಡಿದ್ದು ಸಮದರ್ಶಕರು ಇದನ್ನು ಸಂದರ್ಶಿಸಲು ನೂಕುನುಗ್ಗಲು ಮಾಡುತ್ತಿದ್ದರು.
ಜರ್ಮನಿ ಮತ್ತು ಭಾರತ ಯೋಜನೆಯಡಿ ಸಂಚರಿಸುತ್ತಿರುವ ಈ ರೈಲು ವಿಜ್ಞಾನಕ್ಕೆ ಸಂಬಂಧಿಸಿದಂತೆ ಮಾಹಿತಿಯ ಕಣಜವನ್ನೆ ತನ್ನ ಒಡಲಲ್ಲಿ ಹೊತ್ತುಕೊಂಡು ತಿರುಗುತ್ತಿರುವುದು ಇದರ ವಿಶೇಷವೆನ್ನಬಹುದು. ಇದರಲ್ಲಿನ ವಿಷಯಗಳ ಬಗ್ಗೆ ವಿದ್ಯಾರ್ಥಿಗಳಿಗೆ ಹಾಗೂ ಸಂದರ್ಶಕರಿಗೆ ಮಾಹಿತಿಯನ್ನು ನೀಡಲು ದೇಶದ ವಿವಿಧ ರಾಜ್ಯಗಳ ವಿವಿಧ ಕ್ಷೇತ್ರಗಳ ಮೂವತ್ತಕ್ಕೂ ಹೆಚ್ಚು ಜನರ ತಂಡ ಕಾರ್ಯನಿರ್ವಹಿಸುತ್ತಲಿದೆ. ಈ ಪರಿಣಿತರ ತಂಡದಲ್ಲಿ ಬೆಳಗಾವಿಯ ಶ್ರದ್ಧಾ ಆರ್, ಗರಗಟ್ಟಿ ಹಾಗೂ ಬೆಂಗಳೂರಿನ ಎಮ್.ಜೆ.ಜಯಪ್ರೀತ ಎಂಬುವವರು ಇದ್ದಾರೆ.
ಇದರಲ್ಲಿ ನ್ಯಾನೋ ತಂತ್ರಜ್ಞಾನ, ನಮ್ಮೋಳಗಿನ ಜೀವ ಜಗತ್ತು, ವಂಶವಾಹಿನಿಯಿಂದಾ ಅಂಗಾಂಗಗಳು ಮಿದುಳಿನ ಕಾರ್ಯಶೈಲಿ, ಭವಿಷ್ಯದ ತಂತ್ರಜ್ಞಾನ, ಹವಾಗುಣ ಬದಲಾವಣೆ, ಜಾಗತಿಕ ಸಮಸ್ಯೆಗಳು, ನಮ್ಮ ಭೂಮಂಡಲದ ರಕ್ಷಣೆ ವ್ಯವಸ್ಥ, ಭೂಮಂಡಲ, ಗ್ರಹಗಳು, ನಕ್ಷತ್ರಗಳು, ಇವುಗಳ ಉಗಮ ಸೌರಮಂಡಲದ ರಚನೆ, ಮುಂತಾದ ವಿಜ್ಞಾನದ ವಿಸ್ಮಯಗಳ ಕುರಿತು ಮಹಿತಿಯನ್ನು ಆಸಕ್ತರಿಗೆ ಒದಗಿಸಲಾಗುತ್ತಿದೆ.


ಈ ವಿಜ್ಞಾನ ಎಕ್ಸ್ಪ್ರೆಸ್ ರೈಲು ಈಗಾಲೆ ಎರಡು ಸುತ್ತುಗಳನ್ನು ಮುಗಿಸಿದ್ದು ಅಕ್ಟೋಬರ್ ೨ರಿಂದ ಮೂರನೆ ಸುತ್ತಿನ ಪ್ರವಾಸವನ್ನು ಆರಂಭಿಸಿದೆ. ಈ ಮೂರನೆ ಸುತ್ತಿನಲ್ಲಿ ಸುಮಾರು ೫೬ ನಗರಗಳನ್ನು ಸಂದರ್ಶಿಸುತ್ತಲಿದ್ದು, ೨೦೮ ದಿನಗಳಲ್ಲಿ ೧೮,೦೦೦ ಕಿ.ಮೀ ದೂರವನ್ನು ಕ್ರಯಿಸಿ ಎಪ್ರಿಲ್ ೨೭ ರಂದು ಗುಜರಾತ್ ನ ಗಾಂಧಿನಗರದಲ್ಲಿ ತನ್ನ ಪ್ರಯಾಣಕ್ಕೆ ಅಂತ್ಯ ಹಾಡಲಿದೆ.
ಭಾರತೀಯ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ರಾಷ್ಟ್ರೀಯ ವಿಜ್ಞಾನ ಮತ್ತು ತಂತ್ರಜ್ಞಾನ ಸಂವಹನ ಯೋಜನೆ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ, ಜರ್ಮನಿಯ ಶಿಕ್ಷಣ ಮತ್ತು ಸಂಶೋಧನೆ ಸಚಿವಾಲಯ, ಮ್ಯಾಕ್ಸ್ ಫ್ಲಾಂಕ್ ಸಂಘ, ಭಾರತೀಯ ರೈಲ್ವೆ, ವಿಕ್ರಮ್ ಸಾರಾಬಾಯಿ ಸಮೋಹ ವಿಜ್ಞಾನ ಕೇಂದ್ರ, ಭೂವಿಜ್ಞಾನ ಒಕ್ಕೂಟ, ಎಚ್.ಎಸ್.ಬಿ.ಸಿ. ಬ್ಯಾಂಕ್ ಮತ್ತು ಪೆಟ್ರೋಲಿಯಮ್ ಉಳಿತಾಯ ಸಂಶೋಧನಾ ಸಂಸ್ಥೆಗಳ ಸಹಯೋಗದೊಂದಿಗೆ ಈ ವಿಜ್ಞಾನ ಎಕ್ಸ್ಪ್ರೆಸ್ ತನ್ನ ಪ್ರಯಾಣವನ್ನು ಬೆಳೆಸಿದೆ.
ಚಿತ್ರ, ವರದಿ: ಎಮ್ಮಾರ್ ಮಾನ್ವಿ, ಭಟ್ಕಳ