ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಕಾರವಾರ: ಅಕ್ರಮ ಮರಳು ಸಾಗಾಟಗಾರರಿಗೆ ಬಿಸಿ ಮುಟ್ಟಿಸಿದ ಜಿಲ್ಲಾಧಿಕಾರಿ

ಕಾರವಾರ: ಅಕ್ರಮ ಮರಳು ಸಾಗಾಟಗಾರರಿಗೆ ಬಿಸಿ ಮುಟ್ಟಿಸಿದ ಜಿಲ್ಲಾಧಿಕಾರಿ

Sun, 29 Oct 2023 00:22:07  Office Staff   S O News

ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ನಡೆಯುತ್ತಿದ್ದ ಅಕ್ರಮ ಮರಳು ದಾಸ್ತಾನು ಮತ್ತು ಅಕ್ರಮ ಮರಳು ಸಾಗಾಟ ನಡೆಸುವವರಿಗೆ ಜಿಲ್ಲಾಧಿಕಾರಿ ಗಂಗೂಬಾಯಿ ನೇತೃತ್ವದ ಅಧಿಕಾರಿಗಳ ತಂಡ ಇಂದು ಜಿಲ್ಲೆಯಾದ್ಯಂತ ಅನಿರೀಕ್ಷಿತ ದಾಳಿ ನಡೆಸಿ, ಅಕ್ರಮವಾಗಿ ದಾಸ್ತಾನು ಮಾಡಲಾಗಿದ್ದ ಮರಳು ಮತ್ತು ಮರಳು ಸಾಗಾಟದ ವಾಹನಗಳನ್ನು ವಶಪಡಿಸಿಕೊಂಡು , ಅಕ್ರಮದಲ್ಲಿ ತೊಡಗಿದ್ದವರಿಗೆ ಬಿಸಿ ಮುಟ್ಟಿಸಿದ್ದಾರೆ.

ಇಂದು ಬೆಳಗ್ಗೆ 4 ಗಂಟೆಗೆ ಕಾರ್ಯಾಚರಣೆ ಆರಂಭಿಸಿದ ಜಿಲ್ಲಾಧಿಕಾರಿಗಳು, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸೇರಿದಂತೆ ಯಾವುದೇ ಇಲಾಖೆಗೆ ಯಾವುದೇ ಮುನ್ಸೂಚನೆ ನೀಡದೇ, ಅಕ್ರಮದ ಕುರಿತು ತಮಗೆ ದೊರೆತಿದ್ದ ಖಚಿತ ಮಾಹಿತಿ ಆಧರಿಸಿ ದಾಳಿ ನಡೆಸಿದರು.

ದಾಳಿ ಸಂದರ್ಭದಲ್ಲಿ ಸ್ಥಳದಲ್ಲಿ ಅಕ್ರಮವಾಗಿ ದಾಸ್ತಾನು ಮಾಡಲಾಗಿದ್ದ ಮರಳು ಸಂಗ್ರಹ, ಮರಳು ತುಂಬಿಕೊಂಡು ತೆರಳುತ್ತಿದ್ದ ವಾಹನ, ಮರಳು ತುಂಬಿದ್ದ ವಾಹನಗಳನ್ನು ಕಂಡ ಜಿಲ್ಲಾಧಿಕಾರಿಗಳು ಕೂಡಲೇ ಸಂಬಂದಪಟ್ಟ ತಾಲೂಕಿನ ತಹಸೀಲ್ದಾರ್‍ಗೆ ಅವುಗಳನ್ನು ವಶಪಡಿಸಿಕೊಳ್ಳುವಂತೆ ಮತ್ತು ಅಕ್ರಮದಲ್ಲಿ ತೊಡಗಿರುವವನ್ನು ಬಂಧಿಸುವಂತೆ ಸೂಚನೆ ನೀಡಿದರು.

ಅಂಕೋಲಾ ಮತ್ತು ಕುಮುಟಾ ತಾಲೂಕಿನಲ್ಲಿ ದಾಳಿ ನಡೆಸಿದ ಜಿಲ್ಲಾಧಿಕಾರಿಗಳು, ಶಿರೂರು, ಕೊಡ್ಕಣಿ,ಮಿರ್ಜಾನ,ದಿವಗಿ,ತಾರೆಬಾಗಿಲು, ಹೆಗಡೆ ಪ್ರದೇಶಗಳಲ್ಲಿ ನಡೆಯುತ್ತಿದ್ದ ಅಕ್ರಮ ಮರಳುಗಾರಿಕೆ ಪ್ರದೇಶಗಳಿಗೆ ದಾಳಿ ನೆಡೆಸಿ, ಅಕ್ರಮದ ವಿರುದ್ದ ಕಾನೂನು ಕ್ರಮ ಕೈಗೊಂಡರು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳೊಂದಿಗೆ ಕುಮುಟಾ ಉಪ ವಿಭಾಗಾಧಿಕಾರಿ ಕಲ್ಯಾಣಿ, ತಹಸೀಲ್ದಾರ್ ಸತೀಶ್ ಗೌಡ, ಅಂಕೊಲ ತಹಸೀಲ್ದಾರ್  ಅಶೋಕ್ ಭಟ್ ಮತ್ತು ಕಂದಾಯ ಇಲಖೆಯ ಸಿಬ್ಬಂದಿಗಳು ಭಾಗವಹಿಸಿದ್ದರು.

 ಅಪರ ಜಿಲ್ಲಾಧಿಕಾರಿ ಪ್ರಕಾಶ್ ರಾಜಪೂತ್ ನೇತ್ವøತ್ವದ ಮತ್ತೊಂದು ಅಧಿಕಾರಿಗಳ ತಂಡ ಕೂಡಾ ಜಿಲ್ಲೆಯ ಇತರೆ ಭಾಗದಲ್ಲಿ ಕಾರ್ಯಚರಣೆ ನಡೆಸಿ, ಅಕ್ರಮವಾಗಿ ದಾಸ್ತಾನು ಮಾಡಲಾಗಿದ್ದ ಮರಳು ಮತ್ತು ಮರಳು ಸಾಗಾಟದ ವಾಹನಗಳನ್ನು ವಶಪಡಿಸಿಕೊಂಡರು.

ಇಂದು ನಡೆದ ದಾಳಿಯಲ್ಲಿ , ಜಿಲ್ಲಾಧಿಕಾರಿ ಅವರ ಮಾರ್ಗದರ್ಶನದಲ್ಲಿ 60 ಕ್ಕೂ ಹೆಚ್ಚು ಕಂದಾಯ ಇಲಾಖೆಯ ಸಿಬ್ಬಂದಿಗಳು 16 ವಾಹನಗಳಲ್ಲಿ 4 ತಂಡಗಳಾಗಿ ಜಿಲ್ಲೆಯಾದ್ಯಂತ ಏಕಕಾಲದಲ್ಲಿ ದಾಳಿ ನಡೆಸಿದ್ದು, ಸುಮಾರು 200 ಮೆಟ್ರಿಕ್ ಟನ್ ಮರಳು ವಶಪಡಿಸಿಕೊಂಡಿದ್ದು, ಇದರ ಅಂದಾಜು ಮೌಲ್ಯ ರೂ.2.5 ಲಕ್ಷಗಳಾಗಿರುತ್ತದೆ.
     ಜಿಲ್ಲೆಯಲ್ಲಿ ಅಕ್ರಮ ಮರಳುಗಾರಿಕೆ ಚಟುವಟಿಕೆಗಳ ಬಗ್ಗೆ ನಿರಂತವಾಗಿ ದೂರುಗಳು ಬರುತ್ತಿದ್ದು, ಈ ಕುರಿತಂತೆ ಇಂದು ಖುದ್ದು ತಾನೇ ಅಕ್ರಮ ನಡೆಯುವ ಸ್ಥಳಗಳಿಗೆ ಅನಿರೀಕ್ಷಿತ ದಾಳಿ ನಡೆಸಿ, ಮರಳು ವಶಪಡಿಸಿಕೊಳ್ಳಲಾಗಿದೆ. ಜಿಲ್ಲೆಯಲ್ಲಿ ಇನ್ನು ಮುಂದೆ ಅಕ್ರಮ ಮರಳುಗಾರಿಕೆ ನಡೆಯುವ ಸ್ಥಳಗಳಿಗೆ ಈ ರೀತಿಯ ದಾಳಿಗಳನ್ನು ನಿರಂತರವಾಗಿ ನಡೆಸಲಾಗುವುದು ಎಂದು ತಿಳಿಸಿದ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ಅವರು, ಜಿಲ್ಲೆಯಲ್ಲಿ ಅಕ್ರಮ ಮರಳು ಸಾಗಾಟ, ದಾಸ್ತಾನು ಮಾಡುವವರಿಗೆ ಈ ದಾಳಿಯ ಮೂಲಕ , ಜಿಲ್ಲೆಯ ಅಕ್ರಮ ಮರಳು ಚಟುವಟಿಕೆ  ನಡೆಸಿದ್ದಲ್ಲಿ ಕಠಿಣ ಕಾನೂನು ಕ್ರಮ ಕೈಗೊಳ್ಳುವ ಕುರಿತ ಗಂಭೀರ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.


Share: