ಶಿವಮೊಗ್ಗ,ಏ.20: ಸರ್ಕಾರಿ ಮೆಡಿಕಲ್ ಕಾಲೇಜಿನಲ್ಲಿ ನಿರಂತರ ಅವ್ಯವಹಾರ, ಭ್ರಷ್ಟಾಚಾರಗಳು ನಡೆಯುತ್ತಾ ಬಂದಿದ್ದು, ಇಡೀ ಕಾಲೇಜು ವಂಚನೆಯ ಗೂಡಾಗಿದೆ. ಸರ್ಕಾರ ತಕ್ಷಣವೇ ಇಲ್ಲಿನ ಅವ್ಯವಹಾರಗಳನ್ನು ತನಿಖೆಗೆ ಒಳಪಡಿಸಬೇಕೆಂದು ದಲಿತ ಸಂಘರ್ಷ ಸಮಿತಿ ಆಗ್ರಹಿಸಿದೆ. ಸೋಮವಾರದಂದು ಪತ್ರಿಕಾಗೋಷ್ಠಿಯಲ್ಲಿ ಮೆಡಿಕಲ್ ಕಾಲೇಜಿನ ಅವ್ಯವಹಾರಗಳನ್ನೆಲ್ಲ ದಾಖಲೆ ಮೂಲಕ ಬಹಿರಂಗಗೊಳಿಸುತ್ತ ಹೋದ ಡಿ.ಎಸ್.ಎಸ್. ಮುಖಂಡ ಗುರುಮೂರ್ತಿ ಅಲ್ಲಿನ ವಂಚನೆಗಳನ್ನೆಲ್ಲ ಬಯಲಿಗೆಳೆದರು.
ಮೆಡಿಕಲ್ ಕಾಲೇಜಿನ ಆಡಳಿತ ಸಂಪೂರ್ಣ ವಿಫಲವಾಗಿದೆ ಎಂದ ಅವರು, ಇದಕ್ಕೆ ಹಾಲಿ ನಿರ್ದೇಶಕ ಡಾ. ಶಂಕರೇಗೌಡ ಮತ್ತು ಮಾಜಿ ನಿರ್ದೇಶಕ ಡಾ. ಚಿದಾನಂದ್ ಕಾರಣರಾಗಿದ್ದಾರೆ. ಈ ಇಬ್ಬರು ಮೆಡಿಕಲ್ ಕಾಲೇಜನ್ನು ಹರಾಜು ಹಾಕಿದ್ದು, ಇದಕ್ಕೆ ಬಿಜೇಪಿ ಸರ್ಕಾರ ಕೂಡ ಸಾಥ್ ನೀಡಿದೆ ಎಂದು ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಹರಿದ ಅರೋಪಗಳ ಮಹಾಪೂರ:
* ನಿಯಮಗಳನ್ನೆಲ್ಲ ಗಾಳಿಗೆ ತೂರಿ ಪ್ರೋಫೆಸರ್ ಹುದ್ದೆಗಳನ್ನು ನೇಮಕ .ಆದಿಚುಂಚನಗಿರಿ ಮೆಡಿಕಲ್ ಕಾಲೇಜಿನಿಂದ ಸುಳ್ಳು ಪ್ರಮಾಣ ಪತ್ರ ಬಳಕೆ ಮಾಡಿ ಪ್ರೊಫೆಸರ್ ಹುದ್ದೆಯಲ್ಲಿರುವ ಡಾ. ಜಿ.ಎಲ್ ರವೀಂದ್ರರಿಗೆ 70,000ವೇತನ ಪಡೆದು ಸರ್ಕಾರಕ್ಕೆ ವಂಚನೆ.
* ಇದೇ ರೀತಿ ಡಾ. ಶಾರದಾ, ಡಾ. ಎಸ್.ಪಿ.ಹೆಗಡೆ ಮುಂತಾದವರಿಗೂ ಡಾ. ರವೀಂದ್ರ ಸುಳ್ಳು ಸೇವಾ ಪತ್ರವನ್ನು ಕೊಡಿಸಿದ್ದಾರೆ.
*ನಿವೃತ್ತರಾಗಿರುವ ಡಾ. ರಘುನಾಥ್, ಡಾ. ವಾಸನ್, ಡಾ. ಕದನ್ ಕೆಲಸಕ್ಕೆ ತೆಗೆದುಕೊಳ್ಳಲಾಗಿದೆ. ಇವರು ಸಂಬಳ ಹಾಗೂ ನಿವೃತ್ತಿ ವೇತನ ಎರಡನ್ನು ತೆಗೆದುಕೊಂಡು ಸರ್ಕಾರಕ್ಕೆ ವಂಚನೆ ಮಾಡುತ್ತಿದ್ದಾರೆ.
* ಡಾ.ವಾಸನ್ ಒಂದೇ ದಿನ ಮಾತ್ರ ಕೆಲಸಕ್ಕೆ ಹಾಜರಾಗಿ ತಿಂಗಳಿಗೆ 70,000 ವೇತನ ಪಡೆಯುತ್ತಿದ್ದಾರೆ. ಗೈರು ಹಾಜರಾಗಿದ್ದರೂ ಕೂಡ ಸಂಬಳ ನೀಡುವಾಗ ಪೂರ್ತಿ ಹಾಜರಾಗಿದ್ದಾರೆ ಎಂದು ನಮೂದಿಸಲಾಗಿದೆ.
* ಡಾ. ವಾಸನ್ ರೀತಿಯಲ್ಲೇ ಕೆಲವೇ ದಿನ ಕೆಲಸ ಮಾಡಿ, ಡಾ. ಸಾಗರ್, ಡಾ. ಸೌಭಾಗ್ಯಲಕ್ಷ್ಮೀ, ಡಾ. ಜಗದೀಶ್, ಡಾ. ನರಸಿಂಹಸ್ವಾಮಿ. ಡಾ. ಆರ್.ಬಿ.ಪಟೇಲ್ ಮುಂತಾದವರು ಪೂರ್ತಿ ಸಂಬಳ ಪಡೆಯುತ್ತಿದ್ದಾರೆ.
* ಡಾ. ತಹಶೀಲ್ದಾರ್ ಎಂಬುವವರು ಎಂಸಿಐನಿಂದ ಎಚ್ಚರಿಕೆಯನ್ನು ಪಡೆದರೂ ಸಹ ಖಾಸಗಿ ನರ್ಸಿಂಗ್ ಹೋಂ ನಡೆಸುತ್ತಿದ್ದಾರೆ.
* ಇತ್ತೀಚೆಗೆ ಡಾಕ್ಟರ್ ಹುದ್ದೆಯೊಂದಕ್ಕೆ ಸಂದರ್ಶನ ನಡೆಯಿತು. ನಾಲ್ಕು ಅಭ್ಯರ್ಥಿಗಳು ಹಾಜರಾಗಿದ್ದರು. ಆದರೆ, ಸಂದರ್ಶನಕ್ಕೆ ಹಾಜರಾದಗ ಬಿಜೆಪಿ ಬೆಂಬಲಿತ ಅಭ್ಯರ್ಥಿಡಾ. ಶ್ರೀಧರ್‌ಗೆ ಕೆಲಸ ಸಿಕ್ಕಿದೆ.
ಹೀಗೆ ಇಡೀ ಮೆಡಿಕಲ್ ಕಾಲೇಜ್ ಎಂಬುದು ವಂಚನೆಯ ಗೂಡಾಗಿದೆ. ಇಲ್ಲಿನ ನಿರ್ದೇಶಕ ಶಂಕರೇಗೌಡರು ಮುಖ್ಯಮಂತ್ರಿಗಳ ತಾಳಕ್ಕೆ ಕುಣಿಯುತ್ತಿದ್ದಾರೆ. ಮೆಡಿಕಲ್ ಕಾಲೇಜಿನ ಆಡಳಿತವನ್ನು ವೈಫಲ್ಯಕ್ಕೆ ಕಾರಣರಾಗಿದ್ದಾರೆ. ಇವರನ್ನು ಕೂಡ ಸೇವೆಯಿಂದ ಅಮಾನತ್ತುಗೊಳಿಸಿದೆ. ಸರ್ಕಾರಕ್ಕೆ ದ್ರೋಹ ಮಾಡಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಈ ಬಗ್ಗೆ ಲೋಕಾಯುಕ್ತರಿಗೆ ದೂರು ನೀಡಲಾಗುವುದು ಎಂದು ಗುರುಮೂರ್ತಿ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ಹಾಲೇಶಪ್ಪ, ಶಿವಕುಮಾರ್, ರಮೇಶ್ ಚಿಕ್ಕಮರಡಿ, ರವಿ ಹರಿಗೆ ಸೇರಿದಂತೆ ಹಲವರು ಹಾಜರಿದ್ದರು.
ಕೃಪೆ:ದಟ್ಸ್ ಕನ್ನಡ