ಯುವಕರಲ್ಲಿರುವ ಸುಪ್ತ ಕ್ರೀಡಾ ಪ್ರತಿಭೆ ಅರಳಲು ಪ್ರೋತ್ಸಾಹಿಸಿ - ರಾಜ್ಯಪಾಲರ ಕರೆ.
ಬೆಂಗಳೂರು, ಏ.೧೦: ಪ್ರತಿ ತಾಲ್ಲೂಕು ಮತ್ತು ಜಿಲ್ಲೆಗಳಲ್ಲಿ ಆಧುನಿಕ ಸೌಲಭ್ಯಗಳಿರುವ ಉತ್ತಮ ಕ್ರೀಡಾಂಗಣ ನಿರ್ಮಿಸಿ ಯುವ ಪ್ರತಿಭೆಗಳಿಗೆ ತರಬೇತಿ ನೀಡಿದಲ್ಲಿ ಅವರಲ್ಲಿರುವ ಸುಪ್ತ ಪ್ರತಿಭೆ ಅರಳಿ ಕ್ರೀಡಾ ಕ್ಷೇತ್ರದಲ್ಲಿ ದೇಶಕ್ಕೆ ಕೀರ್ತಿ ತರುವುರೆಂದು ರಾಜ್ಯಪಾಲ ಶ್ರೀ ಹೆಚ್.ಆರ್. ಭಾರಧ್ವಾಜ್ ತಿಳಿಸಿದರು.
ಇಂದು ರಾಜಭವನದ ಗಾಜಿನ ಮನೆಯಲ್ಲಿ ಯುವಜನಸೇವಾ ಮತ್ತು ಕ್ರೀಡಾ ಇಲಾಖೆ ಆಯೋಜಿಸಿದ್ದ ಏಕಲವ್ಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಪ್ರಶಸ್ತಿ ಪ್ರದಾನ ಮಾಡಿ ಮಾತನಾಡುತ್ತಿದ್ದರು.
ಆಧುನಿಕ ಜೀವನ ಶೈಲಿ ಕ್ರೀಡೆಗಿಂತ ಮನರಂಜನೆಗೆ ಮಹತ್ವ ನೀಡುತ್ತಿದೆ ಎಂದು ವಿಷಾದಿಸಿದ ರಾಜ್ಯಪಾಲರು ರಾಜಭವನದಲ್ಲಿ ಎಲ್ಲ ಫಲದಾಯಕ ಕಾರ್ಯಕ್ರಮಗಳಿಗೂ ಮುಕ್ತ ಅವಕಾಶವಿರುತ್ತದೆ. ನಾನು ಎಲ್ಲ ರಂಗಗಳಲ್ಲಿ ಉತ್ಕೃಷ್ಟತೆಯನ್ನು ಪ್ರೊತ್ಸಾಹಿಸುತ್ತೇನೆ. ಯುವಕ ಸಚಿವ ಮತ್ತು ಉತ್ತಮ ಅಧಿಕಾರಿಗಳು ಕ್ರೀಡಾ ಇಲಾಖೆಯಿದ್ದು, ಮುಂದಿನ ದಿನಗಳಲ್ಲಿ ಕರ್ನಾಟಕದಲ್ಲಿ ಕ್ರೀಡೆ ಅಭಿವೃದ್ಧಿಗೊಳ್ಳಲಿದೆ ಎಂದು ಆಶಯ ವ್ಯಕ್ತಪಡಿಸಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಯುವಜನಸೇವಾ ಮತ್ತು ಕ್ರೀಡಾ ಸಚಿವ ಶ್ರೀ ಗೂಳಿಹಟ್ಟಿ ಡಿ. ಶೇಖರ್ ಅವರು ಮಾತನಾಡಿ ಎಲ್ಲಾ ಜಿಲ್ಲಾ ಕೇಂದ್ರಗಳ ಜೊತೆಗೆ ೯೦ ತಾಲೂಕುಗಳಲ್ಲಿ ಕ್ರೀಡಾಂಗಣ ನಿರ್ಮಿಸುವುದಾಗಿ ಹೇಳಿದರು.
೧೨ ನೇ ಹಣಕಾಸು ಯೋಜನೆಯಡಿ ಕ್ರೀಡೆಗೆ ಚಿತ್ರದುರ್ಗ,ಬೆಳಗಾವಿ,ಗದಗ, ಬಿಜಾಪುರ ಜಿಲ್ಲೆಗಳಲ್ಲಿ ಕ್ರೀಡೆಗೆ ಉತ್ತೇಜನ ನೀಡುವ ದಿಸೆಯಲ್ಲಿ ಸಿಂಥೆಟಿಕ್ ಟ್ರ್ಯಾಕ್ ಹಾಕಲಾಗುವುದು. ಮುಂದಿನ ದಿನಗಳಲ್ಲಿ ಸಿಂಥೆಟಿಕ್ ಟ್ರ್ಯಾಕ್ ಶಿವಮೊಗ್ಗ, ಮೈಸೂರು, ಗುಲ್ಬರ್ಗಾ ಹಾಗೂ ಹೊಸದುರ್ಗದಲ್ಲಿಯೂ ಹಾಕಲಾಗುವುದು ಎಂದರು.
ರಾಷ್ಟ್ರೀಯ ಹಾಗೂ ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ಚಿನ್ನದ ಪದಕ ವಿಜೇತರಿಗೆ ೧ಲಕ್ಷ ರೂ.,ಬೆಳ್ಳಿ ಪದಕ ವಿಜೇತರಿಗೆ ೫೦ ಸಾವಿರ ರೂ. ಹಾಗೂ ಕಂಚು ಪದಕ ವಿಜೇತರಿಗೆ ೨೫ ಸಾವಿರ ರೂ.ಗಳನ್ನು ನೀಡಲಾಗುವುದು. ಕ್ರೀಡೆಯಲ್ಲಿ ಅತ್ಯುತ್ತಮ ಸಾಧನೆಗೈದ ಕ್ರೀಡಾಪಟುಗಳಿಗೆ ರಾಜ್ಯಮಟ್ಟದಲ್ಲಿ ಕರ್ನಾಟಕ ಕ್ರೀಡಾ ರತ್ನ ಪ್ರಶಸ್ತಿ, ವಿಭಾಗಮಟ್ಟದಲ್ಲಿ ೪ ಪ್ರಶಸ್ತಿ, ಜಿಲ್ಲಾಮಟ್ಟದಲ್ಲಿ ೧೦ ಪ್ರಶಸ್ತಿ ಹಾಗೂ ಇಬ್ಬರು ಕೋಚ್‌ಗಳಿಗೆ ಪ್ರಶಸ್ತಿಗಳನ್ನು ನೀಡಲಾಗುವುದೆಂದರು.
ಬರುವ ವರ್ಷದಿಂದ ಆ.೨೯ರಂದು ಪ್ರಶಸ್ತಿ ಸಮಾರಂಭ
ಮುಂಬರುವ ವರ್ಷದಿಂದ ಏಪ್ರಿಲ್ ತಿಂಗಳ ಅಂತ್ಯಕ್ಕೆ ಪ್ರಶಸ್ತಿ ಆಯ್ಕೆ ಪ್ರಕ್ರಿಯೆಯನ್ನು ಪೂರೈಸಿ, ವಿಶ್ವ ವಿಖ್ಯಾತ ಹಾಕಿ ಪಟು ಗ್ಯಾನಿ ಧ್ಯಾನಚಂದ್ ಹುಟ್ಟುಹಬ್ಬದ ದಿನವಾದ ಆಗಸ್ಟ್ ೨೯ ರಂದು ಏಕಲವ್ಯ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಹಮ್ಮಿಕೊಳ್ಳಲಾಗುವುದೆಂದು ಸಚಿವರು ತಿಳಿಸಿದರು.
ಕರ್ನಾಟಕ ಒಲಂಪಿಕ್ ಅಸೋಷಿಯೇಷನ್‌ನ ಅಧ್ಯಕ್ಷ ಶ್ರೀ ಗೋವಿಂದರಾಜ್ ಅವರು ಮಾತನಾಡಿ ಕ್ರೀಡೆ ಸೆಸ್‌ಅನ್ನು ಸಂಗ್ರಹಿಸುವ ನಿಟ್ಟಿನಲ್ಲಿ ಹಾಗೂ ನೆನೆಗುದಿಗೆ ಬಿದ್ದಿರುವ ರಾಷ್ಟ್ರೀಯ ಯುವಜನ ಕ್ರೀಡಾಕೂಟವನ್ನು ನಡೆಸಲು ಶೀಘ್ರ ಕ್ರಮಕೈಗೊಳ್ಳಲು ಸರ್ಕಾರವನ್ನು ಒತ್ತಾಯಿಸಿದರು. ಕ್ರೀಡಾಪಟುಗಳಿಗೆ ನೀಡಲಾಗುತ್ತಿದ್ದ ಸ್ಕಾಲರ್‌ಶಿಫ್‌ನ್ನು ಮತ್ತೆ ಪ್ರಾರಂಭಿಸುವಂತೆ ಸಹ ತಿಳಿಸಿದರು.
ರಾಜ್ಯದ ೩೦ ಪ್ರತಿಭಾನ್ವಿತ ಕ್ರೀಡಾಪಟುಗಳಿಗೆ ೨೦೦೭ನೇ ಮತ್ತು ೨೦೦೮ನೇ ಸಾಲಿನ ಏಕಲವ್ಯ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಏಕಲವ್ಯ ಪ್ರಶಸ್ತಿಗೆ ಭಾಜನರಾದ ಕ್ರೀಡಾಪಟುಗಳು -೨೦೦೭ನೆ ಸಾಲು: ಮಂಜುಳ ಎಲ್. -ಅಥ್ಲೆಟಿಕ್ಸ್, ನಿತ್ಯ ಸೋಸಲೆ- ಬ್ಯಾಡ್‌ಮಿಂಟನ್, ಉಮಾದೇವಿ ಆರ್.- ಬಿಲಿಯರ್ಡ್ಸ್, ಸಾತ್ವಿಕ್ ಎಂ. - ಚೆಸ್, ಆಲಿಯ ದಾಸ್ ಗುಪ್ತ - ಅಶ್ವಾರೋಹಣ, ಕ್ಸೇವಿಯರ್ ವಿಜಯಕುಮಾರ್ -ಎ. ಫುಟ್‌ಬಾಲ್, ಲಕ್ಷ್ಮಿ ಎನ್.- ಫೆನ್ನಿಂಗ್ , ಹರಿಪ್ರಸಾದ್ ಜಿ.ಎಂ. - ಹಾಕಿ, ವರದ ರಾಜ್ ಎಂ.ಎನ್.-ಖೋಖೋ,
ತ್ಯಾಗರಾಜ್- ಕಬಡ್ಡಿ, ನಯನ ಶ್ರೀಯಾನ್ - ಪವರ್ ಲಿಫ್ಟಿಂಗ್, ಕವಿತಾ ವಿ.- ರೈಫಲ್ ಶೂಟಿಂಗ್, ಕ್ಷಿಪ್ರ ಬಿ. ಮಹಾಜನ್ - ಈಜುಗಾರಿಕೆ, ಶರತ್ ಎಂ. ಗಾಯಕವಾಡ್- ವಿಕಲಚೇತನ, ಕರಿಬಸಪ್ಪ ಎಲ್.ಎಂ.- ದೇಹಧಾರ್ಢ್ಯತೆ.
೨೦೦೮ನೆ ಸಾಲು: ಪೂವಮ್ಮ ಎಂ.ಆರ್. -ಅಥ್ಲೆಟಿಕ್ಸ್, ಶ್ರೀನಿವಾಸ್ ಜಿ. ನಾಯಕ್ - ಬ್ಯಾಸ್ಕೆಟ್‌ಬಾಲ್, ಅಶ್ವಿನಿ ಪೊನ್ನಪ್ಪ- ಬ್ಯಾಡ್‌ಮಿಂಟನ್, ಗಿರೀಶ್ ಎ. ಕೌಶಿಕ್ - ಚೆಸ್, ಕಾವೇರಿ ಆರ್.ಬಣಕಾರ್- ಸೈಕ್ಲಿಂಗ್, ನಂಜುಂಡೇಗೌಡ ಬಿ.ಪಿ. - ಫೆನ್ನಿಂಗ್, ವಿಕ್ರಮ್‌ಕಾಂತ್ ಎ.ಎಲ್. - ಹಾಕಿ, ರೋಹಿಣಿ ಬಿ. ಪಾಟೀಲ್-ಜುಡೋ, ಆದರ್ಶ್ ಸಿ.ಪಿ. - ಖೋಖೋ, ಉದಯ್ ಚೌಟಾ- ಕಬಡ್ಡಿ, ಪ್ರಮೀಳಾ ಬಿ.ಆರ್. -ನೆಟ್‌ಬಾಲ್, ಜ್ಯೋತಿ ಎನ್.ಬಿ.- ಪವರ್‌ಲಿಫ್ಟಿಂಗ್, ರೋಹಿತ್ ರಾಜೇಂದ್ರ ಹವಾಲ್ದಾರ್ - ಈಜುಗಾರಿಕೆ, ಅಕ್ಷತಾ ಎ.ಕೆ. - ವಾಲಿಬಾಲ್, ಫರ್ಮಾನ್ ಭಾಷಾ- ವಿಕಲಚೇತನ.
ಸಮಾರಂಭದಲ್ಲಿ ಶಿವಾಜಿನಗರ ವಿಧಾನ ಸಭಾ ಕ್ಷೇತ್ರದ ಶಾಸಕ ಶ್ರೀ ಆರ್. ರೋಷನ್ ಬೇಗ್ ಅವರು ಅಧ್ಯಕ್ಷತೆ ವಹಿಸಿದ್ದರು. ಯುವಜನ ಸೇವಾ ಇಲಾಖೆ ಕಾರ್ಯದರ್ಶಿ ಶ್ರೀ ಐ.ಎಂ.ವಿಠಲಮೂರ್ತಿ, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ನಿರ್ದೇಶಕ ಶ್ರೀ ಶಿವನಂಜಯ್ಯ ಉಪಸ್ಥಿತರಿದ್ದರು.