ಬೆಂಗಳೂರು,ಜನವರಿ 11:ಸರ್ಕಾರದ ವತಿಯಿಂದ ನಡೆಯುವ ರಸ್ತೆ, ಸೇತುವೆ, ಕಟ್ಟಡಗಳ ಕಾಮಗಾರಿಗಳ ಗುಣಮಟ್ಟ ಪರಿಶೀಲನೆಗೆ ರಾಜ್ಯ ಮಟ್ಟದಲ್ಲಿ ಉಸ್ತುವಾರಿ ಘಟಕವನ್ನು ರಚಿಸುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇಂದಿಲ್ಲಿ ಪ್ರಕಟಿಸಿದ್ದಾರೆ.
ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿಂದು ನಡೆದ ಕಾಮಗಾರಿಗಳ ಗುಣಮಟ್ಟ ಕಾರ್ಯಪಡೆಯ ಎರಡು ದಿನಗಳ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮುಖ್ಯ ಎಂಜಿನಿಯರ್ ದರ್ಜೆಯ ಅಧಿಕಾರಿಯೊಬ್ಬರ ನೇತೃತ್ವದಲ್ಲಿ ಈ ಮೇಲುಸ್ತುವಾರಿ ಘಟಕವನ್ನು ರಚಿಸುವುದಾಗಿ ನುಡಿದ ಮುಖ್ಯಮಂತ್ರಿಗಳು ಈ ಘಟಕ ತಮ್ಮ ಕಛೇರಿಯೇ ಇದರ ನಿರ್ವಹಣೆ ಮಾಡಲಿದೆ ಎಂದು ಸ್ಪಷ್ಟ ಪಡಿಸಿದರು.
ಸರ್ಕಾರದ ವಿವಿಧ ಇಲಾಖೆಗಳ ಮೂಲಕ ನಡೆಯುವ ರಸ್ತೆ,ಸೇತುವೆ ಹಾಗೂ ಕಟ್ಟಡಗಳ ಕಾಮಗಾರಿ ಉತ್ತಮ ಗುಣಮಟ್ಟದ್ದಲ್ಲ ಎಂಬ ದೂರುಗಳು ಕೇಳಿಬರುತ್ತಿವೆ ಎಂದು ಅವರು ವಿಷಾದಿಸಿದರು.
ಕಾಮಗಾರಿ ಕಾರ್ಯ ನಡೆದ ಒಂದು ವರ್ಷದೊಳಗಾಗಿ ರಸ್ತೆ, ಸೇತುವೆ, ಕಟ್ಟಡಗಳು ರಿಪೇರಿಗೆ ಬರುತ್ತಿವೆ ಎಂಬ ದೂರುಗಳು ಕೇಳಿ ಬರುತ್ತಿದ್ದು ಈ ಹಿನ್ನೆಲೆಯಲ್ಲಿ ಇಂತಹ ಮೇಲುಸ್ತುವಾರಿ ಘಟಕವನ್ನು ರಚಿಸುವ ಅಗತ್ಯವಿದೆ ಎಂದು ಅವರು ಹೇಳಿದರು.
ಕಳಪೆ ಕಾಮಗಾರಿಗಳಿಗೆ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದು ನುಡಿದ ಅವರು,ಇದರಿಂದಾಗಿ ಅವರು ಜನರ ವಿಶ್ವಾಸ ಕಳೆದುಕೊಂಡಿದ್ದಾರೆ.ಇದೆಲ್ಲವನ್ನೂ ತಪ್ಪಿಸಲು ಸಧ್ಯದಲ್ಲೇ ಕಠಿಣ ವರ್ಗಾವಣೆ ನೀತಿಯನ್ನು ಜಾರಿಗೆ ತರುವುದಾಗಿ ನುಡಿದರು.
ಅನಿವಾರ್ಯ ಸಂಧರ್ಭದಲ್ಲಿ ಮಾತ್ರ ಅಧಿಕಾರಿಗಳನ್ನು ವರ್ಗಾವಣೆ ಮಾಡುವುದಾಗಿ ನುಡಿದ ಅವರು,ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿ ಇಲ್ಲದಿರುವುದೇ ಇಂತಹ ಅವ್ಯವಹಾರಗಳು ನಡೆಯಲು ಕಾರಣವಾಗುತ್ತವೆ.
ಇದೇ ರೀತಿ ತಾಲ್ಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ಜನಪ್ರತಿನಿಧಿಗಳು ಹಸ್ತಕ್ಷೇಪ ಮಾಡುವುದರಿಂದಲೂ ಕಾಮಗಾರಿಯಲ್ಲಿ ಅವ್ಯವಹಾರ ನಡೆಯಲು ಕಾರಣವಾಗುತ್ತವೆ ಎಂದು ಪರೋಕ್ಷವಾಗಿ ನುಡಿದ ಯಡಿಯೂರಪ್ಪ,ಇಂತಹ ಹಸ್ತಕ್ಷೇಪ ನಡೆಯಬಾರದು ಎಂದರು.
ಲೋಕೋಪಯೋಗಿ ಇಲಾಖೆಯ ವತಿಯಿಂದ ಕೈಗೊಳ್ಳುವ ಕಾಮಗಾರಿಗಳ ಅಂದಾಜು ವೆಚ್ಚವನ್ನು ಪರಿಷ್ಕರಿಸುವ ಕುರಿತು ಕ್ರಮ ಕೈಗೊಳ್ಳುವುದಾಗಿ ಇದೇ ಸಂಧರ್ಭದಲ್ಲಿ ಅವರು ಹೇಳಿದರು.