ಚಿಕ್ಕಬಳ್ಳಾಪುರ ಡಿಸೆಂಬರ್ 02: ರಾಷ್ಟ್ರವನ್ನು ಸುಭದ್ರವಾಗಿ ಕಟ್ಟುವ ಜವಾಬ್ಬಾರಿ ಮಕ್ಕಳ ಮೇಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ವಕ್ಫ್ ಮತ್ತು ಅಲ್ಪಸಂಖ್ಯಾತರ ಸಚಿವ ಡಾ. ಮುಮ್ತಾಜ್ ಆಲಿ ಖಾನ್ ತಿಳಿಸಿದರು.
ಅವರು ತಾಲ್ಲೂಕಿನ ಮಂಡಿಕಲ್ ಗ್ರಾಮದಲ್ಲಿ ಏರ್ಪಡಿಸಿದ್ದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ, ಪ್ರಾಥಮಿಕ ಆರೋಗ್ಯ ಕೇಂದ್ರದ ನೂತನ ಕಟ್ಟಡದ ಶಂಕು ಸ್ಥಾಪನೆ ಮತ್ತು ಸರ್ಕಾರಿ ಪದವಿ ಪೂರ್ವ ಕಾಲೇಜು ನೂತನ ಕಟ್ಟಡಗಳ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡುತ್ತಿದ್ದರು.
ದೇಶದ ಭವಿಷ್ಯ ಮಕ್ಕಳ ಮೇಲಿದೆ. ಶಿಕ್ಷಕರು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿದಾಗ ಮಾತ್ರ ಅವರು ಸಮಾಜದಲ್ಲಿ ಉನ್ನತ ಸ್ಥಾನಕ್ಕೆ ಬರಲು ಸಾಧ್ಯ. ಮಕ್ಕಳು ಕೂಡ ಶ್ರಮ ಪಟ್ಟು ಓದಿದಾಗ ಮಾತ್ರ ಜೀವನಲ್ಲಿ ಮುಂದೆ ಬರಲು ಸಾಧ್ಯ ಎಂದು ಹೇಳಿದರು.
ಗ್ರಾಮದಲ್ಲಿ ಅನೇಕ ಅಭಿವೃದ್ದಿ ಕಾರ್ಯಗಳು ನಡೆಯುತ್ತಿದೆ. ಗ್ರಂಥಾಲಯ, ಅಂಬೇಡ್ಕರ್ ಭವನ, ಉನ್ನತ ಶಿಕ್ಷಣಕ್ಕಾಗಿ ಸರ್ಕಾರಿ ಪದವಿ ಪೂರ್ವ ಕಾಲೇಜು ಹಾಗೂ ೫೫ ಲಕ್ಷ ರೂಗಳ ವೆಚ್ಚದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ನೂತನ ಕಟ್ಟಡ ನಿರ್ಮಾಣವಾಗಲಿದೆ ಗ್ರಾಮಸ್ಥರು ಈ ಸೌಲಭ್ಯಗಳನ್ನು ಉಪಯೋಗಿಸಿಕೊಳ್ಳಬೇಕು ಎಂದರು.
ಶಾಸಕ ಕೆ.ಪಿ.ಬಚ್ಚೇಗೌಡ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ ಮೊದಲ ಬಾರಿಗೆ ಗ್ರಾಮದಲ್ಲಿ ಒಂದೇ ಬಾರಿಗೆ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಲಾಗುತ್ತಿದೆ ಜೊತೆಗೆ ಮೂಲಭೂತ ಸೌಕರ್ಯಗಳ ಕೊರತೆಗಳಿದ್ದು ಅದನ್ನು ಪರಿಹರಿಸಲಾಗುವುದು. ಸದ್ಯದಲ್ಲಿಯೆ ೫೫ ಲಕ್ಷದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ನಿರ್ಮಾಣವಾಗಲಿದೆ ಗ್ರಾಮಸ್ಥರು ಚಿಕಿತ್ಸೆಗಾಗಿ ಬೇರೆ ಊರುಗಳಿಗೆ ಹೋಗುವ ಅಗತ್ಯವಿಲ್ಲವೆಂದರು.
ಜಿಲ್ಲಾ ಪಂಚಾಯತ್ ಅಧ್ಯಕ್ಷಿಣಿ ಶ್ರೀಮತಿ ವಿನುತ ಶ್ರೀನಿವಾಸ ಮಾತನಾಡಿ ಮಕ್ಕಳು ಚೆನ್ನಾಗಿ ಓದಿ ದೇಶಕ್ಕೆ ಮತ್ತು ರಾಜ್ಯಕ್ಕೆ ಕೀರ್ತಿಯನ್ನು ತರಬೇಕು ಮತ್ತು ಜೀವನದಲ್ಲಿ ಉತ್ತಮ ಸಾಧೆ ನಾಡಬೇಕು ಎಂಬ ಚಲವಿರಬೇಕು ಎಂದರು.
ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಚೆಂಡೂರು ವೆಂಕಟೇಶ್ ಮಾತನಾಡಿ ಮಂಡಿಕಲ್ ಗ್ರಾಮ ಈಗ ಅಭಿವೃದ್ಧಿಯನ್ನು ಕಾಣುತ್ತಿದೆ. ಗ್ರಾಮವು ಸುವರ್ಣ ಗ್ರಾಮ ಯೋಜನೆಯಡಿ ಸೇರಿಕೊಂಡ ಮೇಲೆ ಅಭಿವೃದ್ಧಿ ಕಾರ್ಯಕ್ರಮಗಳು ನಡೆಯುತ್ತಿದೆ ಎಂದರು.
ಜಿಲ್ಲಾಧಿಕಾರಿ ಅನ್ವರ್ ಪಾಷ ಮಾತನಾಡಿ ಗ್ರಾಮಕ್ಕೆ ಬೇಕಾಗುವ ಸೌಲಭ್ಯಗಳನ್ನು ಒದಗಿಸಲಾಗುವುದು. ಕಾನೂನು ರೀತಿಯಲ್ಲಿ ಗ್ರಾಮಕ್ಕೆ ಏನಾದರು ಕೆಲಸಗಳು ಆಗಬೇಕಾದರೆ ಅದನ್ನು ನೆರವೇರಿಸಿಕೊಡಲಾಗುವುದು ಎಂದರು.
ಸಮಾರಂಭದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಹಣಾಧಿಕಾರಿ ಎನ್.ಕೃಷ್ಣಪ್ಪ, ಜಿ.ಪಂ.ಸದಸ್ಯ ಎ.ಡಿ.ಆವಲಪ್ಪ, ತಾಲ್ಲೂಕು ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ನಳಿನಿ ಗೌಡ, ತಾಲ್ಲೂಕು ಪಂಚಾಯತ್ ಉಪಾಧ್ಯಕ್ಷ ಗಂಗಾಧರಪ್ಪ, ತಾ.ಪಂ. ಸದಸ್ಯ ವಿ.ವೆಂಕಟೇಶ್, ಮಂಡಿಕಲ್ ಗ್ರಾಮ ಪಂಚಾಯತ್ ಅಧ್ಯಕ್ಷ ಇಮಾಮ್ ಸಾಬ್ ಉಪಸ್ಥಿತರಿದ್ದರು.