ಭಟ್ಕಳ,ಮಾರ್ಚ್ ೧೭: ಇಲ್ಲಿನ ಹೆಬಳೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಬಬ್ಬನಕಲ್‌ನಲ್ಲಿ ನಬಾರ್ಡ ಯೋಜನೆಯಡಿ ನಿರ್ಮಿಸಲಾದ ನೂತನ ಅಂಗನವಾಡಿ ಕಟ್ಟಡ ಹಾಗೂ ತಪ್ಪಲಮನೆ ವಠಾರದಲ್ಲಿ ಅಭಾವ ಪರಿಹಾರ ಯೋಜನೆಯಡಿ ನಿರ್ಮಿಸಲಾದ ಕುಡಿಯವ ನೀರಿನ ಟ್ಯಾಂಕನ್ನು ಶಾಸಕ ಜೆ ಡಿ ನಾಯ್ಕ ನಿನ್ನೆ ಬೆಳಿಗ್ಗೆ ಉದ್ಘಾಟಿಸಿದರು.
ನಂತರ ನಡೆದ ಸಮಾರಂಭದಲ್ಲಿ ಮಾತನಾಡಿದ ಅವರು ತಾಲೂಕಿನ ವಿವಿಧೆಡೆ ಬೇಸಿಗೆಯಲ್ಲಿ ಕುಡಿಯುವ ನೀರಿನ ಅಭಾವ ಹೆಚ್ಚಿರುವುದನ್ನು ಮನಗಂಡು ಅಭಾವ ಪರಿಹಾರ ಯೋಜನೆಯಡಿಯಲ್ಲಿ ಹೆಚ್ಚಿನ ಅನುದಾನ ಒದಗಿಸಬೇಕು ಎಂದು ಸರಕಾರಕ್ಕೆ ಒತ್ತಾಯಿಸಲಾಗಿದೆ. ಭಟ್ಕಳ ವಿಧಾನಸಭಾ ಕ್ಷೇತ್ರದಲ್ಲಿ ೩೨ ಗ್ರಾಪಂ ಗಳಿದ್ದು, ಬೇಸಿಗೆಯಲ್ಲಿ ಕುಡಿಯುವ ನೀರಿನ ಅಭಾವ ನೀಗಿಸಲು ೨೦ ಲಕ್ಷ ರೂ ನೀಡಲಾಗುತ್ತಿದೆ. ಎಲ್ಲಾ ಕಡೆಗಳಲ್ಲೂ ನೀರಿನ ಅಭಾವ ಉಂಟಾಗುವುದರಿಂದ ಸರಕಾರ ಪ್ರತಿ ಕ್ಷೇತ್ರಕ್ಕೆ ೫೦ ಲಕ್ಷರೂ ಬಿಡುಗಡೆ ಮಾಡಿದರೆ ಹಂತಹಂತವಾಗಿ ಶಾಶ್ವತ ಪರಿಹಾರ ರೂಪಿಸಲು ಸಾಧ್ಯ ಎಂದ ಅವರು ಹೆಬಳೆಗೆ ಸುವರ್ಣ ಗ್ರಾಮ ಯೋಜನೆ ಮಂಜೂರಿಯಾಗಿದ್ದು, ಗುಣಮಟ್ಟದ ಕಾಮಗಾರಿ ಆಗುವಂತೆ ಜನರು ಜಾಗ್ರತೆ ವಹಿಸಬೇಕಿದೆ. ತಾಲೂಕಿನ ವಿವಿಧಕಡೆಗಳಲ್ಲಿ ನಬಾರ್ಡ ಹಾಗೂ ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ರಸ್ತೆ ಡಾಂಬರೀಕರಣಕ್ಕೆ ಹಣ ಮಂಜೂರಿಯಾಗಿದ್ದು, ಕಾಮಗಾರಿ ನಡೆಯುತ್ತಿದೆ. ಮತ್ತೆ ೫೦ ಕಿಮಿ ರಸ್ತೆ ಕಾಮಗಾರಿ ಕೈಗೊಳ್ಳಲು ಪ್ರಸ್ತಾವನೆ ಸಲ್ಲಿಸಲಾಗಿದ್ದು ಮಂಜೂರಿಯಾಗುವ ವಿಶ್ವಾಸವಿದೆ ಎಂದರು. ಭಟ್ಕಳಕ್ಕೆ ವಿವಿಧ ಯೋಜನೆಯಡಿಯಲ್ಲಿ ೧೦೦ ಕೋಟಿ ರೂಪಾಯಿಯನ್ನು ಸರಕಾರ ಮಂಜೂರಿಸಿದೆ. ಅದರಲ್ಲಿ ರಸ್ತೆ, ಅಂಗನವಾಡಿ ಸೇರಿದಂತೆ ಅಗತ್ಯವಿರುವ ಕಾಮಗಾರಿಯನ್ನು ನಡೆಸಲಾಗುತ್ತಿದೆ ಎಂದರು. ಮುಖ್ಯ ಅತಿಥಿಯಾಗಿದ್ದ ಹೆಬಳೆ ಗ್ರಾಪಂ ಅಧ್ಯಕ್ಷ ಪುಂಡಲೀಕ ಹೆಬಳೆ ಮಾತನಾಡಿ ಹೆಬೆಳೆಯಲ್ಲಿ ಕುಡಿಯವ ನೀರಿನ ಅಭಾವವಿದ್ದು, ಇದಕ್ಕೆ ಶಾಶ್ವತವಾದ ಪರಿಹಾರ ಕಲ್ಪಿಸಬೇಕು ಎಂದರು. ಅಧ್ಯಕ್ಷತೆ ವಹಿಸಿದ್ದ ಗ್ರಾಪಂ ಉಪಾಧ್ಯಕ್ಷ ಹಾಗೂ ಅಂಗನವಾಡಿ ಅಭಿವೃದ್ಧಿ ಸಂಘದ ಅಧ್ಯಕ್ಷ ಮಹಾಬಲೇಶ್ವರ ನಾಯ್ಕ ಮಾತನಾಡಿದರು. ವೇದಿಕೆಯಲ್ಲಿ ಗುತ್ತಿಗೆದಾರ ನಾರಾಯಣ ನಾಯ್ಕ ಬಬ್ಬನಕಲ್ ಉಪಸ್ಥಿತರಿದ್ದರು. ಬಬ್ಬನಕಲ್ ಯುವಕ ಸಂಘದ ಕಟ್ಟಡಕ್ಕೆ ಹಣ ಮಂಜೂರಿಸುವಂತೆ ಶಾಸಕರಿಗೆ ಮನವಿ ಸಲ್ಲಿಸಲಾಯಿತು. ಯುವಕ ಸಂಘದ ಈಶ್ವರ ನಾಯ್ಕ ಸ್ವಾಗತಿಸಿ,ವಂದಿಸಿದರು.