ಹಾಸನ-ಡಿ-12. ಪಾನಮತ್ತ ಯುವಕನೊಬ್ಬ ಚಲಿಸುತ್ತಿದ್ದ ರೈಲನ್ನು ನೋಡನೋಡುತ್ತಲೇ ಸೇತುವೆಯಿಂದ ಕೆಳಗೆ ಬಿದ್ದು ಮಾರಣಾಂತಿಕವಾಗಿ ಗಾಯಗೊಂಡಿರುವ ಘಟನೆ ಹಾಸನದಲ್ಲಿ ಶನಿವಾರ ನಡೆದಿದೆ.
ಕಂಠಪೂರ್ತಿ ಮದ್ಯಪಾನ ಸೇವಿಸಿದ್ದ ಎನ್ನಲಾದ ಹಾಸನದ ವಲ್ಲಬಾಯಿ ರಸ್ತೆಯ ನಿವಾಸಿ ೨೪ ವರ್ಷದ ರವಿ ಗಾಯಗೊಂಡು ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಹಾಸನದಿಂದ ಮಂಗಳೂರಿಗೆ ಹೋಗುತ್ತಿದ್ದ ರೈಲನ್ನು ಗೊರೂರು ರಸ್ತೆಯಲ್ಲಿರುವ ಸೇತುವೆ ಮೇಲಿಂದ ನೋಡುತ್ತಿದ್ದ ವೇಳೆ ಕೆಳಗೆ ಕುಸಿದು ಬಿದ್ದಿದ್ದಾನೆ. ಅದೃಷ್ಟವಶಾತ್ ರೈಲಿನ ಮೇಲೆ ಬೀಳದ ಯುವಕ ಹಳಿಯ ಪಕ್ಕದಲ್ಲಿ ಬಿದ್ದಿದ್ದರಿಂದ ಪ್ರಾಣ ಉಳಿದುಕೊಂಡಿದೆ.
ಸೇತುವೆಯಿಂದ ಕೆಳಗೆ ಬಿದ್ದ ಯುವಕನ ಕೈಕಾಲು ಮುರಿದಿದ್ದು, ದೇಹದ ಹಲವು ಭಾಗಗಳಿಗೆ ತೀವ್ರತರದ ಗಾಯಗಳಾಗಿವೆ. ಪ್ರಜ್ಞಾಹೀನ ಸ್ಥಿತಿಯಲ್ಲಿರುವ ಯುವಕನಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.