76ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಸಮಾರೋಪಗೊಂಡಿದೆ. ಇಲ್ಲಿ ಆಗಬೇಕಾದದ್ದು ಬಹಳಷ್ಟಿದೆ. ಆದಾಗ್ಯೂ ನೊಂದವರ ನಿಟ್ಟಿಸಿರು, ದುಡಿವವರ ದುಗುಡ, ನಾಡಿನ ಪ್ರಗತಿಯ ಹಂಬಲ ಆಳುವವರ ನಿರ್ಲಕ್ಷಕ್ಕೆ ವಿರೋಧ. ಹೀಗೆ ಜನರ ಬದುಕಿನ ಒಂದಿಷ್ಟು ದನಿ ಕೇಳಿಸಿದೆ. ನಾಡು-ನುಡಿ ಬದುಕಿನ ರಕ್ಷಣೆಗೆ ಇಲ್ಲಿ ವ್ಯಕ್ತಗೊಂಡ ಪ್ರಬಲಾಕಾಂಕ್ಷೆಗಳ' ಕೂಗು ಆಳುವವರಿಗೆ ಅದೆಷ್ಟು ಕೇಳಿಸಿತು? ಎಂಬ ಅನುಮಾನವಿದ್ದೇ ಇದೆ. ಪಾಳೇಗಾರಿ ಅರಸರ ಪಟ್ಟಾಭೀಷೇಕಕ್ಕೆ ನೀಡಿದ `ಕಾಳಜಿ ಸಾಹಿತ್ಯ' ಸಂಸ್ಕೃತಿಯ ಈ ಸಮ್ಮೇಳನಕ್ಕೆ ಸರ್ಕಾರ ತೋರಿದ `ನಿಷ್ಕಾಳಜಿ'ಯನ್ನು ಜನರು ತೂಗಿ ನೋಡುತ್ತಿದ್ದಾರೆ. ಸಾಹಿತ್ಯ ಸಮ್ಮೇಳನದಲ್ಲಿ ಜನರ ಉತ್ಸಾಹ ಉಕ್ಕೇರಿದ್ದರೆ, ಅಲ್ಲಿ ಪಟ್ಟಾಭಿಷೇಕದಲ್ಲಿ `ಪ್ರಭುಗಳ' ಉತ್ಸವ ಮೆರೆದಿತ್ತು. ಹೀಗೆ ನಾಡಿನ ಸಾಹಿತ್ಯವಲಯದಲ್ಲಿ ಬರಹಗಾರರು ಎಷ್ಟೆಲ್ಲಾ ಮತೀಯವಾದದ ಮಾಲಿನ್ಯಗಳ ನಡುವೆಯೂ ಪ್ರಗತಿಪರ ಪ್ರಜಾಪ್ರಭುತ್ವೀಯ, ಜಾತ್ಯಾತೀತ ಮೌಲ್ಯಗಳ ಉಸಿರಾದರು ಎಂಬುದು ಮತ್ತೊಮ್ಮೆ ಇಲ್ಲಿ ವ್ಯಕ್ತಗೊಂಡಿದ್ದು ಸ್ವಾಗತಾರ್ಹ, ಆಶಾದಾಯಕ.
* * * * * * * *
ಮಾತು ಕೃತಿ ತದ್ವಿರುದ್ಧ
ಸಾಹಿತ್ಯ ಸಮ್ಮೇಳನದ ಉದ್ಘಾಟನೆಗೆ ಬಾರದಿದ್ದ ಮುಖ್ಯಮಂತ್ರಿಗಳು ಸಮಾರೋಪಕ್ಕಾದರೂ ಬಂದರಲ್ಲ! ನಡೆದ ಎಲ್ಲವನ್ನೂ ಅರಿಯುವ, ನೆಲದ ನಿಜ ಗ್ರಹಿಸುವ, ಆಶಯಗಳಿಗೆ ಪ್ರತಿಸ್ಪಂದಿಸುವ ಒಂದು ಸುವರ್ಣಾವಕಾಶ ಅವರಿಗಿಲ್ಲಿ ಇತ್ತು. ಅವರು ಅದೆಷ್ಟು ಮನವಿಟ್ಟರೂ ಗೊತ್ತಿಲ್ಲ. ಆದರೆ `ನಾಡು ನುಡಿಯ ಸಂರಕ್ಷಣೆಗೆ ಬದ್ಧ' ಎಂದು ಮರೆಯದೇ ಮುಖ್ಯಮಂತ್ರಿಯವರು ಘೋಷಿಸಿದರು. ಆದರಿದು ಹನ್ನೊಂದಕ್ಕೆ ಮತ್ತೊಂದು ಎಂದಾಯಿತು. ಹೀಗೆ ಇದೇ ಮಾತುಗಳನ್ನು ಹೇಳುತ್ತಿರುವುದು ಎಷ್ಟನೇ ಬಾರಿ? ವಿಪರ್ಯಾಸವೆಂದರೆ ರಾಜ್ಯದ, ಮಾತ್ರವಲ್ಲ ದೇಶದ ಅತ್ಯಮೂಲ್ಯ ಸಂಪತ್ತಾದ ಉತ್ಕೃಷ್ಟ ಸಮೃದ್ಧವಾದ ಖನಿಜ ಸಂಪತ್ತನ್ನು ಜೀವ ಸಂಕಲದ ಉಳಿವಿಗಾಗಿ ಮೀಸಲಿಟ್ಟ ಅರಣ್ಯವನ್ನು ಖಾಸಗಿಯವರ ಲಂಗುಲಗಾಮಿಲ್ಲದ ಗಣಿಗಾರಿಕೆಗೆ ನೀಡಲು ಸಂಪುಟದಲ್ಲಿ ತೀರ್ಮಾನಿಸಿ ಇಲ್ಲಿಗೆ ಬಂದಿದ್ದರು. ಇಲ್ಲಿ ಬಳ್ಳಾರಿಯ ರೆಡ್ಡಿ ಸಹೋದರರ ಅಕ್ರಮ ಗಣಿಗಾರಿಕೆಗೆ ಕರ್ನಾಟಕದ ಗಡಿಯನ್ನೇ ಬದಲಿಸಿ ಆಂಧ್ರಕ್ಕೆ ಸೇರಿಸಿ ಸಂಪತ್ತು ಸೂರೆಗೈಯ್ಯುವಾಗ ಹೊಗೇನಿಕಲ್ ವಿಷಯದಲ್ಲಿ ನೆಲ-ಜಲ ಗಡಿ ರಕ್ಷಣೆಯ ಬಗ್ಗೆ ಅಬ್ಬರಿಸುತ್ತಾರೆ! ಇಂತಹ ಬುಡಮೇಲು ಭಾಷೆ ಮತ್ತು ಸೋಗಲಾಡಿತನಕ್ಕೆ ಸಾಕಷ್ಟು `ಚೆಡ್ಡಿ ವರಸೆಯೇ ಬೇಕೆನಿಸುತ್ತದೆ.
* * * * * * *
ವೈವಿಧ್ಯಮಯ ಜೀವ ಸಂಕುಲದ ಈ ಕಾಡು ಸಂರಕ್ಷಣೆಗೆ ಹಾಗೂ ನೈಸರ್ಗಿಕ ಸಮತೋಲನ ಕಾಯುವ ಹಿನ್ನೆಲೆಯಲ್ಲಿ ಮೀಸಲಿಡಲಾಗಿದ್ದ ರಾಜ್ಯದ ಮೀಸಲು ಅರಣ್ಯದ ಆರು ಬ್ಲ್ಲಾಕ್ ಗಳನ್ನು ಗಣಿಗಾರಿಕೆಗೆ ಸರ್ಕಾರ ನೀಡಿದೆ. ಇದರಲ್ಲಿ ಬಳ್ಳಾರಿ ಜಿಲ್ಲೆಯ ಸಂಡೂರು ತಾಲ್ಲೂಕಿನ ನಾಲ್ಕು (ಸ್ವಾಮಿ ಮಲೆ, ದೋಣಿ ಮಲೆ ಪ್ರದೇಶ) ಬಂಡೀಪುರ ಹುಲಿ ಸಂರಕ್ಷಣಾ ಯೋಜನಾ ವ್ಯಾಪ್ತಿಯ ಬೋಲೇಗೌಡನ ಕಟ್ಟೆ ಅರಣ್ಯ, ಪಶ್ಚಿಮ ಘಟ್ಟದ ಜೇಡಿಕಟ್ಟೆ ಹೀಗೆ ಒಟ್ಟು 13,630 ಹೆಕ್ಟೇರ್(24075 ಎಕರೆ) ಪ್ರದೇಶವನ್ನು ಗಣಿಗಾರಿಕೆಗೆ ನೀಡಿದೆ. ಹಿಂದೆ 2003ರಲ್ಲಿ ಇಂತಹ ಗಣಿಗಾರಿಕೆಯನ್ನು ನಿಷೇಧಿಸಿ ಸರ್ಕಾರ ಕೈಗೊಂಡಿತ್ತು. ಈಗ ಆ ನಿರ್ಧಾರದ ಉಲ್ಲಂಘನೆಯಾಗಿದೆ. ಮೇಲಾಗಿ ಅಕ್ರಮ ಗಣಿಗಾರಿಕೆಯ ಬಗ್ಗೆ ವಿವರವಾಗಿ ಅಧ್ಯಯನ ನಡೆಸಿರುವ ಲೋಕಾಯುಕ್ತ ನ್ಯಾ.ಸಂತೋಷಹೆಗ್ಡೆಯವರು ಅಕ್ರಮಗಳನ್ನು ನಿಖರವಾಗಿ ಗುರುತಿಸಿ ಅದನ್ನು ತಡೆಯಲು ಹಾಗೂ ಮತ್ತೆ ಗಣಿಗಾರಿಕೆಗೆ ಅನುಮತಿ ನೀಡದಿರಲು ಸೂಚಿಸಿದ್ದರು. ಈಗಿನ ಅಂದಾದುಂಧಿ ಗಣಿಗಾರಿಕೆ, ಲೂಟಿಯ ಭರಾಟೆಯು ಇಡೀ ಜಿಲ್ಲೆಯ ಪರಿಸರವನ್ನು, ಆ ಮಾಫಿಯಾಗಳ ರಾಜಕೀಯ ಹಿಡಿತದ ವಿಷಫಲ ಉಣ್ಣುತ್ತಿರುವುದನ್ನು ಕಾಣುತ್ತಿದ್ದೇವೆ. ಲೈಸೆನ್ಸ್ ಪಡೆದದ್ದು ಒಂದು ಎಕರೆಯಾದರೆ ಅದೇ ನೆಪದಲ್ಲಿ ನೂರಾರು ಎಕರೆ ಅರಣ್ಯ ಭೂಮಿಯನ್ನು ಗಣಿಗಾರಿಕೆಗೆ ಒತ್ತುವರಿ ಮಾಡಲಾಗಿದೆ. ಈಗಾಗಲೇ 50 ಕ್ಕೂ ಅಧಿಕ ಕಂಪನಿಗಳು ಇಲ್ಲಿ ಗಣಿಗಾರಿಕೆ ನಡೆಸುತ್ತಿವೆ. ಅದನ್ನು ಹದ್ದುಬಸ್ತಿನಲ್ಲಿಡಲು ಏನೊಂದು ಕ್ರಮಗಳಿಲ್ಲ. ಅಕ್ರಮಗಾರರ ಲೈಸೆನ್ಸ್ ರದ್ಧತಿ ಇಲ್ಲ. ಅರ್ಥಾತ್ ಆಶೀರ್ವಾದವಿದೆ. ಸರ್ಕಾರದ ಈಗಿನ ನಿರ್ಧಾರ. ಗಣಿ ಮಾಫಿಯಾ ಹಿತಗಳಿಗೆ ಮಣೆಹಾಕುವ, ಮನಸೋ ಇಚ್ಛೆ ಲೂಟಿ ಮಾಡಲು ಅವಕಾಶ ನೀಡುವ, ನಾಡು ನಾಶ ಮಾಡುವ ಭ್ರಷ್ಟತೆಯ ಪರಮಾವಧಿಯಾಗಿದೆ. ಈ ಮೂಲಕ ಇದು ನೆಲಗಳ್ಳರ, ಗಣಿಗಳ್ಳರ ಸರ್ಕಾರ ಎಂಬುದು ಮತ್ತೊಮ್ಮೆ ಸಾಬೀತಾಗಿದೆ.
ಲಜ್ಜಾಹೀನ ಸಮರ್ಥನೆ
ಉಕ್ಕು-ಕಬ್ಬಿಣ ತಯಾರಿಕೆಯ ಕೈಗಾರಿಕೋದ್ಯಮಿಗಳಿಗೆ ಈ ಪ್ರದೇಶ ನೀಡಲಾಗಿದೆ ಎಂಬುದು ಬಿಜೆಪಿ ಸರ್ಕಾರದ ಲಜ್ಜಾಹೀನ ಸಮರ್ಥನೆ. ನಿಜ, ನಮ್ಮಲ್ಲೇ ಉಕ್ಕು ಉತ್ಪಾದನೆಗೆ ಅದರ ಮೌಲ್ಯವರ್ಧನೆಗೆ ಆಂತರಿಕ ಅವಶ್ಯಕತೆಗಳಿಗೆ ಮಾತ್ರ ಗಣಿಗಾರಿಕೆ ನಡೆಸಬೇಕೆಂಬುದು ನಮ್ಮೆಲ್ಲರ ಆಗ್ರಹ. ಆದರೆ ಅದೇ ಹೊತ್ತಿನಲ್ಲಿ ಕೇವಲ ರಫ್ತು ಮಾಡುವ ಲೂಟಿಯ ಉದ್ದೇಶಗಳಿಗೆ ಗಣಿಗಾರಿಕೆ ನೀಡಬಾರದು ಎನ್ನುವಾಗ ಈಗಿರುವ ಗಣಿಗಾರಿಕೆ ದಂಧೆಗಾರರನ್ನು ನಿರ್ಬಂಧಿಸಿ ಅದನ್ನೇ ಉತ್ಪಾದನೆಗೆ ಬಳಸಬಹುದಿತ್ತು. ಅಥವಾ ಸಕರ್ಾರದ ಸ್ವಾಮ್ಯದಲ್ಲಿ ಬೇರೊಂದು ಜಾಗದಲ್ಲಿ ಗಣಿಗಾರಿಕೆ ನಡೆಸಿ ಉತ್ಪಾದನೆಗೆ ಪೂರೈಸಬಹುದಿತ್ತು. ಈಗಲೂ ಕೈಗಾರಿಕೆ ಸ್ಥಾಪಿಸುವ ಇಂತಹ ಕಂಪನಿಗಳು ವಿದೇಶಕ್ಕೆ ಅದಿರು ರಫ್ತು ಮಾಡದಂತೆ ನಿಷೇಧವಿಲ್ಲ. ದೇಶದ, ಜಗತ್ತಿನ ಅತ್ಯಂತ ದೊಡ್ಡ ಉಕ್ಕು ಉದ್ಯಮಿಗಳಾದ ಅರ್ಸರ್ ಮಿತ್ತಲ್, ಪೋಸ್ಕೋ ಕಂಪನಿಯಂತಹ (ಜಿಂದಾಲ್- ಕಲ್ಯಾಣಿ)ವರಿಗೆ ಗಣಿ ಸ್ವಾಮ್ಯ ನೀಡುವುದು ಅಪಾರ ಬಂಡವಾಳದ ಸಾಮಥ್ರ್ಯವಿರುವ ಅವರನ್ನು ನಿಯಂತ್ರಿಸಲು ಹೇಗೆ ಸಾಧ್ಯ? ಇಂತಹವರಿಗೆ ಸರ್ಕಾರಗಳೇ ಶರಣಾಗಿರುವ ನಿದರ್ಶನವಿರುವಾಗ ನಾಡಿನ ಹಿತ, ಜನಹಿತ ಎಂಬುದು ಎಲ್ಲಿ?
ಕಾಂಚಾಣದ ಮುಂದೆ ಮಾತೃ?
ಇಷ್ಟೆಲ್ಲಾ ಅವಾಂತರಗಳು, ಗಣಿಗಾರಿಕೆ ಆಧಾರಿತವಾಗಿ ಅಕ್ರಮ ಸಂಪತ್ತಿನ ಸೂರೆ ನಡೆದಿರುವಾಗಲೂ ಒಂದು ಟನ್ಗೆ ರೂ.5000 ಬೆಲೆ ಸಿಗುವಾಗ, ಸರ್ಕಾರಕ್ಕೆ ರಾಜಧನವೆಂದು ಇದರಲ್ಲಿ ಸಿಗುವುದು ಕೇವಲ ರೂ.30 ಮಾತ್ರ. ಇದೆಲ್ಲವನ್ನು ಸರಿಪಡಿಸಲು ವೈಜ್ಞಾನಿಕವಾದ `ರಾಷ್ಟ್ರೀಯ ಗಣಿ ನೀತಿ ರೂಪಿತವಾಗಬೇಕು' ಎಂಬ ಬೇಡಿಕೆ ಕಾರ್ಯಗತ ವಾಗುತ್ತಿಲ್ಲ. ಅದಾಗ್ಯೂ ರಾಜ್ಯ ಸರ್ಕಾರಗಳು ಈಗಿರುವ ಕಾನೂನನ್ನೇ ಬಳಸಿ ಸಾಕಷ್ಟು ರಕ್ಷಣಾ ಕ್ರಮವಹಿಸಲು ಸಾಧ್ಯವಿದೆ. ಆದರೆ ಎಷ್ಟೆಲ್ಲಾ ವೀರಾವೇಶದಿಂದ ಮಾತನಾಡುವ ಬಿಜೆಪಿ ಅದರ ಮಾತೃ ಸಂಸ್ಥೆಯಾಗಿರುವ ಆರ್ಎಸ್ ಎಸ್ ಗಳು ಇಂತಹ ಲೂಟಿಗೆ ಸರ್ವ ಸಮ್ಮತಿ ನೀಡುತ್ತಿವೆ. ಪಾಲು ಪಡೆಯುತ್ತವೆ. ಇಂತಹವರ ಕೈಯಲ್ಲಿ ಕರ್ನಾಟಕ - ಬಾಕಿತ ದೇಶ ಎಷ್ಟು ಸುರಕ್ಷಿತ. ಕಾಂಚಾಣದ ಮುಂದೆ ಮಾತೃಭೂಮಿಯ ಎಲ್ಲವೂ ಕಾಲ ಕಸವೇ?
ರದ್ದಾಗಲಿ
ಈಗಲಾದರೂ ಸರ್ಕಾರ ಆರು ಕಡೆಗಳಲ್ಲಿನ ಗಣಿಗಾರಿಕೆಗೆ ಅನುಮತಿ ನೀಡಿರುವ ನಿರ್ಧಾರವನ್ನು ರದ್ದುಪಡಿಸಬೇಕು. ಕೇಂದ್ರ ಸರ್ಕಾರವೂ ಇದಕ್ಕೆ ಪೂರಕವಾದ ತೀರ್ಮಾನ ವಸಾಡಬೇಕು. ಇದಕ್ಕಾಗಿ ಜನಧ್ವನಿ ಎದ್ದು ಬರಬೇಕು.
ಎಸ್.ವೈ.ಗುರುಶಾಂತ್
ಸೌಜನ್ಯ: ಜನಶಕ್ತಿ