ಭಟ್ಕಳ, ಡಿಸೆಂಬರ್ 18: ವಿಧಾನ ಪರಿಷತ್ ಸದಸ್ಯತ್ವಕ್ಕಾಗಿ ನಡೆದ ಚುನಾವಣೆಯಲ್ಲಿ ಭಟ್ಕಳ ತಾಲೂಕಿನಲ್ಲಿ 97395% ಮತದಾನವಾಗಿದೆ. ಒಟ್ಟೂ 18ಮತಗಟ್ಟೆಗಳಲ್ಲಿ ಮತದಾನ ನಡೆದಿದ್ದು, 341 ಮತದಾರರ ಪೈಕಿ 334 ಜನಪ್ರತಿನಿಧಿಗಳು ತಮ್ಮ ಮತಗಳನ್ನು ಚಲಾಯಿಸಿದ್ದಾರೆ. ಮಾವಳ್ಳಿ, ಕೈಕಿಣಿ, ಜಾಲಿ, ಮುಟ್ಟಳ್ಳಿ ಗ್ರಾಮಪಂಚಾಯತಗಳನ್ನು ಹೊರತು ಪಡಿಸಿ ಉಳಿದೆಡೆ ಶೇಕಡಾ 100 ಮತದಾನವಾಗಿದೆ. ಮಾವಳ್ಳಿ ಗ್ರಾಮಪಂಚಾಯತದಲ್ಲಿ ಒಟ್ಟೂ 37 ಮತದಾರರಿದ್ದು, ಇಬ್ಬರು ಮತ ಚಲಾಯಿಸಲಿಲ್ಲ. ಕೈಕಿಣಿಯ 23ಮತಗಳ ಪೈಕಿ ಓರ್ವರು ಗೈರು ಹಾಜರಾಗಿದ್ದಾರೆ. ಜಾಲಿಯ 37 ಮತದಾರರಲ್ಲಿ 3 ಮತಗಳು ಕಡಿಮೆ ಚಲಾವಣೆಯಾದರೆ ಮುಟ್ಟಳ್ಳಿಯಲ್ಲಿನ 11 ಮತಗಳ ಪೈಕಿ ಒಂದು ಮತ ಚಲಾವಣೆಯಾಗಿಲ್ಲ.

ಎಲ್ಲೆಡೆ ಶಾಂತಿಯುತ ಮತದಾನವಾಗಿದ್ದು, ಮತದಾನದ ಅವಧಿ ಮುಗಿಯುವ ಕೊನೆಯ ಕ್ಷಣದವರೆಗೂ ಅಭ್ಯರ್ಥಿಗಳ ಪರ ಮುಖಂಡರು ತೆರೆ ಮರೆಯಲ್ಲಿ ಕಸರತ್ತನ್ನು ಮುಂದುವರೆಸಿದ್ದರು. ಕಳೆದ ಎರಡು ದಿನಗಳ ಹಿಂದೆಯಷ್ಟೇ ರಂಗೇರಿದ್ದ ಚುನಾವಣಾ ಕಣ ಕುತೂಹಲವನ್ನು ಹಾಗೆಯೇ ಉಳಿಸಿಕೊಂಡಿದ್ದು, ಲೆಕ್ಕಾಚಾರ ಮುಂದುವರೆದಿದೆ. ಪ್ರಮುಖವಾಗಿ ಕಾಂಗ್ರೆಸ್ ಹಾಗೂ ಪಕ್ಷೇತರ ಅಭ್ಯರ್ಥಿ ಅನಿಲ್ ನಾಯ್ಕರ ನಡುವೆ ಸಮಬಲದ ಪೈಪೋಟಿ ಏರ್ಪಟ್ಟಿದ್ದು, ಪಕ್ಷೇತರ ಅಭ್ಯರ್ಥಿಯು ಕೊಂಚ ಮೇಲುಗೈ ಸಾಧಿಸುವ ಸಾಧ್ಯತೆ ಕಂಡು ಬಂದಿದೆ. ತಂಜೀಮ್ ಈ ಬಾರಿ ಕಾಂಗ್ರೆಸ್ಗೆ ‘ಕೈ’ ಕೊಟ್ಟಿರುವುದು ಚುನಾವಣಾ ಫಲಿತಾಂಶದ ಮೇಲೆ ಪರಿಣಾಮ ಬೀರುವುದು ನಿಚ್ಚಳವಾಗಿದೆ. ಇನ್ನುಳಿದಂತೆ ಬಿಜೆಪಿ ಈ ಬಾರಿ ಕಳೆಗುಂದಿದೆ. 2-3 ಪಂಚಾಯತಗಳಲ್ಲಷ್ಟೇ ಉಸಿರಾಡಲು ಆ ಪಕ್ಷಕ್ಕೆ ಸಾಧ್ಯವಾಗಿದ್ದು, ಮುನ್ನಡೆ ಸಾಧಿಸಲು ಪವಾಡವೇ ನಡೆಯಬೇಕು ಎಂಬ ಮಾತು ಕೇಳಿ ಬರುತ್ತಿದೆ. ಈ ಎಲ್ಲ ಬೆಳವಣಿಗೆಯ ನಡುವೆಯೇ ಕಾಂಗ್ರೆಸ್, ಬಿಜೆಪಿ ಹಾಗೂ ಅನಿಲ್ ನಾಯ್ಕ ಬೆಂಬಲಿಗರು ತಮ್ಮ ಅಭ್ಯರ್ಥಿಗಳೇ ಮೇಲುಗೈ ಸಾಧಿಸುವ ವಿಶ್ವಾಸವನ್ನು ವ್ಯಕ್ತಪಡಿಸುತ್ತಿದ್ದಾರೆ. ಎಲ್ಲರ ಲಕ್ಷ್ಯವೂ ಸೋಮವಾರ ಪ್ರಕಟವಾಗುವ ಫಲಿತಾಂಶದತ್ತ ನೆಟ್ಟಿದೆ.


ಮತದಾನದ ಧೃವೀಕರಣ
ತಾಲೂಕಿನಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಎರಡೂ ಪಕ್ಷಗಳ ಭಿನ್ನಮತದ ಲಾಭವನ್ನು ಪಕ್ಷೇತರ ಅಭ್ಯರ್ಥಿ ಅನಿಲ್ ನಾಯ್ಕ ಪಡೆದುಕೊಂಡಿದ್ದಾರೆ. ಬಿಜೆಪಿ ಹಾಗೂ ಕಾಂಗ್ರೆಸ್ ಪ್ರಮುಖ ಕೆಲವು ಧುರೀಣರೇ ಈ ಬಾರಿ ಪಕ್ಷೇತರ ಅಭ್ಯರ್ಥಿಯ ಪರ ಪ್ರಚಾರ ನಡೆಸಿದ್ದು, ಇನ್ನು ಕೆಲವರು ಒಳಗೊಳಗೆ ಬೆಂಬಲ ವ್ಯಕ್ತಪಡಿಸಿ ಕೈ ತೊಳೆದು ಕೊಂಡಿದ್ದಾರೆ ಎನ್ನಲಾಗಿದೆ. ಶುಕ್ರವಾರ ಮಧ್ಯಾಹ್ನದ ವೇಳೆಗೆ ಚುನಾವಣಾ ದಿನಾಂಕದವರೆಗೂ ಬಿಜೆಪಿ ಅಭ್ಯರ್ಥಿ ಪರ ಇರುವವರೇ ಕಾಂಗ್ರೆಸ್ಗೆ ಜೈ ಅಂದಿದ್ದಾರೆ ಎಂಬ ಹೇಳಿಕೆಗಳೂ ತೇಲಾಡಿವೆ. ಇನ್ನೊಂದೆಡೆ ಕಾಂಗ್ರೆಸ್ ಪರ ಇರುವವರೇ ಬಿಜೆಪಿಗೂ ‘ಹ್ಞೂಂ’ ಎನ್ನುತ್ತಿದ್ದಾರೆ
ಎಂಬ ಗಾಸಿಫ್ ಹರಿದಾಡಿದ್ದು, ಮತದಾರರಾದಿಯಾಗಿ ಜನಸಾಮಾನ್ಯರನ್ನು ಗೊಂದಲದಲ್ಲಿ ದೂಡಿದ್ದಂತೂ ಸುಳ್ಳಾಗಿರಲಿಲ್ಲ.
ಚಿತ್ರ, ವರದಿ: ಎಮ್ಮಾರ್ ಮಾನ್ವಿ, ಭಟ್ಕಳ