ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಕರಾವಳಿಯಲ್ಲಿ ಚಂಡಮಾರುತ: ಭಾರೀ ಮಳೆಯ ಮುನ್ಸೂಚನೆ

ಕರಾವಳಿಯಲ್ಲಿ ಚಂಡಮಾರುತ: ಭಾರೀ ಮಳೆಯ ಮುನ್ಸೂಚನೆ

Wed, 11 Nov 2009 03:05:00  Office Staff   S.O. News Service
ಮುಂಬೈ, ನ.೧೦ : ಉತ್ತರ ಕರ್ನಾಟಕವನ್ನು ಅರ್ಧಕ್ಕರ್ಧ ನಿರ್ನಾಮ ಮಾಡಿದ ಮಳೆಯ ಮೋರೆಯೀಗ ಕರಾವಳಿಯತ್ತ ತಿರುಗುವ ಲಕ್ಷಣಗಳಿವೆ. ೨ ದಿನದಲ್ಲಿ ರಾಜ್ಯದ ಕರಾವಳಿ ಭಾಗಕ್ಕೆ ಚಂಡಮಾರುತ ಅಪ್ಪಳಿಸಲಿದ್ದು, ಭಾರಿ ಮಳೆ ಸುರಿಯುವ ಸಾಧ್ಯತೆಯಿದೆ. 

ಮುಂಬೈ ಹವಾಮಾನ ಕೇಂದ್ರದಿಂದ ಮಂಗಳವಾರ ಈ ಎಚ್ಚರಿಕೆ ಹೊರಬಿದ್ದಿದೆ. ಅಲೆಗಳ ಅಬ್ಬರ ಜೋರಾಗಿರುವುದರಿಂದ ಮೀನುಗಾರರು ಸಮುದ್ರಕ್ಕಿಳಿಯದಂತೆ ಸೂಚಿಸಲಾಗಿದೆ. ಅರಬ್ಬಿ ಸಮುದ್ರದಲ್ಲಿ ಮಂಗಳೂರಿನಿಂದ ಸುಮಾರು ೪೭೦ ಕಿ.ಮೀ ದೂರದಲ್ಲಿ ಪಶ್ಚಿಮಕ್ಕೆ ವಾಯುಭಾರ ಕುಸಿತ ಉಂಟಾಗಿದೆ. ಅದು ತೀರದತ್ತ ಸರಿಯುತ್ತಿದ್ದು, ೪೮ ಗಂಟೆಗಳಲ್ಲಿ ಕರಾವಳಿಯಲ್ಲಿ  ೭೫ ಕಿ.ಮೀ ವೇಗದ ಗಾಳಿಯೊಂದಿಗೆ ಭಾರಿ ಮಳೆ ಸುರಿಯುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. 

ಕರ್ನಾಟಕವಷ್ಟೇ ಅಲ್ಲ, ಕೇರಳ, ಗೋವಾ, ಗುಜರಾತ್ ಮತ್ತು ಮಹಾರಾಷ್ಟ್ರದ ಕರಾವಳಿ ಪ್ರದೇಶದಲ್ಲೂ ಅಪಾಯಕಾರಿ ಮಟ್ಟದಲ್ಲಿ ಮಳೆ ಸುರಿಯುವ ಮುನ್ಸೂಚನೆ ದೊರೆತಿದೆ. ಗುಜರಾತ್, ಮಹಾರಾಷ್ಟ್ರ ಕರಾವಳಿಗೆ ದೆಹಲಿ ಹವಾಮಾನ ಕೇಂದ್ರವೂ ಚಂಡಮಾರುತದ ಮುನ್ಸೂಚನೆ ಹೊರಡಿಸಿದೆ.  

ಇಂದು ಮಧ್ಯಾಹ್ನದಿಂದ ಗಾಳಿ: ಬುಧವಾರ ಮಧ್ಯಾಹ್ನದಿಂದ ಕರಾವಳಿ ಪ್ರದೇಶದಲ್ಲಿ ಗಾಳಿಯ ಅಬ್ಬರ ಹೆಚ್ಚಲಿದೆ. ೫೫-೬೫ ಕಿ.ಮೀ ವೇಗದಲ್ಲಿ ಆರಂಭವಾಗುವ ಗಾಳಿಯ ವೇಗ ಗಂಟೆಗೆ ೭೫ ಕಿ.ಮೀ.ವರೆಗೂ ಹೆಚ್ಚಲಿದೆ. 

ಈ ಮಾರುತವು ಚಂಡಮಾರುತವಾಗಿ ಬದಲಾಗುವ ಸಾಧ್ಯತೆ ಅಧಿಕವಾಗಿದ್ದು, ಮೊದಲು ಉತ್ತರ ದಿಕ್ಕಿನಲ್ಲಿ ಚಲಿಸುವ ಮಾರುತ ನಂತರ ಈಶಾನ್ಯಕ್ಕೆ ತಿರುಗಲಿದೆ. ಅದು ದಕ್ಷಿಣ ಗುಜರಾತ್ ಮತ್ತು ಉತ್ತರ ಕೊಂಕಣವನ್ನು ಮಹುವಾ ಮತ್ತು ದಹನು ಪ್ರದೇಶಗಳ ನಡುವೆ ನ.೧೨ರಂದು ಹಾದು ಹೋಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಉಪ ನಿರ್ದೇಶಕ ಡಾ|ಆರ್.ವಿ.ಶರ್ಮಾ ತಿಳಿಸಿದ್ದಾರೆ. 

ಈ ಮಾರುತದಿಂದ ಕೊಂಕಣ, ಗೋವಾ ಮತ್ತು ಕೇಂದ್ರ ಮಹಾರಾಷ್ಟ್ರದಲ್ಲಿ ‘ಭಾರಿಯಿಂದ ಅತಿ ಭಾರಿ’ ಮಳೆಯಾಗುವ ಸಾಧ್ಯತೆಯಿದೆ ಎಂದು ಹೇಳಿದ್ದಾರೆ. 
 
ತಮಿಳ್ನಾಡಲ್ಲಿ ೭೦ ಸಾವು: ಕಳೆದ ೨ ವಾರದಿಂದ ತಮಿಳುನಾಡಿನಲ್ಲಿ ಸುರಿದ ಮಳೆಗೆ ಬಲಿಯಾದವರ ಸಂಖ್ಯೆ ಮಂಗಳವಾರ ೭೦ ತಲುಪಿದೆ. ಸೋಮವಾರ ರಾತ್ರಿಯಿಂದೀಚೆಗೆ ರಾಜ್ಯದಲ್ಲಿ ೩೧ ಸಾವು ವರದಿಯಾಗಿವೆ. ನೀಲಗಿರಿ ಜಿಲ್ಲೆಯೊಂದರಲ್ಲೇ ಮಣ್ಣು ಕುಸಿತದಿಂದ ೨೭ ಮಂದಿ ಸಾವನ್ನಪ್ಪಿದ್ದಾರೆ. ಸೋಮವಾರದ ಹೊತ್ತಿಗೆ ಇಳಿಮುಖವಾಗಿದ್ದ ಮಳೆ ಮರುದಿನ ಮತ್ತೆ ಬಿರುಸಾಗಿರುವುದು ಜನರಲ್ಲಿ ಆತಂಕ ಹೆಚ್ಚಿಸಿದೆ. 

ಕಾಶ್ಮೀರದಲ್ಲಿ ಹಿಮಪಾತ: ಜಮ್ಮು ಕಾಶ್ಮೀರದ ಉತ್ತರ ಭಾಗದಲ್ಲಿ ೩ ದಿನದಿಂದ ಹಿಮ ಸುರಿಯುತ್ತಿದೆ. ಶ್ರೀನಗರದ ಬಯಲು ಪ್ರದೇಶಗಳಲ್ಲಿ ಭಾರಿ ಮಳೆಯೂ ಸುರಿಯುತ್ತಿದೆ. ಉತ್ತರ ಕಾಶ್ಮೀರದ ಪ್ರಸಿದ್ಧ ಗಿರಿಧಾಮ ಗುಲ್‌ಮಾರ್ಗ್ ಸಂಪೂರ್ಣ ಹಿಮದಲ್ಲಿ ಮುಚ್ಚಿಹೋಗಿದೆ. ಹಲವೆಡೆ ಸುಮಾರು ೩ ಅಡಿಗಳಷ್ಟು ಹಿಮ ಶೇಖರಣೆಯಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. 

ಉ.ಕ.ದಲ್ಲಿ ಬಿರುಗಾಳಿ: ರಾಜ್ಯದ ಹಲವೆಡೆ ವರ್ಷಧಾರೆ 
ಬೆಂಗಳೂರು: ರಾಜ್ಯದ ಹಲವೆಡೆ ಕಳೆದ ಮೂರ್ನಾಲ್ಕು ದಿನಗಳಿಂದ ಕಾಣಿಸಿಕೊಂಡಿರುವ ಮಳೆ ಮಂಗಳವಾರವೂ ಮುಂದುವರಿದಿದ್ದು, ಉತ್ತರ ಕನ್ನಡ ಜಿಲ್ಲೆಯ ಕರಾವಳಿಯಲ್ಲಿ ಒಂದು ಗಂಟೆಗೂ ಹೆಚ್ಚು ಕಾಲ ಭಾರಿ ಬಿರುಗಾಳಿ ಬೀಸಿದೆ. ಗಂಟೆಗೆ ೪೦-೪೫ ಕಿ.ಮೀ. ವೇಗದಲ್ಲಿ ಬೀಸಿದ ಬಿರುಗಾಳಿಯಿಂದಾಗಿ ಯಾವುದೇ ಮೀನುಗಾರಿಕೆ ಬೋಟುಗಳು ಕಡಲಿಗಿಳಿಯಲಿಲ್ಲ. 

ಉತ್ತರ ಕನ್ನಡ ಜಿಲ್ಲೆಯಾದ್ಯಂತ ಸೋಮವಾರ ರಾತ್ರಿಯಿಂದೀಚೆಗೆ ಗುಡುಗು ಸಹಿತ ಮಳೆ ಸುರಿಯುತ್ತಿದೆ. ಭಟ್ಕಳದಲ್ಲಿ ಸಿಡಿಲು ಬಡಿದು ಮಹಿಳೆಯೊಬ್ಬಳು ಗಾಯಗೊಂಡಿದ್ದಾಳೆ.        

ಉತ್ತರ ಕನ್ನಡದಲ್ಲಿ ಬಿರುಗಾಳಿ 

ಜಿಲ್ಲೆಯ ಅಂಕೋಲಾ, ಕುಮಟಾ, ಶಿರಸಿ, ಯಲ್ಲಾಪುರ, ಹೊನ್ನಾವರ, ಸಿದ್ದಾಪುರ, ಮುಂಡಗೋಡ, ದಾಂಡೇಲಿ, ಜೋಯಿಡಾಗಳಲ್ಲಿ ತುಂತುರು ಮಳೆ ಮುಂದುವರಿದಿದೆ. ಮೈಸೂರಿನಲ್ಲೂ ಮತ್ತೊಮ್ಮೆ ಧಾರಾಕಾರ ಮಳೆಯಾಗಿದೆ. ಕೆಲವೆಡೆ ತಗ್ಗುಪ್ರದೇಶದ ಹಲವು ಮನೆಗಳಿಗೆ ನೀರು ನುಗ್ಗಿದ್ದರಿಂದ ನಿವಾಸಿಗಳು ರಾತ್ರಿಯಿಡೀ ಜಾಗರಣೆ ಮಾಡಬೇಕಾಯಿತು. ಕೊಪ್ಪಳ ನಗರ ಹಾಗೂ ಯಲಬುರ್ಗಾ ತಾಲೂಕಿನಲ್ಲಿ ಒಂದು ಗಂಟೆಗೂ ಹೆಚ್ಚು ಕಾಲ ಮಳೆಯಾಗಿದ್ದು, ಗಂಗಾವತಿ, ಕುಷ್ಟಗಿ ತಾಲೂಕುಗಳಲ್ಲಿ ಸಾಧಾರಣ ಮಳೆಯಾಗಿದೆ. ಹಾವೇರಿ ಜಿಲ್ಲೆಯ ಹಿರೇಕೆರೂರು, ರಾಣೆಬೆನ್ನೂರು, ಹಾನಗಲ್, ಬ್ಯಾಡಗಿ, ಸವಣೂರು, ಶಿಗ್ಗಾಂವಿ ತಾಲೂಕುಗಳಲ್ಲಿ ಸಂಜೆ ಕೆಲಕಾಲ ಮಳೆ ಬಿದ್ದಿದೆ. ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲೂಕಿನಲ್ಲಿ ಉತ್ತಮ ಮಳೆಯಾಗಿದೆ. ಗದಗ ಜಿಲ್ಲೆಯ ರೋಣ ಮತ್ತಿತರ ಕಡೆ ಮಳೆ ಆರಂಭವಾಗಿರುವ ಕಾರಣ ನೆರೆ ಸಂತ್ರಸ್ತರಲ್ಲಿ ಮತ್ತೆ ಆತಂಕ ಮನೆ ಮಾಡಿದೆ. ಅವಿಭಜಿತ ದಕ್ಷಿಣ ಕನ್ನಡದಲ್ಲಿ ದಿನವಿಡೀ ಮೋಡ ಕವಿದ ವಾತಾವರಣ ಇತ್ತು. ಅಲ್ಲಲ್ಲಿ ಸಾಧಾರಣ ಮಳೆಯಾಗಿದೆ. ಬೆಳಗಾವಿ, ಬಿಜಾಪುರ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಿದ್ದರೆ, ಕೊಡಗು, ಧಾರವಾಡ ಜಿಲ್ಲೆಗಳಲ್ಲಿ ತುಂತುರು ಮಳೆ ಸುರಿದಿದೆ. ರಾಜಧಾನಿ ಬೆಂಗಳೂರಿನಲ್ಲೂ ಇಡೀ ದಿನ ಬಿಟ್ಟು ಬಿಟ್ಟು ಮಳೆ ಸುರಿದಿದೆ. ಭಾರೀ ಮಳೆಯಿಂದಾಗಿ ಕೋಲಾರ ಜಿಲ್ಲೆಯ ಶಾಲೆಗಳಿಗೆ ಬುಧವಾರ ರಜೆ ಘೋಷಿಸಲಾಗಿದೆ.

ಸೌಜನ್ಯ: ಕನ್ನಡಪ್ರಭ

Share: