ಬೆಂಗಳೂರು,ಫೆಬ್ರವರಿ ೧೭:ಉತ್ತರ ಕರ್ನಾಟಕದ ನೆರೆ ಪ್ರವಾಹ ಸಂತ್ರಸ್ತರಿಗೆ ಮನೆ ಕಟ್ಟಿಕೊಡುವುದಾಗಿ ಭರವಸೆ ನೀಡಿದವರೆಷ್ಟೋ, ಆದರಲ್ಲಿ ಎಷ್ಟು ಮಂದಿ ಸೂರು ಕಲ್ಪಿಸಿದರೋ ಗೊತ್ತಿಲ್ಲ. ಆದರೆ ಯಾವುದೇ ಸದ್ದುಗದ್ದಲ, ಸುದ್ದಿಗಳಿಲ್ಲದೇ ಮಾತಾ ಅಮೃತಾನಂದಮಯಿ ಇದನ್ನು ಸಾಕಾರಗೊಳಿಸಿದ್ದಾರೆ. ಮೊದಲ ಹಂತವಾಗಿ ರಾಯಚೂರು ಜಿಲ್ಲೆಯ ಡೊಂಗಾಪುರದಲ್ಲಿ ಕಟ್ಟಿಸಿರುವ ೧೦೦ ಮನೆಗಳ ಕೀಲಿಯನ್ನು ಇಂದು ಸರ್ಕಾರಕ್ಕೆ ವಿದ್ಯುಕ್ತವಾಗಿ ಹಸ್ತಾಂತರಿಸಲಾಗಿದೆ.
ನಗರದ ಕೆಂಗೇರಿಯ ಉಲ್ಲಾಳ ಉಪನಗರದಲ್ಲಿರುವ ಮಠದ ಆವರಣದಲ್ಲಿ ನಡೆದ ಸರಳ ಸಮಾರಂಭದಲ್ಲಿ ಮಾತಾ ಅಮೃತಾನಂದಮಯಿ ಮನೆಗಳ ಕೀಲಿ ಕೈಯನ್ನು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ನೀಡಿದರು.
ಸಂತ್ರಸ್ತರಿಗೆ ಮಾತಾ ಅಮೃತಾನಂದಮಯಿ ಅವರ ನೇತೃತ್ವದಲ್ಲಿ ಸಂತ್ರಸ್ತರಿಗೆ ತ್ವರಿತವಾಗಿ ಮನೆ ಕಟ್ಟಿಸಿಕೊಟ್ಟಿದೆ. ಈ ಕ್ರಮ ಇತರರಿಗೆ ಮಾರ್ಗದರ್ಶನವಾಗಿದೆ. ಈ ಬೆಳವಣಿಗೆ ಮೇಲ್ಪಂಕ್ತಿ ಹಾಕಿಕೊಟ್ಟಂತಿದೆ ಎಂದು ಮುಖ್ಯಮಂತ್ರಿ ಮೆಚ್ಚುಗೆ ವ್ಯಕ್ತಪಡಿಸಿದರು.
ಕಳೆದ ಜನವರಿ ೧೫ ರಂದು ಮಠ ಒಂದು ತಿಂಗಳಲ್ಲಿ ಮನೆ ನಿರ್ಮಿಸಿಕೊಡುವುದಾಗಿ ಹೇಳಿತ್ತು. ಅದರಂತೆ ಒಟ್ಟು ೧.೪೫ ಲಕ್ಷ ರೂಪಾಯಿ ವೆಚ್ಚದಲ್ಲಿ ಸುಸಜ್ಜಿತ ಮನೆಗಳನ್ನು ನಿರ್ಮಿಸಿಕೊಟ್ಟಿದೆ. ಇವರ ಹಾದಿಯಲ್ಲಿ ಮನೆಗಳನ್ನು ನಿರ್ಮಿಸಲು ಇತರ ದಾನಿಗಳು ಮುಂದೆ ಬರಬೇಕೆಂದು ಮನವಿ ಮಾಡಿದರು.
ಸಮಾಜದಲ್ಲಿ ಮಠ ಉತ್ತಮ ಸೇವೆ ಸಲ್ಲಿಸುತ್ತಿದ್ದು, ಮಠದಿಂದ ನಗರದ ಹೊರವಲಯದ ರಾಮಸಂದ್ರದಲ್ಲಿ ನಿರ್ಮಿಸುತ್ತಿರುವ ಆಸ್ಪತ್ರೆಗೆ ಸರ್ಕಾರ ೧೫ ಎಕರೆ ಭೂಮಿಯನ್ನು ಒದಗಿಸಲಿದೆ. ಇದರ ಜೊತೆಗೆ ಸರ್ಕಾರದಿಂದ ಐದು ಕೋಟಿ ರೂಪಾಯಿ ಹಣ ಬಿಡುಗಡೆಮಾಡುವುದಾಗಿ ಹೇಳಿದರು.
ದೈವಿಕ ಶಕ್ತಿಯ ಮೂಲಕ ಇಡೀ ಜಗತ್ತಿಗೆ ಜೀವನಾನುಭವ ನೀಡುತ್ತಿರುವ ಮಾತಾ ಅಮೃತಾನಂದಮಯಿ ಅವರ ಜೊತೆ ಕಳೆದ ಕ್ಷಣ ಅಪೂರ್ವವಾದದ್ದು. ಇದು ನನ್ನ ಪೂರ್ವಜನ್ಮದ ಪುಣ್ಯ. ಮಾತೆಯ ದರ್ಶನವೇ ಒಂದು ಅನನ್ಯ ಅನುಭವ ಎಂದು ಯಡಿಯೂರಪ್ಪ ಹೇಳಿದರು.
ಹಾಲಿನ ದರ: ರಾಜ್ಯದಲ್ಲಿ ನಂದಿನಿ ಹಾಲಿನ ದರ ಹೆಚ್ಚಿಸುವ ಕುರಿತು ಇನ್ನೂ ಯಾವುದೇ ತೀರ್ಮಾನವಾಗಿಲ್ಲ. ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಯಡಿಯುರಪ್ಪ ಸ್ಪಷ್ಟಪಡಿಸಿದರು.